ನಾಗರಿಕ ಸೇವಾ ಪರೀಕ್ಷೆಯಿಂದ ಸಿಎಸ್‌ಎಟಿ ಕೈಬಿಡುವ ಪ್ರಶ್ನೆಯೇ ಇಲ್ಲ: ಕೇಂದ್ರ ಸ್ಪಷ್ಟನೆ

Update: 2020-09-17 17:39 GMT

ಹೊಸದಿಲ್ಲಿ, ಸೆ. 17: ನಾಗರಿಕ ಸೇವಾ ಪರೀಕ್ಷೆಯಿಂದ ಸಿವಿಲ್ ಸರ್ವೀಸಸ್ ಆ್ಯಪ್ಟಿಟ್ಯೂಡ್ ಟೆಸ್ಟ್ (ಸಿಎಸ್‌ಎಟಿ) ಅನ್ನು ಕೈಬಿಡುವ ಯೋಚನೆ ಇಲ್ಲ ಎಂದು ಕೇಂದ್ರ ಸರಕಾರ ಗುರುವಾರ ಸ್ಪಷ್ಟಪಡಿಸಿದೆ.

 ಕೇಂದ್ರ ಲೋಕ ಸೇವಾ ಆಯೋಗ (ಯುಪಿಎಸ್‌ಸಿ) ಐಎಎಸ್, ಐಎಫ್‌ಎಸ್ ಹಾಗೂ ಐಪಿಎಸ್ ಹುದ್ದೆಗಳಿಗೆ ಆಯ್ಕೆ ಮಾಡಲು ವರ್ಷಕ್ಕೊಮ್ಮೆ ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ಹಾಗೂ ಸಂದರ್ಶನ ಒಳಗೊಂಡ ಮೂರು ಹಂತಗಳ ನಾಗರಿಕ ಸೇವಾ ಪರೀಕ್ಷೆಯನ್ನು ನಡೆಸುತ್ತದೆ. ಸಿಎಸ್‌ಎಟಿ ಪೂರ್ವಭಾವಿ ಪರೀಕ್ಷೆಯ ಒಂದು ಭಾಗವಾಗಿದೆ. ರಾಜ್ಯಸಭೆಯಲ್ಲಿ ಕೇಳಿದ ಸಿಎಸ್‌ಎಟಿ ಕೈಬಿಡುವ ಚಿಂತನೆ ಇದೆಯೇ ಎಂಬ ಪ್ರಶ್ನೆಗೆ ಲಿಖಿತ ಪ್ರತಿಕ್ರಿಯೆ ನೀಡಿದ ಕೇಂದ್ರ ಸಿಬ್ಬಂದಿ, ಸಾರ್ವಜನಿಕ ಕುಂದು ಕೊರತೆ ಹಾಗೂ ಪಿಂಚಣಿ ಖಾತೆಯ ಸಹಾಯಕ ಸಚಿವ ಜಿತೇಂದ್ರ ಸಿಂಗ್, ‘ಇಲ್ಲ’ ಎಂದರು.

 ಸಂದರ್ಶನದ ಬದಲಿಗೆ ಮಾನಸಿಕ ಪರೀಕ್ಷೆ ನಡೆಸುವುದು ಸೇರಿದಂತೆ ಕೇಂದ್ರ ಲೋಕಸೇವಾ ಆಯೋಗದ ನಾಗರಿಕ ಸೇವಾ ಪರೀಕ್ಷೆಯ ಮಾದರಿಯಲ್ಲಿ ಸರಕಾರ ಬದಲಾವಣೆ ತರಲಿದೆಯೇ ಎಂಬ ಪ್ರಶ್ನೆಗೆ ಅವರು ‘ಇಲ್ಲ’ ಎಂದರು. ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್‌ಟಿಎ)ಯು ಉನ್ನತ ಶಿಕ್ಷಣ ಸಂಸ್ಥೆಗಳ ದಾಖಲಾತಿ/ಫೆಲೋಶಿಪ್‌ಗೆ ಪ್ರವೇಶ ಪರೀಕ್ಷೆ ನಡೆಸುತ್ತದೆ. ಯುಪಿಎಸ್‌ಸಿಯಲ್ಲಿರುವ ಈಗಿರುವ ಸಂದರ್ಶನದ ಬದಲು ಮಾನಸಿಕ ಪರೀಕ್ಷೆ ನಡೆಸುವ ಚಿಂತನೆ ಇಲ್ಲ ಎಂದು ಎನ್‌ಟಿಎ ಮಾಹಿತಿ ನೀಡಿದೆ ಎಂದು ಅವರು ಹೇಳಿದರು.

ಕೊರೋನ ಬಿಕ್ಕಟ್ಟಿನಿಂದಾಗಿ 2020 ಸಾಲಿನ ಯುಪಿಎಸ್‌ಸಿ ಪರೀಕ್ಷೆಗೆ ನಿಗದಿಯಂತೆ ಎಪ್ರಿಲ್‌ನಲ್ಲಿ ಅಧಿಸೂಚನೆ ಹೊರಡಿಸಲು ಸಾಧ್ಯವಾಗಲಿಲ್ಲ. ಕೊರೋನ ಕಾರಣದಿಂದ ಕಂಬೈನ್ಡ್ ಗ್ರಾಜುವೇಟ್ ಲೆವೆಲ್ ಎಕ್ಸಾಮಿನೇಷನ್-2018 ಟಯರ್-3 ಪರೀಕ್ಷಾ ಫಲಿತಾಂಶ ವಿಳಂಬವಾಗಿದೆ. ಫಲಿತಾಂಶವನ್ನು ಆದಷ್ಟು ಬೇಗ ಪ್ರಕಟಿಸಲು ಪ್ರಯತ್ನಿಸುತ್ತೇವೆ ಎಂದು ಜಿತೇಂದ್ರ ಸಿಂಗ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News