ಶಾಂತಿಯುತ ಪ್ರತಿಭಟನಕಾರರ ಅಪರಾಧೀಕರಣ: ದಿಲ್ಲಿ ಪೊಲೀಸರ ಪೂರಕ ಆರೋಪ ಪಟ್ಟಿ ಕುರಿತು ಸಿಪಿಎಂ

Update: 2020-09-13 17:59 GMT

 ಹೊಸದಿಲ್ಲಿ, ಸೆ. 13: ಫೆಬ್ರವರಿಯಲ್ಲಿ ದಿಲ್ಲಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ದಿಲ್ಲಿ ಪೊಲೀಸರು ಸಲ್ಲಿಸಿದ ಪೂರಕ ಆರೋಪ ಪಟ್ಟಿಯಲ್ಲಿ ಸೀತಾರಾಮ ಯೆಚೂರಿ ಹಾಗೂ ನಾಗರಿಕ ಹಕ್ಕು ಹೋರಾಟ ಸಂಘಟನೆಗಳ ಕೆಲವು ಸದಸ್ಯರನ್ನು ಉಲ್ಲೇಖಿಸಿರುವುದರ ಕುರಿತು ಸಿಪಿಎಂ ರವಿವಾರ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ರಾಜಕೀಯ ನಾಯಕರ ಸಲಹೆಯಂತೆ ದಿಲ್ಲಿ ಪೊಲೀಸರು ಪ್ರಕರಣವನ್ನು ನಿರೂಪಿಸುತ್ತಿರುವುದು ಅಸಹ್ಯಕರ ನಡೆ ಎಂದು ಸಿಪಿಎಂ ಹೇಳಿದೆ. ಅಲ್ಲದೆ, ಶಾಂತಿಯುತ ರಾಜಕೀಯ ಪ್ರತಿಭಟನೆಯನ್ನು ಅಪರಾಧೀಕರಣಗೊಳಿಸುವ ಇಂತಹ ಕ್ರಮಗಳಿಂದ ದೂರವಿರಿ ಎಂದು ಸರಕಾರವನ್ನು ಸಿಪಿಐ ಪಾಲಿಟ್ ಬ್ಯೂರೊ ರವಿವಾರ ತನ್ನ ಹೇಳಿಕೆಯಲ್ಲಿ ಆಗ್ರಹಿಸಿದೆ.

ಫೆಬ್ರವರಿಯಲ್ಲಿ ನಡೆದ ದಿಲ್ಲಿ ಗಲಭೆ ಪ್ರಕರಣದ ಪೂರಕ ಆರೋಪ ಪಟ್ಟಿಯಲ್ಲಿ ಸಿಪಿಎಂನ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ, ಸ್ವರಾಜ್ ಅಭಿಯಾನದ ನಾಯಕ ಯೋಗೇಂದ್ರ ಯಾದವ್, ಆರ್ಥಿಕ ತಜ್ಞೆ ಜಯತಿ ಘೋಷ್ ಹಾಗೂ ದಿಲ್ಲಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಅಪೂರ್ವಾನಂದ ಅವರ ಹೆಸರನ್ನು ಉಲ್ಲೇಖಿಸಿರುವುದು ವರದಿಯಾದ ಒಂದು ದಿನದ ಬಳಿಕ ಸಿಪಿಎಂ ಈ ಪ್ರತಿಕ್ರಿಯೆ ನೀಡಿದೆ.

ಈಶಾನ್ಯ ದಿಲ್ಲಿಯಲ್ಲಿ ನಡೆದ ಬರ್ಬರ ಕೋಮು ಹಿಂಸಾಚಾರ ಪ್ರಕರಣದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನಿರ್ದೇಶನದಂತೆ ರಾಜಕೀಯ ನಾಯಕರು, ಶಿಕ್ಷಣ ತಜ್ಞರು, ಸಾಂಸ್ಕೃತಿಕ ಗಣ್ಯರು ಹಾಗೂ ಸಾಮಾಜಿಕ ಹೋರಾಟಗಾರರನ್ನು ಸಿಲುಕಿಸುವ ದಿಲ್ಲಿ ಪೊಲೀಸರ ಲಜ್ಜೆಗೇಡಿತನ ತಮಗೆ ಆಘಾತ ಉಂಟು ಮಾಡಿದೆ ಎಂದು ಹೇಳಿಕೆ ತಿಳಿಸಿದೆ.

 ದಿಲ್ಲಿ ಗಲಭೆ ಪೌರತ್ವ ತಿದ್ದುಪಡಿ ವಿರೋಧಿ ಪ್ರತಿಭಟನಕಾರರ ನಿಗೂಢ ಸಂಚು ಎಂದು ನಿರೂಪಿಸಲು ಬಿಜೆಪಿ ಹಾಗೂ ಆರ್‌ಎಸ್‌ಎಸ್ ಪ್ರಯತ್ನ ನಡೆಸುತ್ತಿರುವುದು ಸ್ಪಷ್ಟ ಎಂದು ಅದು ಆರೋಪಿಸಿದೆ.

  ಪ್ರಮುಖ ವಿರೋಧಿಗಳ ವಿರುದ್ಧ ಆರೋಪ ರೂಪಿಸಲು ಹಾಗೂ ಅವರನ್ನು ರಾಕ್ಷಸರರನ್ನಾಗಿಸಲು ಪೊಲೀಸರು ಹಾಗೂ ಸಿಬಿಐ, ಎನ್‌ಐಎ, ಇಡಿಯಂತಹ ಕೇಂದ್ರದ ಏಜೆನ್ಸಿಗಳನ್ನು ಬಳಸಿಕೊಳ್ಳುವ ಅತ್ಯಂತ ನಿರ್ದಯ ಕಿರುಕುಳದ ರೀತಿಯಲ್ಲೇ ಇದು ಕೂಡ ಕಂಡು ಬರುತ್ತಿದೆ ಎಂದು ಅದು ಹೇಳಿದೆ.

ಹುಸಿ ಆರೋಪಗಳ ಅಡಿಯ ಪ್ರಕರಣಗಳಲ್ಲಿ ಕಾರಾಗೃಹ ವಾಸ ಅನುಭವಿಸುತ್ತಿರುವ ರಾಜಕೀಯ ಕೈದಿಗಳನ್ನು ಭೇಷರತ್ತಾಗಿ ಬಿಡುಗಡೆ ಮಾಡುವಂತೆ ಸಿಪಿಎಂ ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News