ರಿಯಾ ಚಕ್ರವರ್ತಿಯನ್ನು ಬಂಧಿಸಿದ ಎನ್‌ಸಿಬಿ
ಮುಂಬೈ, ಸೆ. 7: ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣದಲ್ಲಿ ತನಿಖೆ ಎದುರಿಸುತ್ತಿರುವ ಬಾಲಿವುಡ್ ನಟಿ ರಿಯಾ ಚಕ್ರವರ್ತಿ ಅವರನ್ನು ಮಾದಕ ವಸ್ತು ನಿಯಂತ್ರಣ ಸಂಸ್ಥೆ (ಎನ್‌ಸಿಬಿ) ಸೋಮವಾರ ಬಂಧಿಸಿದೆ.
ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣದಲ್ಲಿ ಮಾದಕ ದ್ರವ್ಯ ಸಂಬಂಧಿ ವಿಚಾರಣೆ ಎದುರಿಸಲು 28ರ ಹರೆಯದ ರಿಯಾ ಚಕ್ರವರ್ತಿ ಬಲ್ಲಾರ್ಡ್ ಎಸ್ಟೇಟ್ ಪ್ರದೇಶದಲ್ಲಿರುವ ಎನ್‌ಸಿಬಿ ಕಚೇರಿಗೆ ಸೋಮವಾರ 9.30ಕ್ಕೆ ಆಗಮಿಸಿದ್ದರು. ಸಂಜೆ 6 ಗಂಟೆವರೆಗೆ ಅವರ ವಿಚಾರಣೆ ನಡೆಸಲಾಗಿತ್ತು. ಮಂಗಳವಾರ ಕೆಲವು ಪ್ರಕ್ರಿಯೆಗಳನ್ನು ಪೂರೈಸಿದ ಬಳಿಕ ಅವರನ್ನು ಬಂಧಿಸಲಾಗಿದೆ.
ಬಾಂದ್ರಾ ಉಪ ನಗರದ ಅಪಾರ್ಟ್‌ಮೆಂಟ್‌ನಲ್ಲಿ ಜೂನ್ 14ರಂದು ಸುಶಾಂತ್ ಸಿಂಗ್ ರಜಪೂತ್ ಅವರ ಮೃತದೇಹ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿರುವ ಪ್ರಕರಣದಲ್ಲಿ ಮಾದಕ ದ್ರವ್ಯದ ಆಯಾಮಕ್ಕೆ ಸಂಬಂಧಿಸಿದ ತನಿಖೆಗೆ ಅವರು ಸಹಕರಿಸುತ್ತಿದ್ದಾರೆ ಎಂದು ಎನ್‌ಸಿಬಿ ಈ ಹಿಂದೆ ತಿಳಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಕಳೆದ ಕೆಲವು ದಿನಗಳ ಹಿಂದೆ ಎನ್‌ಸಿಬಿ ರಿಯಾ ಚಕ್ರವರ್ತಿಯ ಸಹೋದರ ಶೋವಿಕ್ ಚಕ್ರವರ್ತಿ, ಸುಶಾಂತ್ ಸಿಂಗ್ ರಜಪೂತ್ ಅವರ ನಿವಾಸದ ಮ್ಯಾನೇಜರ್ ಸ್ಯಾಮುವೆಲ್ ಮಿರಾಂಡಾ ಹಾಗೂ ಅವರ ನಿವಾಸದ ಸಿಬ್ಬಂದಿ ದೀಪೇಶ್ ಸಾವಂತ್ ಅವರನ್ನು ಬಂಧಿಸಿತ್ತು. ಝೈದ್ ವಿಲಾತ್ರ, ಕೈಝನ್ ಇಬ್ರಾಹಿಂ, ಅಬ್ದುಲ್ ಬಾಸಿತ್ ಪರಿಹಾರ್, ಕರಣ್ ಅರೋರಾ ಹಾಗೂ ಹಾಗೂ ಅಬ್ಬಾಸ್ ಲಖೇನಿ ಅವರನ್ನು ಕೂಡ ಈ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲಾಗಿದೆ. ಎನ್‌ಸಿಬಿ ವೃತ್ತಿಪರವಾಗಿ ಹಾಗೂ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತಿದೆ.
ತನಿಖೆಯ ವಿವರಗಳ ಬಗ್ಗೆ ನ್ಯಾಯಾಲಯಕ್ಕೆ ಮಾಹಿತಿ ನೀಡಲಾಗುವುದು ಎಂದು ಎನ್‌ಸಿಬಿ ಉಪ ಮಹಾ ನಿರ್ದೇಶಕ ಮುಥಾ ಅಶೋಕ್ ಜೈನ್ ತಿಳಿಸಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಮಾದಕ ದ್ರವ್ಯ ಬಳಕೆ, ಸಂಗ್ರಹ, ಸೇವನೆ, ಸಾಗಾಟಕ್ಕೆ ಸಂಬಂಧಿಸಿದ ವ್ಯಾಟ್ಸ್ ಆ್ಯಪ್ ಚಾಟ್ ಬೆಳಕಿಗೆ ಬಂದ ಬಳಿಕ ಎನ್‌ಸಿಬಿ ತನಿಖೆ ಆರಂಭಿಸಿತ್ತು.