ತ್ರಿಪುರ ಸಿಎಂ ಬೆದರಿಕೆಯನ್ನು ಟೀಕಿಸಿದ್ದ ಪತ್ರಕರ್ತನಿಗೆ ಮಾರಣಾಂತಿಕ ಹಲ್ಲೆ

Update: 2020-09-14 17:34 GMT

   ಅಗರ್ತಲಾ,ಸೆ.15: ತನ್ನ ಸರಕಾರವು ಕೊರೋನ ವೈರಸ್ ಬಿಕ್ಕಟ್ಟನ್ನು ಕೆಟ್ಟದಾಗಿ ನಿರ್ವಹಿಸುತ್ತಿದೆಯೆಂಬ ವರದಿಗಳನ್ನು ಪ್ರಕಟಿಸುವ ಮಾಧ್ಯಮ ಸಂಸ್ಥೆಗಳನ್ನು ತಾನು ಕ್ಷಮಿಸಲಾರೆ ಎಂಬ ತ್ರಿಪುರ ಮುಖ್ಯಮಂತ್ರಿ ಬಿಪ್ಲಬ್ ದೇಬ್ ಅವರ ಹೇಳಿಕೆಯನ್ನು ಟೀಕಿಸಿದ್ದ ತ್ರಿಪುರದ ಪತ್ರರ್ತರೊಬ್ಬರನ್ನು ಅಪರಿಚಿತ ವ್ಯಕ್ತಿಗಳ ಗುಂಪೊಂದು ಮಾರಣಾಂತಿಕವಾಗಿ ಥಳಿಸಿದ ಘಟನೆ ಸೋಮವಾರ ವರದಿಯಾಗಿದೆ.

   ಬಂಗಾಳಿ ಭಾಷೆಯ ಸುದ್ದಿಪತ್ರಿಕೆಯೊಂದರ ಪತ್ರಕರ್ತರಾದ ಪರಾಶರ್ ಬಿಸ್ವಾಸ್ ಹಲ್ಲೆಗೊಳಗಾದವರು. ಇತ್ತೀಚೆಗೆ ಕೊರೋನ ಸೋಂಕಿನಿಂದ ಗುಣಮುಖರಾಗಿ ಕೋವಿಡ್-19 ಪಾಲನಾ ಕೇಂದ್ರದಿಂದ ಬಿಡುಗಡೆಗೊಂಡಿದ್ದರು. ಶನಿವಾರ ಬಿಶ್ವಾಸ್ ಫೇಸ್‌ಬುಕ್‌ನಲ್ಲಿ ಪ್ರಸಾರ ಮಾಡಿದ ವಿಡಿಯೋದಲ್ಲಿ ಮುಖ್ಯಮಂತ್ರಿ ಬಿಪ್ಲಬ್‌ ದೇಬ್ ಮಾಧ್ಯಮಗಳಿಗೆ ಬೆದರಿಕೆಯೊಡ್ಡಬಾರದೆಂದು ಅಭಿಪ್ರಾ ಯಿಸಿದ್ದರು.

 ಅಪರಿಚಿತರ ಗುಂಪೊಂದು ದಲಾಯಿ ಜಿಲ್ಲೆಯ ಮುಖ್ಯ ನಗರವಾದ ಅಂಬಾಸ್ಸಾದಲ್ಲಿರುವ ಬಿಶ್ವಾಸ್‌ಮನೆಯ ಮೇಲೆ ಅವರ ದಾಳಿ ನಡೆಸಿತು. ಘಟನೆಯಲ್ಲಿ ಬಿಶ್ವಾಸ್ ಗಂಭೀರವಾಗಿ ಗಾಯಗೊಂಡಿದ್ದರು, ಅವರನ್ನು ಅಗರ್ತಲಾದಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮಾಧ್ಯಮಗಳ ವಿರುದ್ಧ ಮುಖ್ಯಮಂತ್ರಿ ಬೆದರಿಕೆಯೊಡ್ಡಿದ್ದನ್ನು ಬಿಶ್ವಾಸ್ ಅವರು ತನ್ನ ಫೇಸ್‌ಬುಕ್ ಪುಟದಲ್ಲಿ ಟೀಕಿಸಿದ, ಕೇವಲ 12 ತಾಸುಗಳೊಳಗೆ ಅವರ ಮೇಲೆ ದಾಳಿ ನಡೆದಿದೆ. ಈ ದಾಳಿಯನ್ನು ಬಿಜೆಪಿ ಕಾರ್ಯಕರ್ತರು ನಡೆಸಿರುವ ಸಾಧ್ಯತೆಯಿದೆಯೆಂದು ‘ಸ್ಯಾಂದನ್ ಪತ್ರಿಕಾ’ದ ಸಂಪಾದಕ ಸುಬಲ್ ದೇವ್ ತಿಳಿಸಿದ್ದಾರೆ.

 ಈ ಮಧ್ಯೆ ಬಿಜೆಪಿಯ ತ್ರಿಪುರಾ ಘಟಕವು , ಪರಾಶರ್ ಬಿಸ್ವಾಸ್ ಮೇಲೆ ನಡೆದ ದಾಳಿಯನ್ನು ಖಂಡಿಸಿ ಹೇಳಿಕೆ ನೀಡಿದೆ. ಈ ಘಟನೆಯಲ್ಲಿ ಪಕ್ಷದ ಯಾವುದೇ ಕಾರ್ಯಕರ್ತರು ಶಾಮೀಲಾಗಿಲ್ಲವೆಂದು ತ್ರಿಪುರಾ ಬಿಜೆಪಿ ವಕ್ತಾರ ನಬೇಂದು ಬ್ಯಾನರ್ಜಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News