ಸುಡದೆ ಬೆಳಕಾದ ಅಗ್ನಿವೇಶ್

Update: 2020-09-14 06:31 GMT

ಸ್ವಾಮಿ ವಿವೇಕಾನಂದರೇನಾದರೂ ಇಂದು ಬದುಕಿದ್ದಿದ್ದರೆ ಅವರನ್ನು ‘ಹಿಂದೂ ವಿರೋಧಿ’ ಎಂದು ಕರೆದು, ಅವರ ಮೇಲೆ ಹಲ್ಲೆ ನಡೆಸುತ್ತಿದ್ದರು ಅಥವಾ ಸರಕಾರವೇ ಅವರನ್ನು ‘ನಗರ ನಕ್ಸಲ್’ ಎಂದು ಕರೆದು ಜೈಲಿಗೆ ತಳ್ಳಿ ಬಿಡುತ್ತಿತ್ತು. ತನ್ನ ಬದುಕಿನುದ್ದಕ್ಕೂ ಪುರೋಹಿತಶಾಹಿಗಳ ವಿರುದ್ಧ ಧ್ವನಿಯೆತ್ತಿದ್ದ, ವೌಢ್ಯಗಳನ್ನು, ಮೇಲ್ಜಾತಿಗಳ ದೌರ್ಜನ್ಯಗಳನ್ನು ವಿರೋಧಿಸುತ್ತಿದ್ದ ವಿವೇಕಾನಂದರನ್ನು ಸಂಘಪರಿವಾರ ಖಂಡಿತಾ ಸಹಿಸುತ್ತಿರಲಿಲ್ಲ. ವಿವೇಕಾನಂದರು ಕೇರಳಕ್ಕೆ ಆಗಮಿಸಿದ ಸಂದರ್ಭದಲ್ಲಿ, ಆ ನೆಲದಲ್ಲಿ ನಂಬೂದಿರಿಗಳು ನಡೆಸುತ್ತಿದ್ದ ಜಾತಿ ಆಚರಣೆಯನ್ನು ಕಂಡು ‘ಇದೊಂದು ಹುಚ್ಚಾಸ್ಪತ್ರೆ’ ಎಂದು ಆಕ್ರೋಶದಿಂದ ನುಡಿದಿದ್ದರು. ದೇಶ ಬರಪೀಡಿತವಾಗಿದ್ದಾಗ, ಗೋಮಾತೆಯ ರಕ್ಷಣೆಗಾಗಿ ಚಂದಾ ಕೇಳಲು ಬಂದಿದ್ದ ಪುರೋಹಿತ ವರ್ಗಕ್ಕೆ ಛೀಮಾರಿ ಹಾಕಿ ಕಳುಹಿಸಿದವರು ವಿವೇಕಾನಂದರು. ಜಾತಿಯ ಹೆಸರಲ್ಲಿ ನಡೆಯುತ್ತಿದ್ದ ಮೇಲು ಕೀಳುಗಳನ್ನು ಕಟು ಭಾಷೆಯಲ್ಲಿ ಅವರು ಖಂಡಿಸಿದ್ದರು. ಇಂದು ಕಾವಿ ಬಟ್ಟೆಗೆ ಒಂದಿಷ್ಟು ಘನತೆ ಬಂದಿದ್ದರೆ ಅದಕ್ಕೆ ಕಾರಣ ವಿವೇಕಾನಂದರು ಮಾಡಿದ ಸಾಮಾಜಿಕ ಸುಧಾರಣೆಗಳು. ಆದರೆ ದುರದೃಷ್ಟಕ್ಕೆ ಇಂದು ವಿವೇಕಾನಂದರ ಭಾವಚಿತ್ರಗಳನ್ನು ಮುಂದಿಟ್ಟುಕೊಂಡೇ ಸುಧಾರಣೆಗಳನ್ನು ವಿರೋಧಿಸುವ ಗುಂಪು ಹುಟ್ಟಿಕೊಂಡಿದೆ. ವಿವೇಕಾನಂದರ ಚಿಂತನೆಗಳನ್ನು ಅನುಷ್ಠಾನಕ್ಕಿಳಿಸಲು ಹೊರಟರೆ ಅವರನ್ನು ‘ಹಿಂದೂ ವಿರೋಧಿ’ ಎಂಬ ಹಣೆಪಟ್ಟಿ ಕಟ್ಟಿ ಸದೆಬಡಿಯಲಾಗುತ್ತದೆ. ಅಂತಹ ಶಕ್ತಿಗಳು ಇದೀಗ ಸ್ವಾಮಿ ಅಗ್ನಿವೇಶ್ ಎನ್ನುವ ಸನ್ಯಾಸಿಯನ್ನು ಪರೋಕ್ಷವಾಗಿ ಬಲಿತೆಗೆದುಕೊಂಡಿವೆ ಮತ್ತು ಅವರ ಸಾವಿಗೆ ಬಹಿರಂಗವಾಗಿ ಸಂಭ್ರಮಿಸುತ್ತಿವೆ.

ಧರ್ಮ, ನಂಬಿಕೆಗಳನ್ನು ದುರುಪಯೋಗಗೊಳಿಸುವುದು ಬಹುಸುಲಭ. ಧರ್ಮಗಳು ಸಮಾಜದ ಸುಧಾರಣೆಗಾಗಿ ಹುಟ್ಟಿಕೊಳ್ಳುತ್ತವೆ. ಆದರೆ ಬಳಿಕ ಹಲವರು ಅದನ್ನೇ ಬಳಸಿಕೊಂಡು ಜನರ ಶೋಷಣೆಗೆ ಶುರು ಹಚ್ಚುತ್ತಾರೆ. ಯಾವುದೇ ಧರ್ಮ ಇದಕ್ಕೆ ಹೊರತಾಗಿಲ್ಲ. ಹಿಂದೂಧರ್ಮವಂತೂ ಈ ನಿಟ್ಟಿನಲ್ಲಿ ಹೆಚ್ಚು ದುರ್ಬಳಕೆಯಾಗಿದೆ. ಇಲ್ಲಿ ಯಾರೂ ತನ್ನನ್ನು ತಾನು ಸ್ವಾಮೀಜಿಯೆಂದು ಘೋಷಿಸಿಕೊಳ್ಳಬಹುದು. ಪವಾಡಗಳ ಮೂಲಕ, ಸ್ವಘೋಷಿತ ದೇವ ಮಾನವನಾಗಬಹುದು. ಒಂದು ಕಾಲದಲ್ಲಿ ಹಿಂದೂಧರ್ಮದೊಳಗಿರುವ ಜಾತಿ ಅಸಮಾನತೆಯ ವಿರುದ್ಧ ಹಲವು ಸನ್ಯಾಸಿಗಳು ಬಂಡೆದ್ದಿದ್ದರು. ನಾರಾಯಣ ಗುರುಗಳು, ಸ್ವಾಮಿ ವಿವೇಕಾನಂದ ಸೇರಿದಂತೆ ಹತ್ತು ಹಲವು ಮಹಾತ್ಮರು ಹುಟ್ಟಿ ಬರದೇ ಇದ್ದಿದ್ದರೆ, ಇಂದು ನಮ್ಮ ಸಮಾಜ ಇಷ್ಟೊಂದು ಸಹ್ಯವಾಗಿರುತ್ತಿರಲಿಲ್ಲ. ಇಷ್ಟಾದರೂ ಇಂದಿಗೂ ಕೆಲವು ಕಪಟ ಸ್ವಾಮಿಗಳು ಜನರನ್ನು ಶೋಷಿಸುತ್ತಲೇ ಇದ್ದಾರೆ. ಒಂದೆಡೆ ಪುರೋಹಿತ ಶಾಹಿ ವ್ಯವಸ್ಥೆ ಧರ್ಮದ ಹೆಸರಲ್ಲಿ ಭಕ್ತರಿಂದ ಆಸ್ತಿ, ದುಡ್ಡು ದೋಚುತ್ತಿದ್ದರೆ, ಮಗದೊಂದೆಡೆ ಧರ್ಮದ ಹೆಸರಿನಲ್ಲಿ ಅಧರ್ಮಗಳನ್ನು ಸಾರುತ್ತಾ ರಾಜಕೀಯ ನಾಯಕರು ಅಧಿಕಾರ ಅನುಭವಿಸುತ್ತಿದ್ದಾರೆ. ಇಂಥವರ ನಡುವೆ, ಕಾವಿ ಧರಿಸಿ ಹಿಂದೂ ಧರ್ಮದೊಳಗಿರುವ ಹತ್ತು ಹಲವು ಸಮಸ್ಯೆಗಳನ್ನು ಗುರುತಿಸಿ ಅವುಗಳ ವಿರುದ್ಧ ಆಂದೋಲನ ರೂಪದಲ್ಲಿ ಹೋರಾಟ ನಡೆಸಿದವರು ಅಗ್ನಿವೇಶ್. ಆರ್ಯ ಸಮಾಜದ ಮೂಲಕ ಬೆಳಕಿಗೆ ಬಂದ ಅಗ್ನಿವೇಶ್ ಬಳಿಕ ಅದರಲ್ಲೂ ಸಂಪೂರ್ಣವಾಗಿ ಗುರುತಿಸಿಕೊಳ್ಳದೆ ಅಪ್ಪಟ ಜಂಗಮರಾಗಿ, ದೇಶಾದ್ಯಂತ ಓಡಾಡುತ್ತಾ ಪ್ರಗತಿಪರವಾದ ಹಿಂದೂ ಸಮಾಜಕ್ಕಾಗಿ ದುಡಿದರು. ಬದುಕಿನುದ್ದಕ್ಕೂ ಕಾವಿಯನ್ನೇ ಧರಿಸಿದ ಅಗ್ನಿವೇಶ್ ಅವರು ತೊಡಗಿಸಿಕೊಂಡ ಕ್ಷೇತ್ರಗಳನ್ನು ಗಮನಿಸಿದರೆ ಅಚ್ಚರಿ ಹುಟ್ಟಿಸುತ್ತದೆ. ತನ್ನನ್ನು ತಾನು ಸ್ವಾಮಿ ಎಂದು ಅಧಿಕೃತವಾಗಿ ಗುರುತಿಸಿಕೊಳ್ಳುತ್ತಲೇ, ದೇಶದ ರಾಜಕೀಯ ಬೆಳವಣಿಗೆಗೆ ದಿಟ್ಟವಾಗಿ ಪ್ರತಿಸ್ಪಂದಿಸಿದರು.

ಕೆಲ ಕಾಲ ರಾಜಕೀಯ ಪಕ್ಷವೊಂದರಲ್ಲಿ ಗುರುತಿಸಿಕೊಂಡರು. ಶಿಕ್ಷಣ ಸಚಿವರಾದರು. ಜೀತಪದ್ಧತಿಯ ವಿರುದ್ಧ 1981ರಲ್ಲಿ ಬೃಹತ್ ಆಂದೋಲನವನ್ನು ಮಾಡಿದರು. ಹೆಣ್ಣು ಭ್ರೂಣ ಹತ್ಯೆ, ಮದ್ಯಪಾನ, ಸತಿಪದ್ಧತಿ ಮೊದಲಾದ ಸಾಮಾಜಿಕ ಅನಿಷ್ಟಗಳ ವಿರುದ್ಧ ದೊಡ್ಡ ಮಟ್ಟದ ಚಳವಳಿಯನ್ನು ಮಾಡಿದರು. ಬಹುಶಃ ಸ್ವಾತಂತ್ರಾನಂತರ ಈ ದೇಶದಲ್ಲಿ ಕಾವಿಧಾರಿಯಾಗಿ ಸಾಮಾಜಿಕ ಚಳವಳಿಯಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡ ಏಕೈಕ ಸ್ವಾಮೀಜಿ ಅಗ್ನಿವೇಶ್ ಇರಬೇಕು. ತಮ್ಮ ಸೇವೆಗಾಗಿ ಅಂತರ್‌ರಾಷ್ಟ್ರೀಯ ಮಟ್ಟದ ಪ್ರಶಸ್ತಿಯನ್ನು ಪಡೆದ ಹೆಗ್ಗಳಿಕೆಯೂ ಅಗ್ನಿವೇಶರದ್ದಾಗಿದೆ. ಸಂಘಪರಿವಾರದ ಮನುವಾದಿ ರಾಜಕಾರಣದ ವಿರುದ್ಧ, ಸರಕಾರದ ಜನವಿರೋಧಿ ನೀತಿಗಳ ವಿರುದ್ಧ ಸದಾ ಧ್ವನಿಯೆತ್ತುತ್ತಾ ಬಂದ ಅಗ್ನಿವೇಶ್, ಅದಕ್ಕಾಗಿಯೇ ದುಷ್ಕರ್ಮಿಗಳಿಂದ ಹಲವು ಬಾರಿ ಹಲ್ಲೆಗೊಳಗಾದರು. ಕೆಲವು ವಿಷಯಗಳಲ್ಲಿ ಅವರು ಎಡವಿದ್ದೂ ಇವೆ. ಅಣ್ಣಾ ಹಝಾರೆಯ ಚಳವಳಿಗೆ ಆರಂಭದಲ್ಲಿ ಕೈಜೋಡಿಸಿದ್ದರೂ, ಅವರ ಹೋರಾಟದ ಹಿಂದಿರುವ ರಾಜಕೀಯ ಅಜೆಂಡಾ ಮನವರಿಕೆಯಾದದ್ದೇ ಅಲ್ಲಿಂದ ದೂರವಾದರು. ‘ಬಿಗ್‌ಬಾಸ್’ನಲ್ಲಿ ಏಕಾಏಕಿ ಕಾಣಿಸಿಕೊಂಡು ಕೆಲವರ ವ್ಯಂಗ್ಯಕ್ಕೀಡಾಗಿದ್ದರು. ಕಪಿಲ್ ಸಿಬಲ್ ಜೊತೆಗಿನ ಫೋನ್ ಮಾತುಕತೆಯ ಕಾರಣಕ್ಕಾಗಿಯೂ ವಿವಾದಕ್ಕೊಳಗಾಗಿದ್ದರು. ಮಾಂಸಾಹಾರದ ಕುರಿತಂತೆ ಅವರು ಹೊಂದಿದ್ದ ಪೂರ್ವಾಗ್ರಹ ತೀವ್ರ ಚರ್ಚೆಗೆ ಕಾರಣವಾಗಿತ್ತು.

ಮದ್ಯದ ವಿರುದ್ಧ ಆಂದೋಲನವನ್ನು ಸಂಘಟಿಸಿದ ಸಂದರ್ಭದಲ್ಲಿ ‘ಮದ್ಯ ಮತ್ತು ಮಾಂಸ ಸೇವನೆಯಿಂದ ಅತ್ಯಾಚಾರಗಳು ಹೆಚ್ಚುತ್ತವೆ...ಇದು ಸಂಶೋಧನೆಯಲ್ಲೂ ಬೆಳಕಿಗೆ ಬಂದಿದೆ’ ಎಂದು ಪಕ್ಕಾ ಸಂಘಪರಿವಾರದ ನಾಯಕರಂತೆ ಹೇಳಿಕೆಯನ್ನು ನೀಡಿದ್ದರು. ಮದ್ಯ ನಮ್ಮ ವಿವೇಕವನ್ನು ನಾಶ ಮಾಡುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಮದ್ಯ ಮತ್ತು ಮಾಂಸ ಒಂದೇ ಅಲ್ಲ. ಮಾಂಸ ಈ ದೇಶದ ಬಹುಸಂಖ್ಯಾತರ ಆಹಾರ. ಮದ್ಯ ಯಾವುದೇ ಆಹಾರ ಪ್ರಕಾರದಲ್ಲಿ ಬರುವುದಿಲ್ಲ. ಅಗ್ನಿವೇಶ್ ಅವರ ಅಂದಿನ ಮಾತಿನಲ್ಲಿ ‘ಈ ದೇಶದಲ್ಲಿ ನಡೆದ ಅತ್ಯಾಚಾರಗಳೆಲ್ಲ ಮಾಂಸಾಹಾರಿಗಳು ಮಾಡಿರುವುದು’ ಎನ್ನುವಂತಿತ್ತು. ಆದರೆ ದೇಶದ ಇತಿಹಾಸದ ಪುಟ ಬಿಡಿಸಿದರೆ, ಅಲ್ಲಿರುವುದು ಸಸ್ಯಾಹಾರಿಗಳೆಂದು ಕರೆಸಿಕೊಂಡರು ಮಾಂಸಾಹಾರಿಗಳೆಂದು ಕರೆಸಿಕೊಂಡವರ ಮೇಲೆ ಎಸಗಿದ ದೌರ್ಜನ್ಯ, ಅತ್ಯಾಚಾರಗಳು. ಇದು ಅಗ್ನಿವೇಶರಿಗೆ ತಿಳಿಯದ್ದೇನೂ ಅಲ್ಲ. ಆದರೂ ಮಾಂಸಾಹಾರಿಗಳ ಕುರಿತಂತೆ ಅಗ್ನಿವೇಶ್ ಪೂರ್ವಾಗ್ರಹ ಪೀಡಿತ ಹೇಳಿಕೆಯನ್ನು ನೀಡಿದ್ದರು. ಬಹುಶಃ ಅವರು ಹುಟ್ಟಿರುವುದು ಬ್ರಾಹ್ಮಣ ಕುಟುಂಬದಲ್ಲಿ ಆಗಿರುವುದರಿಂದ ಅವರಿಂದ ಈ ಮಾತುಗಳು ಹೊರ ಬಿದ್ದಿರಬಹುದು. ಇದನ್ನು ಹೊರತು ಪಡಿಸಿದರೆ, ಅಗ್ನಿವೇಶ್ ಈ ದೇಶದ ಬಹುತ್ವದ ಕುರಿತಂತೆ ಅಪಾರ ಕಾಳಜಿಯನ್ನು ಹೊಂದಿದ್ದರು ಎನ್ನುವುದರಲ್ಲಿ ಎರಡು ಮಾತಿಲ್ಲ.

ಆರ್ಯಸಮಾಜದ ಸ್ಥಾಪಕರಾದ ದಯಾನಂದ ಸರಸ್ವತಿಯವರನ್ನು ವಿಷ ಹಾಕಿ ಕೊಲ್ಲಲಾಯಿತು. ಆರ್ಯ ಸಮಾಜದ ಬೆಳಕಿನಲ್ಲೇ ಮುನ್ನೆಲೆಗೆ ಬಂದ ಅಗ್ನಿವೇಶರನ್ನು ಒಂದು ರೀತಿಯಲ್ಲಿ ಪುರೋಹಿತ ಶಕ್ತಿಗಳೇ ಕೊಂದು ಹಾಕಿವೆ. ಎರಡು ವರ್ಷಗಳ ಹಿಂದೆ ಅವರ ಮೇಲೆ ನಡೆದ ಸಶಸ್ತ್ರ ಹಲ್ಲೆಯ ಬಳಿಕ ಅಗ್ನಿವೇಶ್ ತೀವ್ರ ಅಸ್ವಸ್ಥರಾಗಿದ್ದರು. ಮಾನಸಿಕವಾಗಿ ಮತ್ತು ದೈಹಿಕವಾಗಿ ಜರ್ಜರಿತರಾಗಿದ್ದರು. ಇವರ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳ ವಿರುದ್ಧ ಸರಕಾರ ಯಾವ ಕ್ರಮವನ್ನೂ ತೆಗೆದುಕೊಳ್ಳಲಿಲ್ಲ. ಯಾಕೆಂದರೆ, ಪರೋಕ್ಷವಾಗಿ ಸರಕಾರದ ಬೆಂಬಲದಿಂದಲೇ ಅವರ ಮೇಲೆ ಪದೇ ಪದೇ ಹಲ್ಲೆಗಳು ನಡೆಯುತ್ತಿದ್ದವು. ಇಂದು ಅವರು ತೀರಿದ ಸುದ್ದಿ ಕೇಳಿ, ಈ ದೇಶದ ಅತ್ಯುನ್ನತ ತನಿಖಾ ಸಂಸ್ಥೆಯಲ್ಲಿ ಕೆಲಸ ಮಾಡಿದ ಮಾಜಿ ಅಧಿಕಾರಿಯೊಬ್ಬರು ಟ್ವಿಟರ್‌ನಲ್ಲಿ ಸಂಭ್ರಮ ವ್ಯಕ್ತಪಡಿಸಿದ್ದಾರೆೆ . ಹೀಗಿರುವಾಗ, ಈ ದೇಶದ ಜನಸಾಮಾನ್ಯರ ಸ್ಥಿತಿ ಹೇಗಿರಬೇಕು? ತಾನು ಬದುಕಿರುವವರೆಗೂ ಗಾಂಧಿ, ವಿವೇಕಾನಂದರು ಕನಸು ಕಂಡ ಹಿಂದೂಧರ್ಮಕ್ಕಾಗಿ ದುಡಿದು ಮಡಿದ ಸನ್ಯಾಸಿಯೊಬ್ಬರನ್ನು ‘ಹಿಂದೂ ವಿರೋಧಿ’ ಎಂದು ಸಂಭ್ರಮಿಸುತ್ತಿರುವುದು, ಹಿಂದೂ ಧರ್ಮದ ದುರಂತ ಮಾತ್ರವಲ್ಲ, ಈ ದೇಶದ ನೈತಿಕ ಅಧಃಪತನದ ಆಳವನ್ನು ತೋರಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News