ಅಮೆರಿಕದಲ್ಲಿ 2 ನ್ಯಾಯ ವ್ಯವಸ್ಥೆಗಳು: ಒಂದು ಬಿಳಿಯರಿಗಾಗಿ, ಇನ್ನೊಂದು ಕರಿಯರಿಗಾಗಿ

Update: 2020-09-07 17:28 GMT

ವಾಶಿಂಗ್ಟನ್, ಸೆ. 7: ಅಮೆರಿಕದಲ್ಲಿ ಕರಿಯ ಮತ್ತು ಬಿಳಿಯರಿಗಾಗಿ ಎರಡು ನ್ಯಾಯ ವ್ಯವಸ್ಥೆಗಳಿವೆ ಎಂದು ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರತಿಪಕ್ಷ ಡೆಮಾಕ್ರಟಿಕ್ ಪಕ್ಷದ ಉಪಾಧ್ಯಕ್ಷ ಅಭ್ಯರ್ಥಿಯಾಗಿರುವ ಕಮಲಾ ಹ್ಯಾರಿಸ್ ಹೇಳಿದ್ದಾರೆ.

ಅದೇ ವೇಳೆ, ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಜನಾಂಗೀಯ ತಾರತಮ್ಯವು ಬೇರುಬಿಟ್ಟಿದೆ ಎನ್ನುವುದನ್ನು ನಿರಾಕರಿಸುತ್ತಿರುವುದಕ್ಕಾಗಿ ಭಾರತ ಮೂಲದ ಕಮಲಾ ಹ್ಯಾರಿಸ್, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ಅಟಾರ್ನಿ ಜನರಲ್‌ರನ್ನು ಟೀಕಿಸಿದ್ದಾರೆ.

ನವೆಂಬರ್ 3ರಂದು ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬೈಡನ್ ಮತ್ತು ಉಪಾಧ್ಯಕ್ಷ ಅಭ್ಯರ್ಥಿ ಕಮಲಾ ಹ್ಯಾರಿಸ್, ಹಾಲಿ ಅಧ್ಯಕ್ಷ ಹಾಗೂ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಮತ್ತು ರಿಪಬ್ಲಿಕನ್ ಪಕ್ಷದವರೇ ಆಗಿರುವ ಉಪಾಧ್ಯಕ್ಷ ಮೈಕ್ ಪೆನ್ಸ್‌ರನ್ನು ಎದುರಿಸಲಿದ್ದಾರೆ.

 ಅಮೆರಿಕದ ನ್ಯಾಯಾಂಗ ವ್ಯವಸ್ಥೆಯಲ್ಲಿ ಜನಾಂಗೀಯ ತಾರತಮ್ಯವು ಬೇರುಬಿಟ್ಟಿದೆ ಎನ್ನುವುದನ್ನು ನಿರಾಕರಿಸಿರುವುದಕ್ಕಾಗಿ 55 ವರ್ಷದ ಹ್ಯಾರಿಸ್ ಅಧ್ಯಕ್ಷ ಟ್ರಂಪ್ ಮತ್ತು ಅಟಾರ್ನಿ ಜನರಲ್ ವಿಲಿಯಮ್ ಬರ್‌ರನ್ನು ಕಟುವಾಗಿ ಟೀಕಿಸಿದ್ದಾರೆ. ‘‘ಅವರು ಭ್ರಮೆಯಲ್ಲಿ ಪೂರ್ಣ ಸಮಯವನ್ನು ಕಳೆಯುತ್ತಿದ್ದಾರೆ’’ ಎಂದು ಅವರು ಬಣ್ಣಿಸಿದ್ದಾರೆ.

 ‘‘ಹಿಂದಿನ ತಲೆಮಾರುಗಳಲ್ಲಿ ನಾವು ಏನನ್ನು ನೋಡಿದ್ದೇವೆಯೋ ಅದನ್ನೇ ಈಗಲೂ ನಾವು ಅಮೆರಿಕದಲ್ಲಿ ನೋಡುತ್ತಿದ್ದೇವೆ. ಅಂದರೆ, ಅಮೆರಿಕದಲ್ಲಿ ನಾವು ಎರಡು ನ್ಯಾಯ ವ್ಯವಸ್ಥೆಗಳನ್ನು ಹೊಂದಿದ್ದೇವೆ’’ ಎಂದು ಸಿಎನ್‌ಎನ್ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News