ಪಾಕಿಸ್ತಾನದ ಹೊಸ ನಕ್ಷೆ ಪ್ರತಿಭಟಿಸಿ ಎಸ್‌ಸಿಒ ಸಭೆಯಿಂದ ಹೊರನಡೆದ ಅಜಿತ್ ದೋವಲ್

Update: 2020-09-15 17:44 GMT

ಹೊಸದಿಲ್ಲಿ, ಸೆ.15: ಪಾಕಿಸ್ತಾನ ಉದ್ದೇಶಪೂರ್ವಕವಾಗಿ ನಕಲಿ ನಕ್ಷೆಯನ್ನು ಸಭೆಯ ಮುಂದಿರಿಸಿದ್ದನ್ನು ಪ್ರತಿಭಟಿಸಿ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ರಶ್ಯಾದ ಆತಿಥೇಯತ್ವದಲ್ಲಿ ಹಮ್ಮಿಕೊಳ್ಳಲಾದ ಶಾಂಘೈ ಸಹಕಾರ ಸಂಘಟನೆ(ಎಸ್‌ಸಿಒ) ಸಭೆಯ ಅಂಗವಾಗಿ ನಡೆದ ರಾಷ್ಟ್ರೀಯ ಭದ್ರತಾ ಸಲಹೆಗಾರರ ಸಭೆಯಿಂದ ಹೊರ ನಡೆದರು ಎಂದು ಮೂಲಗಳು ಹೇಳಿವೆ.

ಆತಿಥೇಯ ರಶ್ಯಾದ ಸಲಹಾಪತ್ರವನ್ನು ಸಾರಾ ಸಗಟಾಗಿ ಉಲ್ಲಂಘಿಸಿದ ಪಾಕಿಸ್ತಾನದ ಕೃತ್ಯವನ್ನು ವಿರೋಧಿಸಿ ದೋವಲ್ ಸಭೆಯಿಂದ ಹೊರನಡೆದರು ಎಂದು ಸಭೆಯ ಬಳಿಕ ನಡೆದ ಸುದ್ದಿಗೋಷ್ಟಿಯಲ್ಲಿ ವಿದೇಶ ವ್ಯವಹಾರ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಹೇಳಿದ್ದಾರೆ. ಆನ್‌ಲೈನ್ ಮೂಲಕ ಸಭೆ ನಡೆದಿದೆ.

ಸಭೆಯಲ್ಲಿ ಪಾಕಿಸ್ತಾನದ ಪ್ರತಿನಿಧಿ ಡಾ ಮೊಯೀದ್ ಯೂಸುಫ್ ಮಂಡಿಸಿದ ಪಾಕಿಸ್ತಾನದ ನಕ್ಷೆಯಲ್ಲಿ ಜಮ್ಮು-ಕಾಶ್ಮೀರವನ್ನು ವಿವಾದಿತ ಪ್ರದೇಶ ಎಂದು ತೋರಿಸಲಾಗಿದೆ. ಅಲ್ಲದೆ ಸಿಯಾಚಿನ್, ಸರ್ ಕ್ರೀಕ್ ಹಾಗೂ ಗುಜರಾತ್‌ನ ಜುನಾಗಢವನ್ನು ತನ್ನ ಪ್ರದೇಶವೆಂದು ಬಿಂಬಿಸಲಾಗಿತ್ತು. ಅಲ್ಲದೆ ಚೀನಾ ಆಕ್ರಮಿತ ಅಕ್ಸಾಯ್ ಚಿನ್ ಪ್ರದೇಶವನ್ನು ಪೂರ್ವ ಕಾಶ್ಮೀರದ ಗಡಿಭಾಗದಲ್ಲಿ ತೋರಿಸಿಲ್ಲ. ಸಭೆಯ ಬಗ್ಗೆ ಆತಿಥೇಯ ರಶ್ಯಾ ನೀಡಿದ್ದ ಸಲಹಾಪತ್ರದ ಸ್ಪಷ್ಟ ಉಲ್ಲಂಘನೆ ಇದಾಗಿದೆ. ನಿರೀಕ್ಷಿಸಿದಂತೆಯೇ, ಸಭೆಯಲ್ಲಿ ಕೈಗೊಳ್ಳಲಾದ ನಿರ್ಣಯದ ಬಗ್ಗೆ ಪಾಕಿಸ್ತಾನ ವಿಶ್ವದ ದಾರಿ ತಪ್ಪಿಸುವಂತಹ ಹೇಳಿಕೆ ನೀಡಿದೆ.

ದೋವಲ್‌ರ ಆಕ್ಷೇಪವನ್ನು ಕಡೆಗಣಿಸಿದ ಸಭೆ, ಪಾಕಿಸ್ತಾನದ ಹೊಸ ನಕ್ಷೆಯನ್ನು ಅನುಮೋದಿಸಿದೆ ಎಂದು ಪಾಕಿಸ್ತಾನದ ಆಡಳಿತಾರೂಢ ಪಕ್ಷ ಪಿಟಿಐ(ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್) ಹೇಳಿಕೊಂಡಿದೆ. ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಳಿಸಿದ ದಿನದ ಪ್ರಥಮ ವಾರ್ಷಿಕೋತ್ಸವದ ಸಂದರ್ಭ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹೊಸ ನಕ್ಷೆಯನ್ನು ಅನಾವರಣಗೊಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News