ದಿಲ್ಲಿ ಹಿಂಸಾಚಾರದ ಬಗ್ಗೆ ಪೊಲೀಸರ ತನಿಖೆ ಪಿತೂರಿಯ ಒಂದು ಭಾಗ: ಹೋರಾಟಗಾರರ ಆರೋಪ

Update: 2020-09-16 16:10 GMT

ಹೊಸದಿಲ್ಲಿ, ಸೆ.16: ಫೆಬ್ರವರಿಯಲ್ಲಿ ರಾಷ್ಟ್ರೀಯ ರಾಜಧಾನಿ ದಿಲ್ಲಿಯಲ್ಲಿ ಸಂಭವಿಸಿದ್ದ ಕೋಮು ಹಿಂಸಾಚಾರದ ಬಗ್ಗೆ ದಿಲ್ಲಿ ಪೊಲೀಸರು ನಡೆಸುತ್ತಿರುವ ತನಿಖೆಯಲ್ಲಿ ಮೂಲಭೂತ ಮಾನವೀಯತೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಎಂದು ಸಾಮಾಜಿಕ ಹೋರಾಟಗಾರರು ಹಾಗೂ ಪತ್ರಕರ್ತರು ಆರೋಪಿಸಿದ್ದಾರೆ.

 ದಿಲ್ಲಿಯಲ್ಲಿ ನಡೆದ ಸುದ್ಧಿಗೋಷ್ಟಿಯಲ್ಲಿ ನ್ಯಾಯವಾದಿ ಪ್ರಶಾಂತ್ ಭೂಷಣ್, ಸಾಹಿತಿ ಮತ್ತು ಯೋಜನಾ ಆಯೋಗದ ಮಾಜಿ ಸದಸ್ಯೆ ಸಯಿದಾ ಹಮೀದ್, ಜೆಎನ್‌ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್, ಸಿಪಿಐ ಪಾಲಿಟ್‌ ಬ್ಯೂರೋ ಸದಸ್ಯೆ ಕವಿತಾ ಕೃಷ್ಣನ್, ಹಿರಿಯ ಪತ್ರಕರ್ತೆ ಪಮೇಲಾ ಫಿಲಿಪೋಸ್, ದಿಲ್ಲಿ ವಿವಿ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷೆ ನಂದಿತಾ ನಾರಾಯಣ್ ಮಾತನಾಡಿ, ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದವರನ್ನು ಬಂಧಿಸಲು ಸಾಧ್ಯವಾಗುವ ರೀತಿಯಲ್ಲಿ ತನಿಖೆಯ ದಿಕ್ಕು ಬದಲಿಸಿದ ಪೊಲೀಸರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೌರತ್ವ ಕಾಯ್ದೆ ವಿರೋಧಿಸಿ ಶಾಂತ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದವರನ್ನು ದೋಷಿಗಳೆಂದು ಬಿಂಬಿಸುವ ನಿಟ್ಟಿನಲ್ಲಿ ಪೊಲೀಸರು ತನಿಖೆಯನ್ನು ಕೇಂದ್ರೀಕರಿಸಿದ್ದಾರೆ. ಪೊಲೀಸರ ತನಿಖೆ ಎಂಬುದು ಈ ಪಿತೂರಿಯ ಭಾಗವಾಗಿದೆ. ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದ ಕಾರ್ಯಕರ್ತರನ್ನು ದೊಂಬಿ ನಡೆಸಿದವರು, ಪಿತೂರಿಗಾರರು ಎಂದು ಕರೆಯಲಾಗಿದೆ ಎಂದು ಪ್ರಶಾಂತ್ ಭೂಷಣ್ ಹೇಳಿದರು.

ನೈಜ ಸಾಕ್ಷಿಗಳ ಕೊರತೆಯ ಕಾರಣ ಪೊಲೀಸರು ಕಲ್ಪಿತ, ಸುಳ್ಳು ಸುದ್ದಿ ಮತ್ತು ಕತೆಗಳನ್ನು ಕಟ್ಟುತ್ತಿದ್ದಾರೆ . ಬಿಜೆಪಿ ಮುಖಂಡರಾದ ಕಪಿಲ್ ಮಿಶ್ರ ಮತ್ತು ಅನುರಾಗ್ ಠಾಕುರ್ ಗಲಭೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬಗ್ಗೆ ಸಾಕ್ಷಿಗಳಿದ್ದರೂ ಅವರನ್ನು ಇನ್ನೂ ಬಂಧಿಸಿಲ್ಲ. ದಿಲ್ಲಿ ಹಿಂಸಾಚಾರದ ವಿಷಯದಲ್ಲಿ ನ್ಯಾಯಸಮ್ಮತ ತನಿಖೆ ನಡೆಯಬೇಕೆಂಬುದು ದೇಶದ ಪ್ರಜೆಗಳ ಆಗ್ರಹವಾಗಿದೆ ಎಂದು ಪತ್ರಕರ್ತೆ ಪಮೇಲಾ ಫಿಲಿಪೋಸ್ ಹೇಳಿದ್ದಾರೆ.

ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆ ಎಂಬುದು ಯುವಜನರ ಬೃಹತ್ ಅಭಿಯಾನವಾಗಿದೆ. ಆದರೆ ಇದನ್ನು ಸುಳ್ಳಿನೊಂದಿಗೆ ತಿರುಚಲಾಗಿದೆ ಮತ್ತು ಅವರು ತಮ್ಮದೇ ನಿರೂಪಣೆಯೊಂದಿಗೆ ಮುಂದುವರಿಯುತ್ತಿದ್ದಾರೆ. ಪೊಲೀಸರು ಮುಸ್ಲಿಮರನ್ನು ಮತ್ತು ಇತರ ದುರ್ಬಲ ವರ್ಗದವರನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಸಯೀದಾ ಹಮೀದ್ ಆರೋಪಿಸಿದ್ದಾರೆ.

ದಿಲ್ಲಿ ಪೊಲೀಸರ ತನಿಖೆಯನ್ನು ವಿರೋಧಿಸಿ ಕಾರ್ಯಕರ್ತರು ಹೇಳಿಕೆಯೊಂದನ್ನು ಸುದ್ದಿಗೋಷ್ಟಿಯಲ್ಲಿ ಬಿಡುಗಡೆಗೊಳಿಸಿದರು. ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕೆ ಗನ್ ಹಿಡಿದು ಬಂದು ಪ್ರತಿಭಟನಾಕಾರರನ್ನು ಬೆದರಿಸಿ ಚದುರಿಸಲು ಪ್ರಯತ್ನಿಸಿದ ನೈಜ ಅಪರಾಧಿಗಳು ಹಾಡಹಗಲೇ ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ. ಪ್ರಜಾಪ್ರಭುತ್ವದ ಎಲ್ಲಾ ಭಿನ್ನಮತದ ಧ್ವನಿಗಳನ್ನು ದೋಷಾರೋಪಣೆಯಲ್ಲಿ ಸಿಲುಕಿಸಲಾಗುತ್ತಿದೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News