ವಾವ್ರಿಂಕಾರಿಗೆ ಆಘಾತ ನೀಡಿದ ಮುಸೆಟ್ಟಿ

Update: 2020-09-16 18:30 GMT

 ರೋಮ್: ಇಟಾಲಿಯನ್ ಓಪನ್ ಟೆನಿಸ್ ಟೂರ್ನಮೆಂಟ್‌ನ ಪ್ರಥಮ ಸುತ್ತಿನ ಪಂದ್ಯದಲ್ಲಿ ಸ್ಟಾನ್ ವಾವ್ರಿಂಕಾ ಅವರಿಗೆ ಸ್ಥಳೀಯ ಆಟಗಾರ ಲೊರೆಂರೊ ಮುಸೆಟ್ಟಿ ಆಘಾತ ನೀಡಿದ್ದಾರೆ.

ಮಂಗಳವಾರ ನಡೆದ ಪಂದ್ಯದಲ್ಲಿ ಮೂರು ಬಾರಿ ಗ್ರಾನ್ ಸ್ಲಾಮ್ ಚಾಂಪಿಯನ್ ಸ್ಟಾನ್ ವಾವ್ರಿಂಕಾ ಅವರನ್ನು 18ರ ಹರೆಯದ ಯುವ ಆಟಗಾರ ಮುಸೆಟ್ಟಿ 6-0, 7-6 (2) ಅಂತರದಲ್ಲಿ ಸೋಲಿಸಿದರು. ವೃತ್ತಿಪರ ಸರ್ಕ್ಯೂಟ್‌ನಲ್ಲಿ ಇದು ಅವರ ಮೊದಲ ಜಯವಾಗಿದೆ. ಮುಸೆಟ್ಟಿ ಅವರಿಗೆ ಎಟಿಪಿ ಟೂರ್‌ನಲ್ಲಿ ಇದು ಎರಡನೇ ಪಂದ್ಯವಾಗಿದೆ. ಎರಡನೇ ಸುತ್ತಿನ ಪಂದ್ಯದಲ್ಲಿ ಮುಸೆಟ್ಟಿ ಜಪಾನ್‌ನ ಕೀ ನಿಶಿಕೋರಿ ಅವರನ್ನು ಎದುರಿಸಲಿದ್ದಾರೆ.

 ಸ್ವಿಸ್‌ನ 35ರ ಹರೆಯದ ಆಟಗಾರ ವಾವ್ರಿಂಕಾ ಮೊದಲ ಸೆಟ್‌ನಲ್ಲಿ ಹಿನ್ನಡೆ ಅನುಭವಿಸಿದರು. ಎರಡನೇ ಸೆಟ್‌ನಲ್ಲಿ ಹೋರಾಟ ನಡೆಸಿ ಟೈ ಬ್ರೇಕ್‌ಗೆ ದೂಡಿದರು. ಆದರೆ ಮುಸೆಟ್ಟಿ ಹಿಡಿತ ಸಡಿಲಗೊಳಿಸದೆ ಗೆಲುವಿನ ನಗೆ ಬೀರಿದರು. ಇದಕ್ಕೂ ಮೊದಲು ಡೆನಿಸ್ ಶಪೋವಾಲೊವ್ ಮತ್ತು ಆಂಡ್ರೆ ರುಬ್ಲೆವ್ ನೇರ ಸುತ್ತಿನ ಗೆಲುವಿನೊಂದಿಗೆ ಎರಡನೇ ಸುತ್ತಿಗೆ ಕಾಲಿಟ್ಟರು.

ಕಳೆದ ವಾರ ಯುಎಸ್ ಓಪನ್‌ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದ ಕೆನಡಾದ 12ನೇ ಶ್ರೇಯಾಂಕದ ಶಪೋವಾಲೊವ್ ಅವರು ಗೈಡೋ ಪೆಲ್ಲಾ ಅವರನ್ನು 6-2, 6-3 ಸೆಟ್‌ಗಳಿಂದ ಸೋಲಿಸಿದರು.

 9ನೇ ಶ್ರೇಯಾಂಕಿತ ರುಬ್ಲೆವ್ ಅವರು ಕ್ವಾಲಿಫೈಯರ್ ಫಕುಂಡೊ ಬಾಗ್ನಿಸ್ ಅವರನ್ನು 6-4, 6-4 ಸೆಟ್‌ಗಳಿಂದ ಸೋಲಿಸಿ ಎರಡನೇ ಸುತ್ತಿನಲ್ಲಿ ಸ್ಥಾನ ಗಿಟ್ಟಿಸಿಕೊಂಡರು. ಅಲ್ಲಿ ಅವರು ಹಬರ್ಟ್ ಹರ್ಕಾಕ್ಜ್‌ರನ್ನು ಎದುರಿಸಲಿದ್ದಾರೆ.

ಯುಎಸ್ ಓಪನ್ ಪಂದ್ಯಾವಳಿಯಲ್ಲಿ ಕ್ವಾರ್ಟರ್-ಫೈನಲಿಸ್ಟ್ ಆಗಿರುವ ಅಲೆಕ್ಸ್ ಡಿ ಮಿನೌರ್ ಅವರನ್ನು ಡೊಮಿನಿಕ್ ಕೊಯೆಫರ್ ಹೊರದಬ್ಬಿದರು. ಅಲೆಕ್ಸ್ ರನ್ನು ಡೊಮಿನಿಕ್ 3-6, 6-3, 7-6 (5) ಅಂತರದಲ್ಲಿ ಮಣಿಸಿದರು. ಮಹಿಳೆಯರ ವಿಭಾಗದಲ್ಲಿ ಏಂಜೆಲಿಕ್ ಕೆರ್ಬರ್‌ರನ್ನು ಝೆಕ್‌ನ ಕ್ಯಾಟರೀನಾ ಸಿನಿಯಾಕೋವಾ ಅವರು 6-3, 6-1 ಸೆಟ್‌ಗಳಿಂದ ಸೋಲಿಸಿದರು.

 ಯುಎಸ್ ಓಪನ್‌ನಲ್ಲಿ ಪ್ರಿ ಕ್ವಾರ್ಟರ್ ಫೈನಲ್ ತಲುಪಿದ್ದ ಕೆರ್ಬರ್ ಅವರು ಕ್ಲೇ ಕೋರ್ಟ್‌ನಲ್ಲಿ ಕೇವಲ 69 ನಿಮಿಷಗಳು ಅವಧಿಯ ಆಟದಲ್ಲಿ ಸಿನಿಯಕೋವಾ ವಿರುದ್ಧ ಸೋಲುಂಡರು.

 ಅಮೆರಿಕದ ಯುವ ಆಟಗಾರ್ತಿ ಕೊಕೊ ಗೌಫ್ ಟ್ಯುನಿಷಿಯನ್ ಒನ್ಸ್ ಜಬೂರ್ ಅವರನ್ನು 6-4, 6-3 ಸೆಟ್‌ಗಳಿಂದ ಸೋಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News