ಅತ್ಯಾಚಾರ ಆರೋಪ: ಕೇರಳದ ಆರೋಗ್ಯಾಧಿಕಾರಿ ಬಂಧನ

Update: 2020-09-07 18:39 GMT

ತಿರುವನಂತಪುರಂ, ಸೆ.7: ಕ್ವಾರಂಟೈನ್‌ನಿಂದ ಬಿಡುಗಡೆಗೊಂಡಿರುವ ಬಗ್ಗೆ ಪ್ರಮಾಣಪತ್ರ ಪಡೆಯಲು ಹೋದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಕಿರಿಯ ಆರೋಗ್ಯ ಅಧಿಕಾರಿಯೊಬ್ಬರನ್ನು ಬಂಧಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

  ಮಲಪ್ಪುರಂನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಆಗಸ್ಟ್ ಅಂತ್ಯದಲ್ಲಿ ತನ್ನ ಊರು ಕುಲತುಪುಳಕ್ಕೆ ಹಿಂದಿರುಗಿದ ಸಂದರ್ಭ ಅವರನ್ನು ಕ್ವಾರಂಟೈನ್‌ನಲ್ಲಿರಿಸಲಾಗಿತ್ತು. ಕುಲತುಪುಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಹಿಳೆಯ ಕೊರೋನ ಸೋಂಕು ಪರೀಕ್ಷೆ ನಡೆಸಿದ್ದು ನೆಗೆಟಿವ್ ವರದಿ ಬಂದಿದೆ. ಇಲ್ಲಿ ಆರೋಗ್ಯ ಅಧಿಕಾರಿಯಾಗಿದ್ದ ಪ್ರದೀಪ್ ಎಂಬಾತ ಮಹಿಳೆಗೆ ತನ್ನ ಮೊಬೈಲ್ ನಂಬರ್ ನೀಡಿದ್ದು, ಕ್ವಾರಂಟೈನ್ ಪ್ರಮಾಣಪತ್ರವನ್ನು ಮನೆಗೆ ಬಂದು ಕೊಂಡೊಯ್ಯುವಂತೆ ಹೇಳಿದ್ದ.

  ಸೆಪ್ಟಂಬರ್ 3ರಂದು ಪಂಗೋಡೆ ಠಾಣಾ ವ್ಯಾಪ್ತಿಯಲ್ಲಿರುವ ಪ್ರದೀಪ್ ಮನೆಗೆ ಮಹಿಳೆ ತೆರಳಿದ್ದಾಗ ಆತ ಅತ್ಯಾಚಾರ ಎಸಗಿದ್ದು, ಈ ವಿಷಯವನ್ನು ಯಾರಲ್ಲೂ ತಿಳಿಸಬಾರದೆಂದು ಬೆದರಿಸಿದ್ದಾನೆ ಎನ್ನಲಾಗಿದೆ. ಬಳಿಕ ಸ್ನೇಹಿತೆಯ ಸಲಹೆಯಂತೆ ವೆಲ್ಲಾರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ದ್ದು, ದೂರನ್ನು ಪಂಗೋಡೆ ಠಾಣೆಗೆ ವರ್ಗಾಯಿಸಲಾಗಿದೆ. ಪ್ರದೀಪ್‌ನನ್ನು ಬಂಧಿಸಿದ್ದು ಆತ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News