ಪ್ರೊಗ್ರೆಸಿವ್ ಹಾರ್ಟ್ ಫೈಲ್ಯೂರ್:ಇದು ಯುವಜನರ ಪಾಲಿಗೆ ‘ಸದ್ದಿಲ್ಲದ ಹಂತಕ’

Update: 2020-09-11 18:24 GMT

 ಭಾರತದಲ್ಲಿ ಹೆಚ್ಚಿನ ಜನರು ಹೃದಯ ರೋಗಗಳಿಂದಾಗಿ ಸಾಯುತ್ತಾರೆ. ಕೊಲೆಸ್ಟ್ರಾಲ್ ಮಟ್ಟ ಏರಿಕೆಯಾಗುವುದು ಹೃದಯನಾಳೀಯ ಹೃದ್ರೋಗಗಳಿಗೆ ಮುಖ್ಯ ಕಾರಣವಾಗಿದೆ. ಹೃದಯ ಮತ್ತು ರಕ್ತನಾಳಗಳ ಸಮಸ್ಯೆಯಿಂದಾಗಿ ಹೃದಯನಾಳೀಯ ಹೃದ್ರೋಗವು ಉಂಟಾಗುತ್ತದೆ. ಕೊರೊನರಿ ಹಾರ್ಟ್ ಅಟ್ಯಾಕ್ ಅಥವಾ ಪರಿಧಮನಿ ಹೃದಯಾಘಾತ,ಮಿದುಳು ಆಘಾತ,ಅಧಿಕ ರಕ್ತದೊತ್ತಡ, ಜನ್ಮಜಾತ ಹೃದಯ ರೋಗ ಮತ್ತು ಹೃದಯ ವೈಫಲ್ಯ ಇವುಗಳಲ್ಲಿ ಸೇರಿವೆ. ಬೊಜ್ಜು ಕೂಡ ಈ ರೋಗಗಳಿಗೆ ಒಂದು ಪ್ರಮುಖ ಕಾರಣವಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಅಂಕಿಅಂಶಗಳಂತೆ ಪ್ರತಿ ಐವರು ಪುರುಷರಲ್ಲಿ ಓರ್ವ ಮತ್ತು ಪ್ರತಿ ಎಂಟು ಮಹಿಳೆಯರಲ್ಲಿ ಓರ್ವರು ಹೃದ್ರೋಗಗಳಿಂದ ಸಾಯುತ್ತಾರೆ. ಯುವಜನರ ಪಾಲಿಗೆ ಸದ್ದಿಲ್ಲದ ಹಂತಕನಂತಿರುವ ಪ್ರೊಗ್ರೆಸಿವ್ ಹಾರ್ಟ್ ಫೇಲ್ಯೂರ್ ಇಂತಹ ಒಂದು ಹೃದ್ರೋಗವಾಗಿದೆ. ರಕ್ತನಾಳಗಳ ಒಳಪದರಗಳಲ್ಲಿ ಪಾಚಿಯು ಸಂಗ್ರಹಗೊಳ್ಳುವುದು ಈ ಹೃದಯ ವೈಫಲ್ಯಕ್ಕೆ ಕಾರಣವಾಗುತ್ತದೆ. ಅನಾರೋಗ್ಯಕರ ಆಹಾರ ಕ್ರಮ,ಧೂಮ್ರಪಾನ,ಮದ್ಯಪಾನ,ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ಇವು ಈ ಹೃದಯ ವೈಫಲ್ಯಕ್ಕೆ ಸಾಮಾನ್ಯ ಕಾರಣಗಳಾಗಿವೆ.

ಕುಟುಂಬದ ಇತಿಹಾಸ ಅಥವಾ ಆನುವಂಶಿಕತೆಯಂತಹ ವಿವಿಧ ಕಾರಣಗಳು ಹೃದಯಕ್ಕೆ ಅಪಾಯವನ್ನುಂಟು ಮಾಡುತ್ತವೆ. ಆದರೆ ಇಂದಿನ ಯುವಜನರು ಅನಿಯಮಿತ ಜೀವನಶೈಲಿ ಆಯ್ಕೆಗಳು,ಒತ್ತಡದಿಂದ ಕೂಡಿರುವ ಉದ್ಯೋಗ,ಸರಿಯಾಗಿ ನಿದ್ರೆ ಇರದಿರುವಿಕೆ ಇವೇ ಮುಂತಾದ ಕಾರಣಗಳಿಂದ ಹೃದಯ ರೋಗಗಳ ಅಪಾಯಕ್ಕೆ ಹೆಚ್ಚಾಗಿ ಗುರಿಯಾಗುತ್ತಿದ್ದಾರೆ. ಜಡ ಜೀವನಶೈಲಿಗಳು,ಜೊತೆಗೆ ಧೂಮ್ರಪಾನದ ಚಟ ಇವೆಲ್ಲ ಯುವಜನರಲ್ಲಿ ಹೃದಯರೋಗಗಳ ಅಪಾಯವನ್ನು ಇನ್ನಷ್ಟು ಹೆಚ್ಚಿಸುತ್ತವೆ. ಪ್ರತಿದಿನ 9,000 ಜನರು ಹೃದಯ ಸಮಸ್ಯೆಗಳಿಂದಾಗಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಈ ಪೈಕಿ ಶೇ.10ರಷ್ಟು 40 ವರ್ಷಕ್ಕೂ ಕಡಿಮೆ ಪ್ರಾಯದವರಾಗಿದ್ದಾರೆ ಎನ್ನುವುದು ನಿಜಕ್ಕೂ ಎಚ್ಚರಿಕೆಯ ಗಂಟೆಯಾಗಿದೆ. ಹೃದ್ರೋಗ ಭಾರತದಲ್ಲಿ ಸಾಂಕ್ರಾಮಿಕದಂತಾಗಿದ್ದು,ಸದ್ದಿಲ್ಲದ ಕೊಲೆಗಾರನೂ ಆಗಿದೆ.

 ಭಾರತದಲ್ಲಿಯ ಹಾರ್ಟ್ ಕೇರ್ ಆಸ್ಪತ್ರೆಗಳು ಎರಡು ಲಕ್ಷಕ್ಕೂ ಅಧಿಕ ತೆರೆದ ಹೃದಯ ಶಸ್ತ್ರಚಿಕಿತ್ಸೆಗಳನ್ನು ನಡೆಸುತ್ತವೆ ಮತ್ತು ಪ್ರತಿವರ್ಷ ಈ ಸಂಖ್ಯೆ ಹೆಚ್ಚುತ್ತಲೇ ಇದೆ. ಇದಕ್ಕೆ ತಡೆಯೇ ಇಲ್ಲದಂತಾಗಿದೆ. ತಳಮಟ್ಟದಲ್ಲಿ ಈ ರೋಗವನ್ನು ಮೂಲೋತ್ಪಾಟನೆಗೊಳಿಸಲು ಯುವಜನರಲ್ಲಿ ಮತ್ತು ಸಾರ್ವಜನಿಕರಲ್ಲಿ ಅರಿವು ಮತ್ತು ಶಿಕ್ಷಣದ ಕೊರತೆಯಿಂದಾಗಿ ಈ ಸಮಸ್ಯೆಗೆ ಪರಿಹಾರ ಕನಸಾಗಿಯೇ ಉಳಿದಿದೆ.

ಪ್ರೊಗ್ರೆಸಿವ್ ಹಾರ್ಟ್ ಫೇಲ್ಯೂರ್‌ನ ಲಕ್ಷಣಗಳು

 ಪ್ರೊಗ್ರೆಸಿವ್ ಹಾರ್ಟ್ ಫೇಲ್ಯೂರ್ ಗಂಭೀರ ಸ್ಥಿತಿಯಾಗಿದ್ದು ರಕ್ತ ಮತ್ತು ಆಮ್ಲಜನಕವನ್ನು ಪಂಪ್ ಮಾಡುವ ಹೃದಯದ ಸ್ನಾಯುಗಳ ಸಾಮರ್ಥ್ಯ ಕಡಿಮೆಯಾಗಿರುತ್ತದೆ. ಇದರ ಪರಿಣಾಮವಾಗಿ ಹೃದಯದಿಂದ ಹೊರಗೆ ಬರುವ ರಕ್ತದ ರಭಸ ಕ್ಷೀಣಿಸುತ್ತದೆ. ಪ್ರೊಗ್ರೆಸಿವ್ ಹಾರ್ಟ್ ಫೇಲ್ಯೂರ್ ರೋಗಿಗಳು ವಿಭಿನ್ನ ಲಕ್ಷಣಗಳನ್ನು ಪ್ರದರ್ಶಿಸಬಹುದು. ಕೆಲವರಲ್ಲಿ ಈ ಸಮಸ್ಯೆಗಳು ಸೌಮ್ಯವಾಗಿದ್ದರೆ,ಇನ್ನು ಕೆಲವರಲ್ಲಿ ತೀವ್ರವಾಗಿರುತ್ತವೆ. ಅಜೀರ್ಣ,ಎದೆಯಲ್ಲಿ ತೀವ್ರ ನೋವು ಮತ್ತು ಬಿಗಿತ ಇವು ಇಂತಹ ಲಕ್ಷಣಗಳಲ್ಲಿ ಸೇರಿವೆ. ಸಕಾಲದಲ್ಲಿ ರೋಗನಿರ್ಣಯವಾಗದಿದ್ದರೆ ಸಮಸ್ಯೆಯು ತೋಳು,ಕುತ್ತಿಗೆ,ದವಡೆ ಮತ್ತು ಹೊಟ್ಟೆಗೂ ವ್ಯಾಪಿಸಹುದು. ಉಸಿರಾಟಕ್ಕೆ ತೊಂದರೆ ಕೊನೆಯ ಲಕ್ಷಣವಾಗಿದ್ದು,ತುರ್ತಾಗಿ ಆಸ್ಪತ್ರೆಗೆ ಸೇರಿಸುವುದು ಅಗತ್ಯವಾಗುತ್ತದೆ. ಅಪಧಮನಿಯಲ್ಲಿ ಸಂಪೂರ್ಣ ತಡೆಯು ದಿಢೀರ ಹೃದಯಘಾತವನ್ನುಂಟು ಮಾಡಬಲ್ಲದು. ಆದ್ದರಿಂದ ಬೆವರುವಿಕೆ,ತಲೆ ಹಗುರವಾದ ಅನುಭವ,ವಾಕರಿಕೆ ಮತ್ತು ಉಸಿರಾಟ ತೊಂದರೆಯ ಲಕ್ಷಣಗಳನ್ನೆಂದಿಗೂ ಕಡೆಗಣಿಸಬಾರದು.

ಹೃದಯದ ಸ್ಥಿತಿಯನ್ನು ನಿಭಾಯಿಸುವುದು ಹೇಗೆ?

 ಪ್ರೊಗ್ರೆಸಿವ್ ಹಾರ್ಟ್ ಫೈಲ್ಯೂರ್ ಕಟುಂಬದ ಇತಿಹಾಸಲ್ಲಿದೆಯೇ ಇಲ್ಲವೇ ಎನ್ನುವುದನ್ನು ತಿಳಿದುಕೊಳ್ಳುವುದು ಮೊದಲ ಹೆಜ್ಜೆಯಾಗುತ್ತದೆ. ಬಳಿಕ ಹೃದಯದ ಕಾರ್ಯ ನಿರ್ವಹಣೆ ಸಾಮರ್ಥ್ಯವನ್ನು ತಿಳಿದುಕೊಳ್ಳಲು ಇಸಿಜಿ,ಹೃದಯ,ಎದೆ ಮತ್ತು ಶ್ವಾಸಕೋಶಗಳ ಎಕ್ಸ್‌ರೇ ಹಾಗೂ ಟ್ರೆಡ್‌ಮಿಲ್ ಟೆಸ್ಟ್ ಅಥವಾ ಟಿಎಂಟಿ ನಡೆಸಲಾಗುತ್ತದೆ.

ಹೃದ್ರೋಗಗಳನ್ನು ನಿಭಾಯಿಸಲು ಕೆಲವು ಸರಳ ಕ್ರಮಗಳು ಇಲ್ಲಿವೆ:

ಧೂಮ್ರಪಾನದಿಂದ ದೂರವಿರುವುದು,ದೈಹಿಕವಾಗಿ ಕ್ರಿಯಾಶೀಲರಾಗಿರುವುದು,ನಿಯಮಿತ ವ್ಯಾಯಾಮ,ರಕ್ತದಲ್ಲಿಯ ಸಕ್ಕರೆ ಮಟ್ಟಗಳ ನಿಯಂತ್ರಣದಂತಹ ಮೂಲಭೂತ ಜೀವನಶೈಲಿ ಬದಲಾವಣೆಗಳು ಈ ನಿಟ್ಟಿನಲ್ಲಿ ಮುಖ್ಯವಾಗುತ್ತವೆ. ಹೃದಯದ ಕಾರ್ಯನಿರ್ವಹಣೆಗೆ ತೊಂದರೆಯಾಗದಂತಿರಲು ಕೊಲೆಸ್ಟ್ರಾಲ್,ಮಧುಮೇಹದಂತಹ ಈಗಾಗಲೇ ಇರುವ ರೋಗಗಳಿಗೆ ನಿಯಮಿತವಾಗಿ ಔಷಧಿ ಸೇವನೆಯನ್ನು ತಪ್ಪಿಸಕೂಡದು.

ಜೀವನಶೈಲಿ ಬದಲಾವಣೆಗಳು ಮತ್ತು ಸುಧಾರಣೆಗಳು ಹೃದ್ರೋಗಗಳನ್ನು ತಡೆಯಲು ಮುಖ್ಯವಾಗಿವೆ. ಇದಕ್ಕಾಗಿ ದೈಹಿಕ ಚಟುವಟಿಕೆಗಳನ್ನು ಕಾಯ್ದುಕೊಳ್ಳುವುದು ಅಗತ್ಯವಾಗುತ್ತದೆ. ಸಾಧ್ಯವಾದಷ್ಟು ಮಟ್ಟಿಗೆ ಒತ್ತಡ ನಿವಾರಿಸಿ. ಧನಾತ್ಮಕವಾಗಿ ಯೋಚಿಸಿ. ನಿರಾಶಾದಾಯಕ ಮನೋಭಾವ ಬೇಡವೇ ಬೇಡ. ಒತ್ತಡವನ್ನು ನಿವಾರಿಸಲು ಇಷ್ಟದ ಸಂಗೀತವನ್ನು ಆಲಿಸಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News