ಜೀವಂತ ದಾನಿಯಿಂದ ಯಕೃತ್ತಿನ ಕಸಿ ಬಗ್ಗೆ ನಿಮಗೆಷ್ಟು ಗೊತ್ತು?

Update: 2020-09-15 18:45 GMT

ಯಕೃತ್ತು ಸಂಬಂಧಿ ರೋಗಗಳು ನಿರಂತರವಾಗಿ ಹೆಚ್ಚುತ್ತಲೇ ಇವೆ. ಗಂಭೀರ ಪ್ರಕರಣಗಳಲ್ಲಿ ಯಕೃತ್ತಿನ ಕಸಿ ಏಕೈಕ ಚಿಕಿತ್ಸೆಯಾಗಿದೆ. ಕೆಲವು ವರ್ಷಗಳ ಹಿಂದಿನವರೆಗೂ ತಂತ್ರಜ್ಞಾನದ ಕೊರತೆಯಿಂದಾಗಿ ಯಕೃತ್ತಿನ ಕಸಿ ಎನ್ನುವುದು ಕನಸಿನ ಮಾತಾಗಿತ್ತು. ಆದರೆ ಇಂದು ಮುಂದುವರಿದ ತಂತ್ರಜ್ಞಾನದಿಂದಾಗಿ ರೋಗಿಯು ಸುದೀರ್ಘ ಬದುಕನು ್ನನಡೆಸಬಹುದು,ಅಲ್ಲದೆ ಚಿಕಿತ್ಸೆಯೂ ಸರಳ ಮತ್ತು ಕಡಿಮೆ ಅಪಾಯಕಾರಿಯಾಗಿದೆ. ಸಜೀವ ದಾನಿಗಳಿಂದ ಪಡೆದ ಯಕೃತ್ತಿನ ಕಸಿ ನಮ್ಮ ದೇಶದಲ್ಲಿಹೆಚ್ಚು ಸುರಕ್ಷಿತ ಪ್ರಕ್ರಿಯೆಯಾಗಿದೆ. ಜೀವಂತವಿದ್ದು ತನ್ನ ಯಕೃತ್ತನ್ನು ದಾನ ಮಾಡುವ ವ್ಯಕ್ತಿಯನ್ನು ಜೀವಂತ ದಾನಿ ಎಂದು ಕರೆಯಲಾಗುತ್ತದೆ. ಇಲ್ಲಿ ದಾನಿಯು ತನ್ನ ಯಕೃತ್ತಿನ ಒಂದು ತುಂಡನ್ನು ರೋಗಿಗೆ ನೀಡುತ್ತಾನೆ. ಇದು ದಾನಿಗೆ ಅಪಾಯಕರವಲ್ಲವೇ ಎಂಬ ಶಂಕೆ ಬೇಡ,ಏಕೆಂದರೆ ಶಸ್ತ್ರಚಿಕಿತ್ಸೆಯ ಕೆಲವೇ ತಿಂಗಳುಗಳಲ್ಲಿ ದಾನಿಯ ಯಕೃತ್ತು ಪುನಃ ಬೆಳೆಯುತ್ತದೆ. ಅದೇ ರೀತಿ ಕಸಿ ಮಾಡಿಸಿಕೊಂಡ ರೋಗಿಯಲ್ಲಿಯೂ ಯಕೃತ್ತು ಮತ್ತೆ ಬೆಳೆಯುತ್ತದೆ. ಜೀವಂತ ದಾನಿಯಿಂದ ಅಂಗವನ್ನು ಪಡೆದು ಕಸಿ ಮಾಡುವುದು ಭಾರತದಲ್ಲಿ ಅತ್ಯಂತ ಪಾರದರ್ಶಕ ಪ್ರಕ್ರಿಯೆಯಾಗಿದೆ. ಇದಕ್ಕಾಗಿ ವಿವಿಧ ಸಂಸ್ಥೆಗಳು ಮತ್ತು ಆಸ್ಪತ್ರೆಗಳು ರೋಗಿಗಳು ಮತ್ತು ದಾನಿಗಳ ನಡುವೆ ಸಂಪರ್ಕವನ್ನು ಕಲ್ಪಿಸಲು ಶ್ರಮಿಸುತ್ತಿವೆ. ರಕ್ತಸಂಬಂಧಿಗಳಿಂದ ದಾನವನ್ನು ಹೊರತುಪಡಿಸಿ ಇತರರಿಂದ ಅಂಗ ದಾನ ಪಡೆಯಲು ರಾಜ್ಯ ಸರಕಾರದಿಂದ ನೇಮಿತ ಸಮಿತಿಯ ಒಪ್ಪಿಗೆ ಅಗತ್ಯವಾಗಿದೆ. ದಾಖಲೆಗಳಿಗೆ ಸಹಿ ಹಾಕುವ ಮುನ್ನ ದಾನಿಗೆ ಮತ್ತು ರೋಗಿಗೆ ಕಸಿಯ ಅಪಾಯ ಮತ್ತು ಸಫಲತೆಯ ಬಗ್ಗೆ ಸಂಪೂರ್ಣ ವಿವರಗಳನ್ನು ನೀಡಲಾಗುತ್ತದೆ.

ಜೀವಂತ ದಾನಿಯ ವಯಸ್ಸು 18ರಿಂದ 55 ವರ್ಷಗಳ ಒಳಗಿರಬೇಕು. ದಾನಿಯು ಫ್ಯಾಟಿ ಲಿವರ್ ಕಾಯಿಲೆಯ ಅಪಾಯಕ್ಕೆ ಗುರಿಯಾಗದಂತಿರಲು ಆತನ ದೇಹತೂಕ 85 ಕೆ.ಜಿ.ಗಿಂತ ಹೆಚ್ಚಿರಬಾರದು. ರೋಗಿ ಮತ್ತು ದಾನಿಯ ರಕ್ತದ ಗುಂಪು ಒಂದೇ ಆಗಿರಬೇಕು ಅಥವಾ ದಾನಿಯ ರಕ್ತ ಯೂನಿವರ್ಸಲ್ ಡೋನರ್ ಗುಂಪಿಗೆ ಸೇರಿರಬೇಕು.

ದಾನಿಯಿಂದ ಯಕೃತ್ತನ್ನು ಸ್ವೀಕರಿಸುವ ಮುನ್ನ ಅದು ರೋಗಿಗೆ ಹೊಂದಿಕೆಯಾಗುತ್ತದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಸಿಬಿಸಿ,ಸೆರಮ್ ಕ್ರಿಯೇಟಿನೈನ್,ಎಚ್‌ಸಿವಿ ಆ್ಯಂಟಿಬಾಡಿ,ಎದೆಯ ಎಕ್ಸ್-ರೇ,ಹೊಟ್ಟೆಯ ಅಲ್ಟ್ರಾಸೌಂಡ್ ಇತ್ಯಾದಿ ತಪಾಸಣೆಗಳನ್ನು ನಡೆಸಲಾಗುತ್ತದೆ.

ದಾನಿಯು ತನ್ನ ಯಕೃತ್ತಿನ ಒಂದು ತುಂಡನ್ನು ರೋಗಿಗೆ ನೀಡಿದ ಬಳಿಕ ಕೆಲವು ವಿಷಯಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ವ್ಯಾಯಾಮ ಮಾಡಬಾರದು,ಆರೊಗ್ಯಕರ ಆಹಾರಕ್ರಮವನ್ನು ಅನುಸರಿಸಬೇಕು,ವಾಹನ ಚಾಲನೆ ಮಾಡಬಾರದು ಮತ್ತು ವೈದ್ಯರೊಂದಿಗೆ ಸಂಪರ್ಕದಲ್ಲಿರಬೇಕು.

ಮೊದಲ ಯಶಸ್ವಿ ಯಕೃತ್ತು ಕಸಿಯನ್ನು 1998ರಲ್ಲಿ ನಡೆಸಲಾಗಿತ್ತು. ಆದರೆ ದಾನಿಗಳ ಕೊರತೆ ಮತ್ತು ಜೀವಂತ ಯಕೃತ್ತು ಕಸಿ ದಾನಗಳ ಬಗ್ಗೆ ಅರಿವಿಲ್ಲದಿರುವುದು ಇಂದಿಗೂ ಈ ಪ್ರಕ್ರಿಯೆಗೆ ಪ್ರಮುಖ ಅಡಚಣೆಯಾಗಿದೆ. ದಾಖಲೆಗಳಂತೆ ಶೇ.70ರಷ್ಟು ಪ್ರಕರಣಗಳಲ್ಲಿ ಜೀವಂತ ದಾನಿಗಳಿಂದಲೇ ಯಕೃತ್ತನ್ನು ಪಡೆಯಲಾಗಿದೆ. ಮಿದುಳು ಸಾವು ಸಂಭವಿಸಿದವರಿಂದ ಅಂಗವನ್ನು ಹೊರತೆಗೆಯುವುದು,ಸಕಾಲದಲ್ಲಿ ರೋಗಿಯಿದ್ದಲ್ಲಿಗೆ ತಲುಪಿಸುವದು ಇತ್ಯಾದಿಗಳೆಲ್ಲ ಸಮಸ್ಯಾತ್ಮಕವಾಗಿರುವುದರಿಂದ ಯಕೃತ್ತಿನ ಕಸಿ ತೊಡಕಿನದಾಗಿದೆ ಮತ್ತು ಈ ನಿಟ್ಟಿನಲ್ಲಿ ಜೀವಂತ ದಾನಿಗಳಿಂದ ಅಂಗವನ್ನು ಪಡೆದು ಕಸಿ ಮಾಡುವುದು ಸುಲಭವಾಗುತ್ತದೆ.

ಯಕೃತ್ತಿನ ಕಾಯಿಲೆ ಎಂತಹ ಸಮಸ್ಯೆಯಾಗಿದೆಯೆಂದರೆ ಇಂದು ಭಾರತದಲ್ಲಿ ಪ್ರತಿ ಇಬ್ಬರಲ್ಲಿ ಒಬ್ಬರು ಯಾವುದಾದರೂ ಯಕೃತ್ತು ತೊಂದರೆಯಿಂದ ಬಳಲುತ್ತಿದ್ದಾರೆ. ಇರಿಂದ ಪಾರಾಗಲು ಜನರು ಔಷಧಿಗಳ ಸೇವನೆ,ವ್ಯಾಯಾಮ,ಆಹಾರದಲ್ಲಿ ಬದಲಾವಣೆ, ಹೀಗೆ ಹಲವಾರು ಮಾರ್ಗಗಳ ಮೊರೆ ಹೋಗುತ್ತಾರೆ. ಆದರೆ ಇವುಗಳಿಂದ ಆರೋಗ್ಯದಲ್ಲಿ ಸುಧಾರಣೆಯಾಗದಿದ್ದಾಗ ವೈದ್ಯರು ಯಕೃತ್ತು ಕಸಿಗೆ ಶಿಫಾರಸು ಮಾಡುತ್ತಾರೆ. ಹಲವಾರು ಜನರು ಯಕೃತ್ತು ದಾನಿಗಳಾಗಲು ಬಯಸುತ್ತಿರುವರಾದರೂ ಈ ಪ್ರಕ್ರಿಯೆಯ ಕುರಿತು ಅರಿವಿನ ಕೊರತೆಯಿಂದ ಅವರಿಗೆ ಈ ಉದಾತ್ತ ಕಾರ್ಯವನ್ನು ಮಾಡಲು ಸಾಧ್ಯವಾಗುತ್ತಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News