ಇಸ್ರೇಲ್: ನೆತನ್ಯಾಹು ವಿರುದ್ಧ ಬೃಹತ್ ಪ್ರತಿಭಟನೆ

Update: 2020-09-13 15:49 GMT

ಜೆರುಸಲೇಮ್ (ಇಸ್ರೇಲ್), ಸೆ. 13: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ನಡೆಸಿರುವರೆನ್ನಲಾದ ಭ್ರಷ್ಟಾಚಾರ ಮತ್ತು ಅವರ ಸರಕಾರ ಕೊರೋನ ವೈರಸ್ ಸಾಂಕ್ರಾಮಿಕವನ್ನು ನಿಭಾಯಿಸುತ್ತಿರುವ ರೀತಿಯ ವಿರುದ್ಧ ಸಾವಿರಾರು ಇಸ್ರೇಲಿಗರು ಶನಿವಾರ ಜೆರುಸಲೇಮ್‌ನಲ್ಲಿ ಪ್ರತಿಭಟನೆ ನಡೆಸಿದರು.

ಪ್ರತಿಭಟನಕಾರರು ಸೀಟಿಗಳನ್ನು ಊದುತ್ತಾ, ಫಲಕಗಳನ್ನು ಮತ್ತು ಧ್ವಜಗಳನ್ನು ಪ್ರದರ್ಶಿಸುತ್ತಾ ನೆತನ್ಯಾಹುರ ನಿವಾಸದ ಹೊರಗೆ ಜಮಾಯಿಸಿದರು ಹಾಗೂ ರಾಜೀನಾಮೆ ನೀಡುವಂತೆ ಆಗ್ರಹಿಸಿದರು.

ಇಸ್ರೇಲ್‌ನಾದ್ಯಂತದ ನಗರಗಳ ಪ್ರಮುಖ ಚೌಕಗಳಲ್ಲಿಯೂ ಸಣ್ಣ ಮಟ್ಟದ ಪ್ರತಿಭಟನೆಗಳು ನಡೆದವು.

ಪ್ರತಿಭಟನೆಯಲ್ಲಿ ಸುಮಾರು 10,000 ಮಂದಿ ಭಾಗವಹಿಸಿದ್ದಾರೆ ಎಂದು ಇಸ್ರೇಲಿ ಮಾಧ್ಯಮಗಳು ವರದಿ ಮಾಡಿವೆ. 25,000ದಷ್ಟು ಜನರು ಪ್ರತಿಭಟನೆಗಳಲ್ಲಿ ಪಾಲ್ಗೊಂಡಿದ್ದಾರೆ ಎಂದು ಸಂಘಟಕರು ಹೇಳಿದ್ದಾರೆ. ಈಗ ಇಸ್ರೇಲ್‌ನಲ್ಲಿ ನೆತನ್ಯಾಹು ವಿರುದ್ಧ ಪ್ರತಿ ವಾರವೂ ಪ್ರತಿಭಟನೆಗಳು ನಡೆಯುತ್ತಿದ್ದು, ಈಗ 12ನೇ ವಾರಕ್ಕೆ ಕಾಲಿಟ್ಟಿದೆ.

90 ಲಕ್ಷ ಜನಸಂಖ್ಯೆಯ ಇಸ್ರೇಲ್‌ನಲ್ಲಿ ಸುಮಾರು 1.5 ಲಕ್ಷ ಕೊರೋನ ವೈರಸ್ ಸೋಂಕು ಪ್ರಕರಣಗಳು ವರದಿಯಾಗಿವೆ ಹಾಗೂ 1,000ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News