ದಿಲ್ಲಿ ಹಿಂಸಾಚಾರದ ತನಿಖೆ ದೋಷ ಪೂರಿತ: ದಿಲ್ಲಿ ಪೊಲೀಸ್ ವರಿಷ್ಠರಿಗೆ 9 ಮಾಜಿ ಐಪಿಎಸ್ ಅಧಿಕಾರಿಗಳ ಬಹಿರಂಗ ಪತ್ರ

Update: 2020-09-15 16:58 GMT

ಹೊಸದಿಲ್ಲಿ, ಸೆ. 15: ಈಶಾನ್ಯ ದಿಲ್ಲಿಯಲ್ಲಿ ಫೆಬ್ರವರಿಯಲ್ಲಿ ಸಂಭವಿಸಿದ ಗಲಭೆಯ ತನಿಖೆ ದೋಷಪೂರಿತವಾಗಿದೆ ಎಂದು ಆರೋಪಿಸಿ 9 ಮಂದಿ ಮಾಜಿ ಐಪಿಎಸ್ ಅಧಿಕಾರಿಗಳು ದಿಲ್ಲಿಯ ಪೊಲೀಸ್ ಆಯುಕ್ತ ಎಸ್.ಎನ್. ಶ್ರೀವಾಸ್ತವ ಅವರಿಗೆ ಸೋಮವಾರ ಬಹಿರಂಗ ಪತ್ರ ಬರೆದಿದ್ದಾರೆ. ಎಲ್ಲ ಗಲಭೆ ಪ್ರಕರಣಗಳನ್ನು ಯಾವುದೇ ಪಕ್ಷಪಾತವಿಲ್ಲದೆ ಹಾಗೂ ಕ್ರಿಮಿನಲ್ ತನಿಖೆಯ ಬಲವಾದ ತತ್ವದ ಆಧಾರದಲ್ಲಿ ಮರು ತನಿಖೆ ನಡೆಸಿ ಎಂದು ಅವರು ಆಗ್ರಹಿಸಿದ್ದಾರೆ.

ಗಲಭೆಗೆ ಸಂಬಂಧಿಸಿ ದಿಲ್ಲಿ ಪೊಲೀಸರು ಸಲ್ಲಿಸಿದ ತನಿಖೆ ವಿವರ ಹಾಗೂ ಚಲನ್‌ಗಳು ಪಕ್ಷಪಾತ ಹಾಗೂ ರಾಜಕೀಯ ಪ್ರೇರಿತ ಎಂದು ಪತ್ರದಲ್ಲಿ ಹೇಳಲಾಗಿದೆ.

ಸಂವಿಧಾನ ಹಾಗೂ ಕಾನೂನನ್ನು ಎತ್ತಿಹಿಡಿಯುವಲ್ಲಿ ನಂಬಿಕೆ ಇರಿಸಿರುವ (ಸೇವೆ ಸಲ್ಲಿಸುತ್ತಿರುವ ಹಾಗೂ ನಿವೃತ್ತ ಐಪಿಎಸ್ ಅಧಿಕಾರಿಗಳು) ಎಲ್ಲ ಪೊಲೀಸ್ ಅಧಿಕಾರಿಗಳಿಗೆ ಇದು ನೋವುಂಟು ಮಾಡಿದೆ ಎಂದು ಪತ್ರ ತಿಳಿಸಿದೆ. ಈ ಬಹಿರಂಗ ಪತ್ರಕ್ಕೆ ಸಹಿ ಹಾಕಿದವರಲ್ಲಿ ಸಿಬಿಐಯ ಮಾಜಿ ವಿಶೇಷ ನಿರ್ದೇಶಕ ಕೆ. ಸಲೀಂ ಅಲಿ, ಪ್ರಧಾನ ಮಂತ್ರಿ ಕಚೇರಿಯಲ್ಲಿರುವ ಕಾಶ್ಮೀರದ ಮಾಜಿ ಒಎಸ್‌ಡಿ ಎ.ಎಸ್. ದೌಲತ್, ರಾಷ್ಟ್ರೀಯ ಅಪರಾಧ ದಾಖಲೆ ಬ್ಯುರೋದ ಮಾಜಿ ಪ್ರಧಾನ ನಿರ್ದೇಶಕ ಶಫಿ ಅಲಂ, ಪಂಜಾಬ್ ಸರಕಾರದ ಮಾಜಿ ಪೊಲೀಸ್ ಮಹಾ ನಿರ್ದೇಶಕ (ಕಾರಾಗೃಹ) ಮೊಹಿಂದರ್‌ಪಾಲ್ ಔಲಖಾ ಹಾಗೂ ಇತರರು ಸೇರಿದ್ದಾರೆ.

 ತಮ್ಮ ಸಮುದಾಯ (ಹಿಂದೂ) ಕೆಲವು ಗಲಭೆಕೋರರನ್ನು ಬಂಧಿಸಿರುವ ಕುರಿತು ಹಿಂದೂಗಳಲ್ಲಿ ಅಸಮಾಧಾನ ಉಂಟಾಗಿದೆ ಎಂದು ಪ್ರತಿಪಾದಿಸುವ ಮೂಲಕ ತನಿಖೆ ಮೇಲೆ ಪ್ರಭಾವ ಬೀರಲು ಓರ್ವ ವಿಶೇಷ ಪೊಲೀಸ್ ಆಯುಕ್ತರು ಪ್ರಯತ್ನಿಸಿದ್ದಾರೆ ಎಂದು ಪತ್ರದಲ್ಲಿ ಪ್ರತಿಪಾದಿಸಲಾಗಿದೆ. ಪೊಲೀಸ್ ಅಧಿಕಾರಿಗಳ ಬಹುಸಂಖ್ಯಾತರಲ್ಲಿ ಇರುವ ಇಂತಹ ವರ್ತನೆ ಹಿಂಸಾಚಾರದ ಸಂತ್ರಸ್ತರಿಗೆ ಹಾಗೂ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಅವರ ಕುಟುಂಬಕ್ಕೆ ನ್ಯಾಯದ ವಿಡಂಬನೆ ಮಾಡುತ್ತದೆ. ಇದರಿಂದ ಬಹುಸಂಖ್ಯಾತ ಸಮುದಾಯಕ್ಕೆ ಸೇರಿದ ಹಿಂಸಾಚಾರದ ನಿಜವಾದ ಆರೋಪಿಗಳು ಯಾವುದೇ ಶಿಕ್ಷೆಗೆ ಒಳಗಾಗದಿರುವ ಸಾಧ್ಯತೆ ಇದೆ ಎಂದು ಪತ್ರ ಹೇಳಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ದಿಲ್ಲಿ ಪೊಲೀಸ್‌ನ ಹೆಚ್ಚುವರಿ ಪಿಆರ್‌ಒ ಅನಿಲ್ ಮಿತ್ತಲ್, ಪೊಲೀಸ್ ಇಲಾಖೆ ಎಲ್ಲ ಗಲಭೆ ಪ್ರಕರಣಗಳನ್ನು ವೃತ್ತಿಪರವಾಗಿ ಹಾಗೂ ನಿಖರವಾಗಿ ತನಿಖೆ ನಡೆಸುತ್ತಿದೆ. ಇದಕ್ಕೆ ಸಂಬಂಧಿಸಿದ ಯಾವುದೇ ಕುಂದುಕೊರತೆಗಳು ಇದ್ದರೆ ಸೂಕ್ತ ವೇದಿಕೆಯಲ್ಲಿ ಪ್ರಶ್ನಿಸಬಹುದು ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News