ದಿಲ್ಲಿ ಹಿಂಸಾಚಾರ ತನಿಖೆಯ ಅಣಕು

Update: 2020-09-18 08:44 GMT

ಒಬ್ಬ ಒಂದು ವಿಷ ಬೀಜವನ್ನು ಬಿತ್ತುತ್ತಾನೆ. ಸಂಬಂಧ ಪಟ್ಟವರು ಅದನ್ನು ನೋಡಿಯೂ ನೋಡದಂತೆ ಕಣ್ಮುಚ್ಚಿ ಕೂರುತ್ತಾರೆ. ವಿಷ ಬೀಜ ಮೊಳಕೆಯೊಡೆದು ಮರವಾಗಿ, ಹಣ್ಣಾಗಿ ಹಲವು ಜನರ ಸಾವು ನೋವುಗಳಿಗೆ ಕಾರಣವಾಗುತ್ತದೆ. ಜನರು ಆಕ್ರೋಶಗೊಂಡು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಾರೆ. ಒಮ್ಮೆಗೆ ವ್ಯವಸ್ಥೆ ಎಚ್ಚರಗೊಂಡು ಪ್ರತಿಭಟನೆ ನಡೆಸಿದವರ ಮೇಲೆ ಗುಂಡು ಹಾರಿಸುತ್ತದೆ. ಪ್ರತಿಭಟನೆ ಹಿಂಸಾಚಾರವಾಗುತ್ತದೆ. ಅದರಲ್ಲಿ ಭಾಗವಹಿಸಿದವರನ್ನೆಲ್ಲ ಪೊಲೀಸರು ಬಂಧಿಸುತ್ತಾ, ಸಂಘರ್ಷವನ್ನು ಗಲಭೆ ಎಂದು ಬಿಂಬಿಸುತ್ತಾರೆ. ಬೆಳೆದು ನಿಂತ ಮರವನ್ನು ಕಡಿದು ಹಾಕುತ್ತಾರೆ. ಅದರ ಕಾಂಡವನ್ನು ಮಾತ್ರ ಹಾಗೆಯೇ ಉಳಿಸುತ್ತಾರೆ. ಪರಿಣಾಮ, ಒಂದು ಮಳೆ ಬಿದ್ದರೆ ಕಾಂಡ ಮತ್ತೆ ಚಿಗುರುತ್ತದೆ. ವಿಷ ಬೀಜ ಬಿತ್ತಿದವನ ಮೇಲೆ ತಕ್ಷಣ ಕ್ರಮ ಕೈಗೊಂಡು, ಆ ಬೀಜವನ್ನು ಅಳಿಸಿ ಹಾಕಿದ್ದರೆ ಯಾವುದೇ ಪ್ರತಿಭಟನೆ, ಹಿಂಸಾಚಾರ ನಡೆಯುತ್ತಿರಲಿಲ್ಲ. ಹಾಗಾದರೆ ಯಾಕೆ ಅವನ ಮೇಲೆ ಪೊಲೀಸರು ಕ್ರಮ ಕೈಗೊಳ್ಳಲಿಲ್ಲ? ಬೀಜವನ್ನು ಮರವಾಗುವುದಕ್ಕೆ ಯಾಕೆ ಬಿಟ್ಟು ಬಿಟ್ಟರು? ಮತ್ತು ತನಿಖೆಯ ಸಂದರ್ಭದಲ್ಲಾದರೂ ವಿಷ ಬೀಜ ಬಿತ್ತಿದವನ ಮೇಲೆ ಮತ್ತು ಅದಕ್ಕೆ ಅವಕಾಶ ಕೊಟ್ಟವರ ಮೇಲೆ ಗಂಭೀರ ಕ್ರಮ ತೆಗೆದುಕೊಳ್ಳದೆ, ವಿಷ ಬೀಜದ ವಿರುದ್ಧ ಪ್ರತಿಭಟನೆ ಮಾಡಿದವರನ್ನಷ್ಟೇ ಪೊಲೀಸರು ಹೊಣೆ ಮಾಡುವುದು ಎಷ್ಟು ಸರಿ? ಇಷ್ಟಕ್ಕೂ ಪ್ರತಿಭಟನೆ ಹಿಂಸಾಚಾರ ರೂಪ ಪಡೆಯುವುದರಲ್ಲಿ ಪೊಲೀಸರ ಪಾತ್ರವೆಷ್ಟು? ಬೆಂಗಳೂರು ಗಲಭೆಗೆ ಸಂಬಂಧಿಸಿದಂತೆ ಮೇಲಿನೆಲ್ಲ ಪ್ರಶ್ನೆಗಳನ್ನು ನಾಡಿನ ಪ್ರಜ್ಞಾವಂತರು ಮತ್ತೆ ಮತ್ತೆ ಕೇಳುತ್ತಿದ್ದಾರೆ. ಇದೀಗ ನಾಗರಿಕ ಸಂಘಟನೆಗಳ ಸತ್ಯ ಶೋಧನಾ ಸಮಿತಿಯೂ ಈ ಪ್ರಶ್ನೆಗಳನ್ನು ಎತ್ತಿಕೊಂಡಿದೆ.

ಈ ಕುರಿತಂತೆ ವರದಿಯೊಂದನ್ನು ತಯಾರಿಸಿ ಶಿಫಾರಸುಗಳನ್ನು ಮಾಡಿದೆ. ದೂರದ ದಿಲ್ಲಿ ಗಲಭೆಯ ತನಿಖೆಯ ಮಾದರಿಯನ್ನು ಬೆಂಗಳೂರಿನಲ್ಲಿ ಪೊಲೀಸರು ಅನುಸರಿಸುತ್ತಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ದಿಲ್ಲಿ ಹಿಂಸಾಚಾರದಲ್ಲಿ ಪೊಲೀಸರು ತನಿಖೆಯ ಹೆಸರಿನಲ್ಲಿ ಸಂತ್ರಸ್ತರ ಮೇಲೆ ಇನ್ನೊಂದು ದಾಳಿಯನ್ನು ನಡೆಸುತ್ತಿದ್ದಾರೆ. ಗಲಭೆಯ ಹಿಂದಿರುವ ಶಕ್ತಿಗಳನ್ನು ಗುರುತಿಸಿ, ಅವರ ಕುತ್ತಿಗೆಗೆ ಕಾನೂನಿನ ಕುಣಿಕೆ ಹಾಕಿ, ದಿಲ್ಲಿಯ ಶಾಂತಿ ಸೌಹಾರ್ದವನ್ನು ಕಾಪಾಡುವ ಬದಲು ದಿಲ್ಲಿಯ ಅಮಾಯಕರನ್ನು ಬಂಧಿಸುವ ಮೂಲಕ ಇನ್ನಷ್ಟು ಅರಾಜಕತೆಯನ್ನು ಸೃಷ್ಟಿಸುತ್ತಿದ್ದಾರೆ. ದಿಲ್ಲಿ ಗಲಭೆಯಲ್ಲೂ ಪೊಲೀಸರ ವೈಫಲ್ಯವನ್ನು ಮಾಧ್ಯಮಗಳು ಗುರುತಿಸಿವೆ. ಪೊಲೀಸರು ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ್ದರೆ ದಿಲ್ಲಿ ಹಿಂಸಾಚಾರವೇ ನಡೆಯುತ್ತಿರಲಿಲ್ಲ ಎನ್ನುವುದು ಮಾಧ್ಯಮಗಳ ಅಭಿಮತ. ಅಂದರೆ ದಿಲ್ಲಿ ಗಲಭೆಯಲ್ಲಿ ಪೊಲೀಸರೂ ಆರೋಪಿ ಸ್ಥಾನದಲ್ಲಿ ನಿಂತಿದ್ದಾರೆ. ಆರೋಪಿ ಸ್ಥಾನದಲ್ಲಿ ನಿಂತವರೇ ನಡೆಸುತ್ತಿರುವ ತನಿಖೆ ಇದಾದುದರಿಂದ, ಅವರು ಸಂತ್ರಸ್ತರನ್ನು ಅಪರಾಧಿಗಳನ್ನಾಗಿ ಮಾಡುವುದು ಸಹಜ. ವಿಪರ್ಯಾಸವೆಂದರೆ, ಸಿಎಎ ವಿರೋಧಿ ಪ್ರತಿಭಟನಾಕಾರರನ್ನೇ ಆರೋಪಿಗಳಾಗಿ ಪೊಲೀಸರು ಗುರುತಿಸಿರುವುದು. ದಿಲ್ಲಿಯ ಅಮಾಯಕರ ಮೇಲೆ ದಾಳಿಗೆ ಬಹಿರಂಗವಾಗಿ ಕರೆಕೊಟ್ಟ, ಪ್ರತಿಭಟನಾಕಾರರ ಮೇಲೆ ಗೋಲಿ ಬಾರ್ ನಡೆಸಿದವರೆಲ್ಲ ಈ ಪೊಲೀಸರ ಪಾಲಿಗೆ ‘ದೇಶಪ್ರೇಮಿ’ಗಳಾಗಿ ಕಾಣಿಸುತ್ತಿದ್ದಾರೆ.

ಬೆಂಗಳೂರಿನ ಗಲಭೆ ತನಿಖೆ ಈ ನಿಟ್ಟಿನಲ್ಲಿ ದಿಲ್ಲಿ ಪೊಲೀಸರ ತನಿಖೆಯ ಒಂದು ಅಣಕು. ಹಿಂಸಾಚಾರ ಪ್ರಚೋದಿಸಿದವರನ್ನು ಕೈ ಬಿಟ್ಟು, ಪ್ರಚೋದಿತರನ್ನಷ್ಟೇ ಆರೋಪಿಗಳನ್ನಾಗಿಸಿ ಜೈಲಿಗೆ ತಳ್ಳುವ ಕೆಲಸ ನಡೆಯುತ್ತಿದೆ. ಅಷ್ಟೇ ಅಲ್ಲ, ರಾಜಕೀಯ ಶಕ್ತಿಗಳೂ ಈ ತನಿಖೆಯನ್ನು ತಮ್ಮ ಹಿತಾಸಕ್ತಿಗೆ ಪೂರಕವಾಗಿ ಬಳಸಿಕೊಳ್ಳುತ್ತಿವೆ. ಆದುದರಿಂದಲೇ ಗಲಭೆಯಲ್ಲಿ ಭಾಗವಹಿಸಿದವರಷ್ಟೇ ಅಲ್ಲದೆ, ಹಲವು ಅಮಾಯಕರೂ ಬಂಧನಕ್ಕೊಳಗಾಗುತ್ತಿದ್ದಾರೆ. ಸಂಘರ್ಷದಲ್ಲಿ ಪೊಲೀಸರ ಗೋಲಿಬಾರ್‌ನಿಂದ ನಾಲ್ಕು ಜೀವಗಳು ಬಲಿಯಾಗಿವೆಯೇ ಹೊರತು, ಪ್ರತಿಭಟನಾಕಾರರ ಹಿಂಸಾಚಾರದಿಂದ ಅಲ್ಲ ಎನ್ನುವುದನ್ನು ಮೊದಲು ಗಮನಿಸಬೇಕಾಗಿದೆ. ಪ್ರವಾದಿ ನಿಂದನೆ ಮಾಡಿದವನ ಕುರಿತಂತೆ ಪೊಲೀಸರ ಮೃದು ವರ್ತನೆ, ಆರೋಪಿಯನ್ನು ಬಂಧಿಸುವುದು ಬಿಡಿ, ಪ್ರತಿಭಟನಾಕಾರರ ಅಳಲನ್ನೇ ಕೇಳಲು ಸಿದ್ಧವಿಲ್ಲದ ಪೊಲೀಸರ ಮನಸ್ಥಿತಿ ಪ್ರತಿಭಟನೆಗಾಗಿ ಸೇರಿದ ಜನರನ್ನು ಕೆರಳಿಸಿದೆ. ಅಂದರೆ, ಜನರು ಪ್ರಚೋದನೆಗೊಂಡು ಗಲಭೆ ನಡೆಸಬೇಕು ಎನ್ನುವುದು ಪೊಲೀಸರ ಉದ್ದೇಶವೂ ಆಗಿತ್ತೇ? ಎಂಬ ಪ್ರಶ್ನೆಗೂ ಉತ್ತರ ಕಂಡು ಕೊಳ್ಳಬೇಕಾಗಿದೆ.

ಆರೋಪಿಯ ಬಂಧನಕ್ಕೆ ಮೀನಾಮೇಷ, ಪ್ರತಿಭಟನಾಕಾರರನ್ನು ನಿಭಾಯಿಸುವಲ್ಲಿ ಪೊಲೀಸರ ವೈಫಲ್ಯ, ಏಕಾಏಕಿ ಪೊಲೀಸರ ಗೋಲಿಬಾರ್ ಇವೆಲ್ಲವೂ ನೆರೆದ ಜನರನ್ನು ಪ್ರಚೋದಿಸಿತು. ಈಗ ಪೊಲೀಸರು ಇಡೀ ಗಲಭೆಯನ್ನು ಕೋಮುಗಲಭೆ ಎಂದು ಬಿಂಬಿಸಲು ಯತ್ನಿಸುತ್ತಿದ್ದಾರೆ. ಆದರೆ ಸಂಘರ್ಷ ನಡೆದಿರುವುದು ವ್ಯವಸ್ಥೆ ಮತ್ತು ಜನರ ನಡುವೆ. ಪೊಲೀಸರ ಮೇಲಿನ ಆಕ್ರೋಶದಿಂದ ಜನರು ಸಾರ್ವಜನಿಕ ಸೊತ್ತುಗಳನ್ನು ನಾಶ ಮಾಡಿದರು. ಆದರೆ ಯಾವುದೇ ಸಮುದಾಯವನ್ನು ಗುರಿಯಿಟ್ಟು ಅವರು ಹಿಂಸಾಚಾರ ಎಸಗಿಲ್ಲ. ಆದರೂ ಪ್ರತಿಭಟನಾಕಾರರ ಈ ವರ್ತನೆ ಎಲ್ಲ ರೀತಿಯಲ್ಲೂ ಅಪರಾಧವೇ ಆಗಿದೆ. ಯಾರೆಲ್ಲ ಸಾರ್ವಜನಿಕ ಸೊತ್ತು ನಾಶದಲ್ಲಿ ಭಾಗವಹಿಸಿದ್ದಾರೋ ಅವರೆಲ್ಲರಿಗೂ ಶಿಕ್ಷೆಯಾಗಬೇಕಾಗಿದೆ. ಇದೇ ಸಂದರ್ಭದಲ್ಲಿ ಅವರನ್ನು ಆ ಕೃತ್ಯಕ್ಕೆ ಪ್ರಚೋದಿಸಿದವರನ್ನೂ ಗುರುತಿಸಿ ಶಿಕ್ಷಿಸುವ ಕೆಲಸ ನಡೆಯಬೇಕಾಗಿದೆ. ಆದರೆ ಆರೋಪಿಗಳೇ ತನಿಖೆ ನಡೆಸಿ ಅವರೇ ತಮಗೆ ಶಿಕ್ಷೆ ವಿಧಿಸಿಕೊಳ್ಳುತ್ತಾರೆ ಎನ್ನುವುದನ್ನು ನಂಬುವುದು ಹೇಗೆ?.

ಬೆಂಗಳೂರು ಗಲಭೆಯ ಬೀಜ ಬಿತ್ತಿದವರು ಯಾರು ಎನ್ನುವುದರಿಂದ ತನಿಖೆ ಆರಂಭವಾಗಬೇಕಾಗಿದೆ. ಜೊತೆಗೆ ಸೈಬರ್ ಪೊಲೀಸರು ಅವರ ವಿರುದ್ಧ ತಕ್ಷಣ ಕ್ರಮ ತೆಗೆದುಕೊಳ್ಳದೇ ಇದ್ದುದು ಯಾಕೆ? ವಿಷ ಬೀಜ ಬಿತ್ತಿದವನನ್ನು ತಕ್ಷಣವೇ ಕಸ್ಟಡಿಗೆ ತೆಗೆದುಕೊಂಡಿದ್ದರೆ ಪೊಲೀಸ್ ಠಾಣೆಯ ಮುಂದೆ ಜನರೇ ಸೇರುತ್ತಿರಲಿಲ್ಲ. ಆತನನ್ನು ಬಂಧಿಸದಂತೆ ಪೊಲೀಸರನ್ನು ತಡೆದ ಕೈಗಳು ಯಾರದ್ದು? ಮೊದಲಾದ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳದೆ ತನಿಖೆ ಪೂರ್ತಿಯಾಗುವುದಿಲ್ಲ. ಇವನ್ನು ಹೊರತು ಪಡಿಸಿ, ಪೊಲೀಸ್ ಠಾಣೆಯ ಮುಂದೆ ನೆರೆದ ಜನರನ್ನು ಬಂಧಿಸಿ ಜೈಲಿಗೆ ತಳ್ಳುವುದಷ್ಟೇ ತನಿಖೆಯ ಉದ್ದೇಶವೆಂದಾದರೆ ಅದನ್ನು ಸೇಡಿನ ಕ್ರಮ ಎಂದು ಕರೆಯಬೇಕಾಗುತ್ತದೆ. ಆದುದರಿಂದ ಬೆಂಗಳೂರು ಗಲಭೆಗೆ ಸಂಬಂಧಿಸಿದ ತನಿಖೆಯನ್ನು ಸ್ವತಂತ್ರ ಸಂಸ್ಥೆಗೆ ಒಪ್ಪಿಸಬೇಕು. ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆದು, ಈ ಗಲಭೆಯ ಹಿಂದೆ ರಾಜಕೀಯ ಶಕ್ತಿಗಳಿದ್ದರೆ ಅವರನ್ನು ಗುರುತಿಸುವ ಕೆಲಸ ನಡೆಯಬೇಕು. ಅಷ್ಟೇ ಅಲ್ಲದೆ, ಕೇವಲ ಬಡ ಕೂಲಿ ಕಾರ್ಮಿಕರನ್ನು ಗಲಭೆಕೋರರು ಎಂದು ಬಂಧಿಸಿ ನಾಶ, ನಷ್ಟಕ್ಕೆ ಸಂಬಂಧಿಸಿ ಅವರ ಸೊತ್ತುಗಳನ್ನು ವಶಪಡಿಸಿಕೊಳ್ಳುವುದು ಇನ್ನೊಂದು ರೀತಿಯ ಹಿಂಸಾಚಾರವೇ ಸರಿ.

ವ್ಯವಸ್ಥೆಯೂ ಈ ಹಿಂಸಾಚಾರದಲ್ಲಿ ನೇರವಾಗಿ ಭಾಗವಹಿಸಿದಂತಾಗುತ್ತದೆ. ನಿಜಕ್ಕೂ ಸೊತ್ತುಗಳನ್ನು ವಶಪಡಿಸಿಕೊಳ್ಳುವುದಿದ್ದರೆ, ಪ್ರವಾದಿ ನಿಂದನೆಗೈದು ಜನರನ್ನು ಪ್ರಚೋದಿಸಿ ಹಿಂಸಾಚಾರಕ್ಕೆ ಪ್ರೇರೇಪಿಸಿದ ನವೀನ್ ಕುಟುಂಬದ ಸೊತ್ತುಗಳನ್ನು ವಶಪಡಿಸಿಕೊಳ್ಳಬೇಕು ಅಥವಾ ಆತನಿಂದ ಈ ಕೃತ್ಯವನ್ನು ಯಾವ ರಾಜಕೀಯ ನಾಯಕರು ಮಾಡಿಸಿದ್ದಾರೆಯೋ ಅವರಿಂದ ವಶಪಡಿಸಿಕೊಳ್ಳಬೇಕು. ಹಾಗಾದಾಗ ಮಾತ್ರ ಈ ರಾಜ್ಯದಲ್ಲಿ ಪದೇ ಪದೇ ನಡೆಯುವ ಗಲಭೆಗಳಿಗೆ ಕಡಿವಾಣ ಹಾಕಬಹುದು. ಸಂತ್ರಸ್ತರಿಗೂ ನ್ಯಾಯವನ್ನು ನೀಡಬಹುದು. ತನಿಖೆಯ ಉದ್ದೇಶ ಕೇವಲ ಆರೋಪಿಗಳಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳುವುದು ಮಾತ್ರವಲ್ಲ, ಮುಂದೆ ಅಂತಹ ಘಟನೆ ನಡೆಯದಂತೆ ನೋಡಿಕೊಳ್ಳುವುದು ಕೂಡ. ಅದು ನಡೆಯಬೇಕಾದರೆ ಬೀಜ ಬಿತ್ತಿದವನಿಗೂ, ಹಾಗೆ ಬಿತ್ತಲು ಪ್ರೋತ್ಸಾಹಿಸಿದವನಿಗೂ ಶಿಕ್ಷೆಯಾಗಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News