ರಾಷ್ಟ್ರಪತಿ ಭೇಟಿಗೆ ಅವಕಾಶ ಕೋರಿದ ಪ್ರತಿಪಕ್ಷಗಳು: ಕೃಷಿ ಮಸೂದೆಗಳಿಗೆ ಅಂಕಿತ ಹಾಕದಂತೆ ಆಗ್ರಹ

Update: 2020-09-21 15:55 GMT

ಹೊಸದಿಲ್ಲಿ,ಸೆ.21: ರಾಜ್ಯಸಭೆಯಲ್ಲಿ ರವಿವಾರ ಎರಡು ವಿವಾದಾತ್ಮಕ ಕೃಷಿ ಮಸೂದೆಗಳಿಗೆ ಅಂಗೀಕಾರ ಪಡೆದ ಸರಕಾರದ ಕ್ರಮದ ಕುರಿತು ಪ್ರತಿಪಕ್ಷಗಳು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ಅಹವಾಲೊಂದನ್ನು ರವಾನಿಸಿದ್ದು,ಉದ್ದೇಶಿತ ಶಾಸನಗಳಿಗೆ ಅಂಕಿತ ಹಾಕದಂತೆ ಅವರನ್ನು ಆಗ್ರಹಿಸಿವೆ.

ಕಾಂಗ್ರೆಸ್,ಎಡಪಕ್ಷಗಳು,ತೃಣಮೂಲ ಕಾಂಗ್ರೆಸ್ ಹಾಗೂ ಆರ್‌ಜೆಡಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ನಾಯಕರು ಸಲ್ಲಿಸಿರುವ ಅಹವಾಲಿನಲ್ಲಿ ಮಸೂದೆಗಳ ವಿಷಯದಲ್ಲಿ ರಾಷ್ಟ್ರಪತಿಗಳ ಹಸ್ತಕ್ಷೇಪವನ್ನು ಕೋರಿದ್ದಾರೆ.

ಮಸೂದೆಗಳಿಗೆ ರಾಷ್ಟ್ರಪತಿಗಳು ಅಂಕಿತ ಹಾಕಿದ ಬಳಿಕವೇ ಅವು ಶಾಸನಗಳಾಗುತ್ತವೆ.

ಕೃಷಿರಂಗದಲ್ಲಿ ಭಾರೀ ಸುಧಾರಣೆ ಎಂದು ಸರಕಾರವು ಬಣ್ಣಿಸಿರುವ ಈ ಎರಡು ಪ್ರಮುಖ ಕೃಷಿ ಮಸೂದೆಗಳು ರವಿವಾರ ರಾಜ್ಯಸಭೆಯಲ್ಲಿ ಪ್ರತಿಭಟನಾನಿರತ ಪ್ರತಿಪಕ್ಷಗಳ ಸಂಸದರ ಕೋಲಾಹಲದ ನಡುವೆಯೇ ಧ್ವನಿಮತದ ಮೂಲಕ ಅಂಗೀಕಾರಗೊಂಡಿವೆ.

ರಾಜ್ಯಸಭೆಯಲ್ಲಿ ಮಸೂದೆಗಳನ್ನು ಅಂಗೀಕಾರಗೊಳಿಸಿದ ರೀತಿಯನ್ನು ಆಡಳಿತ ಬಿಜೆಪಿಯಿಂದ ‘ಪ್ರಜಾಪ್ರಭುತ್ವದ ಕೊಲೆ ’ಎಂದು ಬಣ್ಣಿಸಿರುವ ಪ್ರತಿಪಕ್ಷಗಳು ರಾಷ್ಟ್ರಪತಿಗಳ ಭೇಟಿಗೆ ಅನುಮತಿಯನ್ನು ಕೋರಿವೆ. ಈ ಭೇಟಿ ಮಂಗಳವಾರ ನಡೆಯುವ ಸಾಧ್ಯತೆಯಿದೆ ಎನ್ನಲಾಗಿದೆ.

 ಶಿರೋಮಣಿ ಅಕಾಲಿದಳದ ನಾಯಕರು ಸೋಮವಾರವೇ ಪ್ರತ್ಯೇಕವಾಗಿ ರಾಷ್ಟ್ರಪತಿಯನ್ನು ಭೇಟಿಯಾಗಿ ಮಸೂದೆಗಳಿಗೆ ಸಹಿ ಹಾಕದಂತೆ ಒತ್ತಾಯಿಸಿದ್ದಾರೆ.

ಮಸೂದೆಗಳು ರೈತರ ಹಿತಾಸಕ್ತಿಗಳಿಗೆ ವಿರುದ್ಧವಾಗಿವೆ ಮತ್ತು ರೈತರನ್ನು ಕಾರ್ಪೊರೇಟ್ ಸಂಸ್ಥೆಗಳ ಗುಲಾಮರನ್ನಾಗಿಸಲಿವೆ ಎಂದು ಆರೋಪಿಸಿರುವ ಪ್ರತಿಪಕ್ಷ ನಾಯಕರು,ಈ ಮಸೂದೆಗಳು ಕೃಷಿಕ್ಷೇತ್ರಕ್ಕೆ ‘ಮರಣ ಶಾಸನ’ಗಳಾಗಲಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News