ಇಂಗ್ಲೆಂಡ್‌ಗೆ 24 ರನ್‌ಗಳ ಜಯ

Update: 2020-09-14 18:22 GMT

ಮ್ಯಾಂಚೆಸ್ಟರ್: ಆಸ್ಟ್ರೇಲಿಯ ವಿರುದ್ಧ ದ್ವಿತೀಯ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ 24 ರನ್‌ಗಳ ಜಯ ಗಳಿಸಿದ್ದು, ಮೂರು ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ.

  ರವಿವಾರ ಇಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 232 ರನ್‌ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯದ ಬ್ಯಾಟಿಂಗ್ ನಾಟಕೀಯ ಕುಸಿತವನ್ನು ಅನುಭವಿಸಿ 48.4 ಓವರ್‌ಗಳಲ್ಲಿ 207 ರನ್‌ಗಳಿಗೆ ಆಲೌಟಾಗುವುದರ ಮೂಲಕ ಸೋಲು ಅನುಭವಿಸಿತು.

 ನಾಯಕ ಆ್ಯರನ್ ಫಿಂಚ್ (73) ಮತ್ತು ಮಾರ್ನುಸ್ ಲ್ಯಾಬುಶೇನ್ (48) ಮೂರನೇ ವಿಕೆಟ್‌ಗೆ 107 ರನ್‌ಗಳ ಜೊತೆಯಾಟ ನೀಡಿದರೂ, ತಂಡ ಗೆಲುವಿನ ದಡ ಸೇರಲಿಲ್ಲ. 7.5 ಓವರ್‌ಗಳಲ್ಲಿ 2 ವಿಕೆಟ್ ನಷ್ಟದಲ್ಲಿ 37 ರನ್ ಗಳಿಸಿದ್ದ ಆಸ್ಟ್ರೇಲಿಯ ತಂಡದ ಬ್ಯಾಟಿಂಗ್‌ನ್ನು ಮುನ್ನಡೆಸಿದ ಫಿಂಚ್ ಮತ್ತು ಮಾರ್ನುಸ್ ಜೊತೆಯಾಟದಲ್ಲಿ 30.5 ಓವರ್‌ಗಳಲ್ಲಿ 144ಕ್ಕೆ ತಲುಪಿಸಿದ್ದರು.

 ಮಾರ್ನುಸ್‌ಗೆ ಅರ್ಧಶತಕ ತಲುಪಲು 2 ರನ್‌ಗಳ ಆವಶ್ಯಕತೆ ಇತ್ತು. ಅಷ್ಟರಲ್ಲಿ ಅವರನ್ನು ಕ್ರಿಸ್ ವೊಕ್ಸ್ ಎಲ್‌ಬಿಡಬ್ಲು ಬಲಗೆ ಬೀಳಿಸಿದರು. ಬಳಿಕ ಆಸ್ಟ್ರೇಲಿಯದ ಬ್ಯಾಟಿಂಗ್ ನಾಟಕೀಯ ಕುಸಿತ ಕಂಡಿತು. 11 ಎಸೆತಗಳಲ್ಲಿ ಒಂದು ರನ್‌ಗೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು.ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ (36) ಮತ್ತು ಪ್ಯಾಟ್ ಕಮಿನ್ಸ್(11) ಎರಡಂಕೆಯ ಸ್ಕೋರ್ ದಾಖಲಿಸಿ ತಂಡವನ್ನು ಕುಸಿತದಿಂದ ಪಾರು ಮಾಡಲು ಯತ್ನಿಸಿದರು. ಆದರೆ ಇಂಗ್ಲೆಂಡ್‌ನ ಕ್ರಿಸ್ ವೊಕ್ಸ್(32ಕ್ಕೆ 3), ಜೋಫ್ರಾ ಆರ್ಚರ್ (34ಕ್ಕೆ 3), ಸ್ಯಾಮ್ ಕುರ್ರನ್ (35ಕ್ಕೆ 3) ಮತ್ತು ಆದಿಲ್ ರಶೀದ್(67ಕ್ಕೆ 1) ದಾಳಿಯನ್ನು ಎದುರಿಸಲಾರದೆ ಆಸ್ಟ್ರೇಲಿಯ ಗೆಲುವಿನ ಹೊಸ್ತಿಲಿನಲ್ಲಿ ಎಡವಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 231 ರನ್ ಗಳಿಸಿತ್ತು.

    ಆಸ್ಟ್ರೇಲಿಯದ ಬೌಲರ್‌ಗಳಾದ ಝಾಂಪ(36ಕ್ಕೆ 3), ಸ್ಟಾರ್ಕ್(38ಕ್ಕೆ2), ಮತ್ತು ತಲಾ 1 ವಿಕೆಟ್ ಉಡಾಯಿಸಿದ ಹೇಝಲ್‌ವುಡ್ , ಕಮಿನ್ಸ್, ಮಿಚೆಲ್ ಮಾರ್ಷ್ ಇಂಗ್ಲೆಂಡ್‌ನ್ನು ನಿಗದಿತ 50 ಓವರ್‌ಗಳಲ್ಲಿ 231 ರನ್‌ಗಳಿಗೆ ನಿಯಂತ್ರಿಸಿದರು.

  ರಾಯ್ (21), ರೂಟ್ (39), ನಾಯಕ ಮೊರ್ಗನ್(42), ಕ್ರಿಸ್ ವೊಕ್ಸ್ (26) ಎರಡಂಕೆಯ ಸ್ಕೋರ್ ನೆರವಿನಲ್ಲಿ ಇಂಗ್ಲೆಂಡ್ 40.1 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 149 ರನ್ ಗಳಿಸಿತ್ತು. ಬಳಿಕ 9ನೇ ವಿಕೆಟ್‌ಗೆ ಟಾಮ್ ಕುರ್ರನ್ (37) ಮತ್ತು ಆದಿಲ್ ರಶೀದ್ (ಔಟಾಗದೆ 35) ಜೊತೆಯಾಟದಲ್ಲಿ 76 ರನ್ ಸೇರಿಸಿದರು. ಇದರಿಂದಾಗಿ ಇಂಗ್ಲೆಂಡ್ ಸ್ಕೋರ್ 49.4 ಓವರ್‌ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 225ಕ್ಕೆ ತಲುಪಿತು. ಕೊನೆಯಲ್ಲಿ ಜೋಫ್ರಾ ಆರ್ಚರ್ 2 ಎಸೆತಗಳಲ್ಲಿ ಔಟಾಗದೆ 6 ರನ್(1ಬೌ) ಸೇರಿಸಿ ಇಂಗ್ಲೆಂಡ್‌ನ ಸ್ಕೋರ್‌ನ್ನು 231ಕ್ಕೆ ತಲುಪಿಸಲು ಸಹಾಯ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News