ವಿಶ್ವಸಂಸ್ಥೆಗೆ ಆತ್ಮವಿಶ್ವಾಸದ ಬಿಕ್ಕಟ್ಟು: ಪ್ರಧಾನಿ ಮೋದಿ

Update: 2020-09-22 03:41 GMT

ವಿಶ್ವಸಂಸ್ಥೆ, ಸೆ.22: ಸಮಗ್ರ ಸುಧಾರಣೆಯ ಕೊರತೆಯಿಂದಾಗಿ ವಿಶ್ವಸಂಸ್ಥೆ ಇಂದು ಆತ್ಮವಿಶ್ವಾಸದ ಬಿಕ್ಕಟ್ಟು ಎದುರಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.

ಇಂದಿನ ವಾಸ್ತವತೆಯನ್ನು ಪ್ರತಿನಿಧಿಸುವ, ಎಲ್ಲ ಹಕ್ಕುದಾರರಿಗೆ ಧ್ವನಿ ನೀಡುವ, ಪ್ರಚಲಿತ ಸವಾಲುಗಳನ್ನು ಎದುರಿಸುವ ಮತ್ತು ಮನುಕುಲದ ಕಲ್ಯಾಣವನ್ನು ಗುರಿ ಮಾಡಿದ ಸುಧಾರಿತ ಬಹುತ್ವವಾದ ಜಗತ್ತಿಗೆ ಇಂದು ಅಗತ್ಯ ಎಂದು ಅವರು ಸಲಹೆ ಮಾಡಿದ್ದಾರೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಅಲ್ಲದ ಚುನಾಯಿತ ಸದಸ್ವತ್ವ ಹುದ್ದೆಯನ್ನು 2021ರ ಜನವರಿ ಒಂದರಿಂದ ಭಾರತ ಅಲಂಕರಿಸುತ್ತಿರುವ ಹಿನ್ನೆಲೆಯಲ್ಲಿ ಮೋದಿ ಹೇಳಿಕೆಗೆ ವಿಶೇಷ ಮಹತ್ವ ಬಂದಿದೆ.

"ಅಪ್ರಸ್ತುತ ಸಂರಚನೆಯಿಂದ ನಾವು ಇಂದಿನ ಸವಾಲುಗಳ ವಿರುದ್ಧ ಹೋರಾಡಲು ಸಾಧ್ಯವಾಗದು. ಸಮಗ್ರ ಸುಧಾರಣೆ ಇಲ್ಲದ ಕಾರಣದಿಂದಾಗಿ ವಿಶ್ವಸಂಸ್ಥೆ ಇಂದು ಆತ್ಮವಿಶ್ವಾಸದ ಬಿಕ್ಕಟ್ಟು ಎದುರಿಸುತ್ತಿದೆ" ಎಂದು ವಿಶ್ವಸಂಸ್ಥೆಯ 75ನೇ ವರ್ಷಾಚರಣೆ ಅಂಗವಾಗಿ ನಡೆದ ಜನರಲ್ ಅಸೆಂಬ್ಲಿಯ ಉನ್ನತ ಮಟ್ಟದ ಸಭೆಯಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿದ ಅವರು ಅಭಿಪ್ರಾಯಪಟ್ಟರು.

75ನೇ ವರ್ಷಾಚಣೆ ಅಂಗವಾಗಿ 193 ಸದಸ್ಯರ ವಿಶ್ವಸಂಸ್ಥೆ ಜನರಲ್ ಅಸೆಂಬ್ಲಿ, ದೂರದೃಷ್ಟಿಯ ರಾಜಕೀಯ ಒಪ್ಪಂದವನ್ನು ಆಂಗೀಕರಿಸಿದೆ. ಇದು ಭಯೋತ್ಪಾದನೆ ವಿರುದ್ಧದ ಹೋರಾಟ, ಸುಧಾರಿತ ಬಹುತ್ವವಾದ, ಎಲ್ಲರ ಪಾಲ್ಗೊಳ್ಳುವಿಕೆಯ ಅಭಿವೃದ್ಧಿ ಮತ್ತು ಕೋವಿಡ್-19ನಂಥ ಸಾಂಕ್ರಾಮಿಕದ ವಿರುದ್ಧ ಹೋರಾಡಲು ಉತ್ತಮ ಸರ್ವಸನ್ನದ್ಧತೆಗೆ ಕರೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News