ಬಿಜೆಪಿಯ ಪಾಲಿನ ಕಂಗನಾ ಎಂಬ ನಕಲಿ ‘ಭಾರತ ಮಾತೆ’

Update: 2020-09-11 05:33 GMT

ಗಡಿಯಲ್ಲಿ ಚೀನಾ ಕಾಲು ಕೆರೆದು ನಿಂತಿದೆ. ಯಾವ ಕ್ಷಣದಲ್ಲೂ ಯುದ್ಧ ಸಂಭವಿಸಬಹುದು ಎನ್ನುವಂತಹ ಸ್ಥಿತಿ ಲಡಾಖ್ ಗಡಿಯಲ್ಲಿದೆ. ಇತ್ತ, ಕೊರೋನ ವಿರುದ್ಧದ ಯುದ್ಧದಲ್ಲಿ ದೇಶ ಸೋತು ಸುಣ್ಣವಾಗಿದೆ. ಲಾಕ್‌ಡೌನ್ ಈ ದೇಶದ ಆರ್ಥಿಕತೆಯನ್ನು ಸಂಪೂರ್ಣ ನಾಶಗೊಳಿಸಿದೆ ಮಾತ್ರವಲ್ಲ, ಜನರು ಸಾವು ನೋವುಗಳ ನಡುವೆ ಒದ್ದಾಡುತ್ತಿದ್ದಾರೆ. ದೇಶದ ಪ್ರಜಾಸತ್ತೆಯೂ ಅಪಾಯದಲ್ಲಿದೆ. ನೂರಾರು ಸಾಮಾಜಿಕ ಹೋರಾಟಗಾರರು ಜೈಲಲ್ಲಿದ್ದಾರೆ. ಅಳಿದುಳಿದವರಿಗೆ ವಿವಿಧ ತನಿಖಾ ಸಂಸ್ಥೆಗಳ ಮೂಲಕ ಸರಕಾರ ಬೆದರಿಕೆಯೊಡ್ಡುತ್ತಿದೆ. ಮಾಹಿತಿ ಹಕ್ಕು ಹೋರಾಟಗಾರರ ಜೀವಗಳು ಅಪಾಯದಲ್ಲಿವೆ. ಇಂತಹ ವಿಷಮ ಸನ್ನಿವೇಶದಲ್ಲಿ ಮಾಧ್ಯಮಗಳು ‘ಕಂಗನಾ’ ಎಂಬ ನಕಲಿ ಪಾತ್ರವೊಂದನ್ನು ತಂದು ಬೀದಿ ಮಧ್ಯೆ ಕುಣಿಸಿ, ಜನರನ್ನು ದಿಕ್ಕು ತಪ್ಪಿಸಲು ನೋಡುತ್ತಿವೆ. ದಿನನಿತ್ಯ ಆತ್ಮಹತ್ಯೆಗೆ ಶರಣಾಗುತ್ತಿರುವ ವಲಸೆ ಕಾರ್ಮಿಕರು, ಭೂಮಿ ಕಳೆದುಕೊಳ್ಳುತ್ತಿರುವ ರೈತರು, ಕ್ರಿಮಿನಲ್‌ಗಳ ಕೈಯಲ್ಲಿ ಅತ್ಯಾಚಾರಕ್ಕೊಳಗಾಗುತ್ತಿರುವ ಬಾಲಕಿಯರು, ಗುಂಪು ಥಳಿತಕ್ಕೆ ಬಲಿಯಾಗುತ್ತಿರುವ ಅಮಾಯಕರ ಆರ್ತನಾದಗಳನ್ನು ಮುಚ್ಚಿಟ್ಟು, ‘ಕಂಗನಾ’ ಎಂಬ ಕೂಗುಮಾರಿಯನ್ನೇ ದೇಶದ ಧ್ವನಿಯೆಂದು ಬಿಂಬಿಸಲು ಹೊರಟಿವೆ.

ಕಂಗನಾ ಒಬ್ಬ ಪ್ರತಿಭಾವಂತ ನಟಿ. ಇದರ ಜೊತೆಗೆ ಈ ದೇಶದ ಕಾನೂನುವ್ಯಾಪ್ತಿಗೆ ಒಳಪಡುವ ಒಬ್ಬ ಸಾಮಾನ್ಯ ಪ್ರಜೆ. ನಟಿಯಾಗಿ ಸಾಕಷ್ಟು ದುಡ್ಡು ಸಂಪಾದಿಸಿದ್ದಾರೆ ಎನ್ನುವುದನ್ನು ಹೊರತು ಪಡಿಸಿದರೆ, ತನ್ಮೂಲಕ ಈ ದೇಶಕ್ಕೆ ಈಕೆ ಯಾವ ಕೊಡುಗೆಯನ್ನೂ ಕೊಟ್ಟಿಲ್ಲ. ಆಮಿರ್ ಖಾನ್, ಸೋನು ಸೂದ್‌ರಂತಹ ನಟರು ತಮ್ಮ ಹಣವನ್ನು ದೇಶದ ಬಡವರಿಗಾಗಿ ಸಾಕಷ್ಟು ವ್ಯಯ ಮಾಡಿದ್ದಾರೆ. ತಮ್ಮ ತಮ್ಮ ಸರಕಾರೇತರ ಸಂಸ್ಥೆಗಳಿಂದ ದೇಶದ ವಿವಿಧ ಕ್ಷೇತ್ರಗಳಿಗೆ ಬಹಳಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಇಂತಹ ಯಾವ ಉದಾರತೆಯ ಹಿನ್ನೆಲೆಯೂ ಕಂಗನಾಗೆ ಇಲ್ಲ. ಸಿನೆಮಾದಲ್ಲಿ ಅತ್ಯಂತ ಕನಿಷ್ಠ ಬಟ್ಟೆಗಳನ್ನು ತೊಡುವ ಮೂಲಕವೇ ಸುದ್ದಿಯಲ್ಲಿದ್ದ ಈಕೆ, ಬೆಳ್ಳಿ ತೆರೆಯಲ್ಲೂ, ಅದರ ಹಿಂದೆಯೂ ಮಾದಕ ದ್ರವ್ಯ ಸೇವನೆಯ ವಿಷಯದಲ್ಲಿ ಸುದ್ದಿಯಲ್ಲಿರುತ್ತಿದ್ದವರು. ಇದೀಗ ಸುಶಾಂತ್ ಸಿಂಗ್ ಎನ್ನುವ ಯುವ ನಟನ ಸಾವನ್ನು ತನ್ನ ವೈಯಕ್ತಿಕ ಸ್ವಾರ್ಥಕ್ಕೆ ಬಳಸಲು ಮುಂದಾಗಿದ್ದಾರೆ. ‘ಸುಶಾಂತ್ ಬಾಲಿವುಡ್‌ನ ಗುಂಪುಗಾರಿಕೆಗೆ ಬಲಿಯಾದರು’ ಎಂದು ಈಕೆ ಆರೋಪಿಸಿದ್ದೇ ತಡ ಒಂದೇ ದಿನದಲ್ಲಿ ಇವರು ಬಿಜೆಪಿಯ ಪಾಲಿನ ‘ಭಾರತ ಮಾತೆ’ಯ ಪ್ರತಿಬಿಂಬವಾದರು. ಬಹುಶಃ ಬಿಜೆಪಿಯೊಳಗಿನ ಹಾಲಿ ನಾಯಕರ ನಟನಾ ಕೌಶಲ್ಯಕ್ಕೆ ಮಾರುಕಟ್ಟೆಯಲ್ಲಿ ಬೇಡಿಕೆ ಇಳಿಕೆಯಾಗಿರುವುದರಿಂದ ಅವರಿಗೆ ಕಂಗನಾ ಎನ್ನುವ ನಟಿಯ ಅಗತ್ಯ ಬಿದ್ದಂತಿದೆ. ಆದುದರಿಂದ ಬಿಜೆಪಿ ನಾಯಕರು ಬಾಲಿವುಡ್‌ನ್ನೇ ದೇಶವೆಂದು ಭಾವಿಸಿ, ಕಂಗನಾರನ್ನೇ ‘ಭಾರತ ಮಾತೆ’ ಎಂದು ಕರೆಯುವುದಕ್ಕೆ ಮುಂದಾಗಿದ್ದಾರೆ.

ತನ್ನ ಅಕ್ರಮ ಕಟ್ಟಡಗಳ ಕುರಿತಂತೆ ಮುಂಬೈಯ ಅಧಿಕಾರಿಗಳು ಪ್ರಶ್ನಿಸತೊಡಗಿದಂತೆಯೇ ಕಂಗನಾಗೆ ಮುಂಬೈ ಎನ್ನುವುದು ‘ಪಾಕಿಸ್ತಾನ ಆಕ್ರಮಿತ ಕಾಶ್ಮೀರ’ವಾಗಿ ಕಂಡಿದೆ. ಸದ್ಯಕ್ಕೆ ಮಹಾರಾಷ್ಟ್ರವನ್ನು ಶಿವಸೇನೆ ಮೈತ್ರಿ ಸರಕಾರ ಆಳುತ್ತಿರುವುದರಿಂದ, ಬಿಜೆಪಿಯೂ ಕಂಗನಾ ಆರೋಪಕ್ಕೆ ತಲೆದೂಗಿದೆ. ಆಕೆಯ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವ ಬದಲು ವಿಶೇಷ ಭದ್ರತೆಯನ್ನು ಒದಗಿಸಿದೆ. ಅಕ್ರಮ ಕಟ್ಟಡಗಳನ್ನು ಕೆಡಹುವ ಕಾರ್ಯಕ್ರಮ ಈ ದೇಶದಲ್ಲಿ ಹೊಸದೇನೂ ಅಲ್ಲ. ಸಿನೆಮಾ ನಟ, ನಟಿಯರು ಎನ್ನುವ ಕಾರಣಕ್ಕಾಗಿ ಅವುಗಳನ್ನು ಕೆಡವಬಾರದು ಎಂದಿಲ್ಲ. ಈ ಹಿಂದೆ ಶಾರುಕ್ ಖಾನ್ ಸಹಿತ ಹಲವು ಖ್ಯಾತ ನಟರ ಅಕ್ರಮ ಕಟ್ಟಡಗಳನ್ನು ಮಹಾರಾಷ್ಟ್ರ ಸರಕಾರವೇ ಕೆಡವಿದೆ. ಆಗ ಯಾರೂ ಸರಕಾರವನ್ನಾಗಲಿ, ಈ ದೇಶವನ್ನಾಗಲಿ ದೂರಿರಲಿಲ್ಲ. ಹೆಚ್ಚೆಂದರೆ ಸರಕಾರದ ಕ್ರಮದ ವಿರುದ್ಧ ನ್ಯಾಯಾಲಯದ ಮೆಟ್ಟಿಲು ತುಳಿದಿರಬಹುದು. ಪ್ರಜಾಸತ್ತಾತ್ಮಕವಾಗಿ ಅವರಿಗಿರುವ ದಾರಿ ಅದೊಂದೆ. ಆದರೆ ಕಂಗನಾ ರಾಣಾವತ್ ತನ್ನನ್ನು ತಾನು ‘ರಾಣಿ ಲಕ್ಷ್ಮೀಬಾಯಿ’ ಎಂದೇ ಭಾವಿಸಿಕೊಂಡಂತಿದೆ. ತನ್ನ ಅಕ್ರಮ ಕಟ್ಟಡವನ್ನು ದೇಶ ಲಕ್ಷ್ಮೀಬಾಯಿಯ ಸ್ಮಾರಕವೆಂದು ಭಾವಿಸಿ ರಕ್ಷಿಸಬೇಕು ಎಂಬಂತಹ ಹುಂಬತನ ಅವರ ವರ್ತನೆಯಲ್ಲಿ ವ್ಯಕ್ತವಾಗುತ್ತಿದೆ.

ಅಕ್ರಮ ಕಟ್ಟಡವನ್ನು ಕೆಡಹುವ ಸರಕಾರದ ನಿರ್ಧಾರವನ್ನು ಖಂಡಿಸುವ ಭರದಲ್ಲಿ, ಆಕೆ ಮುಂಬೈಯನ್ನು ಮಾತ್ರವಲ್ಲ, ಇಡೀ ದೇಶವನ್ನೇ ಅವಮಾನಿಸಿದ್ದಾರೆ. ಈ ಹಿಂದೆ, ಈ ದೇಶದಲ್ಲಿ ಅಸಹಿಷ್ಣುತೆ, ಹಿಂಸಾಚಾರ ಅತಿಯಾದಾಗ ಆಮಿರ್ ಖಾನ್ ಆತಂಕ ವ್ಯಕ್ತಪಡಿಸಿದ್ದರು. ಆಗ ಬಿಜೆಪಿ ಮತ್ತು ಸಂಘಪರಿವಾರದ ನಾಯಕರು ಆಮಿರ್ ಖಾನ್ ವಿರುದ್ಧ ಮುಗಿ ಬಿದ್ದಿದ್ದರು. ಆದರೆ ಇದೀಗ ತನ್ನ ಅಕ್ರಮ ಕಟ್ಟಡವನ್ನು ಕೆಡಹಿದ ಕಾರಣಕ್ಕಾಗಿ ಅನ್ನಕೊಟ್ಟ ಮುಂಬೈಯ ಕುರಿತಂತೆ ಕೆಟ್ಟದಾಗಿ ಮಾತನಾಡಿದ ಕಂಗನಾರನ್ನು ಬಿಜೆಪಿಯ ನಾಯಕರು ತೊಟ್ಟಿಲಲ್ಲಿಟ್ಟು ತೂಗುತ್ತಿದ್ದಾರೆ. ಅಕ್ರಮವಾಗಿ ಕಟ್ಟಡ ನಿರ್ಮಿಸುವುದೇ ತಪ್ಪು, ಅದನ್ನು ಪ್ರಶ್ನಿಸಿದ ಸರಕಾರವನ್ನು ನಿಂದಿಸುವುದು ಇನ್ನೊಂದು ದೊಡ್ಡ ತಪ್ಪು. ಇಷ್ಟೆಲ್ಲ ತಪ್ಪುಗಳನ್ನು ಎಸಗಿರುವ ಕಂಗನಾರನ್ನು ಬಿಜೆಪಿ ತನ್ನ ಪಕ್ಷದ ನಾಯಕಿಯಾಗಿ ಬಿಂಬಿಸಲು ಮುಂದಾಗಿರುವುದು, ಬಿಜೆಪಿ ಸದ್ಯಕ್ಕೆ ರಾಜಕೀಯವಾಗಿ ಅದೆಷ್ಟು ದಿವಾಳಿ ಹಂತಕ್ಕೆ ಬಂದು ನಿಂತಿದೆ ಎನ್ನುವುದಕ್ಕೆ ನಿದರ್ಶನವಾಗಿದೆ. ದೇಶದ ಕುರಿತಂತೆ, ಪ್ರಜಾಸತ್ತೆಯ ಕುರಿತಂತೆ ಯಾವತ್ತೂ ಕಾಳಜಿ ವ್ಯಕ್ತಪಡಿಸದ ಕಂಗನಾ ಎಂಬ ನಟಿ, ದೇಶದ ಕಾನೂನು ತನ್ನ ಅಕ್ರಮವನ್ನು ಪ್ರಶ್ನಿಸಿದಾಕ್ಷಣ ದೇಶವನ್ನು ಜರೆಯುವುದು ಖಂಡನಾರ್ಹ.

ಇಡೀ ದೇಶದ ಸದ್ಯದ ಸ್ಥಿತಿಗೆ ‘ಬಾಲಿವುಡ್ ನಿರ್ದೇಶಕ ಕರಣ್ ಜೋಹರ್’ ಕಾರಣ ಎಂಬಂತೆ ಹೇಳಿಕೆ ಕೊಡುವುದು, ಮಾಧ್ಯಮಗಳು ಅವುಗಳನ್ನು ಮುಖಪುಟದಲ್ಲಿ ಪ್ರಕಟಿಸುವುದು ವರ್ತಮಾನದ ವ್ಯಂಗ್ಯವಾಗಿದೆ. ಗಾಯಗೊಂಡು ಒದ್ದಾಡುತ್ತಿರುವ ಭಾರತದ ನೋವುಗಳನ್ನು ಮರೆ ಮಾಚುವುದಕ್ಕಾಗಿಯೇ ಕಂಗನಾ ಎನ್ನುವ ನಟಿಯೊಬ್ಬಳ ಹುಸಿ ಅರಚಾಟಗಳನ್ನು ದೊಡ್ಡ ದನಿಯಲ್ಲಿ ದೇಶಕ್ಕೆ ಬಿತ್ತರಿಸಲಾಗುತ್ತಿದೆ. ತನ್ನ ಅಕ್ರಮ ಕಟ್ಟಡ ಕೆಡವಿರುವುದು ಸರಿಯೋ ತಪ್ಪೋ ಎನ್ನುವುದನ್ನು ಕಂಗನಾ ನ್ಯಾಯಾಲಯದಲ್ಲಿ ಇತ್ಯರ್ಥ ಪಡಿಸಿಕೊಳ್ಳಲಿ. ಸದ್ಯಕ್ಕೆ ಲಾಕ್‌ಡೌನ್ ಎಂಬ ಬುಲ್ಡೋಜರ್‌ನಿಂದ ಈ ದೇಶದ ಅಳಿದುಳಿದ ಆರ್ಥಿಕತೆಯನ್ನು ನಾಶ ಮಾಡಲಾಗಿದೆ. ಅದಕ್ಕೆ ಯಾವ ರೀತಿಯಲ್ಲಿ ಪರಿಹಾರವನ್ನು ನೀಡಬಹುದು ಎನ್ನುವುದರ ಬಗ್ಗೆ ಸರಕಾರ ಚಿಂತಿಸಲಿ.

ಸುಶಾಂತ್ ಸಿಂಗ್ ಅವರ ಸಾವಿನ ತನಿಖೆಯನ್ನು ಸಿಬಿಐಗೆ ಬಿಟ್ಟು, ಈ ದೇಶದ ಸಹಸ್ರಾರು ಕೂಲಿಕಾರ್ಮಿಕರ ಆತ್ಮಹತ್ಯೆಯ ಕುರಿತಂತೆ ಸರಕಾರ ಗಮನ ಹರಿಸಲಿ. ದಿಲ್ಲಿಯಲ್ಲಿ 80 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರ ನಡೆದಿದೆ. ಉತ್ತರ ಪ್ರದೇಶದಲ್ಲಿ ದಲಿತ ಬಾಲಕಿಯನ್ನು ಅತ್ಯಾಚಾರಗೈದು ಭೀಕರವಾಗಿ ಕೊಂದು ಹಾಕಲಾಗಿದೆ. ಭಾರತ ಮಾತೆಯನ್ನು ನಿಜವಾದ ಅರ್ಥದಲ್ಲಿ ಪ್ರತಿನಿಧಿಸುವ ಆ ಹತಭಾಗ್ಯ ಹೆಣ್ಣು ಮಕ್ಕಳ ಬದುಕಿಗೆ ರಕ್ಷಣೆ ನೀಡುವ ಬಗ್ಗೆ ಸರಕಾರ ಕ್ರಮ ಕೈಗೊಳ್ಳಲಿ. ಹಾಗೆಯೇ ಗಡಿಯಲ್ಲಿ ಭಾರತ ಮಾತೆಯನ್ನು ಕೆಣಕುವ ಚೀನಿ ಸೈನಿಕರಿಗೆ ಸೂಕ್ತ ರೀತಿಯಲ್ಲಿ ಉತ್ತರಿಸಿ ದೇಶದ ಸಾರ್ವಭೌಮತೆಯನ್ನು ಪ್ರಶ್ನಿಸುವ ಎಲ್ಲ ಶಕ್ತಿಗಳಿಗೂ ಎಚ್ಚರಿಕೆಯನ್ನು ನೀಡಲಿ. ಕಂಗನಾ ಎಂಬ ‘ನಕಲಿ ಬೊಂಬೆ’ಯನ್ನು ಮುಂದಿಟ್ಟು ದೇಶದ ಅಸಲಿ ಸಮಸ್ಯೆಗಳನ್ನು ಮುಚ್ಚಿಹಾಕುವ ವ್ಯರ್ಥ ಪ್ರಯತ್ನವನ್ನು ಕೇಂದ್ರ ಸರಕಾರ ನಿಲ್ಲಿಸಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News