ತೇಜಸ್ವಿ: ಬಲ್ಲವರು ಕಂಡಂತೆ...

Update: 2020-09-07 19:30 GMT

ಹಿರಿಯ ಪತ್ರಕರ್ತರು, ಕತೆಗಾರರು, ಚಿತ್ರನಿರ್ದೇಶಕರು, ನಾಡಿನ ಹಲವು ಲೇಖಕರು ಕನ್ನಡದ ಜ್ಞಾನಕೋಶವೆಂಬಂತಿದ್ದ ತೇಜಸ್ವಿಯವರ ವ್ಯಕ್ತಿತ್ವವನ್ನಿಲ್ಲಿ ಕಟ್ಟಿಕೊಟ್ಟಿದ್ದಾರೆ.


 ಬರೆದ ಹಾಗೆ ಬದುಕಿದವರು ಅವರು 

 ನನ್ನ ಅರಿವು, ಬದುಕು ಮತ್ತು ನಂಬಿಕೆಯ ಮೇಲೆ ಪ್ರಭಾವ ಬೀರಿದ ಕೆಲವೇ ವ್ಯಕ್ತಿಗಳಲ್ಲಿ ಪೂರ್ಣಚಂದ್ರ ತೇಜಸ್ವಿ ಪ್ರಮುಖರಾಗಿದ್ದಾರೆ. ‘ಸತ್ಯ ಎನ್ನುವುದು ಕಾಲಕಾಲಕ್ಕೆ ಬದಲಾಗುವ ವಸ್ತುನಿಷ್ಠ ವೌಲ್ಯ’ ಎನ್ನುವ ವಾಸ್ತವಕ್ಕೆ ಹತ್ತಿರವಾದ ಮತ್ತು ಜೀವನಕ್ಕೆ ಬದ್ಧವಾದ ಅವರ ಈ ಮಾತು ತುಂಬಾ ಯೋಚಿಸುವಂತೆ ಪರಿಭಾವಿಸಿತು. ತೇಜಸ್ವಿ ಅವರ ಬಗ್ಗೆ ಎಲ್ಲರಿಗೂ ಒಂದು ರೀತಿಯ ಹೊಟ್ಟೆಯುರಿಯ ಭಾವನೆ ಇದೆ. ಅವರ ಹಾಗೆ ಬರೆಯಲು, ಬದುಕಲೂ ಸಾಧ್ಯವಿಲ್ಲ ಎನ್ನುವುದೇ ಇದಕ್ಕೆ ಕಾರಣ. ಹೇಳಿದೆ ಹಾಗೆ, ಬರೆದ ಹಾಗೆ ಬದುಕಿದ ವ್ಯಕ್ತಿಗಳ ಜೀವನದ ಕುರಿತು ಇನ್ನೂ ಬರಹಗಳು ಪ್ರಕಟವಾಗುತ್ತಿವೆ ಎನ್ನುವ ವ್ಯಕ್ತಿಗಳಲ್ಲಿ ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ತೇಜಸ್ವಿ ಒಬ್ಬರೇ.

ಸಾಹಿತಿಗಳು ಅನ್ನಿಸಿದ್ದನ್ನು ಸಾಹಿತ್ಯವಾಗಿ ರಚಿಸಿ ಅದರ ಬಗ್ಗೆ ವಿಶ್ಲೇಷಣೆ ಕೇಳಿದಾಗಲೂ ಅಥವಾ ಸುತ್ತಲಿನ ವಿದ್ಯಮಾನಗಳ ಬಗ್ಗೆ ಪ್ರತಿಸ್ಪಂದಿಸದ ಬರಹಗಾರರಿದ್ದ ಕಾಲದಲ್ಲಿ ಕನ್ನಡ, ಕರ್ನಾಟಕದ ಎಲ್ಲಾ ಸಮಸ್ಯೆಗಳಿಗೆ ತೇಜಸ್ವಿ ಪ್ರತಿಸ್ಪಂದಿಸಿದರು. ಅದರ ಬಗ್ಗೆ ಹೋರಾಡಿದರು. ಕನ್ನಡದ ಸಾಫ್ಟ್‌ವೇರ್‌ಗಳು ರೂಪುಗೊಳ್ಳದ ಸಂದರ್ಭದಲ್ಲಿ ಮೂಡಿಗೆರೆಯಲ್ಲಿ ಕಂಪ್ಯೂಟರ್ ಮುಂದೆ ಕುಳಿತು ಸಾಫ್ಟ್ ವೇರ್ ತರಲು, ಕೋಡಿಂಗ್ ಮಾಡಲು ಚಿಂತಿಸಿದರು. ಜ್ಞಾನಶಾಖೆಯಡಿಯ ಮಿಲೇನಿಯಮ್ ಸೀರೀಸ್, ಪ್ರವಾಸ ಕಥನಗಳು, ಅನುವಾದದ ಕೆಲಸಗಳಲ್ಲಿ ಜಗತ್ತಿನ ಜ್ಞಾನವೆಲ್ಲ ಕನ್ನಡದಲ್ಲಿ ಸಿಗಬೇಕು ಎನ್ನುವ ಅವರ ಅದಮ್ಯ ಆಸೆ ನಿಚ್ಚಳವಾಗಿ ಕಾಣಿಸುತ್ತದೆ.

ಎಲ್ಲಕ್ಕಿಂತ ಹೆಚ್ಚಾಗಿ ಇದ್ದದ್ದನ್ನು ಇದ್ದ ಹಾಗೆ ಹೇಳುವ, ತಮಗೆ ಅನ್ನಿಸಿದ್ದನ್ನು ನೇರವಾಗಿ ವ್ಯಕ್ತಪಡಿಸುವ ಮತ್ತು ಅದೇ ರೀತಿ ತೇಜಸ್ವಿ ಬದುಕಿದ್ದರು. ಹೊಗಳಿಕೆಯ ಮಾತುಗಳೆಂದರೆ ಅವರಿಗೆ ಆಗುತ್ತಿರಲಿಲ್ಲ. ಮನುಷ್ಯ ತನ್ನ ಸ್ವಾರ್ಥಕ್ಕೋಸ್ಕರ, ಕಾರ್ಯಸಾಧನೆಗಾಗಿ ಹೀಗೆಲ್ಲ ಮಾಡುತ್ತಾನೆ ಅನ್ನುವ ರೀತಿಯಲ್ಲಿ ತೇಜಸ್ವಿ ನೋಡುತ್ತಿದ್ದರು. ಏಕೆಂದರೆ ಬದುಕನ್ನು ಅವರು ಹತ್ತಿರದಿಂದ ನೋಡಿದ್ದರು.

ಇವತ್ತಿಗೂ ಎಷ್ಟೋ ಸಾಹಿತ್ಯದ ಬಗ್ಗೆ ಆಸಕ್ತಿ ಇರುವ ಚಲನಚಿತ್ರ ನಿರ್ದೇಶಕರು ತೇಜಸ್ವಿಯ ಕಥೆ, ಕಾದಂಬರಿಗಳನ್ನು ಸಿನೆಮಾ ಮಾಡಬಯಸುತ್ತಾರೆ. ನನಗೂ ಆಸೆ ಇದೆ. ಆದರೆ ಆ ಬದುಕನ್ನು ಸಿನೆಮಾದಲ್ಲಿ ಕಟ್ಟಿಕೊಡಲು ನಮಗೆ ಸಾಧ್ಯವಾ ಎನ್ನುವ ಪ್ರಶ್ನೆ ಮೂಡಿದಾಗ ನನಗೆ ಭಯವಾಗುತ್ತೆ. ಆಸೆ, ಭಯದ ಮಧ್ಯದಲ್ಲಿ ನಾನು ತೇಜಸ್ವಿ ಅವರನ್ನು ತುಂಬಾ ಕಳೆದುಕೊಳ್ಳುತ್ತೇನೆ.
-ಬಿ.ಎಂ. ಗಿರಿರಾಜ್, ಚಿತ್ರನಿರ್ದೇಶಕ

-------------------------------------------

ಅವರ ಆಲೋಚನಾ ಕ್ರಮವನ್ನು ನನ್ನ ಜೀವನದಲ್ಲಿ ಅಳವಡಿಸಿಕೊಂಡೆ 

 ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರು ನನ್ನ ಮೇಲೆ ಅಗಾಧವಾದ ಪ್ರಭಾವ ಬೀರಿದ್ದಾರೆ. ನಾನು ಹದಿಹರೆಯದಲ್ಲೇ ಅವರ ಕಥೆ, ಕಾದಂಬರಿಗಳನ್ನು ಓದಿ ಆಕರ್ಷಿತನಾಗಿದ್ದೆ. ಮಂಗಳೂರು ವಿವಿಯಲ್ಲಿ ಬಿ.ಎ. ವಿವೇಕ್ ರೈ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದ ಸಮಾರೋಪದಲ್ಲಿ ತೇಜಸ್ವಿ ಅವರ ಭಾಷಣವಿತ್ತು. ಅವರನ್ನು ನೋಡುವ, ಅವರ ಮಾತುಗಳನ್ನು ಕೇಳುವ ಅವಕಾಶ ನನಗೆ ಸಿಕ್ಕಿತು.
ಜನಮಾನಸದಲ್ಲಾಗುತ್ತಿರುವ ಬದಲಾವಣೆಗಳನ್ನು ತೇಜಸ್ವಿ ಅದ್ಭುತವಾಗಿ ಸೆರೆಹಿಡಿಯುತ್ತಿದ್ದರು. ಆ ಆಲೋಚನಾ ಕ್ರಮವನ್ನು ನಾನು ನನ್ನ ಜೀವನದಲ್ಲಿ ಅಳವಡಿಸಿಕೊಂಡೆ. ನಂತರ ಪತ್ರಕರ್ತನಾದ ನಾನು ತೇಜಸ್ವಿ ಅವರ ಆಲೋಚನಾ ಕ್ರಮ ಗ್ರಹಿಸದೆ ಇದ್ದಿದ್ದರೆ, ಅವರ ಬರಹ ಓದದೆ, ಅವರ ಭಾಷಣ ಕೇಳದಿದ್ದರೆ ಜಾಗತೀಕರಣದ ಎದುರು ನಾನು ತಬ್ಬಿಬ್ಬು ಆಗುತ್ತಿದ್ದೆ. ಆದರೆ ಸಮಾಜ, ಮನುಷ್ಯನನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು. ಜಾಗತೀಕರಣದ ನಡುವೆ ನಮ್ಮನ್ನು ನಾವು ಪುನರ್‌ನಿರ್ಮಿಸಿಕೊಳ್ಳಬೇಕು ಅಥವಾ ಜಾಗತೀಕರಣದ ಪಲ್ಲಟವನ್ನು ಹೇಗೆ ಎದುರಿಸಬೇಕು ಎಂಬುದನ್ನು ತೇಜಸ್ವಿ ನನಗೆ ಕಲಿಸಿಕೊಟ್ಟರು.
ತೇಜಸ್ವಿ ಅವರನ್ನು ಹಲವು ಬಾರಿ ಮುಖಾಮುಖಿ ಭೇಟಿಯಾಗಿದ್ದೇನೆ. ಅದರಲ್ಲಿ ಸಂದೇಶ ಮಾಧ್ಯಮ ಪ್ರತಿಷ್ಠಾನದ ಸಾಹಿತ್ಯ, ಮಾಧ್ಯಮ ಪ್ರಶಸ್ತಿ ಸ್ವೀಕಾರ ಕಾರ್ಯಕ್ರಮವೂ ಒಂದಾಗಿದೆ.
ಅದರಲ್ಲಿ ಆ ದಿನದ ಭಾಷಣದಲ್ಲಿ ನಾನು ‘‘ಮಾಧ್ಯಮವೆನ್ನುವುದು ಉತ್ಪನ್ನ ಅಲ್ಲ. ಅದನ್ನು ಬಳಸಿ ಬಿಸಾಡುವುದಕ್ಕೆ ಆಗುವುದಿಲ್ಲ. ಮಾಧ್ಯಮ ಎಂಬುದು ಸೇತುವೆ. ಅದನ್ನು ಸಮಾಜ ನಿರ್ಮಾಣಕ್ಕೆ ಬಳಸಿಕೊಳ್ಳಬೇಕು’’ ಎಂದು ಹೇಳಿದೆ. ಬಳಿಕ ನನ್ನತ್ತ ಬಂದ ತೇಜಸ್ವಿ ಕೈ ಹಿಡಿದು ಒತ್ತಿ ‘‘ನೀವು ಹೇಳಿದ್ದು ಖಂಡಿತ ಸರಿ’’ ಎಂದು ತಮ್ಮ ಒಪ್ಪಿಗೆ ಸೂಚಿಸಿದರು. ಅದು ನನ್ನ ಆಲೋಚನಾ ಕ್ರಮಕ್ಕೆ ಸಿಕ್ಕ ದೊಡ್ಡ ಸರ್ಟಿಫಿಕೇಟ್ ಎಂದು ನಾನು ಭಾವಿಸಿದ್ದೇನೆ. ತೇಜಸ್ವಿ ಅವರ ಆಲೋಚನಾ ಕ್ರಮದ ಜೊತೆಗೆ ಸಾಗುತ್ತಿದ್ದೇನೆ.
-ಜಿ.ಎನ್. ಮೋಹನ್, ಹಿರಿಯ ಪತ್ರಕರ್ತ

---------------------------------------------

ಕನ್ನಡ ಸಾಹಿತ್ಯದಲ್ಲಿ ಹೊಸ ಓದುಗರನ್ನು ಹುಟ್ಟು ಹಾಕಿದರು

 ಲೇಖಕ-ಓದುಗನಾಗಿ ತೇಜಸ್ವಿ ಮತ್ತು ನನ್ನ ಒಡನಾಟ ಆರಂಭವಾಯಿತು. ಅವರ ಕರ್ವಾಲೋ ಮೊದಲು ಓದಿದ್ದೇನೆ. ನನ್ನ ಅಣ್ಣನಿಗೆ ‘ನಿಗೂಢ ಮನುಷ್ಯರು’ ಬಹಳ ಇಷ್ಟವಾಗಿತ್ತು. ಮೂಡಿಗೆರೆಗೆ ಹೋದಾಗ ತೇಜಸ್ವಿ ಅವರ ಮನೆಯನ್ನು ಅಣ್ಣ ತೋರಿಸಿದ್ದ. ಮೂಡಿಗೆರೆ ಪರಿಸರ, ಅವರ ನೆನಪು ನನ್ನ ಮನದೊಳಗೆ ಉಳಿದುಬಿಟ್ಟಿದೆ. ಕಾರಂತರಂತೆ ತೇಜಸ್ವಿ ಅವರೂ ಸಿಟ್ಟಿಗೆ ಹೆಸರಾಗಿದ್ದರು. ಮಂಗಳೂರು ವಿವಿಯಲ್ಲಿ ನಡೆದ ಸೆಮಿನಾರ್‌ನಲ್ಲಿ ಭಾಗವಹಿಸಲು ತೇಜಸ್ವಿ ಬಂದಾಗ ನಾನು ಅವರನ್ನು ಭೇಟಿಯಾಗಿದ್ದೆ. ನಂತರ ‘ಹಾಯ್ ಬೆಂಗಳೂರು’ ಪತ್ರಿಕೆಯಲ್ಲಿ ಕೆಲಸ ಮಾಡುವಾಗ ಅವರ ಸಂದರ್ಶನ ಮಾಡಿದ್ದೆ. ತೇಜಸ್ವಿ ಅವರನ್ನು ಮಾತನಾಡಿಸಲು ಪ್ರತಿ ಬಾರಿ ಅವರ ಮನೆಗೆ ಹೋದಾಗ ಅವರು ಹೊಸ ಹೊಸ ವಿಚಾರವನ್ನು ಕಲಿತು ಅದರ ಬಗ್ಗೆ ಅವರು ಆಸಕ್ತಿ ಬೆಳೆಸಿಕೊಂಡಿರುತ್ತಿದ್ದರು. ನಮ್ಮೆಲ್ಲರ ಜೀವನ ಏಕತಾನತೆಯಲ್ಲಿ ಸಾಗುತ್ತಿದ್ದು, ಅದನ್ನು ಮುರಿಯಲು ಹೆಮಿಂಗ್ವೇ, ತೇಜಸ್ವಿ, ಲಂಕೇಶ್ ಬೇಕು. ಪ್ರತಿಯೊಂದು ವಿಚಾರವನ್ನು ಬದುಕಿಗೆ ಅನ್ವಯಿಸಿ ಅವರು ಹೇಳುತ್ತಿದ್ದರು.
 ಅವರ ಪುಸ್ತಕಗಳಲ್ಲಿ ‘ನಿಗೂಢ ಮನುಷ್ಯರು’ ತುಂಬಾ ಇಷ್ಟ. ಅದರಲ್ಲಿ ಬದುಕಿನ ಎಲ್ಲ ನಿಗೂಢತೆಗಳನ್ನು ಕಾಣಬಹುದು. ‘ಕಿರುಗೂರಿನ ಗಯ್ಯಳಿಗಳು’, ‘ಕೃಷ್ಣೇಗೌಡನ ಆನೆ’, ‘ಮಾಯಾಮೃಗ’ ಈ ಕತೆಗಳು ಬಹಳ ಅದ್ಭುತವಾಗಿವೆ. ಭಾರತೀಯ ಅಥವಾ ವಿಶ್ವ ಕಥಾ ಸಾಹಿತ್ಯದಲ್ಲಿ ಬಹಳ ಮುಖ್ಯವಾದ ಕಥೆಗಳಾಗಿವೆ ಎನ್ನುವುದು ನನ್ನ ಅಭಿಪ್ರಾಯ. ಅವರ ಕಥೆ, ಕಾದಂಬರಿಗಳಲ್ಲಿ ಹೊಸತನ, ಸೂಕ್ಷ್ಮತೆಯನ್ನು ಕಂಡಿದ್ದೇನೆ.
ಕನ್ನಡ ಸಾಹಿತ್ಯದಲ್ಲಿ ಹೊಸ ಓದುಗರನ್ನು ಹುಟ್ಟು ಹಾಕಿದ್ದು, ಅವರ ಬಹಳ ದೊಡ್ಡ ಶಕ್ತಿಯಾಗಿದೆ. ವೈಜ್ಞಾನಿಕ ಮನೋಧರ್ಮವನ್ನು ಬೆಳೆಸಲು ಅವರ ಸಾಹಿತ್ಯ ಸಹಕಾರಿಯಾಯಿತು. ವಿಜ್ಞಾನದ ಸಂಗತಿಗಳು ಅವರ ಕೃತಿಗಳಲ್ಲಿ ಹಾಸುಹೊಕ್ಕಾಗಿರುವುದರಿಂದ ಅವರು ಒಂದು ರೀತಿಯಲ್ಲಿ ವಿಜ್ಞಾನ ಲೇಖಕರೂ ಆಗಿದ್ದಾರೆ.
ಜುಗಾರಿ ಕ್ರಾಸ್, ಕೃಷ್ಣೇಗೌಡನ ಆನೆ ಕೃತಿಗಳನ್ನು ಸಿನೆಮಾ ಮಾಡಲು ಸ್ಕ್ರಿಪ್ಟ್ ರಚಿಸಲಾಗಿದೆ. ನನಗೆ ‘ನಿಗೂಢ ಮನುಷ್ಯರು’ ಕಥೆಯನ್ನು ಸಿನೆಮಾ ಮಾಡುವ ಆಸೆ ಇದೆ. ಸಿನಿಮ್ಯಾಟಿಕ್ ಸಾಧ್ಯತೆಗಳು ಅವರ ಬಹುತೇಕ ಕೃತಿಗಳಲ್ಲಿ ಇದೆ.
(ವೀಡಿಯೊ ಮಾತುಗಳಿಂದ ಆಯ್ದ ಭಾಗ)
-ಜೋಗಿ, ಹಿರಿಯ ಪತ್ರಕರ್ತ, ಕತೆಗಾರ

-------------------------------------------
ಅವರಿಂದ ಸಾಕಷ್ಟು ಪ್ರಭಾವಿತನಾಗಿದ್ದೇನೆ

 ಸಾವಿರಾರು ಓದುಗರನ್ನು ಪ್ರಭಾವಿಸಿದ ಪೂರ್ಣಚಂದ್ರ ತೇಜಸ್ವಿ ಅವರ ಲಕ್ಷಾಂತರ ಅಭಿಮಾನಿಗಳಲ್ಲಿ ನಾನೂ ಒಬ್ಬ. ನನಗೆ ಜೀವನದಲ್ಲಿ ನನ್ನ ಸುತ್ತಮುತ್ತಲಿನ ಜಗತ್ತನ್ನು ಅರಿಯಲು ಅವರ ಕಥೆ, ಕಾದಂಬರಿಗಳು ಮಹತ್ತರವಾದ ಪಾತ್ರ ವಹಿಸಿವೆ.
ಪಾತ್ರಗಳು, ವ್ಯಕ್ತಿತ್ವಗಳನ್ನು ಪುರಾಣ, ವೇದಗಳಲ್ಲಿ ಓದುವ ಅಗತ್ಯವಿಲ್ಲ. ನಮ್ಮ ಸುತ್ತಮುತ್ತಲಿನಲ್ಲಿರುವ ಎಷ್ಟೋ ಜನರು ವಿಶಿಷ್ಟ ವ್ಯಕ್ತಿತ್ವದವರಿರುತ್ತಾರೆ. ಅವರನ್ನು ಗುರುತಿಸುವ ದಾರಿ, ಮಾರ್ಗ ತೋರಿಸಿದವರು ತೇಜಸ್ವಿ ಅವರು. ಉದಾ. ಕರ್ವಾಲೋದಲ್ಲಿ ಮಂಜಣ್ಣನ ಪಾತ್ರ, ಜುಗಾರಿ ಕ್ರಾಸ್‌ನಲ್ಲಿನ ಸುರೇಶನ ಪಾತ್ರ.
ಚಿಕ್ಕವಯಸ್ಸಿನಿಂದ ಅವರ ಕಥೆಗಳನ್ನು ಓದಿರುವುದರಿಂದ ಸಿನಿಜಗತ್ತಿನಲ್ಲಿ ನಾನು ತೇಜಸ್ವಿ ಅವರಿಂದ ಸಾಕಷ್ಟು ಪ್ರಭಾವಿತನಾಗಿದ್ದೇನೆ. ಅವರ ಬರವಣಿಗೆಯಲ್ಲಿ ಕನ್ನಡದ ಸೊಗಡು, ಕನ್ನಡತನ, ಸರಳತೆ ಕಾಣಿಸುತ್ತದೆ.
ಅವರ ಬರಹಗಳನ್ನು ಓದಿರುವುದರಿಂದ ಅವರ ಬಗ್ಗೆ ಅಪಾರ ಗೌರವ, ಪ್ರೀತಿ ಇದೆ. ಇದೇ ಕಾರಣಕ್ಕೆ ‘ನಾತಿಚರಾಮಿ’ ಚಲನಚಿತ್ರದಲ್ಲಿ ಕರ್ವಾಲೋ ಎನ್ನುವ ಮನೋವೈದ್ಯರ ಪಾತ್ರ ಸೃಷ್ಟಿಸಿ ಅವರ ವ್ಯಕ್ತಿತ್ವ ಕಟ್ಟಿಕೊಡಲು ವಿಶಿಷ್ಟ ಪ್ರಯತ್ನ ಮಾಡಲಾಯಿತು.
ಓದಿದಷ್ಟು ವಿಶಿಷ್ಟವಾಗಿ ತೇಜಸ್ವಿ ಅವರು ಕಾಣಿಸುತ್ತಾರೆ. ಅವರ ಕೃತಿಗಳನ್ನು ಮತ್ತಷ್ಟು ಓದೋಣ, ಅವರ ಕಣ್ಣಲ್ಲಿ ನಾವು ಜಗತ್ತನ್ನು ನೋಡೋಣ.
-ಮಂಸೋರೆ, ಚಿತ್ರ ನಿರ್ದೇಶಕ

----------------------------------------

ನಾನು ಅತ್ಯಂತ ಗೌರವಿಸುವ ವ್ಯಕ್ತಿ

 ಪೂರ್ಣಚಂದ್ರ ತೇಜಸ್ವಿ ಬಗ್ಗೆ ಮಾತನಾಡುವುದು ಬಹಳ ಕಷ್ಟ. ಅಷ್ಟು ಎತ್ತರದ ಮನುಷ್ಯ ಅವರು. ಬೆಂಗಳೂರಿನ ಪುರಭವನದಲ್ಲಿ ನನ್ನ ಗೆಳೆಯರೊಂದಿಗೆ ಅವರ ‘ಯಮಳ ಪ್ರಶ್ನೆ’ ನಾಟಕ ನೋಡಿದ್ದೆ. ಬಹಳ ಚೆನ್ನಾಗಿತ್ತು. ಅವರ ಬಗ್ಗೆ ವಿಶೇಷ ಪ್ರೀತಿ, ಗೌರವ ನನ್ನಲ್ಲಿ ಬೆಳೆಯಿತು. ನಂತರ ಅವರ ಪುಸ್ತಕಗಳನ್ನು ಓದಿದೆ.
ನವ್ಯಕತೆಗಳ ಪ್ರಾಕಾರದಲ್ಲಿ ಪಿ. ಲಂಕೇಶ್, ಯು.ಆರ್.ಅನಂತಮೂರ್ತಿ, ತೇಜಸ್ವಿ, ಶಾಂತಿನಾಥ್ ದೇಸಾಯಿ ಅನೇಕರಿದ್ದರು. ತೇಜಸ್ವಿ ನಗರದ ಮೋಹದಿಂದ ವಿಮುಖರಾಗಿ ಬದುಕಿದರು. ಗ್ರಾಮೀಣ ಭಾರತದ ಎರಡು ಮಹತ್ವದ ಕಾದಂಬರಿಗಳನ್ನು (ಚಿದಂಬರ ರಹಸ್ಯ, ಕರ್ವಾಲೋ) ಅವರು ರಚಿಸಿದ್ದಾರೆ. ಗ್ರಾಮೀಣ ಭಾರತದ ವಿನೋದವನ್ನು ಮತ್ತು ವಾಸ್ತವ, ವಿಷಾದವನ್ನು ತೇಜಸ್ವಿ ಒಟ್ಟಿಗೆ ಹಿಡಿಯುತ್ತಿದ್ದರು. ವಿಶಿಷ್ಟವಾದ ಆಯಾಮ, ಕುತೂಹಲ ಅವರ ಕೃತಿಗಳಲ್ಲಿ ಇರುತ್ತಿತ್ತು.
ವಿಜ್ಞಾನ, ಪರಿಸರ ಹೀಗೆ ಎಲ್ಲ ವಿಷಯಗಳ ಬಗ್ಗೆ ತೇಜಸ್ವಿ ಬರೆದರು. ಅವರು ಇನ್ನೊಬ್ಬ ಶಿವರಾಮ ಕಾರಂತರು. ತೀರ್ಥಹಳ್ಳಿಗೆ ಮೂರು ಜ್ಞಾನಪೀಠ ಬರಬೇಕಿತ್ತು ಎನ್ನುವುದು ನನ್ನ ಅಭಿಪ್ರಾಯವಾಗಿದೆ (ಕುವೆಂಪು, ಅನಂತಮೂರ್ತಿ, ತೇಜಸ್ವಿ).
ಒಂದು ಇಡೀ ಜನಾಂಗವನ್ನು ತೇಜಸ್ವಿ ಗಾಢವಾಗಿ ಪ್ರಭಾವಿಸಿದವರು. ಲಂಕೇಶ್ ಪತ್ರಿಕೆ ಪ್ರಾರಂಭ ಮಾಡಿದಾಗ ಮೇಷ್ಟ್ರು ಯಾರಿಂದ ಲೇಖನ ಬರೆಸಬೇಕು ಅಂತಾ ನಮ್ಮನ್ನೆಲ್ಲಾ ಕೇಳಿದಾಗ ಕೆಲವು ಗೆಳೆಯರು ತೇಜಸ್ವಿ ಅವರಿಂದ ಆಗಬಹುದು ಎಂದರು. ಈ ಬಗ್ಗೆ ತೇಜಸ್ವಿ ಅವರಿಗೆ ಪತ್ರ ಬರೆದಾಗ ಲೇಖನ ಬರೆಯುವುದಾಗಿ ಪತ್ರದಲ್ಲಿ ತಿಳಿಸಿದರು. ತೇಜಸ್ವಿ ಅಂಕಣಕ್ಕಾಗಿ ನಾವು ಕಾಯುತ್ತಿದ್ದೆವು. ಅಷ್ಟು ಚೆನ್ನಾಗಿ, ರೋಚಕವಾಗಿ ಅವರು ಬರೆಯುತ್ತಿದ್ದರು. ವಿಭಿನ್ನ ಕಾರಣಗಳಿಂದ ನಂತರದ ದಿನಗಳಲ್ಲಿ ಲಂಕೇಶ್ ಪತ್ರಿಕೆಗೆ ಬರೆಯುವುದನ್ನು ಬಿಟ್ಟರು.
ಎಲ್ಲೋ ಒಂದು ಊರಲ್ಲಿ ಕೂತು, ಯಾವುದೇ ಆಕರ್ಷಣೆ ಬಯಸದೆ, ಅವರದೇ ಜ್ಞಾನಲೋಕ, ಅವರ ತೋಟದಲ್ಲಿದ್ದು ಇಷ್ಟರಲ್ಲಿಯೇ ಅತ್ಯಂತ ದೊಡ್ಡ ಹೆಸರು ಮಾಡಿದ ವ್ಯಕ್ತಿ ತೇಜಸ್ವಿ. ನಾನು ಅತ್ಯಂತ ಪ್ರೀತಿಸುವ, ಗೌರವಿಸುವ ವ್ಯಕ್ತಿ ತೇಜಸ್ವಿ. ಅಂತಹ ತೇಜಸ್ವಿ ಅವರನ್ನು ಸ್ಮರಿಸಿಕೊಳ್ಳುವುದೇ ನನ್ನ ಭಾಗ್ಯ ಎಂದು ಭಾವಿಸುತ್ತೇನೆ. ತೇಜಸ್ವಿ ಅವರ ನೆನಪಿಗೆ ಒಂದು ದೊಡ್ಡ ನಮಸ್ಕಾರ.
-ಟಿ.ಎನ್. ಸೀತಾರಾಮ್, ಹಿರಿಯ ಚಿತ್ರನಿರ್ದೇಶಕ

-------------------------------------

ತೇಜಸ್ವಿ ಅನ್ನುವುದೊಂದು ದೊಡ್ಡ ಶಾಲೆ

 ತೇಜಸ್ವಿ ಅವರನ್ನು ನಮ್ಮೆಲ್ಲರಂತೆ ಈ ಭೂಮಿ ಮೇಲಿದ್ದ ಸೀದಾಸಾದಾ ಹುಲುಮಾನವ ಎಂದು ನಾನು ಇವತ್ತಿಗೂ ಒಪ್ಪಿಕೊಳ್ಳುವುದಿಲ್ಲ. ಏಕೆಂದರೆ ಅವರು ನಮ್ಮೆಲ್ಲರಂತೆ ಮನುಷ್ಯ ಮಾತ್ರ ಆಗಿರಲಿಲ್ಲ. ಅವರು ಒಂದು ಶಾಲೆಯಂತಿದ್ದರು. ಅವರ ಬರಹ, ಬದುಕಿನ ಸ್ಫೂರ್ತಿ ಪಡೆದು ಅವರನ್ನು ಅನುಸರಿಸುತ್ತಾ ಬಂದ ಒಂದು ದೊಡ್ಡ ಯುವಪರಂಪರೆ ಕರ್ನಾಟಕದಲ್ಲಿದೆ.
ತೇಜಸ್ವಿ ಎನ್ನುವುದು ಒಂದು ದೊಡ್ಡ ಸ್ಕೂಲ್. ನಾವೆಲ್ಲ ಶಾಲಾ-ಕಾಲೇಜುಗಳಲ್ಲಿ ಏನನ್ನು ಕಲಿಯಲು ಆಗಲಿಲ್ಲವೋ, ಯಾವುದನ್ನು ಪುಸ್ತಕಗಳು ಕಲಿಸಲಿಲ್ಲವೋ ಅದನ್ನೆಲ್ಲವನ್ನು ಈ ತೇಜಸ್ವಿ ಸ್ಕೂಲ್‌ನಲ್ಲಿ ನಾವು ಕಲಿತಿದ್ದೇವೆ. ಅದಕ್ಕೆ ಕರ್ನಾಟಕದ ಬಹಳಷ್ಟು ತಲೆಮಾರುಗಳಿಗೆ ತೇಜಸ್ವಿ ಹೇಡ್‌ಮಾಸ್ಟರ್ ಆಗಿದ್ದಾರೆ. ಪಠ್ಯೇತರ ವಿಷಯಗಳಾದ ಪರಿಸರ, ಸಿನೆಮಾ, ಕಥೆ, ಕಾದಂಬರಿ, ಮನುಷ್ಯತ್ವ, ಸುತ್ತಲಿನ ಶೋಷಿತ ಸಮುದಾಯಗಳನ್ನು ಗೌರವಿಸುವ, ಪ್ರೀತಿಸುವ ಮತ್ತು ಅವರನ್ನು ಅರ್ಥಮಾಡಿಕೊಂಡು ಬರಹಗಳಲ್ಲಿ ಹಿಡಿದಿಡುವ ಒಂದು ದೊಡ್ಡ ಕೆಲಸ ಮಾಡಿದ ಹಾಗೂ ಎಲ್ಲರನ್ನೂ ಪ್ರಭಾವಿಸಿದ ಅತಿ ದೊಡ್ಡ ಜೀವವೇ ತೇಜಸ್ವಿ.
ಕರ್ನಾಟಕದ ಸಣ್ಣ, ಸಣ್ಣ ಊರಿನಲ್ಲಿಯೂ ತೇಜಸ್ವಿ ಅಭಿಮಾನಿಗಳಿದ್ದಾರೆ. ಅದರಲ್ಲಿ ನಾನೂ ಒಬ್ಬ. ನಮ್ಮಣ್ಣ ಕಾಲೇಜು ಓದುವಾಗ ಕರ್ವಾಲೋ ಪಠ್ಯವಿತ್ತು. ನಮ್ಮಣ್ಣ ಓದುವಾಗ ನನಗೆ ಆಸಕ್ತಿ ಉಂಟಾಗಿ ಪೂರ್ತಿಯಾಗಿ ಆ ಪುಸ್ತಕವನ್ನು ಓದಿದೆ. ನಂತರ ತೇಜಸ್ವಿ ಅವರ ಎಲ್ಲಾ ಬರಹಗಳನ್ನು ಓದಲು ಪ್ರಾರಂಭಿಸಿದೆ. ಅವರು ಬರೆಯದ, ಮಾತನಾಡದೆ ಇರುವ ವಿಷಯಗಳೇ ಇಲ್ಲ.

 ನಿಮ್ಮ ಸುತ್ತಲೂ ಒಂದು ಜಗತ್ತಿದೆ, ಒಂದಿಷ್ಟು ಜನರಿದ್ದಾರೆ, ನೀವು ಅವರ ಕಥೆಗಳನ್ನು ಹೇಳುತ್ತಾ ಹೋಗಬೇಕು. ನಿಮ್ಮ ಕಥೆಗಳಲ್ಲಿ ಅವುಗಳನ್ನು ಪಾತ್ರ ಮಾಡದೆ ಅವರೊಳಗಿರುವ ಕಥೆಗಳನ್ನು ಹೇಳಬೇಕು ಎನ್ನುವುದು ತೇಜಸ್ವಿ ಶೈಲಿಯಾಗಿತ್ತು. ಶಿವರಾಮ ಕಾರಂತರೂ ಇದೇ ಶೈಲಿಯನ್ನು ಅಳವಡಿಸಿಕೊಂಡಿದ್ದರು. ಸುತ್ತಮುತ್ತಲಿನ ಸಣ್ಣ ಊರುಗಳ ಸಣ್ಣ ಸಮುದಾಯಗಳ ಸಣ್ಣ ಜನಗಳ ಬದುಕಿನಲ್ಲಿ ನಡೆಯುವ ಸಣ್ಣ, ಸಣ್ಣ ಕಥೆಗಳನ್ನು ಹಿಡಿದು ಹೇಗೆ ದಾಖಲು ಮಾಡಬೇಕು ಎನ್ನುವುದನ್ನು ನಾನು ತೇಜಸ್ವಿ ಅವರಿಂದ ಕಲಿತುಕೊಂಡೆ. ಇದು ನನ್ನ ಮೇಲೆ ದೊಡ್ಡಮಟ್ಟದ ಪ್ರಭಾವ ಬೀರಿತು. ನನ್ನ ಸಾಹಿತ್ಯ, ಸಿನೆಮಾ ಕಥೆಗಳ ಮೂಲಕ ಅವರು ನನ್ನೊಳಗೆ ಇದ್ದಾರೆ ಹಾಗೂ ಅವರು ಹಾಕಿಕೊಟ್ಟ ಮನುಷ್ಯತ್ವದ ಕಾಂಪೌಂಡ್‌ನಲ್ಲಿಯೇ ನಾನು ಬದುಕುತ್ತಿದ್ದೇನೆ ಅನ್ನಿಸುತ್ತದೆ.
-ಟಿ.ಕೆ. ದಯಾನಂದ, ಕತೆಗಾರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News