ನಕಲಿ ಎನ್‌ಕೌಂಟರ್‌ಗೆ ಬಲಿಯಾಗಿರುವ ಕಾಶ್ಮೀರ?

Update: 2020-09-21 06:15 GMT

ಕಾಶ್ಮೀರ ‘ರಾಜಕೀಯ ಲಾಕ್‌ಡೌನ್’ಗೆ ಈಡಾದ ಒಂದು ವರ್ಷದ ಬಳಿಕ ಅಧಿವೇಶನದಲ್ಲಿ ಮೊದಲ ಬಾರಿಗೆ ನ್ಯಾಶನಲ್ ಕಾನ್ಫರೆನ್ಸ್ ಮುಖಂಡ ಫಾರೂಕ್ ಅಬ್ದುಲ್ಲಾ ಅವರು ಮಾತನಾಡಿದ್ದಾರೆ. ಜಮ್ಮು-ಕಾಶ್ಮೀರದ ಶೋಫಿಯಾನದಲ್ಲಿ ಜುಲೈ 18ರಂದು ಸೇನೆಯಿಂದ ನಡೆದ ‘ನಕಲಿ ಎನ್‌ಕೌಂಟರ್’ ದೇಶಾದ್ಯಂತ ಸುದ್ದಿ ಯಾಗುತ್ತಿರುವ ಸಂದರ್ಭದಲ್ಲಿ ಫಾರೂಕ್ ಅಬ್ದುಲ್ಲಾ ಅವರು ಅಧಿವೇಶನವನ್ನುದ್ದೇಶಿಸಿ ಏನು ಮಾತನಾಡುತ್ತಾರೆ ಎನ್ನುವ ಕುತೂಹಲ ದೇಶದ ಜನರಲ್ಲಿತ್ತು. ಆದರೆ ಅವರ ಮಾತಿನಲ್ಲಿ ವಿಶೇಷ ಶಕ್ತಿಯಿರಲಿಲ್ಲ. ಜಮ್ಮು-ಕಾಶ್ಮೀರದ ವಾಸ್ತವತೆಯನ್ನು ಅಧಿವೇಶನಕ್ಕೆ ತಲುಪಿಸುವ, ಕಾಶ್ಮೀರದ ವೌನವನ್ನು ಮಾತಾಗಿಸುವ ಯಾವ ತೀವ್ರತೆಯೂ ಅವರ ಮಾತಿನಲ್ಲಿ ಕಂಡು ಬರಲಿಲ್ಲ. ಕಾಶ್ಮೀರದ ಪ್ರಗತಿಯ ಕುರಿತಂತೆ ಅವರು ಮಾತನಾಡಿದ್ದಾರೆ. ಇದೇ ಸಂದರ್ಭದಲ್ಲಿ ಶೋಫಿಯಾನ ನಕಲಿ ಎನ್‌ಕೌಂಟರ್ ಕುರಿತಂತೆ ತನಿಖೆಗೆ ಆದೇಶ ನೀಡಿರುವುದನ್ನು ಸ್ವಾಗತಿಸಿದ್ದಾರೆ.

ದೇಶದ ಇತರೆಡೆಗಳಲ್ಲಿ ಸಿಗುತ್ತಿರುವ ಸೌಲಭ್ಯ ಕಾಶ್ಮೀರಕ್ಕೂ ಬೇಕು, ಇಂಟರ್ನೆಟ್ ಇಲ್ಲದೇ ಇರುವ ಕಾರಣದಿಂದಾಗಿ ನಮ್ಮ ಮಕ್ಕಳು ಶಿಕ್ಷಣವನ್ನು ಪಡೆಯುವುದು ಹೇಗೆ ಎಂದು ಸದನದಲ್ಲಿ ಪ್ರಶ್ನಿಸಿದ್ದಾರೆ. ದೇಶದ ಇತರ ಭಾಗಗಳಂತೆ ಅಭಿವೃದ್ಧಿಯಾಗುವ ಹಕ್ಕು ಕಾಶ್ಮೀರಕ್ಕೆ ಇಲ್ಲವೇ? ಎಂದು ಕೇಳಿದ್ದಾರೆ. ಶೋಫಿಯಾನ ಎನ್‌ಕೌಂಟರ್‌ಬಗ್ಗೆ ಸೇನೆ ಈಗಾಗಲೇ ಒಪ್ಪಿಕೊಂಡಿರುವುದರಿಂದ, ಮೃತರ ಕುಟುಂಬಕ್ಕೆ ಸರಕಾರ ದೊಡ್ಡ ಮಟ್ಟದ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಫಾರೂಕ್ ಅವರ ಈ ಪ್ರಶ್ನೆಗಳಲ್ಲಿ ಹೊಸತೇನೂ ಇಲ್ಲ. 370ನೇ ವಿಧಿಯನ್ನು ಹಿಂದೆಗೆದುಕೊಳ್ಳುವ ಮೊದಲೂ ಫಾರೂಕ್ ಅಬ್ದುಲ್ಲಾ ಇಂತಹ ಪ್ರಶ್ನೆಗಳನ್ನು ಹಲವು ಬಾರಿ ಕೇಳಿದ್ದಾರೆ. ಸೇನೆಯ ದೌರ್ಜನ್ಯಗಳ ಕುರಿತಂತೆ ಆತಂಕ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನದ ಜೊತೆಗೆ ಮಾತುಕತೆ ನಡೆಸಿ ಎಂದು ಸರಕಾರದೊಂದಿಗೆ ಕೇಳಿಕೊಂಡಿದ್ದಾರೆ. ಇದೀಗ ಮತ್ತೆ ಅದೇ ಪ್ರಶ್ನೆಗಳೊಂದಿಗೆ ಅಧಿವೇಶನ ಪ್ರವೇಶಿಸಿದ್ದಾರೆ. ಈ ಪ್ರಶ್ನೆಗಳಿಗೆ ಉತ್ತರ ದೊರಕುವುದಿಲ್ಲ ಎನ್ನುವುದು ಸ್ವತಃ ಅವರಿಗೇ ಗೊತ್ತಿದೆ.

370ನೇ ವಿಧಿ ವಜಾಗೊಂಡ ಬಳಿಕ ಕಾಶ್ಮೀರದಲ್ಲಿ ಏನು ನಡೆಯುತ್ತಿದೆ? ಮತ್ತು ಈ ಸಂದರ್ಭದಲ್ಲಿ ಕಾಶ್ಮೀರದ ಅಭಿವೃದ್ಧಿಗೆ ಇರುವ ಅಡ್ಡಿಗಳೇನು ? ಕಾಶ್ಮೀರದ ಜನರು ಸದ್ಯ ಭಾರತದ ಕುರಿತಂತೆ ಯಾವ ಮನಸ್ಥಿತಿಯನ್ನು ಹೊಂದಿದ್ದಾರೆ? 370ನೇ ವಿಧಿ ವಜಾಗೊಂಡ ಬಳಿಕ ಕಾಶ್ಮೀರದ ಜನರು ಭಾರತದೊಂದಿಗೆ ಮಾನಸಿಕವಾಗಿ ವಿಲೀನವಾಗಿದ್ದಾರೆಯೇ ಅಥವಾ ಇನ್ನಷ್ಟು ದೂರವಾಗಿದ್ದಾರೆಯೇ? ಕಾಶ್ಮೀರದ ಹತ್ತು ಹಲವು ನಾಯಕರು ಇನ್ನೂ ಗೃಹಬಂಧನದಲ್ಲೇ ಇದ್ದಾರೆ. ಅವರನ್ನು ಬಂಧನದಲ್ಲಿಡಲು ಮತ್ತು ಬಿಡುಗಡೆ ಮಾಡದೇ ಇರಲು ಕಾರಣವೇನು? ಶೋಫಿಯಾನ ಪ್ರಕರಣ ನಿಜಕ್ಕೂ ಒಂದು ಆಕಸ್ಮಿಕ ಪ್ರಕರಣವೇ? ಫಾರೂಕ್ ಅಬ್ದುಲ್ಲಾ ಅವರ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾದಲ್ಲಿ, ಮೇಲಿನ ಪ್ರಶ್ನೆಗಳಿಗೆ ಮೊದಲು ಉತ್ತರ ಕಂಡುಕೊಳ್ಳಬೇಕಾಗಿದೆ. ಅವುಗಳಿಗೆ ಉತ್ತರ ಕಂಡುಕೊಳ್ಳದೆ, ಫಾರೂಕ್ ಅಬ್ದುಲ್ಲಾರ ಪ್ರಶ್ನೆಗಳಿಗೆ ಉತ್ತರ ಸಿಗುವುದು ಸಾಧ್ಯವಿಲ್ಲ.

ಶೋಫಿಯಾನ ಪ್ರಕರಣವನ್ನು, ಬರೇ ಪರಿಹಾರ ನೀಡುವುದರ ಮೂಲಕ ಇತ್ಯರ್ಥಗೊಳಿಸಲು ಸಾಧ್ಯವೇ? ಇಂತಹ ಪ್ರಕರಣ ಕಾಶ್ಮೀರದಲ್ಲಿ ಇದೇ ಮೊದಲು ಎಂದಾಗಿದ್ದರೆ ಪರಿಹಾರ ಹಣದಿಂದ ನಷ್ಟವನ್ನು ತುಂಬಬಹುದಾಗಿತ್ತೇನೋ? ಆದರೆ, ಕಾಶ್ಮೀರದ ಕುರಿತಂತೆ ಹೊಂದಿರುವ ಪೂರ್ವಗ್ರಹ ಈಗಾಗಲೇ ನೂರಾರು ನಾಗರಿಕರನ್ನು ಬಲಿತೆಗೆದುಕೊಳ್ಳುತ್ತಾ ಬಂದಿದೆ. ಶೋಫಿಯಾನ ನಕಲಿ ಎನ್‌ಕೌಂಟರ್‌ಗೆ ಬಲಿಯಾದ ಜೀವಗಳಿಗೆ ಸರಕಾರ ನೀಡಬಹುದಾದ ಪರಿಹಾರವೆಂದರೆ, ಸೇನೆಯ ವಿಶೇಷಾಧಿಕಾರವನ್ನು ಹಿಂದೆಗೆಯುವುದು. ಫಾರೂಕ್ ಅಬ್ದುಲ್ಲಾ ಈ ಕುರಿತಂತೆ ಅಧಿವೇಶನದಲ್ಲಿ ಜೋರಾಗಿ ಮಾತನಾಡಬೇಕಾದ ಅಗತ್ಯವಿತ್ತು. ಶೋಫಿಯಾನ ಎನ್‌ಕೌಂಟರ್‌ನಲ್ಲಿ ಮೂವರು ಕಾರ್ಮಿಕರು ಸೇನೆಯ ಗುಂಡಿಗೆ ಬಲಿಯಾಗಿದ್ದರು. ಹಾಗೆ ಬಲಿಯಾದ ಬೆನ್ನಿಗೇ ಮಾಧ್ಯಮಗಳಲ್ಲಿ ‘ಸೇನೆಯಿಂದ ಮೂವರು ಭಯೋತ್ಪಾದಕರ ಎನ್‌ಕೌಂಟರ್’ ಎಂಬ ವರದಿ ಬಿತ್ತರವಾಯಿತು. ಆದರೆ ಈ ಕುರಿತಂತೆ ಜನರು ಆಕ್ರೋಶಗೊಳ್ಳುತ್ತಿದ್ದಂತೆಯೇ ಸೇನೆ ಎಚ್ಚರಗೊಂಡಿದೆ. ಎನ್‌ಕೌಂಟರ್ ಕುರಿತು ತನಿಖೆಗೆ ಆದೇಶಿಸಿದೆ.

‘‘ಘಟನೆಗೆ ಸಂಬಂಧಿಸಿ ಸೇನಾ ಪ್ರಾಧಿಕಾರ ಆದೇಶಿಸಿದ ವಿಚಾರಣೆ ಪೂರ್ಣಗೊಂಡಿದೆ. ಕಾರ್ಯಾಚರಣೆ ಸಂದರ್ಭ ಅಫ್‌ಸ್ಪಾ ಕಾಯ್ದೆಯನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಹಾಗೂ ನಿಯಮಕ್ಕೆ ವಿರುದ್ಧವಾಗಿ ಕಾರ್ಯನಿರ್ವಹಿಸಲಾಗಿದೆ ಎಂಬುದನ್ನು ಸೂಚಿಸುವ ನಿರ್ದಿಷ್ಟ, ಮೇಲ್ನೋಟದ ಸಾಕ್ಷಗಳು ವಿಚಾರಣೆ ಸಂದರ್ಭ ಬೆಳಕಿಗೆ ಬಂದಿವೆ’’ ಎಂದು ರಕ್ಷಣಾ ವಕ್ತಾರ ತಿಳಿಸಿದ್ದಾರೆ. ‘‘ಈ ಹಿನ್ನೆಲೆಯಲ್ಲಿ ಮೇಲ್ನೋಟಕ್ಕೆ ಉತ್ತರದಾಯಿಗಳು ಎಂದು ಗುರುತಿಸಲಾದವರ ವಿರುದ್ಧ ಸೇನಾ ಕಾಯ್ದೆ ಅಡಿ ಶಿಸ್ತು ಕ್ರಮ ಪ್ರಕ್ರಿಯೆಗಳನ್ನು ಆರಂಭಿಸುವಂತೆ ಸಂಬಂಧಿತ ಶಿಸ್ತು ಪ್ರಾಧಿಕಾರ ನಿರ್ದೇಶಿಸಿದೆ’’ ಎಂದು ಅವರು ವಿವರಣೆ ನೀಡಿದ್ದಾರೆ. ಆದರೆ ಈ ತನಿಖೆ, ಶಿಸ್ತುಕ್ರಮ ಕಾಶ್ಮೀರದ ಜನರ ಮೇಲೆ ನಂಬಿಕೆ ಮೂಡಿಸುವಲ್ಲಿ ಯಶಸ್ವಿಯಾಗುತ್ತದೆಯೇ ಎನ್ನುವುದು ಕೂಡ ಮುಖ್ಯವಾಗುತ್ತದೆ. ಎನ್‌ಕೌಂಟರ್‌ನಲ್ಲಿ ತಪ್ಪು ನಡೆದಿದೆ ಎನ್ನುವುದು ಬಹಿರಂಗವಾದ ಬೆನ್ನಿಗೇ, ಕಾಶ್ಮೀರದ ಮೇಲೆ ಹೇರಲಾಗಿರುವ ಸೇನಾ ವಿಶೇಷಾಧಿಕಾರ ಮತ್ತೆ ಚರ್ಚೆಗೆ ಬಂದಿದೆ. ಈ ಎನ್‌ಕೌಂಟರ್‌ಗೆ ಕಾರಣ, ತಪ್ಪು ಮಾಹಿತಿಯಲ್ಲ, ಸೇನೆಯ ಕೈಯಲ್ಲಿರುವ ವಿಶೇಷಾಧಿಕಾರ ಕಾರಣ ಎಂದು ಇಲ್ತಿಜಾ ಮುಫ್ತಿ ಆರೋಪಿಸಿದ್ದಾರೆ. ‘ಸೇನೆ ತನಿಖೆ ನಡೆಸಲು ಹೊರಟಿರುವುದು ಮೃತರು ಉಗ್ರಗಾಮಿಗಳಾಗಿದ್ದರೇ ಎನ್ನುವುದನ್ನಾಗಿದೆ.

ನಕಲಿ ಎನ್‌ಕೌಂಟರ್‌ಗೆ ಯೋಧರನ್ನು ಹೊಣೆಯಾಗಿಸಿಕೊಂಡು ತನಿಖೆ ನಡೆಯುತ್ತಿಲ್ಲ ಎನ್ನುವುದು ಅವರ ಆಕ್ಷೇಪವಾಗಿದೆ’ ಎಲ್ಲಿಯವರೆಗೆ ಅಫ್‌ಸ್ಪಾ ಜಾರಿಯಲ್ಲಿರುತ್ತದೆಯೋ ಅಲ್ಲಿಯವರೆಗೆ ಆರೋಪಿ ಸೈನಿಕರಿಗೆ ಶಿಕ್ಷೆಯಾಗುವುದು ಸಾಧ್ಯವಿಲ್ಲ. ಈ ಹಿಂದಿನ ಹಲವು ಪ್ರಕರಣಗಳಲ್ಲಿ ಇದು ಸಾಬೀತಾಗಿದೆೆ ಎನ್ನುವುದನ್ನೂ ಮಾನವ ಹಕ್ಕು ಸಂಘಟನೆಗಳು ಉಲ್ಲೇಖಿಸಿವೆ. ಒಂದೆಡೆ ಕಾಶ್ಮೀರವನ್ನು ಸೇನೆ ಆಳುತ್ತಿದೆ. ಇನ್ನೊಂದೆಡೆ ಕಾಶ್ಮೀರದಲ್ಲಿ ಕಾಶ್ಮೀರಿಗಳನ್ನೇ ಅನ್ಯರನ್ನಾಗಿಸಿ, ಇತರರನ್ನು ತುರುಕಿಸುವ ಕೆಲಸವೂ ನಡೆಯುತ್ತಿದೆ. 15 ವರ್ಷಗಳ ಕಾಲ ಈ ರಾಜ್ಯದಲ್ಲಿ ವಾಸವಾಗಿರುವ ಅಥವಾ ಕೆಲಸ ಮಾಡಿರುವ ಯಾರೇ ಆಗಿರಲಿ, ಶಾಶ್ವತ ನಿವಾಸಿಗಳ ಸ್ಥಾನಮಾನವನ್ನು ಪಡೆಯುತ್ತಿದ್ದ್ತಾರೆ. ಪಾಕಿಸ್ತಾನದ ದುರ್ಬಲ ನಿರಾಶ್ರಿತರಿಗೆ ಹಕ್ಕು ನೀಡುವ ಹೆಸರಿನಲ್ಲಿ ಜಾರಿಗೊಳಿಸಿದ ಕಾನೂನಿನ ಲಾಭವನ್ನು ಕಾಶ್ಮೀರದಲ್ಲಿ 15 ವರ್ಷಗಳಿಂದ ಕೆಲಸ ಮಾಡುತ್ತಿರುವ ಬಹುಸಂಖ್ಯೆಯ ಅಧಿಕಾರವರ್ಗ, ವ್ಯಾಪಾರಿ ವರ್ಗ ತನ್ನದಾಗಿಸಿಕೊಳ್ಳುತ್ತಿದೆ. ಇವೆಲ್ಲವೂ ಕಾಶ್ಮೀರಿಗಳನ್ನು ಹೆಚ್ಚು ಹೆಚ್ಚು ಆತಂಕಕ್ಕೆ ತಳ್ಳಿದೆ. ಒಂದೆಡೆ ಕಾಶ್ಮೀರಿಗಳನ್ನು ಇನ್ನಷ್ಟು ತುಳಿಯುವ ಯೋಜನೆಗಳು ಸಾಕಾರಗೊಳ್ಳುತ್ತಿರುವ ಸಂದರ್ಭದಲ್ಲಿ, ಕಾಶ್ಮೀರಿಗಳ ಪ್ರಗತಿಯ ಕುರಿತಂತೆ ಫಾರೂಕ್ ಅಬ್ದುಲ್ಲಾ ಅವರು ಅಧಿವೇಶನದಲ್ಲಿ ಕಳವಳ ವ್ಯಕ್ತಪಡಿಸುವುದೇ ಒಂದು ವ್ಯಂಗ್ಯವಾಗಿದೆ. ಕಾಶ್ಮೀರಿಗಳಿಗೆ ನ್ಯಾಯ ಕೊಡದೇ ಕಾಶ್ಮೀರವನ್ನು ಅಭಿವೃದ್ಧಿ ಪಡಿಸಲು ಸಾಧ್ಯವಿಲ್ಲ.

ಹೆಚ್ಚೆಂದರೆ ಕಾಶ್ಮೀರಿಗಳನ್ನೆಲ್ಲ ಇಲ್ಲವಾಗಿಸಿ ಅಲ್ಲಿ ಕಾರ್ಪೊರೇಟ್ ಕುಳಗಳು ಬೃಹತ್ ರೆಸಾರ್ಟ್‌ಗಳನ್ನು ನಿರ್ಮಾಣ ಮಾಡಿ, ಅದನ್ನೇ ಕಾಶ್ಮೀರದ ಅಭಿವೃದ್ಧಿ ಎಂದು ಕರೆಯಬಹುದು. ಇಂದು ಕಾಶ್ಮೀರದಲ್ಲಿ ಸೇನೆಯ ಹಿಡಿತ ಹಿಂದಿಗಿಂತಲೂ ಬಲವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಕಾಶ್ಮೀರದಲ್ಲಿ ನಡೆಯುತ್ತಿರುವುದೇನು ಎನ್ನುವುದನ್ನು ವರದಿ ಮಾಡುವುದಕ್ಕೆ ಮಾಧ್ಯಮಗಳಿಗೇ ಸರಿಯಾದ ಅವಕಾಶವಿಲ್ಲ. ಇಂಟರ್ನೆಟ್ ಜಾಲಗಳನ್ನು ತಡೆಯಲಾಗಿದೆ. ಸ್ವತಃ ಭಾರತದೊಳಗಿರುವ ವಿರೋಧ ಪಕ್ಷದ ನಾಯಕರಿಗೂ ಕಾಶ್ಮೀರದಲ್ಲಿ ಮುಕ್ತವಾಗಿ ಓಡಾಡುವುದಕ್ಕೆ ಅವಕಾಶವಿಲ್ಲ. ಗೃಹ ಬಂಧನದಲ್ಲಿರುವ ನಾಯಕರನ್ನು ಬಿಡುಗಡೆ ಮಾಡಲಾಗಿಲ್ಲ. ದೇಶಕ್ಕೆ ವಿಧಿಸಲಾಗಿರುವ ಲಾಕ್‌ಡೌನ್ ಸಡಿಲಗೊಂಡಿದೆ. ಆದರೆ ಕಾಶ್ಮೀರದ ಪಾಲಿನ ಲಾಕ್‌ಡೌನ್ ಇನ್ನಷ್ಟು ಬಿಗಿಯಾಗಿದೆ. ಇವೆಲ್ಲ ಕಾಶ್ಮೀರಿಗಳಲ್ಲಿ ಭಾರತ ಸರಕಾರದ ಕುರಿತಂತೆ ಇನ್ನಷ್ಟು ಅಸಮಾಧಾನಗಳನ್ನು ಬಿತ್ತಬಹುದೇ ಹೊರತು, ಅವರನ್ನು ಮಾನಸಿಕವಾಗಿ ಭಾರತಕ್ಕೆ ಹತ್ತಿರವಾಗಿಸಲಾರವು. ಇದರ ಲಾಭವನ್ನು ಕಾಶ್ಮೀರದೊಳಗಿರುವ ಅಥವಾ ಪಾಕಿಸ್ತಾನದೊಳಗಿರುವ ಉಗ್ರವಾದಿ ಸಂಘಟನೆಗಳು ತನ್ನದಾಗಿಸಿಕೊಳ್ಳುವ ಅಪಾಯವಿದೆ. ಆದುದರಿಂದ, ಕಾಶ್ಮೀರಿಗಳು ಭಾರತೀಯರು ಎಂದು ಸರಕಾರ ಭಾವಿಸಿದೆಯೆಂದಾದರೆ, ಭಾರತಕ್ಕೆ ಅನ್ವಯವಾಗುವ ಪ್ರಜಾಸತ್ತೆ ಕಾಶ್ಮೀರಕ್ಕೂ ಅನ್ವಯವಾಗಬೇಕು. ಆ ಮೂಲಕವೇ ಅವರನ್ನು ನಮ್ಮವರನ್ನಾಗಿಸಿಕೊಳ್ಳಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News