300 ಕೋಟಿ ರೂ. ಮೌಲ್ಯದ ಬಿಬಿಎಂಪಿ ಆಸ್ತಿ ಕಬಳಿಕೆ ಯತ್ನ ಆರೋಪ; ಶಾಸಕ ಝಮೀರ್ ಅಹ್ಮದ್ ವಿರುದ್ಧ ದೂರು

Update: 2020-09-19 14:37 GMT

ಬೆಂಗಳೂರು, ಸೆ.19: ನಗರದ ಕಾಟನ್‍ಪೇಟೆ ಮುಖ್ಯ ರಸ್ತೆ ಬಳಿ ಇರುವ ಪೀರ್ ಗ್ರೌಂಡ್‍ನ 300 ಕೋಟಿ ರೂ. ಮೌಲ್ಯದ ಎರಡು ಮುಕ್ಕಾಲು ಎಕರೆ ಜಾಗವನ್ನು ಶಾಸಕ ಝಮೀರ್ ಅಹ್ಮದ್ ಖಾನ್ ಅಕ್ರಮವಾಗಿ ತಮ್ಮ ವಶಕ್ಕೆ ಪಡೆಯಲು ಯತ್ನಿಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ಮುಖಂಡ ಎನ್.ಆರ್ ರಮೇಶ್ ಬಿಎಂಟಿಎಫ್‍ಗೆ ದೂರು ನೀಡಿದ್ದಾರೆ.

ಪ್ರಕರಣದ ಕುರಿತು ದೂರಿನಲ್ಲಿ ಉಲ್ಲೆಖಿಸಿರುವ ಅವರು ಸುಮಾರು 1,19,894 ಚದರ ಅಡಿ ವಿಸ್ತೀರ್ಣದ ಜಾಗವನ್ನು ಪಾಲಿಕೆ ವಶಕ್ಕೆ ಪಡೆಯುವಂತೆ 6 ವರ್ಷಗಳ ಹಿಂದೆಯೇ ಹೈಕೋರ್ಟ್ ತೀರ್ಪು ನೀಡಿತ್ತು. ಅಲ್ಲದೇ ಜಾಗಕ್ಕೆ ಕಾಂಪೌಂಡ್ ನಿರ್ಮಿಸಬೇಕೆಂದು ಆದೇಶ ಹೊರಡಿಸಿತ್ತು. ಅದೇ ಪ್ರದೇಶದ ಈಶಾನ್ಯ ಭಾಗದಲ್ಲಿದ್ದ ಸುಮಾರು 18,900 ಚದರ ಅಡಿಯ ಮುಸ್ಲಿಂ ಸ್ಮಶಾನದ ಜಾಗವನ್ನು ಲಡಾಕ್ ಶಾ ವಾಲಿ ಮಸೀದಿಗೆ ನೀಡುವಂತೆ ಸೂಚನೆ ನೀಡಿತ್ತು. ನ್ಯಾಯಾಲಯದ ಆದೇಶದಂತೆ ಮತ್ತು ಸರಕಾರಿ ಆದೇಶದಂತೆ ಸದರಿ ಸ್ವತ್ತಿಗೆ ತಂತಿ ಬೇಲಿ ಹಾಕಲು ತೀರ್ಮಾನ ತೆಗೆದುಕೊಂಡ ಪಾಲಿಕೆಯು ಈ ಸಂಬಂಧ ಟೆಂಡರ್ ಆಹ್ವಾನಿಸಿತ್ತು. ಸಿಎಸ್ ಜಗದೀಶ್ ಎಂಬ ಗುತ್ತಿಗೆದಾರನಿಗೆ 49 ಲಕ್ಷ ರೂ. ವೆಚ್ಚದಲ್ಲಿ ಟೆಂಡರ್ ಸಹ ನೀಡಿತ್ತು.

ಆದರೆ, ಕಳೆದ ಐದಾರು ವರ್ಷಗಳಿಂದಲೂ ಪಾಲಿಕೆಯ ಈ ಸ್ವತ್ತಿಗೆ ಕಾಂಪೌಂಡ್ ಅನ್ನು ನಿರ್ಮಾಣ ಮಾಡಿಯೇ ಇಲ್ಲ. ಖಂಡಿತವಾಗಿಯೂ ಶಾಸಕ ಝಮೀರ್ ಪ್ರಭಾವಕ್ಕೆ ಒಳಗಾಗಿರುವ ಅಧಿಕಾರಿಗಳು ಅಥವಾ ಹೆದರಿರುವ ಅಧಿಕಾರಿಗಳು ಆ ಜಾಗಕ್ಕೆ ಕಂಪೌಂಡ್ ನಿರ್ಮಿಸಲು ಹೆಜ್ಜೆ ಇಟ್ಟಿಲ್ಲ ಎಂದು ದೂರು ನೀಡಿದ್ದಾರೆ.

ಅಲ್ಲದೇ ಝಮೀರ್ ಅಹ್ಮದ್ ಅವರು ಪರೋಕ್ಷವಾಗಿ ಪಾಲಿಕೆ ಆಡಳಿತ ಅಧಿಕಾರಿಗಳಿಗೆ ಬೆದರಿಕೆ ಪತ್ರ ಬರೆದಿದ್ದು, ಕಾಂಪೌಂಡ್ ನಿರ್ಮಾಣ ಮಾಡಲು ಮುಂದಾದರೆ, ಕಾನೂನು ಸುವ್ಯವಸ್ಥೆ ಹಾಳಾಗುವುದು ಹಾಗೂ ಕೋಮು ಗಲಭೆಯಾಗಲಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ ಎಂದು ರಮೇಶ್ ಆರೋಪಿಸಿದ್ದಾರೆ. ನ್ಯಾಯಾಲಯದ ಆದೇಶದಂತೆ ಸರದಿ ಸ್ವತ್ತನ್ನು ಪಾಲಿಕೆ ವಶಕ್ಕೆ ಪಡೆಯಲು ಅವಕಾಶ ನೀಡದೇ ತಮ್ಮ ರಾಜಕೀಯ ಪ್ರಭಾವದಿಂದ ಅಧಿಕಾರಿಗಳ ವಿರುದ್ಧ ಬೆದರಿಕೆ ತಂತ್ರ ಅನುಸರಿಸುತ್ತಿರುವ ಝಮೀರ್ ಅಹ್ಮದ್ ವಿರುದ್ಧ ಸೂಕ್ತ ಕಾನೂನು ಕ್ರಮವಾಗಬೇಕೆಂದು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News