ಶೈಕ್ಷಣಿಕ ಮಟ್ಟದ ಎಲ್ಲಾ ಹಂತಗಳಲ್ಲೂ ಕನ್ನಡ ಬಳಕೆಯಾಗಬೇಕು: ಪ್ರೊ.ಕೆ.ಎಸ್.ಭಗವಾನ್

Update: 2020-09-14 11:58 GMT

ಮೈಸೂರು,ಸೆ.14: ಕನ್ನಡ ಭಾಷೆ ಪ್ರಾಥಮಿಕ ಹಂತದಲ್ಲಿ ಮಾತ್ರವಲ್ಲ ಸ್ನಾತಕೋತ್ತರ ಮಟ್ಟ ಸೇರಿದಂತೆ ಶೈಕ್ಷಣಿಕ ಮಟ್ಟದ ಎಲ್ಲಾ ವಿಭಾಗಗಳಲ್ಲೂ ಬಳಕೆಯಾಗಬೇಕು ಎಂದು ಖ್ಯಾತ ಸಾಹಿತಿ ಪ್ರಗತಿಪರ ಚಿಂತಕ ಪ್ರೊ.ಕೆ.ಎಸ್.ಭಗವಾನ್ ಒತ್ತಾಯಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಸೋಮವಾರ ನಾವು ದ್ರಾವಿಡ ಕನ್ನಡಿಗರು ನೇತೃತ್ವದಲ್ಲಿ ಪ್ರಗತಿಪರ ಚಿಂತಕರು, ಕನ್ನಡ ಹೋರಾಟಗಾರರು, ಬುದ್ಧಿಜೀವಿಗಳು ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನಾವು ಯಾವುದೇ ಭಾಷೆಯ ವಿರೋಧಿಗಳಲ್ಲ, ಕನ್ನಡ ಭಾಷೆಗೆ ಕರ್ನಾಟದಲ್ಲಿ ಸಾರ್ವಭೌಮತ್ವದ ಅಧಿಕಾರ ನೀಡಿ ಆಡಳಿತ ಭಾಷೆಯನ್ನಾಗಿಸಬೇಕು ಎಂಬುದೇ ನಮ್ಮ ಉದ್ದೇಶ. ಕೆಲವು ಹಿರಿಯ ಸಾಹಿತಿಗಳು ಪ್ರಾಥಮಿಕ ಹಂತದಲ್ಲಿ ಕನ್ನಡ ಇರಬೇಕು ಎಂದಿದ್ದಾರೆ. ಅವರ ಬಗ್ಗೆ ನಮಗೆ ಅಪಾರ ಗೌರವಿದೆ. ಪ್ರಾಥಮಿಕ ಹಂದಲ್ಲಿ ಮಾತ್ರವಲ್ಲ ವಿದ್ಯಾಭ್ಯಾಸದ ಎಲ್ಲಾ ಹಂತಗಳಲ್ಲಿಯೂ ಕನ್ನಡ ಭಾಷೆ ಬಳಕೆಯಾಗಬೇಕು ಎಂದು ಹೇಳಿದರು.

ಜಪಾನ್ ದೇಶದಲ್ಲಿ ಇಂಗ್ಲೀಷ್ ಭಾಷೆ ಬಳಕೆಯಾಗುತ್ತಿತ್ತು. ಅದು ಸ್ವತಂತ್ರಗೊಂಡ ಮೇಲೆ ಅಲ್ಲಿನ ಪ್ರಧಾನಿ ಸಭೆ ಕರೆದು ಶಿಕ್ಷಣ ತಜ್ಞರು, ಬುದ್ಧಿಜೀವಿಗಳು ಸೇರಿದಂತೆ ಎಲ್ಲರೊಂದಿಗೆ ಚರ್ಚಿಸಿ ಮುಂದಿನ ವರ್ಷದಿಂದ ಜಪಾನ್ ಭಾಷೆ ಬಳಕೆಯಾಗಬೇಕು ಎಂದು ಸೂಚಿಸಿದರು. ಹಾಗಾಗಿ ಅಲ್ಲಿ ಪ್ರಾಥಮಿಕ ಹಂತದಿಂದ ಸ್ನಾತಕೋತ್ತರ ಮಟ್ಟದವರೆಗೆ ಜಪಾನ್ ಭಾಷೆ ಬಳಕೆಯಲ್ಲಿದೆ. ಹಾಗಾಗೇ ಅವರು ವಿಶ್ವದಲ್ಲಿ ಎಲ್ಲಾ ದೇಶಗಳಿಗಿಂತಲೂ ಮುಂದೆ ಇದ್ದಾರೆ ಎಂದರು. 

ನಮ್ಮ ಭಾಷೆ ಬಗ್ಗೆ ನಮಗೆ ಅಭಿಮಾನ ಪ್ರೀತಿ ಇರಬೇಕು, ನಾವು ಯಾರನ್ನೂ ವಿರೋಧಿಸುತ್ತಿಲ್ಲ. ನಮ್ಮ ಮನೆಯ ಒಳಗೆ ಬೇರೆಯವರು ಬಂದು ಅಧಿಕಾರ ನಡೆಸಲು ಬಿಡುವುದಿಲ್ಲ, ಈ ನಿಟ್ಟಿನಲ್ಲಿ ನಮ್ಮ ಭಾಷೆ ಬಗ್ಗೆ ಅಭಿಮಾನಹೊಂದಿ ಅದು ಬಳಕೆಯಾಗುವಂತೆ ನೋಡಿಕೊಳ್ಳಬೇಕು, ನಮ್ಮ ಭಾಷೆ ಬಿಟ್ಟು ಬೇರೆ ಭಾಷೆ ಹೇರಿದರೆ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.

ಹಿಂದಿ ಭಾಷೆ ದೇಶದ ಅಧಿಕೃತ ಭಾಷೆ ಎಂದು ಆಗಿದೆ ಎಂಬುದಾಗಿ ಹಲವಾರು ವರ್ಷಗಳಿಂದ ಎಲ್ಲರನ್ನೂ ನಂಬಿಸಲು ಪ್ರಯತ್ನಿಸಲಾಗುತ್ತಿದೆ. ಆದರೆ ಇದು ಸತ್ಯವಲ್ಲ. ಹಿಂದಿಯನ್ನು ವ್ಯವಸ್ಥಿತವಾಗಿ, ಕೆಲವೊಮ್ಮೆ ನಯವಾಗಿ ಮತ್ತೆ ಕೆಲವೊಮ್ಮೆ ಬಲವಂತವಾಗಿ ಹೇರುತ್ತಿರುವುದರ ಹಿಂದಿನ ರಾಜಕೀಯ ಹುನ್ನಾರವನ್ನು ಅರ್ಥ ಮಾಡಿಕೊಳ್ಳುವಲ್ಲಿ ನಾವು ಸೋತಿದ್ದೇವೆ. ಕನ್ನಡ ಮತ್ತು ಇಂಗ್ಲಿಷ್ ಜೊತೆಗೆ ಮೂರನೆಯ ಭಾಷೆಯಾಗಿ ಕಲಿಸಲು ಪ್ರಾರಂಭಿಸಿದ್ದೇ ಒಂದು ಷಡ್ಯಂತ್ರ. ಅದರೊಂದಿಗೆ ಸಂಸ್ಕೃತ ಭಾಷೆ ಅತ್ಯಂತ ಪ್ರಾಚೀನ ಕಾಲದಿಂದಲೂ ಜನಸಾಮಾನ್ಯರನ್ನು ನಾನಾವಿಧಗಳಲ್ಲಿ ಪೋಷಣೆ ಮಾಡುತ್ತಿರುವುದಲ್ಲದೆ ಅತ್ಯಂತ ಶ್ರೇಷ್ಠ ಭಾಷೆ ಅಂದರೆ ದೇವಭಾಷೆ ಎಂಬ ಮಿಥ್ಯೆಯನ್ನು ಪ್ರಚಾರ ಮಾಡಲಾಗುತ್ತಿದೆ. ಕರ್ನಾಟಕದಲ್ಲಿ ಬೇರೆ ಬೇರೆ ಸಂದರ್ಭಗಳಲ್ಲಿ ಬೇರೆ ಬೇರೆ ರೂಪದಲ್ಲಿ ಸಂಸ್ಕೃತ, ಹಿಂದಿ ಹೇರಿಕೆ ನಡೆಯುತ್ತಲೇ ಇದೆ. ಸಂಸ್ಕೃತ ಮತ್ತು ಹಿಂದಿ ಹೇರಿಕೆಯಿಂದ ಈಗಾಗಲೇ ನಾವೆಲ್ಲರೂ ಸಾಕಷ್ಟು ಕಿರುಕುಳ ಅನುಭವಿಸುತ್ತಿದ್ದೇವೆ. ಇದರಿಂದ ಕನ್ನಡ ನಾಡು, ನುಡಿ ಜನಜೀವನವೆಲ್ಲವೂ ಮುಂದಿನ ದಿನಗಳಲ್ಲಿ ಉತ್ತರದವರ ಕಾಲಡಿಯಲ್ಲಿ ನಲುಗುವಂತೆ ಆಗುವುದರಲ್ಲಿ ಆಶ್ಚರ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡ ನಾಡೊಳಗೆ ಯಾವುದೇ ಶಾಲೆಯಲ್ಲಿ ದ್ರಾವಿಡ ಕನ್ನಡಕ್ಕೆ ಮಾರಕವಾಗುವ ಸಂಸ್ಕೃತ ಮತ್ತು ಹಿಂದಿ ವಿಷಯಗಳನ್ನು ಪಠ್ಯಪುಸ್ತಕದಿಂದ ತೆಗೆದುಹಾಕಬೇಕು. ಸಮಗ್ರ ಹಿಂದಿ ಹೇರಿಕೆಗೆ ಕಾರಣವಾಗಿರುವ ಸಂವಿಧಾನದ ವಿಧಿ-343-351ರವರೆಗೂ ತಿದ್ದುಪಡಿ ಮಾಡಿ ಹಿಂದಿಗೆ ಇರುವ ವಿಶೇಷ ಸ್ಥಾನಮಾನ ರದ್ದುಪಡಿಸಬೇಕು. ಒಕ್ಕೂಟ ಮಟ್ಟದ ಎಲ್ಲಾ ಪರೀಕ್ಷೆಗಳನ್ನು ದ್ರಾವಿಡ ಕನ್ನಡದಲ್ಲೂ ನೀಡಬೇಕು. ಸೆಪ್ಟೆಂಬರ್ 14ರಂದು ಕನ್ನಡ ನಾಡೊಳಗೆ ಯಾರೂ ಕೂಡ ಯಾವ ರೂಪದಲ್ಲಿಯೂ ಹಿಂದಿ ದಿವಸ್ ಆಚರಿಸಬಾರದು ಎಂದು ಮುಖ್ಯಮಂತ್ರಿಗಳು ಈ ಕೂಡಲೇ ಆದೇಶ ಹೊರಡಿಸಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಇತಿಹಾಸತಜ್ಞ ಪ್ರೊ.ಪಿ.ವಿ.ನಂಜರಾಜೇ ಅರಸ್, ಕನ್ನಡ ಪರ ಸಂಘಟನೆಯ ಅರವಿಂದ ಶರ್ಮ, ಕರಾಹಿಂಜಾವವೇ ಕೆ.ಎಸ್.ಶಿವರಾಮು, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಎಂ.ಚಂದ್ರಶೇಖರ್, ಮಡ್ಡಿಕೆರೆ ಗೋಪಾಲ್, ರೈತ ಸಂಘಟನೆಯ ಮುಖ್ಯಸ್ಥ ಹೊಸಕೋಟೆ ಬಸವರಾಜು, ಮೂಗೂರು ನಂಜುಂಡಸ್ವಾಮಿ, ಧನಪಾಲ್, ನಂದೀಶ್ ಅರಸು, ಅಶೋಕಪುರಂ ರಾಜು, ರೈತ ಸಂಘದ ಮುಖಂಡ ಪಿ.ಮರಂಕಯ್ಯ ಸೇರಿದಂತೆ ಹಲವರು ಭಾಗವಹಿಸಿದ್ದರು.

ಹೊಸ ಶಿಕ್ಷಣ ನೀತಿಯ ಪ್ರಕಾರ ಗುರುಕುಲ ಪದ್ಧತಿ ಜಾರಿಗೆ ಚಿಂತನೆ ನಡೆಸಲಾಗಿದ್ದು,  ಗುರುಕುಲ ಪದ್ಧತಿ ಇದ್ದರವರು ಮೇಲ್ವರ್ಗದ ಜನ ಹೊರತು ಹಳ್ಳಿಗಾಡಿನ ಜನರಲ್ಲ. ಹಿಂದಿ ಸಂಸ್ಕೃತ ಹೇರುವ ಮೂಲಕ ಹಳ್ಳಿಗಾಡಿನ ಮಕ್ಕಳನ್ನು ಶಿಕ್ಷಣದಿಂದ ವಂಚಿಸುವ ಸಂಚು ಅಡಗಿದೆ. ಹಿಂದಿ ಮತ್ತು ಸಂಸ್ಕೃತದಿಂದ ಹಳ್ಳಿಗಾಡಿನ ವಿದ್ಯಾರ್ಥಿಗಳು ವಿದ್ಯಾಭ್ಯಾಸದಿಂದ ಹಿಂದೆ ಸರಿಯುತ್ತಾರೆ. ಇದು ಬಿಜೆಪಿ ಮತ್ತು ಆರೆಸ್ಸೆಸ್ ನವರ ಹಿಡನ್ ಅಜೆಂಡಾ.
-ಪ್ರೊ.ಕೆ.ಎಸ್.ಭಗವಾನ್, ಸಾಹಿತಿ

ಜರ್ಮನ್ ಕಾಲದ ಹಿಟ್ಲರ್ ರೀತಿ ಪ್ರಧಾನಿ ನರೇಂದ್ರ ಮೋದಿ ನಮ್ಮ ದೇಶವನ್ನು ಕೊಂಡೊಯ್ಯುತ್ತಿದ್ದಾರೆ. ಹಿಂದಿ ಪ್ರಾದೇಶಿಕ ಭಾಷೆ ಹೊರತು ರಾಷ್ಟ್ರ ಭಾಷೆಯಾಗಲು ಸಾಧ್ಯವಿಲ್ಲ. ಹಿಂದಿ ಹೇರುವ ಮೂಲಕ ಎಲ್ಲರೂ ಹಿಟ್ಲರ್ ಗಳಾಗಲು ಹೊರಟಿದ್ದಾರೆ. ಸ್ನೇಹ ಬಿಟ್ಟು ನನ್ನ ಭಾಷೆಯನ್ನು ಬೇರೊಬ್ಬರ ಮೇಲೆ ಹೇರಲು ಹೊರಟರೆ ಪೂರ್ವ ಪಾಕಿಸ್ತಾನದ ರೀತಿಯಾಗುತ್ತದೆ. ಆರ್ಯರು ಎಂದು ಯಾರು ಹೇಳಿಕೊಳ್ಳುತ್ತಾರೆ, ಅವರು ಇರಾನ್ ನಿಂದ ವಲಸೆ ಬಂದ ಜನ, ದಕ್ಷಿಣ ಭಾರತದವರು ಮೂಲ ನಿವಾಸಿಗಳು ವಲಸೆ  ಬಂದವರನ್ನು ವಾಪಸ್ ಕಳುಹಿಸುವ ಪಾಠವಾಗಬೇಕು.
-ಪ್ರೊ.ಪಿ.ವಿ.ನಂಜರಾಜೇ ಅರಸ್, ಇತಿಹಾಸ ತಜ್ಞ.​

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಜಗದಗಲ
ಜಗ ದಗಲ