ದಿಲ್ಲಿ ಹಿಂಸಾಚಾರ: ಸಹ ಪಿತೂರಿಗಾರರಾಗಿ ಸೀತಾರಾಮ ಯೆಚೂರಿ, ಯೋಗೇಂದ್ರ ಯಾದವ್ ಹೆಸರು ಉಲ್ಲೇಖಿಸಿದ ದಿಲ್ಲಿ ಪೊಲೀಸರು

Update: 2020-09-12 17:39 GMT

ಹೊಸದಿಲ್ಲಿ, ಸೆ. 12: ಫೆಬ್ರವರಿಯಲ್ಲಿ ದಿಲ್ಲಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿ ಸಿಪಿಎಂನ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ, ಸ್ವರಾಜ್ ಅಭಿಯಾನದ ನಾಯಕ ಯೋಗೇಂದ್ರ ಯಾದವ್, ಆರ್ಥಿಕ ತಜ್ಞೆ ಜಯತಿ ಘೋಷ್, ದಿಲ್ಲಿ ವಿ.ವಿ.ಯ ಪ್ರಾಧ್ಯಾಪಕ ಹಾಗೂ ಸಾಮಾಜಿಕ ಹೋರಾಟಗಾರ ಅಪೂರ್ವಾನಂದ ಹಾಗೂ ಸಾಕ್ಷ್ಯಚಿತ್ರ ನಿರ್ದೇಶಕ ರಾಹುಲ್ ರಾಯ್ ಅವರನ್ನು ದಿಲ್ಲಿ ಪೊಲೀಸರು ಸಹ ಪಿತೂರಿಗಾರರು ಎಂದು ಹೆಸರಿಸಿದೆ.

ಯಾವುದೇ ರೀತಿಯ ವಿಪರೀತದ ಹೆಜ್ಜೆಗಳನ್ನು ಇರಿಸುವಂತೆ ಸಿಎಎ ವಿರೋಧಿ ಪ್ರತಿಭಟನಕಾರರಲ್ಲಿ ವಿನಂತಿಸಿದ, ಸಿಎಎ/ಎನ್‌ಆರ್‌ಸಿ ಮುಸ್ಲಿಂ ವಿರೋಧಿ ಎಂದು ಕರೆದು ಸಮುದಾಯದಲ್ಲಿ ಅಸಮಾಧಾನ ಹರಡಿದ ಹಾಗೂ ಭಾರತ ಸರಕಾರದ ವರ್ಚಸ್ಸಿಗೆ ಧಕ್ಕೆ ಉಂಟು ಮಾಡಲು ಪ್ರತಿಭಟನೆ ಆಯೋಜಿಸಿದ ಆರೋಪವನ್ನು ಇವರ ಮೇಲೆ ಹೊರಿಸಲಾಗಿದೆ.

53 ಜನರು ಸಾವನ್ನಪ್ಪಲು, 581 ಜನರು ಗಾಯಗೊಳ್ಳಲು ಕಾರಣವಾಗಿದ್ದ ಫೆಬ್ರವರಿ 23 ಹಾಗೂ 26ರ ನಡುವೆ ದಿಲ್ಲಿಯ ಈಶಾನ್ಯ ಜಿಲ್ಲೆಯಲ್ಲಿ ನಡೆದ ಗಲಭೆ ಕುರಿತು ದಿಲ್ಲಿ ಪೊಲೀಸರು ಸಲ್ಲಿಸಿದ ಪೂರಕ ಆರೋಪ ಪಟ್ಟಿಯಲ್ಲಿ ಇವರ ಹೆಸರು ಉಲ್ಲೇಖಿಸಲಾಗಿದೆ.

ಈಶಾನ್ಯ ದಿಲ್ಲಿ ಹಾಗೂ ಇತರ ಭಾಗಗಳಲ್ಲಿ ಗಲಭೆ ಹರಡಲು ಕಾರಣವಾದ ಜಫ್ರಾಬಾದ್ ಹಿಂಸಾಚಾರಕ್ಕೆ ಸಂಬಂಧಿಸಿ ಮಹಿಳಾ ಸಂಘಟನೆ ಪಿಂಜಾರ ತೋಡ್‌ನ ಸದಸ್ಯರು ಹಾಗೂ ಜೆಎನ್‌ಯುನ ವಿದ್ಯಾರ್ಥಿಗಳಾದ ದೇವಾಂಗನ ಕಲಿಟಾ, ನಟಾಶಾ ನರ್ವಾಲ್ ಹಾಗೂ ಜಾಮಿಯಾ ಮಿಲ್ಲಿಯ ಇಸ್ಲಾಮಿಯಾ ವಿ.ವಿ.ಯ ಗುಲ್ಫಿಶಾ ಫಾತಿಮಾ ನೀಡಿದ ತಪ್ಪೊಪ್ಪಿಗೆ ಹೇಳಿಕೆಯ ಆಧಾರದ ಮೇಲೆ ಇವರನ್ನು ಆರೋಪಿಗಳು ಎಂದು ಪರಿಗಣಿಸಲಾಗಿದೆ ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News