ಶೇ. 96.2 ಸಾಕ್ಷರತಾ ಪ್ರಮಾಣದೊಂದಿಗೆ ಮತ್ತೆ ನಂಬರ್ 1 ಆದ ಕೇರಳ

Update: 2020-09-07 18:04 GMT

ಹೊಸದಿಲ್ಲಿ, ಸೆ.7: ಶೇ.96.2 ಸಾಕ್ಷರತೆಯೊಂದಿಗೆ ದೇಶದಲ್ಲೇ ಅತಿ ಹೆಚ್ಚು ಸಾಕ್ಷರರನ್ನು ಒಳಗೊಂಡಿರುವ ರಾಜ್ಯವಾಗಿ ಕೇರಳ ಮತ್ತೊಮ್ಮೆ ಹೊರಹೊಮ್ಮಿದೆ. ಶೇ. 66.4 ಸಾಕ್ಷರತೆಯೊಂದಿಗೆ ಆಂಧ್ರಪ್ರದೇಶ ಕೊನೆಯ ಸ್ಥಾನದಲ್ಲಿದೆ ಎಂದು ರಾಷ್ಟ್ರೀಯ ಅಂಕಿ-ಅಂಶ ಕಾರ್ಯಾಲಯ (ಎನ್‌ಎಸ್‌ಒ) ಆಧಾರಿತ ವರದಿ ತಿಳಿಸಿದೆ.

2017 ಜುಲೈಯಿಂದ 2018 ಜೂನ್ ವರೆಗಿನ ರಾಷ್ಟ್ರೀಯ ಸ್ಯಾಂಪಲ್ ಸರ್ವೇಯ 75ನೇ ಸುತ್ತಿನ ಒಂದು ಭಾಗವಾದ ‘ಹೌಸ್‌ಹೋಲ್ಡ್ ಸೋಷಿಯಲ್ ಕನ್ಸಂಪ್ಸ್ಯನ್: ಎಜುಕೇಶನ್ ಇನ್ ಇಂಡಿಯಾ’ ಕುರಿತ ವರದಿ 7 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರ ರಾಜ್ಯವಾರು ಸಾಕ್ಷರತಾ ಪ್ರಮಾಣವನ್ನು ಬಹಿರಂಗಪಡಿಸಿದೆ.

ಈ ಅಧ್ಯಯನದ ಪ್ರಕಾರ ಕೇರಳದ ಬಳಿಕ ಅತಿ ಹೆಚ್ಚು ಶೇ. 88.7 ಸಾಕ್ಷರರನ್ನು ಒಳಗೊಂಡಿರುವ ದಿಲ್ಲಿ ಎರಡನೇ ಅತ್ಯಧಿಕ ಸಾಕ್ಷರ ರಾಜ್ಯವಾಗಿ ಹೊರಹೊಮ್ಮಿದೆ. ಆನಂತರದ ಸ್ಥಾನವನ್ನು ಕ್ರಮವಾಗಿ ಶೇ. 87.6 ಇರುವ ಉತ್ತರಾಖಂಡ, ಶೇ. 86.6 ಇರುವ ಹಿಮಾಚಲಪ್ರದೇಶ ಹಾಗೂ ಶೇ. 85.9 ಇರುವ ಅಸ್ಸಾಂ ಪಡೆದುಕೊಂಡಿವೆ. ಇನ್ನೊಂದೆಡೆ ಶೇ. 69.7 ಸಾಕ್ಷರರನ್ನು ಒಳಗೊಂಡಿರುವ ಮೂಲಕ ರಾಜಸ್ಥಾನ ಎರಡನೇ ಅತ್ಯಂತ ಕಡಿಮೆ ಸಾಕ್ಷರರನ್ನು ಒಳಗೊಂಡಿರುವ ರಾಜ್ಯವಾಗಿದೆ. ಆನಂತರ ಅತಿ ಕಡಿಮೆ ಸಾಕ್ಷರರನ್ನು ಹೊಂದಿರುವ ರಾಜ್ಯದ ಸ್ಥಾನವನ್ನು ಕ್ರಮವಾಗಿ ಶೇ. 70.9 ಇರುವ ಬಿಹಾರ, ಶೇ. 72.8 ಇರುವ ತೆಲಂಗಾಣ, ಶೇ. 73 ಇರುವ ಉತ್ತರಪ್ರದೇಶ ಹಾಗೂ ಶೇ. 73.7 ಇರುವ ಮಧ್ಯಪ್ರದೇಶ ಪಡೆದುಕೊಂಡಿವೆ.

ದೇಶಾದ್ಯಂತ ಒಟ್ಟು ಸಾಕ್ಷರರ ಪ್ರಮಾಣ ಶೇ. 77.7 ಇರುವುದಾಗಿ ಅಧ್ಯಯನ ಗುರುತಿಸಿದೆ. ದೇಶದ ನಗರ ಪ್ರದೇಶದ ಶೇ. 87.7 ಸಾಕ್ಷರತೆಗೆ ಹೋಲಿಸಿದರೆ, ಗ್ರಾಮೀಣ ಪ್ರದೇಶದಲ್ಲಿ ಶೇ. 73.5 ಸಾಕ್ಷರತೆ ಪ್ರಮಾಣ ಇದೆ.

ಅಖಿಲ ಭಾರತ ಮಟ್ಟದಲ್ಲಿ ಮಹಿಳೆಯರ ಶೇ. 70.3 ಸಾಕ್ಷರತಾ ಪ್ರಮಾಣಕ್ಕೆ ಹೋಲಿಸಿದರೆ ಪುರುಷರ ಸಾಕ್ಷರತಾ ಪ್ರಮಾಣ ಶೇ. 84.7 ಇದೆ.

ಎಲ್ಲ ರಾಜ್ಯಗಳಲ್ಲಿ ಪುರುಷರ ಸಾಕ್ಷರತೆ ಪ್ರಮಾಣ ಮಹಿಳೆಯ ಸಾಕ್ಷರತೆ ಪ್ರಮಾಣಕ್ಕಿಂತ ಹೆಚ್ಚಿದೆ ಎಂದು ಸಮೀಕ್ಷೆ ತಿಳಿಸಿದೆ. ಕೇರಳದಲ್ಲಿ ಮಹಿಳೆಯರ ಶೇ 95.2 ಸಾಕ್ಷರತಾ ಪ್ರಮಾಣಕ್ಕೆ ಹೋಲಿಸಿದರೆ, ಪುರುಷರ ಸಾಕ್ಷರತಾ ಪ್ರಮಾಣ ಶೇ. 97.4 ಇದೆ.

ಇದೇ ರೀತಿ ದಿಲ್ಲಿಯಲ್ಲಿ ಮಹಿಳೆಯರ ಶೇ. 82.4 ಸಾಕ್ಷರತಾ ಪ್ರಮಾಣಕ್ಕೆ ಹೋಲಿಸಿದರೆ, ಪುರುಷರ ಸಾಕ್ಷರತಾ ಪ್ರಮಾಣ ಶೇ. 93.7 ಇದೆ.

ಸಾಕ್ಷರತೆ ಪ್ರಮಾಣ ಅತಿ ಕಡಿಮೆ ಇರುವ ರಾಜ್ಯಗಳಲ್ಲಿ ಮಹಿಳೆಯರು ಹಾಗೂ ಪುರುಷರ ನಡುವಿನ ಸಾಕ್ಷರತೆ ಪ್ರಮಾಣದಲ್ಲಿ ಕೂಡ ಗಣನೀಯ ಅಂತರ ಇದೆ. ಆಂಧ್ರಪ್ರದೇಶದಲ್ಲಿ ಮಹಿಳೆಯರ (7 ವರ್ಷ ಹಾಗೂ ಅದಕ್ಕಿಂತ ಹೆಚ್ಚು) ಸಾಕ್ಷರತಾ ಪ್ರಮಾಣ ಶೇ. 59.5 ಇದ್ದರೆ, ಪುರುಷರ ಸಾಕ್ಷರತಾ ಪ್ರಮಾಣ ಶೇ. 73.4 ಇದೆ. ರಾಜಸ್ಥಾನದಲ್ಲಿ ಈ ಅಂತರ ಇನ್ನಷ್ಟು ಹೆಚ್ಚಿದೆ. ಅಲ್ಲಿ ಮಹಿಳೆಯರ ಸಾಕ್ಷರತಾ ಪ್ರಮಾಣ ಶೇ. 57.6ಕ್ಕೆ ಇದ್ದರೆ, ಪುರುಷರ ಸಾಕ್ಷರತಾ ಪ್ರಮಾಣ ಶೇ. 80.8 ಇದೆ.

ಬಿಹಾರದಲ್ಲಿ ಈ ಅಂತರ ಅತಿ ಹೆಚ್ಚಿದೆ. ಇಲ್ಲಿ ಮಹಿಳೆಯರ ಸಾಕ್ಷರತೆ ಪ್ರಮಾಣ ಶೇ. 60.5 ಇದ್ದರೆ, ಪುರುಷರ ಸಾಕ್ಷರತಾ ಪ್ರಮಾಣ ಶೇ. 79.7 ಇದೆ. ಭಾರತಾದ್ಯಂತ 8,097 ಗ್ರಾಮಗಳ 64,519 ಗ್ರಾಮೀಣ ಮನೆಗಳ ಹಾಗೂ 6,188 ಬ್ಲಾಕ್‌ಗಳ 49,238 ನಗರದ ಮನೆಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ.

ಕರ್ನಾಟಕದ ಸಾಕ್ಷರತೆ 77.2 ಶೇ.

ಕರ್ನಾಟಕದ ಸಾಕ್ಷರತಾ ಪ್ರಮಾಣವು ದೇಶದ ಸರಾಸರಿ ಸಾಕ್ಷರತಾ ಪ್ರಮಾಣಕ್ಕಿಂತ ಕಡಿಮೆಯಿರುವುದು ಎನ್‌ಎಸ್‌ಒ ಸಮೀಕ್ಷೆಯಿಂದ ಬೆಳಕಿಗೆ ಬಂದಿದೆ. ದೇಶದ ಸರಾಸರಿ ಸಾಕ್ಷರತಾ ಪ್ರಮಾಣ 77.7 ಶೇಕಡ ಆಗಿದ್ದರೆ, ಕರ್ನಾಟಕ ರಾಜ್ಯದ ಸಾಕ್ಷರತಾ ಪ್ರಮಾಣವು 77.2 ಶೇಕಡ ಇದೆ. ರಾಜ್ಯದಲ್ಲಿ ಏಳು ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನ ಶೇ.83.4ರಷ್ಟು ಪುರುಷರು ಹಾಗೂ ಶೇ.70.5ರಷ್ಟು ಸ್ತ್ರೀಯರು ಸಾಕ್ಷರರೆಂದು ಎನ್‌ಎಸ್‌ಒ ವರದಿ ತಿಳಿಸಿದೆ.

ನಗರ-ಗ್ರಾಮಾಂತರ ಸಾಕ್ಷರತೆ ಅಂತರ ಕೇರಳದಲ್ಲಿ ಅತ್ಯಂತ ಕನಿಷ್ಠ

ಕೇರಳದಲ್ಲಿ ನಗರಪ್ರದೇಶಗಳಲ್ಲಿನ ಸಾಕ್ಷರತೆಯು, ಗ್ರಾಮಾಂತರ ಸಾಕ್ಷರತೆಗಿಂತ ಶೇ.1.9ರಷ್ಟು ಹೆಚ್ಚಿದ್ದು, ಈ ಅಂತರವು ದೇಶದಲ್ಲೇ ಅತ್ಯಂತ ಕನಿಷ್ಠವಾಗಿದೆ. ಆದರೆ ತೆಲಂಗಾಣದಲ್ಲಿ ನಗರಪ್ರದೇಶದಲ್ಲಿನ ಸಾಕ್ಷರತೆಯು, ಗ್ರಾಮಾಂತರ ಸಾಕ್ಷರತೆಗಿಂತ ಶೇ.23.4ರಷ್ಟು ಅಧಿಕವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News