ಪೂರ್ಣ ಪ್ರಮಾಣದ ಮಹಿಳಾ ಐಪಿಎಲ್ ದೇಶಕ್ಕೆ ದೊಡ್ಡ ಸಾಧನೆ: ಜುಲಾನ್ ಗೋಸ್ವಾಮಿ

Update: 2020-09-09 18:04 GMT

ಹೊಸದಿಲ್ಲಿ, ಸೆ.9: ಪೂರ್ಣ ಪ್ರಮಾಣದ ಮಹಿಳಾ ಇಂಡಿಯನ್ ಪ್ರೀಮಿಯರ್ ಲೀಗ್ ದೇಶಕ್ಕೆ ದೊಡ್ಡ ಸಾಧನೆಯಾಗಲಿದೆ ಎಂದು ಭಾರತದ ಮಹಿಳಾ ಕ್ರಿಕೆಟ್ ತಾರೆ ಜುಲಾನ್ ಗೋಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

  ಯಾಕೆಂದರೆ ಯುವ ಆಟಗಾರ್ತಿಯರಿಗೆ ಡ್ರೆಸ್ಸಿಂಗ್ ಕೋಣೆಯನ್ನು ಉನ್ನತ ದರ್ಜೆಯ ಭಾರತೀಯ ಮತ್ತು ಅಂತರ್‌ರಾಷ್ಟ್ರೀಯ ಪ್ರತಿಭೆಗಳೊಂದಿಗೆ ಹಂಚಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.   

 ಸ್ಪೋರ್ಟ್ಸ್ ಟೈಗರ್ಸ್ ಶೋ ‘ಆಫ್-ದಿ-ಫೀಲ್ಡ್’ ಕಾರ್ಯಕ್ರಮದಲ್ಲಿ ಮಾತನಾಡಿದ ಜುಲಾನ್ ಱಱಐಪಿಎಲ್‌ಗೆ ಸಂಬಂಧಿಸಿದಂತೆ ಪೂರ್ಣ ಪ್ರಮಾಣದ ಪಂದ್ಯಾವಳಿ ಪ್ರಾರಂಭವಾಗಬೇಕೆಂದು ನಾವು ಬಯಸುತ್ತೇವೆ ಮತ್ತು ನಾವೆಲ್ಲರೂ ಅದಕ್ಕಾಗಿ ಕಾಯುತ್ತಿದ್ದೇವೆ. ಎಂದರು. ಭಾರತದ ಮಾಜಿ ಮಹಿಳಾ ವೇಗಿ 37ರ ಹರೆಯದ ಜುಲಾನ್ 225 ಏಕದಿನ ವಿಕೆಟ್‌ಗಳನ್ನು ಪಡೆದಿದ್ದಾರೆ.

 ‘‘ವೃತ್ತಿಪರ ಕ್ರೀಡಾಪಟುವಾಗಿ, ನೀವು ಎಂದಿಗೂ ವಯಸ್ಸಿನ ಬಗ್ಗೆ ಯೋಚಿಸುವುದಿಲ್ಲ. ನಿಮ್ಮ ಉತ್ಸಾಹ, ಕಠಿಣ ಪರಿಶ್ರಮ ಮತ್ತು ಆಟದ ಮೇಲಿನ ಪ್ರೀತಿಯೊಂದಿಗೆ ನೀವು ಮುಂದುವರಿಯಿರಿ. ನೀವು ಸಾಧ್ಯವಾದಷ್ಟು ಪಂದ್ಯಗಳನ್ನು ಆಡಲು ಬಯಸುತ್ತೀರಿ ಮತ್ತು ಅದು ಯಾವುದೇ ಕ್ರೀಡಾಪಟುವಿಗೆ ಅತ್ಯಂತ ತೃಪ್ತಿಕರ ಅಂಶವಾಗಿದೆ ಮತ್ತು ನಾನು ಖುಷಿಪಡುತ್ತಿದ್ದೇನೆ’’ ಎಂದು ಹೇಳಿದರು. ಭಾರತವು 2017ರಲ್ಲಿ ನಡೆದ ಮಹಿಳಾ ವಿಶ್ವಕಪ್‌ನಲ್ಲಿ ಫೈನಲ್‌ಗೆ ತಲುಪಿತ್ತು. ಗೋಸ್ವಾಮಿ ತಂಡದ ಪ್ರಮುಖ ಸದಸ್ಯರಾಗಿದ್ದರು. ಫೈನಲ್‌ನಲ್ಲಿ ಭಾರತ 9 ರನ್‌ಗಳ ಸೋಲು ಅನುಭವಿಸಿತ್ತು.

  ‘‘ಆದರೆ 2017ರ ವಿಶ್ವಕಪ್, ಎಲ್ಲದರ ಹೊರತಾಗಿಯೂ, ನಮ್ಮ ದೇಶದಲ್ಲಿ ಮಹಿಳಾ ಕ್ರಿಕೆಟ್‌ಗೆ ಕ್ರಾಂತಿಯ ವರ್ಷವಾಗಿತ್ತು. ಮಹಿಳಾ ಕ್ರಿಕೆಟ್‌ಗೆ ಅಗತ್ಯವಾದ ಆವೇಗವನ್ನು ನಾವು ಕಂಡುಕೊಂಡಿದ್ದೇವೆ ಎಂದು ನಾನು ಭಾವಿಸುತ್ತೇನೆ. ಕಳೆದ ಮೂರು ವರ್ಷಗಳಲ್ಲಿ ನಮ್ಮ ತಂಡದ ಸಾಧನೆಯನ್ನು ನೋಡಿದರೆ , ನಾವು ಬಹಳ ಸ್ಥಿರವಾಗಿರುತ್ತೇವೆ ಮತ್ತು ಇದು ಏಕದಿನ ಅಥವಾ ಟ್ವೆಂಟಿ-20 ವಿಶ್ವಕಪ್ ಆಗಿರಲಿ ನಾವು ಫೈನಲ್‌ನಲ್ಲಿ ಮಾತ್ರ ಸೋತಿದ್ದೇವೆ ’’ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News