2019ರ ಲೋಕಸಭಾ ಚುನಾವಣೆಯಲ್ಲಿ ಶಿವಸೇನೆಗೆ ಮತ ಹಾಕಲು ಬಲವಂತ ಮಾಡಲಾಗಿತ್ತು ಎಂಬ ಕಂಗನಾ ಹೇಳಿಕೆ ಸುಳ್ಳು!

Update: 2020-09-19 06:26 GMT

ಮುಂಬೈ, ಸೆ.19: ಮುಂಬೈ ಮಹಾನಗರವನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿ ವಿವಾದದ ಕೇಂದ್ರಬಿಂದುವಾಗಿದ್ದ ಬಾಲಿವುಡ್ ನಟಿ ಕಂಗನಾ ರಾಣಾವತ್, 'ಟೈಮ್ಸ್ ನೌ'ಗೆ ನೀಡಿದ ಸಂದರ್ಶನದಲ್ಲಿ, "ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮಿತ್ರಪಕ್ಷವಾಗಿದ್ದ ಶಿವಸೇನೆ ಪರ ಮತ ಚಲಾಯಿಸುವಂತೆ ನನ್ನ ಮೇಲೆ ಒತ್ತಡ ಇತ್ತು" ಎಂದು ಹೇಳಿದ್ದರು. "ನಾನು ಬಿಜೆಪಿಯನ್ನು ಬೆಂಬಲಿಸುವವಳು. ಶಿವಸೇನೆಗೆ ಯಾಕೆ ಮತ ಹಾಕಬೇಕು" ಎಂದು ಪ್ರಶ್ನಿಸಿದ್ದರು.

ಆದರೆ ರಾಣಾವತ್ ಅವರ ಪ್ರತಿಪಾದನೆ ಸತ್ಯಾಂಶದಿಂದ ಕೂಡಿಲ್ಲ ಎನ್ನುವುದನ್ನು ಇಂಡಿಯಾ ಟುಡೇ ಡೆಪ್ಯುಟಿ ಎಡಿಟರ್ ಕಮಲೇಶ್ ಸುತಾರ್ ನಿರೂಪಿಸಿದ್ದಾರೆ. "ಮಹಾರಾಷ್ಟ್ರ ಮುಖ್ಯ ಚುನಾವಣಾ ಅಧಿಕಾರಿ ಕಚೇರಿಯ ದಾಖಲೆಗಳ ಪ್ರಕಾರ, ಕಂಗನಾ ಮತ ಚಲಾಯಿಸಿರುವುದು ಬಂದ್ರಾ ಪಶ್ಚಿಮ ಕ್ಷೇತ್ರದಲ್ಲಿ. 2019ರಲ್ಲಿ ಇಲ್ಲಿ ಬಿಜೆಪಿಯ ಆಶೀಶ್ ಶೆಲರ್ ಸೇನೆ-ಬಿಜೆಪಿ ಅಭ್ಯರ್ಥಿಯಾಗಿದ್ದರು. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಪೂನಮ್ ಮಹಾಜನ್ ಗೆಲುವು ಸಾಧಿಸಿದ್ದರು" ಎಂದು ವಿವರಿಸಿದ್ದಾರೆ.

ಸುತಾರ್ ಅವರ ಟ್ವೀಟ್ ಬಗ್ಗೆ ಪ್ರತಿಕ್ರಿಯಿಸಿರುವ ರಾಣಾವತ್, "ಜಾಣ ಸುಳ್ಳನ್ನು ಹರಡಲಾಗುತ್ತಿದೆ. ಇದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು" ಎಂದು ಎಚ್ಚರಿಸಿದ್ದಾರೆ. "ನಾನು ಲೋಕಸಭಾ ಚುನಾವಣೆ ಬಗ್ಗೆ ಮಾತನಾಡುತ್ತಿದ್ದೇನೆ. ಆದರೆ ಅವರು ಉದ್ದೇಶಪೂರ್ವಕವಾಗಿ ವಿಧಾನಸಭಾ ಚುನಾವಣೆ ಬಗ್ಗೆ ಮಾತನಾಡುತ್ತಿದ್ದಾರೆ" ಎಂದು ಹೇಳಿದ್ದಾರೆ.

ಆದರೆ ಸುತಾರ್ ಅವರ ಪ್ರತಿಪಾದನೆ ಸರಿಯಾಗಿದ್ದು, ಲೋಕಸಭೆ ಹಾಗೂ ವಿಧಾನಸಭಾ ಚುನಾವಣೆಗಳೆರಡರಲ್ಲೂ, ರಾಣಾವತ್ ಮತ ಚಲಾಯಿಸಿದ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳಿದ್ದರು. ಬಿಜೆಪಿ- ಶಿವಸೇನೆ ಮೈತ್ರಿಕೂಟದ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News