ಗುಲಾಂ ನಬಿ ಆಝಾದ್, ಖರ್ಗೆ ಕೈತಪ್ಪಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹುದ್ದೆ

Update: 2020-09-11 17:40 GMT

ಹೊಸದಿಲ್ಲಿ, ಸೆ.11: ಗುರುವಾರ ನಡೆದ ಕಾಂಗ್ರೆಸ್ ಪದಾಧಿಕಾರಿಗಳ ಪುನರ್ರಚನೆ ಪ್ರಕ್ರಿಯೆಯಲ್ಲಿ ಗಾಂಧಿ ಕುಟುಂಬದ ನಾಯಕತ್ವವನ್ನು ಪ್ರಶ್ನಿಸಿ ಪತ್ರ ಬರೆದಿದ್ದ ಹಿರಿಯ ಮುಖಂಡರಲ್ಲಿ ಒಬ್ಬರಾಗಿದ್ದ ಗುಲಾಂ ನಬಿ ಆಝಾದ್ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಐವರನ್ನು ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಕೈಬಿಡಲಾಗಿದೆ ಹಾಗೂ ಕರ್ನಾಟಕದ ಕಾಂಗ್ರೆಸ್ ಉಸ್ತುವಾರಿಯಾಗಿ ರಣದೀಪ್ ಸಿಂಗ್ ಸುರ್ಜೆವಾಲ ಅವರನ್ನು ನೇಮಿಸಲಾಗಿದೆ. ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ವೀರಪ್ಪ ಮೊಯ್ಲಿ ಅವರನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಿಂದ ಹೊರಗಿಡಲಾಗಿದೆ.

ನಿರ್ಗಮನ ಪ್ರಧಾನ ಕಾರ್ಯದರ್ಶಿಗಳಾದ ಗುಲಾಂ ನಬಿ ಆಝಾದ್, ಮೋತಿಲಾಲ್ ವೋರ, ಮಲ್ಲಿಕಾರ್ಜುನ ಖರ್ಗೆ, ಅಂಬಿಕಾ ಸೋನಿ ಮತ್ತು ಲುಝಿನ್ಹೊ ಫಲೇರಿಯೊ ಅವರು ನೀಡಿರುವ ಕೊಡುಗೆಯನ್ನು ಪಕ್ಷ ಹೃತ್ಪೂರ್ವಕವಾಗಿ ಶ್ಲಾಘಿಸುತ್ತದೆ ಎಂದು ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಸಹಿ ಹಾಕಿರುವ ಪತ್ರದಲ್ಲಿ ತಿಳಿಸಲಾಗಿದೆ. ಆದರೆ ಪಕ್ಷದ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಆಝಾದ್ರನ್ನು ಮುಂದುವರಿಸಲಾಗಿದೆ.
ಅಧ್ಯಕ್ಷತೆಯನ್ನು ಪ್ರಶ್ನಿಸಿ ಪತ್ರ ಬರೆದಿದ್ದ ಮತ್ತೊಬ್ಬ ಹಿರಿಯ ಮುಖಂಡ ಜಿತಿನ್ ಪ್ರಸಾದ್ರನ್ನು ಕಾರ್ಯಕಾರಿ ಸಮಿತಿಯ ಖಾಯಂ ಆಹ್ವಾನಿತರನ್ನಾಗಿ ನೇಮಿಸಲಾಗಿದೆ. ಉತ್ತರಪ್ರದೇಶ ಕಾಂಗ್ರೆಸ್ ಉಸ್ತುವಾರಿಯೂ ಆಗಿದ್ದ ಜಿತಿನ್ ಪ್ರಸಾದ್ರನ್ನು ಪಶ್ಚಿಮ ಬಂಗಾಳ ಕಾಂಗ್ರೆಸ್ ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ. ಪ್ರಿಯಾಂಕಾ ಗಾಂಧಿ ಉತ್ತರ ಪ್ರದೇಶದ ಉಸ್ತುವಾರಿಯ ಜೊತೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿರುತ್ತಾರೆ. ಪತ್ರ ಬರೆದಿದ್ದ ಮತ್ತೊಬ್ಬ ಮುಖಂಡ ಮುಕುಲ್ ವಾಸ್ನಿಕ್ರನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೊತೆಗೆ ಮಧ್ಯಪ್ರದೇಶದ ಉಸ್ತುವಾರಿಯಾಗಿ ನೇಮಿಸಲಾಗಿದೆ. ಕಾಂಗ್ರೆಸ್ ಅಧ್ಯಕ್ಷೆಗೆ ಸಂಘಟನೆ ಮತ್ತು ಕಾರ್ಯನಿರ್ವಹಣೆಯಲ್ಲಿ ಸಹಾಯ ಮಾಡುವ ಆರು ಸದಸ್ಯರಲ್ಲಿ ವಾಸ್ನಿಕ್ ಸಹಿತ ಎಕೆ ಆ್ಯಂಟನಿ, ಅಹ್ಮದ್ ಪಟೇಲ್, ಅಂಬಿಕಾ ಸೋನಿ, ಕೆ.ಸಿ.ವೇಣುಗೋಪಾಲ್ ಮತ್ತು ರಣದೀಪ್ ಸಿಂಗ್ ಸುರ್ಜೆವಾಲಾ ಸೇರಿದ್ದಾರೆ. ರಣದೀಪ್ ಸುರ್ಜೆವಾಲಾರನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿಯ ಜೊತೆಗೆ ಕರ್ನಾಟಕದ ಉಸ್ತುವಾರಿಯಾಗಿಯೂ ನೇಮಿಸಲಾಗಿದೆ.
ಕಾಂಗ್ರೆಸ್ ಕೇಂದ್ರೀಯ ಚುನಾವಣಾ ಪ್ರಾಧಿಕಾರಕ್ಕೆ ಕೃಷ್ಣ ಭೈರೇಗೌಡ ನೇಮಕ
ಕಾಂಗ್ರೆಸ್ ಪಕ್ಷದ ಮಧುಸೂದನ ಮಿಸ್ತ್ರಿ ನೇತೃತ್ವದ ಕೇಂದ್ರೀಯ ಚುನಾವಣಾ ಪ್ರಾಧಿಕಾರದ ಸದಸ್ಯರಾಗಿ ಕೃಷ್ಣ ಸಿ. ಭೈರೇಗೌಡ ಅವರನ್ನು ನೇಮಿಸಲಾಗಿದೆ.
 ಇದೇ ವೇಳೆ ಕಾಂಗ್ರೆಸ್ನ ಸಾಂಸ್ಥಿಕ ಹಾಗೂ ಕಾರ್ಯನಿರ್ವಹಣಾ ವಿಷಯಗಳಲ್ಲಿ ನೆರವಾಗಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಆರು ಮಂದಿ ಸದಸ್ಯರ ವಿಶೇಷ ಸಮಿತಿಯನ್ನು ಶುಕ್ರವಾರ ನೇಮಕ ಮಾಡಿದ್ದಾರೆ. ಎ.ಕೆ. ಆ್ಯಂಟನಿ, ಅಹ್ಮದ್ ಪಟೇಲ್, ಅಂಬಿಕಾ ಸೋನಿ, ಕೆ.ಸಿ. ವೇಣಿಗೋಪಾಲ್, ಮುಕುಲ್ ವಾಸ್ನಿಕ್ ಹಾಗೂ ರಣದೀಪ್ಸಿಂಗ್ ಸುರ್ಜೆವಾಲಾ ಸಮಿತಿಯ ಸದಸ್ಯರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News