‘ಒಂದು ಸಮುದಾಯವನ್ನು ಗುರಿ ಮಾಡಬಾರದು ಎಂಬ ಸಂದೇಶ ಮಾಧ್ಯಮಗಳಿಗೆ ತಲುಪಲಿ’

Update: 2020-09-18 17:47 GMT

ಹೊಸದಿಲ್ಲಿ,ಸೆ.15: ಸರಕಾರಿ ಸೇವೆಗೆ ಮುಸ್ಲಿಮರ ಒಳನುಸುಳುವಿಕೆ ಮಾಡುವ ಸಂಚನ್ನು ಬಯಲಿಗೆಳೆದಿರುವುದಾಗಿ ಹೇಳಿಕೊಂಡು ಸುದರ್ಶನ್ ಟಿವಿ ಪ್ರಸಾರ ಮಾಡಿದ ವಿವಾದಿತ ‘ಬಿಂದಾಸ್ ಬೋಲ್’ ಕಾರ್ಯಕ್ರಮದ ಬಗ್ಗೆ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಒಂದು ನಿರ್ದಿಷ್ಟ ಸಮುದಾಯವನ್ನು ಗುರಿ ಮಾಡಕೂಡದೆಂಬ ಸಂದೇಶವನ್ನು ಮಾಧ್ಯಮಗಳಿಗೆ ನೀಡಬೇಕಾಗಿದೆ ಎಂದು ಅದು ಅಭಿಪ್ರಾಯಿಸಿದೆ.

  ಬಿಂದಾಸ್ ಬೋಲ್ ಕಾರ್ಯಕ್ರಮದ ವಿವಾದಿತ ಎಪಿಸೋಡ್ ಗಳನ್ನು ಪ್ರಸಾರ ಮಾಡದಂತೆ ಸುಪ್ರೀಂಕೋರ್ಟ್ ಸೆಪ್ಟೆಂಬರ್ 15ರಂದು ತಡೆಯಾಜ್ಞೆ ನೀಡಿತ್ತು. ಈ ಎಪಿಸೋಡ್‌ಗಳು ಮುಸ್ಲಿಮರನ್ನು ಕೆಟ್ಟದಾಗಿ ಬಿಂಬಿಸಲು ಯತ್ನಿಸಿವೆಯೆಂದು ಅದು ಆಕ್ಷೇಪ ವ್ಯಕ್ತಪಡಿಸಿತ್ತು.

    ‘‘ ಈ ಟಿವಿ ಕಾರ್ಯಕ್ರಮದಲ್ಲಿ ಹಿನ್ನೆಲೆಯಲ್ಲಿ ಬೆಂಕಿಯ ಜ್ವಾಲೆಗಳೊಂದಿಗೆ, ಗಡ್ಡ, ಸ್ಕಲ್ ಕ್ಯಾಪ್ ಹಾಗೂ ಹಸಿರು ಬಣ್ಣದ ಮುಸ್ಲಿಂ ವ್ಯಕ್ತಿಯ ರೇಖಾಚಿತ್ರವನ್ನು ಪ್ರದರ್ಶಿಸಲಾಗಿತ್ತು’’ ಎಂದು ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿತು.

 ಸುದರ್ಶನ್ ಟಿವಿಯಲ್ಲಿ ಈ ವಿಷಯವಾಗಿ ಪ್ರಸಾರವಾರ ಚರ್ಚಾ ಕಾರ್ಯಕ್ರಮದಲ್ಲಿ, ‘ಚೋರ್ ಕಾ ದಾಡಿ ಮೇ ಟಿಂಕಾ’, ಎಂಬಿತ್ಯಾದಿ ಆಕ್ಷೇಪಕಾರಿ ಪದಗಳನ್ನು ಒಳಗೊಂಡಿತ್ತು ಎಂದು ನ್ಯಾಯಮೂರ್ತಿ ಚಂದ್ರಚೂಡ್ ತಿಳಿಸಿದರು.

 ‘‘ ಇದೊಂದು ನೈಜವಾದ ಸಮಸ್ಯೆ. ಅವರು ನಾಗರಿಕ ಸೇವೆಗಳನ್ನು ಸೇರ್ಪಡೆಗೊಳ್ಳುತ್ತಿರುವುದನ್ನು ತೋರಿಸುತ್ತಿರುವಾಗ ನೀವು ಐಸಿಸ್ ಅನ್ನು ಕೂಡಾ ತೋರಿಸುತ್ತೀರಿ. ಮುಸ್ಲಿಮರು ನಾಗರಿಕ ಸೇವೆಗಳಿಗೆ ಸೇರ್ಪಡೆಗೊಳ್ಳುತ್ತಿರುವುದಾಗ ಆಳವಾದ ಸಂಚೊಂದರ ಭಾಗವಾಗಿದೆ ಎಂದು ಹೇಳುತ್ತೀರಿ. ಮಾಧ್ಯಮಗಳಿಗೆ ಸಮುದಾಯಗಳನ್ನು ಗುರಿಯಿರಿಸುವುದಕ್ಕೆ ಅನುಮತಿ ನೀಡಲು ಸಾಧ್ಯವೇ ? ನ್ಯಾಯಮೂರ್ತಿಗಳಾದ ಇದು ಮಲ್ಹೋತ್ರಾ ಹಾಗೂ ಕೆ.ಎಂ.ಜೋಸೆಫ್ ಅವರನ್ನು ಕೂಡಾ ಒಳಗೊಂಡಿರುವ ನಾಯಪೀಠ ಪ್ರಶ್ನಿಸಿತು.

 ಒಂದು ಸಮುದಾಯದ ಎಲ್ಲಾ (ನಾಗರಿಕಸೇವಾ) ಅಭ್ಯರ್ಥಿಗಳು ನಿರ್ದಿಷ್ಟ ಕಾರ್ಯಸೂಚಿಯೊಂದನ್ನು ಹೊಂದಿದ್ದಾರೆ ಎಂಬಂತೆ ಬಿಂಬಿಸುವುದು, ಒಂದು ರೀತಿಯ ದ್ವೇಷದ ಭಾವನೆಯಾಗಿದೆ. ಇದು ಕಳವಳಕಾರಿಯಾದುದು’’ ನ್ಯಾಯಪೀಠವು, ಸುದರ್ಶನ್ ಟಿವಿ ಪರವಾಗಿ ವಾದಿಸಿದ ವಕೀಲ ಶ್ಯಾಮ್ ದಿವಾನ್ ಅವರಿಗೆ ತಿಲಿಸಿತು.

ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಈ ಆಲಿಕೆಯ ಸಂದರ್ಭದಲ್ಲಿ ದಿವಾನ್‌ ಅವರು ಯಾವುದೇ ಸಮುದಾಯದ ವ್ಯಕ್ತಿಯು ಅರ್ಹತೆಯ ಆಧಾರದಲ್ಲಿ ನಾಗರಿಕ ಸೇವೆಗಳಿಗೆ ಸೇರ್ಪಡೆಗೊಳ್ಳುವುದಕ್ಕೆ ಸುದರ್ಶನ್ ಟಿವಿ ಚಾನೆಲ್‌ನ ಆಕ್ಷೇಪ ಇಲ್ಲವೆಂದು ಸ್ಪಷ್ಟಪಡಿಸಿದರು.

 ನ್ಯಾಯಾಲಯವು ಬೆಟ್ಟು ಮಾಡಿ ತೋರಿಸಿರುವ ಕಾರ್ಯಕ್ರಮದಲಿರುವ ವಿವಾದಾತ್ಮಕ ವಿಷಯಗಳ ಕುರಿತಾಗಿ ಚಾನೆಲ್ ಅಫಿಡವಿಟ್ ಒಂದನ್ನು ಸಲ್ಲಿಸಲಿದೆಯೆಂದು ದಿವಾನ್ ಅವರು ನ್ಯಾಯಪೀಠಕ್ಕೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News