ಅಮೆರಿಕದ ಉನ್ನತ ಮಟ್ಟದ ಅಧಿಕಾರಿಯಿಂದ ತೈವಾನ್ ಭೇಟಿ

Update: 2020-09-18 16:51 GMT

ಬೀಜಿಂಗ್, ಸೆ. 18: ತೈವಾನ್‌ಗೆ ಭೇಟಿ ನೀಡಿರುವ ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ರಾಜಧಾನಿ ತೈಪೆಯಲ್ಲಿ ಶುಕ್ರವಾರ ಉನ್ನತ ಮಟ್ಟದ ಮಾತುಕತೆಗಳನ್ನು ಆರಂಭಿಸುತ್ತಿರುವಂತೆಯೇ, ಚೀನಾವು ತೈವಾನ್ ಜಲಸಂಧಿಯ ಸಮೀಪ ಯುದ್ಧಾಭ್ಯಾಸ ಆರಂಭಿಸಿದೆ.

ತೈವಾನ್ ತನಗೆ ಸೇರಿದ್ದೆಂದು ಚೀನಾ ಹೇಳಿಕೊಳ್ಳುತ್ತಿದ್ದು, ಅಮೆರಿಕ ಮತ್ತು ತೈವಾನ್ ನಡುವಿನ ಸರಕಾರಿ ಮಟ್ಟದ ಸಂಬಂಧವನ್ನು ಅದು ವಿರೋಧಿಸಿದೆ. ಇದೇ ಸಂದರ್ಭದಲ್ಲಿ ಅದು ತೈವಾನ್ ದ್ವೀಪದ ಸಮೀಪ ಸೇನಾಭ್ಯಾಸವನ್ನು ಹೆಚ್ಚಿಸಿದೆ. ಕಳೆದ ವಾರ ಅದು ಎರಡು ದಿನಗಳ ಸೇನಾಭ್ಯಾಸ ನಡೆಸಿತ್ತು. ಆ ಸಂದರ್ಭದಲ್ಲಿ ಬೃಹತ್ ಪ್ರಮಾಣದಲ್ಲಿ ವಾಯು ಮತ್ತು ಸಮುದ್ರ ಕಸರತ್ತುಗಳನ್ನು ನಡೆಸಿತ್ತು.

ಶುಕ್ರವಾರದ ಸೇನಾಭ್ಯಾಸವು ತೈವಾನ್ ಜಲಸಂಧಿಯ ಸಮೀಪ ನಡೆಯುತ್ತಿದೆ ಹಾಗೂ ಅದರಲ್ಲಿ ಚೀನಾದ ಸೇನೆ ‘ಪೀಪಲ್ಸ್ ಲಿಬರೇಶನ್ ಆರ್ಮಿ’ಯು ಭಾಗವಹಿಸುತ್ತಿದೆ ಎಂದು ಚೀನಾದ ರಕ್ಷಣಾ ಸಚಿವಾಲಯದ ವಕ್ತಾರ ರೆನ್ ಗ್ವೋಕಿಯಂಗ್ ಹೇಳಿದರು. ಆದರೆ, ಅವರು ಹೆಚ್ಚಿನ ವಿವರಗಳನ್ನು ನೀಡಲು ನಿರಾಕರಿಸಿದರು.

ಅಮೆರಿಕದ ಆರ್ಥಿಕ ವ್ಯವಹಾರಗಳ ಇಲಾಖೆಯ ಅಧೀನ ಕಾರ್ಯದರ್ಶಿ ಕೀತ್ ಕ್ರಾಚ್ ಶುಕ್ರವಾರ ತೈವಾನ್‌ನಲ್ಲಿ ಹಲವು ಸರಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಆದರೆ, ಅವರು ಯವುದೇ ಸಾರ್ವಜನಿಕ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News