ವಿಶಾಖಪಟ್ಟಣಂ ಬೇಹುಗಾರಿಕೆ ಪ್ರಕರಣ: ಪ್ರಮುಖ ಆರೋಪಿಯ ಬಂಧನ

Update: 2020-09-15 16:50 GMT

ಹೊಸದಿಲ್ಲಿ,ಸೆ.15: ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐಗಾಗಿ ಕೆಲಸ ಮಾಡುತ್ತಿದ್ದ ವಿಶಾಖ ಪಟ್ಟಣಂ ಬೇಹುಗಾರಿಕೆ ಪ್ರಕರಣದ ಪ್ರಮುಖ ಆರೋಪಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯು ಸೋಮವಾರ ಬಂಧಿಸಿದೆ.

ಗುಜರಾತಿನ ಗೋಧ್ರಾ ನಿವಾಸಿಯಾಗಿರುವ ಜಿಟೆಲಿ ಇಮ್ರಾನ್ (37) ಬೇಹುಗಾರಿಕೆ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ಮತ್ತು ಐಎಸ್‌ಐಗಾಗಿ ಕೆಲಸ ಮಾಡುತ್ತಿದ್ದ ಎಂದು ಎನ್‌ಐಎ ವಕ್ತಾರರು ತಿಳಿಸಿದರು.

  ಪಾಕಿಸ್ತಾನದ ಗೂಢಚಾರಿಗಳು ಭಾರತೀಯ ನೌಕಾಪಡೆಯ ಹಡಗುಗಳು ಮತ್ತು ಜಲಾಂತರ್ಗಾಮಿಗಳ ನೆಲೆಗಳು/ಚಲನವಲನಗಳ ಕುರಿತ ಸೂಕ್ಷ್ಮ ಮತ್ತು ವರ್ಗೀಕೃತ ಮಾಹಿತಿಗಳನ್ನು ಪಡೆದುಕೊಳ್ಳಲು ಭಾರತದಲ್ಲಿ ಏಜೆಂಟ್‌ಗಳನ್ನು ನೇಮಿಸಿಕೊಂಡಿದ್ದ ಅಂತರರಾಷ್ಟ್ರೀಯ ಬೇಹುಗಾರಿಕೆ ಜಾಲಕ್ಕೆ ಈ ಪ್ರಕರಣವು ಸಂಬಂಧಿಸಿದೆ.

ನೌಕಾಪಡೆಯ ಕೆಲವು ಸಿಬ್ಬಂದಿಗಳು ಫೇಸ್‌ಬುಕ್ ಮತ್ತು ವಾಟ್ಸ್‌ಆ್ಯಪ್‌ನಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಪಾಕಿಸ್ತಾನಿ ಎಜೆಂಟ್‌ಗಳ ಸಂಪರ್ಕ ಹೊಂದಿದ್ದರು. ಅವರು ವರ್ಗೀಕೃತ ಮಾಹಿತಿಗಳನ್ನು ಐಎಸ್‌ಐ ಜೊತೆಗೆ ಹಂಚಿಕೊಂಡಿದ್ದರು ಮತ್ತು ಪಾಕಿಸ್ತಾನದಲ್ಲಿ ಉದ್ಯಮಾಸಕ್ತಿಗಳನ್ನು ಹೊಂದಿರುವ ಐಎಸ್‌ಐನ ಭಾರತೀಯ ಸಹವರ್ತಿಗಳ ಮೂಲಕ ಅವರ ಬ್ಯಾಂಕ್ ಖಾತೆಗಳಿಗೆ ಹಣ ಸಂದಾಯವಾಗುತ್ತಿತ್ತು ಎನ್ನುವುದು ತನಿಖೆಯಿಂದ ಬಹಿರಂಗಗೊಂಡಿತ್ತು.

ಜೂ.15ರಂದು ನ್ಯಾಯಾಲಯದಲ್ಲಿ 14 ಆರೋಪಿಗಳ ವಿರುದ್ಧ ಆರೋಪಪಟ್ಟಿಯನ್ನು ಸಲ್ಲಿಸಲಾಗಿತ್ತು.

 ಇಮ್ರಾನ್ ಪಾಕಿಸ್ತಾನದ ವ್ಯಾಪಾರಿಗಳೊಂದಿಗೆ ಬಟ್ಟೆ ವ್ಯವಹಾರ ನಡೆಸುವ ಸೋಗಿನಲ್ಲಿ ಪಾಕಿಸ್ತಾನಿ ಗೂಢಚಾರಿಗಳು/ಏಜೆಂಟ್‌ರೊಂದಿಗೆ ಗುರುತಿಸಿಕೊಂಡಿದ್ದ. ಪಾಕ್ ಗೂಢಚಾರಿಗಳ ನಿರ್ದೇಶಗಳಂತೆ ನೌಕಾಪಡೆ ಸಿಬ್ಬಂದಿಗಳು ಒದಗಿಸುವ ಸೂಕ್ಷ್ಮ ಮತ್ತು ವರ್ಗೀಕೃತ ಮಾಹಿತಿಗಳ ಬದಲಿಗೆ ಅವರ ಬ್ಯಾಂಕ್ ಖಾತೆಗಳಿಗೆ ಹಣ ಜಮಾ ಮಾಡುತ್ತಿದ್ದ ಎಂದು ಎನ್‌ಐಎ ಅಧಿಕಾರಿಗಳು ತಿಳಿಸಿದರು.

ಸೋಮವಾರ ಇಮ್ರಾನ್ ಮನೆಯ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಕೆಲವು ವಿದ್ಯುನ್ಮಾನ ಸಾಧನಗಳು ಮತ್ತು ಆಕ್ಷೇಪಾರ್ಹ ದಾಖಲೆಗಳನ್ನು ಎನ್‌ಐಎ ವಶಪಡಿಸಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News