ಜಾಗತಿಕ ಬ್ಯಾಂಕ್ ಗಳ ಮೂಲಕವೇ ಭಾರೀ ಅಕ್ರಮ ಹಣ ವಹಿವಾಟು

Update: 2020-09-21 11:34 GMT
ಸಾಂದರ್ಭಿಕ ಚಿತ್ರ

ಅಮೆರಿಕದ ಫೈನಾನ್ಶಿಯಲ್ ಕ್ರೈಮ್ಸ್ ಎನ್‌ಫೋರ್ಸ್‌ಮೆಂಟ್ ನೆಟ್‌ವರ್ಕ್ (ಫಿನ್‌ಸೆನ್)ನ ಕಡತಗಳು ಸೋರಿಕೆಯಾಗಿದ್ದು,ಸುಮಾರು ಎರಡು ಲಕ್ಷ ಕೋಟಿ ಡಾಲರ್‌ಗಳ ವಹಿವಾಟುಗಳನ್ನು ಒಳಗೊಂಡಿರುವ ಈ ದಾಖಲೆಗಳು ವಿಶ್ವದ ಕೆಲವು ಬೃಹತ್ ಬ್ಯಾಂಕ್‌ಗಳು ಹೇಗೆ ಕ್ರಿಮಿನಲ್‌ಗಳಿಗೆ ತಮ್ಮ ಅಕ್ರಮ ಹಣವನ್ನು ಜಗತ್ತಿನಾದ್ಯಂತ ಚಲಾವಣೆ ಮಾಡಲು ಅವಕಾಶ ನೀಡಿದ್ದವು ಎನ್ನುವುದನ್ನು ಬಹಿರಂಗಗೊಳಿಸಿವೆ. ರಷ್ಯದ ರಾಜಕೀಯ ಪ್ರಭಾವಗಳನ್ನು ಹೊಂದಿರುವ ಉದ್ಯಮಿಗಳು ತಮ್ಮ ಹಣವನ್ನು ಪಾಶ್ಚಾತ್ಯ ಜಗತ್ತಿಗೆ ಸಾಗಿಸದಂತೆ ಹೇರಲಾಗಿರುವ ನಿರ್ಬಂಧವನ್ನು ತಪ್ಪಿಸಿಕೊಳ್ಳಲು ಬ್ಯಾಂಕ್‌ಗಳನ್ನು ಬಳಸಿಕೊಂಡಿದ್ದರು ಎನ್ನುವುದನ್ನೂ ಈ ದಾಖಲೆಗಳು ತೋರಿಸಿವೆ. ಕಳೆದ ಐದು ವರ್ಷಗಳಲ್ಲಿ ರಹಸ್ಯ ವಹಿವಾಟುಗಳು,ಅಕ್ರಮ ಹಣ ಚಲಾವಣೆ ಮತ್ತು ಆರ್ಥಿಕ ಅಪರಾಧಗಳನ್ನು ಬಹಿರಂಗಗೊಳಿಸಿರುವ ಸರಣಿ ಸೋರಿಕೆಗಳ ಪೈಕಿ ಇದು ಇತ್ತೀಚಿನದಾಗಿದೆ.

ಏನಿವು ಫಿನ್‌ಸೆನ್ ಕಡತಗಳು?

ಫಿನ್‌ಸೆನ್ ಕಡತಗಳು 2,500ಕ್ಕೂ ಅಧಿಕ ದಾಖಲೆಗಳಾಗಿದ್ದು,ಹೆಚ್ಚಿನವು 2000 ಮತ್ತು 2017ರ ನಡುವೆ ಬ್ಯಾಂಕುಗಳು ಅಮೆರಿಕದ ಅಧಿಕಾರಿಗಳಿಗೆ ಕಳುಹಿಸಿದ್ದ ಕಡತಗಳಾಗಿವೆ. ಈ ಕಡತಗಳಲ್ಲಿ ಬ್ಯಾಂಕುಗಳು ತಮ್ಮ ಗ್ರಾಹಕರ ವ್ಯವಹಾರಗಳ ಬಗ್ಗೆ ಕಳವಳಗಳನ್ನು ವ್ಯಕ್ತಪಡಿಸಿವೆ. ಈ ದಾಖಲೆಗಳು ಅಂತರರಾಷ್ಟ್ರೀಯ ಬ್ಯಾಂಕಿಂಗ್ ವ್ಯವಸ್ಥೆಯ ಅತ್ಯಂತ ಎಚ್ಚರಿಕೆಯಿಂದ ಕಾಯ್ದುಕೊಳ್ಳಲಾಗಿರುವ ರಹಸ್ಯಗಳ ಭಾಗವಾಗಿವೆ. ಬ್ಯಾಂಕುಗಳು ಈ ಕಡತಗಳ ಮೂಲಕ ತಮ್ಮ ಗ್ರಾಹಕರ ಶಂಕಾಸ್ಪದ ನಡವಳಿಕೆಗಳನ್ನು ವರದಿ ಮಾಡುತ್ತವೆ,ಆದರೆ ಅವು ಯಾವುದೇ ತಪ್ಪು ಅಥವಾ ಅಪರಾಧದ ಪುರಾವೆಗಳಲ್ಲ. ಫಿನ್‌ಸೆನ್ ಅಮೆರಿಕದ ಹಣಕಾಸು ಇಲಾಖೆಯ ಅಧೀನದಲ್ಲಿರುವ ಘಟಕವಾಗಿದ್ದು,ಆರ್ಥಿಕ ಅಪರಾಧಗಳ ವಿರುದ್ಧ ಹೋರಾಡುತ್ತದೆ. ಅಮೆರಿಕನ್ ಡಾಲರ್‌ಗಳಲ್ಲಿ ನಡೆಸಲಾಗಿರುವ ವ್ಯವಹಾರಗಳ ಕುರಿತು ಕಳವಳಗಳನ್ನು ಬ್ಯಾಂಕುಗಳು ಫಿನ್‌ಸೆನ್‌ಗೆ ಕಳುಹಿಸಬೇಕಾಗುತ್ತವೆ. ಅಮೆರಿಕದ ಹೊರಗೆ ನಡೆಯುವ ವ್ಯವಹಾರಗಳೂ ಇದರಲ್ಲಿ ಸೇರುತ್ತವೆ.

ಈ ದಾಖಲೆಗಳು ಬಝರ್‌ಫೀಡ್ ನ್ಯೂಸ್‌ಗೆ ಸೋರಿಕೆಯಾಗಿದ್ದು, ಅದು ಅವುಗಳನ್ನು ವಿಶ್ವಾದ್ಯಂತದ ತನಿಖಾ ಪರ್ತಕರ್ತರನ್ನು ಒಗ್ಗೂಡಿಸಿರುವ ಗುಂಪೊಂದರೊಂದಿಗೆ ಹಂಚಿಕೊಂಡಿದೆ ಮತ್ತು ಈ ಗುಂಪು 88 ದೇಶಗಳ 108 ಸುದ್ದಿಸಂಸ್ಥೆಗಳಿಗೆ ಅವುಗಳನ್ನು ವಿತರಿಸಿದೆ. ಈ ದಾಖಲೆಗಳನ್ನು ಜಾಲಾಡುತ್ತಿರುವ ನೂರಾರು ಪತ್ರಕರ್ತರು ಬ್ಯಾಂಕುಗಳು ಸಾರ್ವಜನಿಕರಿಂದ ಬಚ್ಚಿಡುತ್ತಿರುವ ಚಟುವಟಿಕೆಗಳನ್ನು ಬಯಲಿಗೆಳೆಯುತ್ತಿದ್ದಾರೆ.

ಏಕಿದಕ್ಕೆ ಇಷ್ಟೊಂದು ಮಹತ್ವ?

ಕ್ರಿಮಿನಲ್ ವ್ಯಹಾರದಿಂದ ಲಾಭ ಮಾಡಲು ನೀವು ಯೋಚಿಸಿದ್ದರೆ ಹಾಗೆ ಸಂಪಾದಿಸಿದ ಅಕ್ರಮ ಹಣ ಚಲಾವಣೆಗೆ ಮಾರ್ಗವನ್ನು ಕಂಡುಕೊಳ್ಳುವುದು ನಿಮ್ಮ ಮುಖ್ಯ ಆದ್ಯತೆಗಳಲ್ಲೊಂದಾಗಿರುತ್ತದೆ. ಮನಿ ಲಾಂಡಂರಿಂಗ್ ಅಥವಾ ಕಪ್ಪುಹಣವನ್ನು ಬಿಳಿ ಮಾಡುವ ಪ್ರಕ್ರಿಯೆಯಲ್ಲಿ ಮಾದಕ ದ್ರವ್ಯಗಳ ವ್ಯವಹಾರ ಅಥವಾ ಭ್ರಷ್ಟಾಚಾರದಂತಹ ಅಕ್ರಮ ಮಾರ್ಗಗಳ ಮೂಲಕ ಸಂಪಾದಿಸಿದ ಹಣವನ್ನು ಮಧ್ಯವರ್ತಿಗಳ ಮೂಲಕ ಪ್ರತಿಷ್ಠಿತ ಬ್ಯಾಂಕೊಂದರಲ್ಲಿಯ ಖಾತೆಗೆ ಜಮಾ ಮಾಡಲಾಗುತ್ತದೆ ಮತ್ತು ಅಲ್ಲಿಗೆ ಈ ಹಣವು ಅಪರಾಧದೊಂದಿಗಿನ ತನ್ನ ನಂಟನ್ನು ಕಳಚಿಕೊಳ್ಳುತ್ತದೆ. ರಷ್ಯದ ಕಪ್ಪುಹಣದ ಖದೀಮರೂ ತಮ್ಮ ವಿರುದ್ಧದ ನಿರ್ಬಂಧಗಳಿಂದ ಪಾರಾಗಲು ಇದೇ ಮಾರ್ಗವನ್ನು ಅನುಸರಿಸುತ್ತಾರೆ.

ತಮ್ಮ ಗ್ರಾಹಕರು ಅಕ್ರಮ ಹಣ ಚಲಾವಣೆಯನ್ನು ಮಾಡಲು ಬ್ಯಾಂಕುಗಳು ನೆರವಾಗುವಂತಿಲ್ಲ. ಕಾನೂನಿನಂತೆ ಅವುಗಳಿಗೆ ತಮ್ಮ ಗ್ರಾಹಕರ ಬಗ್ಗೆ ಗೊತ್ತಿರಬೇಕಾಗುತ್ತದೆ. ಗ್ರಾಹಕರ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆ ಅವುಗಳ ಬಳಿ ಸಾಕ್ಷಾಧಾರಗಳಿದ್ದರೆ ಅವು ಅಂತಹ ಗ್ರಾಹಕರ ಹಣದ ವರ್ಗಾವಣೆಯನ್ನು ನಿಲ್ಲಿಸಬೇಕಾಗುತ್ತದೆ. ಸೋರಿಕೆಯಾಗಿರುವ ಕಡತಗಳು ಭಾರೀ ಮೊತ್ತವನ್ನು ಪ್ರಮುಖವಾಗಿ ಬಿಂಬಿಸಿವೆ. ಈ ದಾಖಲೆಗಳು ಸುಮಾರು ಎರಡು ಲಕ್ಷ ಕೋ.ಡಾ.ಗಳ ವಹಿವಾಟುಗಳನ್ನು ಒಳಗೊಂಡಿದ್ದು,ಐದು ವರ್ಷಗಳ ಅವಧಿಯಲ್ಲಿ ಬ್ಯಾಂಕುಗಳು ಫಿನ್‌ಸೆನ್‌ಗೆ ಸಲ್ಲಿಸಿರುವ ವರದಿಗಳ ಪುಟ್ಟ ಭಾಗ ಮಾತ್ರವಾಗಿದೆ ಎನ್ನುತ್ತಾರೆ ಅಂತರರಾಷ್ಟ್ರೀಯ ತನಿಖಾ ಪತ್ರಕರ್ತರ ಒಕ್ಕೂಟದ ಫರ್ಗ್ಯೂಸ್ ಶಿಯೆಲ್.

ಬಯಲಾಗಿದ್ದು ಏನು?

ವಂಚಕರ ಸ್ಕೀಮ್ ಒಂದು ಹಗರಣವಾಗಿತ್ತು ಎಂದು ಅಮೆರಿಕದ ತನಿಖಾಧಿಕಾರಿಗಳಿಂದ ಗೊತ್ತಾದ ಬಳಿಕವೂ ಎಚ್‌ಎಸ್‌ಬಿಸಿ ಅವರು ಮಿಲಿಯಗಟ್ಟಲೆ ಡಾಲರ್‌ಗಳನ್ನು ವಿಶ್ವಾದ್ಯಂತ ಸಾಗಿಸಲು ಅವಕಾಶ ನೀಡಿತ್ತು. ಜೆಪಿ ಮಾರ್ಗನ್, ಲಂಡನ್ನಿನ ಬಾರ್ಕ್ಲೆಸ್ ಬ್ಯಾಂಕ್, ಯುಎಇಯ ಸೆಂಟ್ರಲ್ ಬ್ಯಾಂಕ್, ಡಾಯ್ಶೆ ಬ್ಯಾಂಕ್, ಸ್ಟಾಂಡರ್ಡ್ ಚಾರ್ಟರ್ಡ್ ಇತ್ಯಾದಿ ಬ್ಯಾಂಕುಗಳೂ ತಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೇ ಅಕ್ರಮ ಹಣ ವಹಿವಾಟುಗಳಿಗೆ ಅವಕಾಶ ನೀಡಿರುವುದನ್ನು ಈ ಸೋರಿಕೆಯಾಗಿರುವ ದಾಖಲೆಗಳು ಬಹಿರಂಗಗೊಳಿಸಿವೆ.

ಇದು ವಿಭಿನ್ನ ಸೋರಿಕೆ

2017ರಲ್ಲಿ ಪ್ಯಾರಡೈಸ್ ಪೇಪರ್ಸ್, 2016ರಲ್ಲಿ ಪನಾಮಾ ಪೇಪರ್ಸ್, 2015ರಲ್ಲಿ ಸ್ವಿಸ್ ಲೀಕ್ಸ್, 2014ರಲ್ಲಿ ಲಕ್ಸ್ ಲೀಕ್ಸ್ ಹೀಗೆ ಇತ್ತೀಚಿನ ವರ್ಷಗಳಲ್ಲಿ ಹಲವಾರು ಸೋರಿಕೆಗಳು ಬೃಹತ್ ಹಣಕಾಸು ಅವ್ಯವಹಾರಗಳನ್ನು ಬಹಿರಂಗಗೊಳಿಸಿವೆ. ಆದರೆ ಫಿನ್‌ಸೆನ್ ದಾಖಲೆಗಳು ಇವೆಲ್ಲವುಗಳಿಗಿಂತ ಭಿನ್ನವಾಗಿವೆ, ಏಕೆಂದರೆ ಇದು ಕೇವಲ ಒಂದೆರಡು ಕಂಪನಿಗಳ ದಾಖಲೆಗಳಲ್ಲ. ಇವು ಹಲವಾರು ಬ್ಯಾಂಕುಗಳ ಮೂಲಕ ಸಿಕ್ಕಿರುವ ದಾಖಲೆಗಳಾಗಿವೆ.

ಈ ದಾಖಲೆಗಳು ಕಂಪನಿಗಳು ಮತ್ತು ವ್ಯಕ್ತಿಗಳನ್ನು ಒಳಗೊಂಡ ವ್ಯಾಪಕ ಶಂಕಾಸ್ಪದ ಚಟುವಟಿಕೆಗಳನ್ನು ಪ್ರಮುಖವಾಗಿ ಬಿಂಬಿಸಿವೆ ಮತ್ತು ಇಂತಹ ಚಟುವಟಿಕೆಗಳನ್ನು ಗಮನಿಸಿದ್ದ ಬ್ಯಾಂಕುಗಳು ಸೂಕ್ತ ಕ್ರಮಗಳನ್ನೇಕೆ ಕೈಗೊಂಡಿರಲಿಲ್ಲ ಎಂಬ ಪ್ರಶ್ನೆಗಳನ್ನೆತ್ತಿವೆ.

ಸೋರಿಕೆಯು ಅಮೆರಿಕದ ರಾಷ್ಟ್ರೀಯ ಭದ್ರತೆಯ ಮೇಲೆ ಪರಿಣಾಮ ಬೀರಬಹುದು,ತನಿಖೆಗಳಿಗೆ ಅಡ್ಡಿಯನ್ನುಂಟು ಮಾಡಬಹುದು ಮತ್ತು ಇಂತಹ ವರದಿಗಳನ್ನು ಸಲ್ಲಿಸುವ ಸಂಸ್ಥೆಗಳು ಮತ್ತು ವ್ಯಕ್ತಿಗಳಿಗೆ ಬೆದರಿಕೆಯಾಗಿದೆ ಎಂದು ಫಿನ್‌ಸೆನ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News