ಕೊರೋನ ರೋಗಿಗಳ ಆ್ಯಂಬ್ಯುಲೆನ್ಸ್ ಸೇವೆಗೆ ಯೋಗ್ಯ ಶುಲ್ಕ ವಿಧಿಸಿ: ರಾಜ್ಯಗಳಿಗೆ ಸುಪ್ರೀಂ ಕೋರ್ಟ್
ಹೊಸದಿಲ್ಲಿ, ಸೆ. 11: ಕೊರೋನ ಸಾಂಕ್ರಾಮಿಕ ರೋಗದ ನಡುವೆ ಆರೋಗ್ಯ ಸೇವೆಗಳನ್ನು ಸುಗಮಗೊಳಿಸುವುದಕ್ಕೆ ಸಂಬಂಧಿಸಿದ ಹಲವು ದೂರುಗಳನ್ನು ಶುಕ್ರವಾರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಕೊರೋನ ರೋಗಿಗಳಿಗೆ ಆ್ಯಂಬುಲೆನ್ಸ್ ಸೇವೆ ನೀಡುವಾಗ ಯೋಗ್ಯ ಶುಲ್ಕ ನಿಗದಿಪಡಿಸಿ ಎಂದು ಎಲ್ಲ ರಾಜ್ಯಗಳಿಗೆ ನಿರ್ದೇಶನ ನೀಡಿದೆ.
ಕೊರೋನ ರೋಗಿಗಳಿಗೆ ಆ್ಯಂಬುಲೆನ್ಸ್ ಸೇವೆ ನೀಡುವ ಸಂದರ್ಭ ಅಧಿಕ ಶುಲ್ಕ ವಿಧಿಸುತ್ತಿರುವ ಘಟನೆಗಳು ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, ಕೊರೋನ ರೋಗಿಗಳನ್ನು ಆಸ್ಪತ್ರೆಗೆ ಕೊಂಡೊಯ್ಯಲು ಪ್ರತಿ ಜಿಲ್ಲೆಗಳಲ್ಲಿ ಸಾಕಷ್ಟು ಸಂಖ್ಯೆಯ ಆ್ಯಂಬುಲೆನ್ಸ್ ಲಭ್ಯವಿರುವ ಬಗ್ಗೆ ರಾಜ್ಯ ಸರಕಾರಗಳು ಭರವಸೆ ನೀಡಬೇಕು ಎಂದು ಹೇಳಿದೆ.
ಕೊರೋನ ರೋಗ ನಿಯಂತ್ರಿಸಲು ಕೇಂದ್ರ ಸರಕಾರ ನೀಡಿದ ಸಲಹೆಗಳನ್ನು ಅನುಸರಿಸಲು ರಾಜ್ಯಗಳು ಬದ್ಧವಾಗಿದೆ ಎಂದು ಹೇಳಿದ ಸುಪ್ರೀಂ ಕೋರ್ಟ್, ಈ ಹಿಂದೆ ವಿವಿಧ ರಾಜ್ಯಗಳಲ್ಲಿ ಕೊರೋನ ಪರೀಕ್ಷೆ ಶುಲ್ಕಕ್ಕೆ ಮಿತಿ ವಿಧಿಸಿ ಎಂದು ಕೇಂದ್ರ ಸರಕಾರಕ್ಕೆ ನಿರ್ದೇಶಿಸಿತ್ತು. ಆದರೆ, ರಾಜ್ಯ ವೈದ್ಯಕೀಯ ಆರೋಗ್ಯ ಮೂಲಭೂತ ಸೌಕರ್ಯದ ಸ್ಥಿತಿ ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿವೆ ಎಂದು ಹೇಳಿದ ಸುಪ್ರೀಂ ಕೋರ್ಟ್, ದೇಶದ ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನ ಚಿಕಿತ್ಸೆಯ ಶುಲ್ಕಕ್ಕೆ ಮಿತಿ ನಿಗದಿ ಮಾಡುವುದಕ್ಕೆ ನಿರಾಕರಿಸಿತ್ತು ಹಾಗೂ ಇದಕ್ಕೆ ಕೇಂದ್ರ ಸರಕಾರ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿತ್ತು. ಕೊರೋನ ರೋಗಿಗಳಿಗೆ ಆ್ಯಂಬುಲೆನ್ಸ್‌ಗಳ ಸಂಖ್ಯೆ ಹೆಚ್ಚಿಸಲು ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾದ ದೂರನ್ನು ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ಪೀಠ ವಿಚಾರಣೆ ನಡೆಸಿ ಈ ಆದೇಶ ನೀಡಿದೆ.
ಹೆಚ್ಚಿನ ರಾಜ್ಯ ಸರಕಾರದ ಆ್ಯಂಬುಲೆನ್ಸ್ ಸೇವೆಗಳು ತಮ್ಮ ಸೇವೆ ಸುಧಾರಿಸಲು ಪ್ರಯತ್ನಿಸುತ್ತಿರುವಂತೆ ಖಾಸಗಿ ಆ್ಯಂಬುಲೆನ್ಸ್ ಸೇವೆ ಪೂರೈಕೆದಾರರು ಮಿತಿ ಮೀರಿದ ಶುಲ್ಕ ವಿಧಿಸುತ್ತಿರುವ ಸಂದರ್ಭ ಈ ಆದೇಶ ಸಾವಿರಾರು ಕೊರೋನ ರೋಗಿಗಳಿಗೆ ಪರಿಹಾರ ನೀಡುವ ನಿರೀಕ್ಷೆ ಇದೆ.