ನೀಟ್ ಮುಂದೂಡಿಕೆಯನ್ನು ಕೋರಿದ್ದ ಅರ್ಜಿಗಳನ್ನು ವಜಾಗೊಳಿಸಿದ ಸುಪ್ರೀಂ

Update: 2020-09-09 17:45 GMT

ಹೊಸದಿಲ್ಲಿ,ಸೆ.9: ನೀಟ್ ಪರೀಕ್ಷೆಯನ್ನು ಮುಂದೂಡುವಂತೆ ಕೋರಿ ಸಲ್ಲಿಸಲಾಗಿದ್ದ ಮೂರು ಅರ್ಜಿಗಳನ್ನು ಸರ್ವೋಚ್ಚ ನ್ಯಾಯಾಲಯವು ಬುಧವಾರ ವಜಾಗೊಳಿಸಿದೆ.  ಸೆ.13ರಂದು ನೀಟ್ ಪರೀಕ್ಷೆ ನಿಗದಿಯಾಗಿದೆ.

ಕೊರೋನ ವೈರಸ್ ಸಾಂಕ್ರಾಮಿಕದ ನಡುವೆಯೇ ನೀಟ್ ಪರೀಕ್ಷೆಗಳನ್ನು ನಡೆಸಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ನ್ಯಾ.ಅಶೋಕ್ ಭೂಷಣ್ ನೇತೃತ್ವದ ಪೀಠವು ಅಧಿಕಾರಿಗಳಿಗೆ ನಿರ್ದೇಶ ನೀಡಿತು.

ನೀಟ್ ಮತ್ತು ಜೆಇಇ ಪರೀಕ್ಷೆಗಳನ್ನು ವಿಳಂಬಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಆ.17ರಂದು ತಿರಸ್ಕರಿಸಿದ್ದ ನ್ಯಾ.ಅರುಣ್ ಮಿಶ್ರಾ ನೇತೃತ್ವದ ಪೀಠವು, ವಿದ್ಯಾರ್ಥಿಗಳ ಭವಿಷ್ಯವನ್ನು ದೀರ್ಘಕಾಲ ಅಪಾಯದಲ್ಲಿ ಸಿಲುಕಿಸಲು ಸಾಧ್ಯವಿಲ್ಲ ಎಂದು ಹೇಳಿತ್ತು. ಈ ಆದೇಶದ ಪುನರ್‌ ಪರಿಶೀಲನೆ ಕೋರಿ ಆರು ರಾಜ್ಯಗಳು ಸಲ್ಲಿಸಿದ್ದ ಅರ್ಜಿಗಳನ್ನು ಸೆ.4ರಂದು ನ್ಯಾಯಾಲಯವು ವಜಾ ಮಾಡಿತ್ತು.

ಜೆಇಇ ಪರೀಕ್ಷೆಯು ಕಟ್ಟುನಿಟ್ಟಾದ ಸುರಕ್ಷತಾ ನಿಯಮಗಳ ನಡುವೆ ಸೆ.1ರಂದು ಆರಂಭಗೊಂಡು ಸೆ.6ರಂದು ಅಂತ್ಯಗೊಂಡಿದ್ದು,ವೈದ್ಯಕೀಯ ಕೋರ್ಸ್‌ಗೆ ಪ್ರವೇಶಕ್ಕಾಗಿ ನೀಟ್ ಪರೀಕ್ಷೆಯು ಸೆ.13ರಂದು ನಡೆಯಲಿದೆ.

 ತನ್ಮಧ್ಯೆ ಮೊದಲ ಮೂರು ದಿನಗಳ ಜೆಇಇ ಪರೀಕ್ಷೆಗೆ 1.14 ಲ.ಕ್ಕೂ ಅಧಿಕ ವಿದ್ಯಾರ್ಥಿಗಳು (ಶೇ.25) ಗೈರಾಗಿದ್ದರು ಎಂದು ಅಂಕಿಅಂಶಗಳು ತಿಳಿಸಿವೆ. ನೋಂದಣಿ ಮಾಡಿಕೆೊಂಡಿದ್ದ ಒಟ್ಟು 4,58,521 ವಿದ್ಯಾರ್ಥಿಗಳ ಪೈಕಿ 3,43,958 ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ಹಾಜರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News