ವಿದ್ಯುತ್(ತಿದ್ದುಪಡಿ) ಮಸೂದೆಗೆ ಅವಸರ ಬೇಡ: ಪ್ರಧಾನಿ ಮೋದಿಗೆ ಎಐಪಿಇಎಫ್ ಆಗ್ರಹ

Update: 2020-09-21 17:07 GMT

ಹೊಸದಿಲ್ಲಿ, ಸೆ.21: ವಿದ್ಯುತ್ (ತಿದ್ದುಪಡಿ) ಮಸೂದೆ ಕುರಿತು ಪಾಲುದಾರರು ಎತ್ತಿರುವ ಆಕ್ಷೇಪಗಳನ್ನು ಪರಿಗಣಿಸುವಂತೆ ಮತ್ತು ಶಾಸನದಲ್ಲಿ ಉದ್ದೇಶಿತ ಬದಲಾವಣೆಗಳನ್ನು ಮಾಡಲು ಅವಸರಿಸದಂತೆ ಆಲ್ ಇಂಡಿಯಾ ಪವರ್ ಇಂಜಿನಿಯರ್ಸ್ ಫೆಡರೇಷನ್ (ಎಐಪಿಇಎಫ್) ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಗ್ರಹಿಸಿದೆ.

ಮಸೂದೆಯನ್ನು ಆಯ್ಕೆ ಸಮಿತಿಯ ಪರಿಶೀಲನೆಗೆ ಸಲ್ಲಿಸುವಂತೆಯೂ ಅದು ಒತ್ತಾಯಿಸಿದೆ.

11 ರಾಜ್ಯಗಳು,ಎರಡು ಕೇಂದ್ರಾಡಳಿತ ಪ್ರದೇಶಗಳು ಮತ್ತು ಇತರ ಪಾಲುದಾರರು ಸಲಹೆಗಳನ್ನು ನೀಡಿದ ಬಳಿಕ ಈಗ ಸೇರ್ಪಡೆಗೊಳಿಸಿರುವ ತಿದ್ದುಪಡಿಗಳನ್ನು ತೋರಿಸುವ ಪರಿಷ್ಕೃತ ಕರಡನ್ನು ವಿತರಿಸುವಂತೆ ಎಐಪಿಇಎಫ್ ಪ್ರಧಾನಿಯವರಿಗೆ ಬರೆದಿರುವ ಪತ್ರದಲ್ಲಿ ಕೋರಿದೆ.

ಕರಡು ತಿದ್ದುಪಡಿಯು ಸಹಕಾರಿ ಒಕ್ಕೂಟವಾದದ ತತ್ತ್ವಗಳನ್ನು ಉಲ್ಲಂಘಿಸುವ ಬೆದರಿಕೆಯೊಡ್ಡಿರುವುದರಿಂದ ಈ ರಾಜ್ಯಗಳು ಅದನ್ನು ವಿರೋಧಿಸುತ್ತಿವೆ. ಕೇಂದ್ರವು ರಾಜ್ಯಗಳ ಅಧಿಕಾರಗಳನ್ನು ಕಿತ್ತುಕೊಳ್ಳಲು ಪ್ರಯತ್ನಿಸುತ್ತಿದೆ ಮತ್ತು ಇದು ರಾಜ್ಯಗಳ ಹಿತಾಸಕ್ತಿಗೆ ಮಾರಕವಾಗಿದೆ ಎಂದು ಹೇಳಿರುವ ಎಐಪಿಇಎಫ್,ಉದ್ದೇಶಿತ ತಿದ್ದುಪಡಿಗಳು ತಮ್ಮ ಉಚಿತ ವಿದ್ಯುತ್ ಕಾರ್ಯಕ್ರಮಗಳ ಮೇಲೆ ಪ್ರತಿಕೂಲ ಪರಿಣಾಮಗಳನ್ನುಂಟು ಮಾಡುತ್ತವೆ ಮತ್ತು ರೈತರು ಹಾಗೂ ಸಮಾಜದ ಬಡವರ್ಗಗಳ ಹಿತಾಸಕ್ತಿಗಳಿಗೆ ವಿರುದ್ಧವಾಗಲಿವೆಯೆಂದು ರಾಜ್ಯಗಳು ಆತಂಕಗೊಂಡಿವೆ ಎಂದು ತಿಳಿಸಿದೆ.

ರಾಜ್ಯಗಳಿಂದ ಸಕಾಲದಲ್ಲಿ ಹಣಪಾವತಿಯನ್ನು ಖಚಿತ ಪಡಿಸಲು ಸಾಧ್ಯವಿಲ್ಲದ್ದರಿಂದ ರೈತರು ಮತ್ತು ಗೃಹಬಳಕೆ ಗ್ರಾಹಕರ ಖಾತೆಗಳಿಗೆ ನಗದು ಸಬ್ಸಿಡಿಯ ನೇರ ವರ್ಗಾವಣೆ ಕಾರ್ಯಗತ ಸಾಧ್ಯವಾಗದಿರಬಹುದು ಎಂದು ಖಾಸಗಿ ಮತ್ತು ಸರಕಾರಿ ಕ್ಷೇತ್ರಗಳ ತಜ್ಞರೂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಬೆಟ್ಟು ಮಾಡಿರುವ ಎಐಪಿಇಎಫ್,ಕರಡು ತಿದ್ದುಪಡಿ ಮಸೂದೆಯ ಕುರಿತು ಸರಕಾರವು ಎಚ್ಚರಿಕೆಯಿಂದ ಮುಂದುವರಿಯಬೇಕು. ಈಗಿರುವಂತೆ ಅಂಗೀಕಾರಗೊಂಡರೆ ವಿದ್ಯುತ್ ಕ್ಷೇತ್ರವು ಸರಕಾರದ ನಿಯಂತ್ರಣದಿಂದ ಖಾಸಗಿ ಕ್ಷೇತ್ರದ ಪಾಲಾಗಲಿದೆ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News