ರಶ್ಯದ ಪ್ರತಿಪಕ್ಷ ನಾಯಕ ಕೃತಕ ಪ್ರಜ್ಞಾಹೀನ ಸ್ಥಿತಿಯಿಂದ ಹೊರಗೆ: ಜರ್ಮನಿಯ ಆಸ್ಪತ್ರೆ ಘೋಷಣೆ

Update: 2020-09-08 17:44 GMT

ಬರ್ಲಿನ್ (ಜರ್ಮನಿ), ಸೆ. 8: ರಶ್ಯದ ಪ್ರತಿಪಕ್ಷ ನಾಯಕ ಅಲೆಕ್ಸೀ ನವಾಲ್ನಿ ವೈದ್ಯಕೀಯವಾಗಿ ಜಾಗೃತಗೊಳಿಸಲಾದ ಪ್ರಜ್ಞಾಹೀನ ಸ್ಥಿತಿಯಿಂದ ಹೊರಬಂದಿದ್ದಾರೆ ಹಾಗೂ ಅವರು ಈಗ ಮಾತಿಗೆ ಸ್ಪಂದಿಸುತ್ತಿದ್ದಾರೆ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ಬರ್ಲಿನ್‌ನ ಆಸ್ಪತ್ರೆಯು ಸೋಮವಾರ ಹೇಳಿದೆ.

 44 ವರ್ಷದ ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಹಾಗೂ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ರ ಕಟು ಟೀಕಾಕಾರರಾಗಿರುವ ನವಾಲ್ನಿ ಕಳೆದ ತಿಂಗಳು ಸೈಬೀರಿಯದಿಂದ ಮಾಸ್ಕೋಗೆ ಹೋಗುವ ವಿಮಾನದಲ್ಲಿ ತೀವ್ರವಾಗಿ ಅಸ್ವಸ್ಥಗೊಂಡಿದ್ದರು. ಅವರಿಗೆ ಮೊದಲು ಸೈಬೀರಿಯದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ನೀಡಲಾಗಿತ್ತು ಹಾಗೂ ಬಳಿಕ ಅವರನ್ನು ಬರ್ಲಿನ್‌ನ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.

ಅವರಿಗೆ ಸೇನೆಯಲ್ಲಿ ಬಳಸಲಾಗುವ ನೊವಿಚೊಕ್ ನರ್ವ್ ಏಜಂಟ್ ಎಂಬ ಮಾರಕ ರಾಸಾಯನಿಕಪ್ರಾಶನ ಮಾಡಲಾಗಿದೆ ಎಂದು ಜರ್ಮನಿ ಆರೋಪಿಸಿದೆ.

‘‘ಅವರು ಈಗ ಮಾತಿಗೆ ಸ್ಪಂದಿಸುತ್ತಿದ್ದಾರೆ’’ ಎಂದು ಚಾರಿಟಿ ಹಾಸ್ಪಿಟಲ್ ಹೇಳಿಕೆಯೊಂದರಲ್ಲಿ ತಿಳಿಸಿದೆ. ಅವರ ಪರಿಸ್ಥಿತಿ ಈಗ ಸುಧಾರಿಸಿದೆ ಎಂದು ಅದು ಹೇಳಿದೆ.

ಅವರನ್ನು ಕೃತಕ ಉಸಿರಾಟ ವ್ಯವಸ್ಥೆಯಿಂದ ನಿಧಾನವಾಗಿ ಹೊರತರಲಾಗುತ್ತಿದೆ ಎಂದು ಹೇಳಿರುವ ಆಸ್ಪತ್ರೆಯು, ಆದರೆ, ವಿಷಪ್ರಾಶನದ ದೀರ್ಘಾವಧಿ ಪರಿಣಾಮಗಳನ್ನು ಈಗಲೇ ನಿರ್ಧರಿಸುವುದು ಸಾಧ್ಯವಿಲ್ಲ ಎಂದಿದೆ.

ತನ್ನ ಸಶಸ್ತ್ರ ಪಡೆಗಳು ನಡೆಸಿರುವ ವಿಷ ಪರೀಕ್ಷೆಯಲ್ಲಿ, ನವಾಲ್ನಿಗೆ ನೊವಿಚೊಕ್ ರಾಸಾಯನಿಕಪ್ರಾಶನವಾಗಿರುವುದು ನಿರ್ವಿವಾದವಾಗಿ ಸಾಬೀತಾಗಿದೆ ಎಂದು ಜರ್ಮನಿ ಕಳೆದ ವಾರ ಹೇಳಿದೆ. ಇದೇ ರಾಸಾಯನಿಕ ಪದಾರ್ಥವನ್ನು 2018ರಲ್ಲಿ ಇಂಗ್ಲೆಂಡ್‌ನ ನಗರ ಸ್ಯಾಲಿಸ್‌ಬರಿಯಲ್ಲಿ ರಶ್ಯದ ಓರ್ವ ಮಾಜಿ ಡಬಲ್ ಏಜಂಟ್ ಮತ್ತು ಅವರ ಮಗಳ ಮೇಲೆ ಪ್ರಯೋಗಿಸಲಾಗಿತ್ತು. ಈ ದಾಳಿಯಿಂದ ಇಬ್ಬರೂ ಬದುಕುಳಿದಿದ್ದಾರೆ.

ಸ್ವತಂತ್ರ, ಪಾರದರ್ಶಕ ತನಿಖೆಗೆ ವಿಶ್ವಸಂಸ್ಥೆ ಕರೆ

ರಶ್ಯದ ಪ್ರತಿಪಕ್ಷ ನಾಯಕ ಅಲೆಕ್ಸೀ ನವಾಲ್ನಿಯ ಮೇಲೆ ನಡೆದಿದೆಯೆನ್ನಲಾ ರಾಸಾಯನಿಕ ದಾಳಿಯ ಬಗ್ಗೆ ‘‘ಸಂಪೂರ್ಣ, ಪಾರದರ್ಶಕ, ಸ್ವತಂತ್ರ ಹಾಗೂ ನಿಷ್ಪಕ್ಷಪಾತ ತನಿಖೆ’’ ನಡೆಸುವಂತೆ ಅಥವಾ ತನಿಖೆಗೆ ಸಹಕರಿಸುವಂತೆ ವಿಶ್ವಸಂಸ್ಥೆಯ ಮಾನವಹಕ್ಕುಗಳ ಮುಖ್ಯಸ್ಥೆ ಮಿಶೆಲ್ ಬ್ಯಾಚಲೆಟ್ ರಶ್ಯಕ್ಕೆ ಮಂಗಳವಾರ ಕರೆ ನೀಡಿದ್ದಾರೆ.

ಅವರಿಗೆ ರಾಸಾಯನಿಕಪ್ರಾಶನವಾಗಿದೆ ಎಂಬುದಾಗಿ ಜರ್ಮನಿ ಆರೋಪಿಸಿರುವ ಹಿನ್ನೆಲೆಯಲ್ಲಿ, ಆರೋಪದ ತಳಕ್ಕೆ ಹೋಗುವುದು ಅಗತ್ಯವಾಗಿದೆ ಎಂದು ಹೇಳಿಕೆಯೊಂದರಲ್ಲಿ ಬ್ಯಾಚಲೆಟ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News