ಸಂಸದೀಯ ಪರಂಪರೆಗೆ ಅಪಚಾರ

Update: 2020-09-23 05:43 GMT

ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಎರಡು ವಿಧೇಯಕಗಳಿಗೆ ಸಂಬಂಧಿಸಿದಂತೆ ರಾಜ್ಯಸಭೆಯಲ್ಲಿ ರವಿವಾರ ಮತ್ತು ಸೋಮವಾರ ನಡೆದ ಘಟನೆಗಳು ಭಾರತದ ಸಂಸದೀಯ ಇತಿಹಾಸದಲ್ಲಿ ಕಪ್ಪು ಕಲೆಗಳಾಗಿ ದಾಖಲಾಗಲಿವೆ. ರೈತರ ಕೃಷಿ ಉತ್ಪನ್ನ ಮಾರಾಟ ಹಾಗೂ ವಾಣಿಜ್ಯ (ಉತ್ತೇಜನ ಮತ್ತು ಸೌಲಭ್ಯ) ಮತ್ತು ಬೆಲೆ ಭರವಸೆ ಹಾಗೂ ಕೃಷಿ ಸೇವೆಗಳ ಕುರಿತ ಎರಡು ವಿಧೇಯಕಗಳನ್ನು ಪ್ರತಿಪಕ್ಷಗಳ ಆಕ್ಷೇಪದ ನಡುವೆ ಧ್ವನಿಮತದಿಂದ ಅಂಗೀಕರಿಸಿದ ದುಂಡಾವರ್ತನೆ ಸಂಸದೀಯ ಶಿಷ್ಟಾಚಾರಗಳಿಗೆ ಬಗೆದ ಅಪಚಾರವಾಗಿದೆ. ರೈತರ ಪಾಲಿಗೆ ಮರಣ ಶಾಸನವಾಗಿದೆ ಎಂದು ವಿವಾದಕ್ಕೆ ಕಾರಣವಾಗಿರುವ ಈ ವಿಧೇಯಕಗಳ ಬಗ್ಗೆ ಸದನದಲ್ಲಿ ಮತದಾನ ನಡೆಯಬೇಕೆಂಬುದು ಪ್ರತಿಪಕ್ಷಗಳ ಆಗ್ರಹವಾಗಿತ್ತು. ಆದರೆ ಕೇಂದ್ರದ ಬಿಜೆಪಿ ಸರಕಾರ ಅದಕ್ಕೆ ಅವಕಾಶ ನೀಡಲಿಲ್ಲ.ರವಿವಾರ ಉಪಸಭಾಪತಿ ಹರಿವಂಶಸಿಂಗ್ ಮೂಲಕ ಧ್ವನಿಮತಕ್ಕೆ ಹಾಕಿ ಈ ವಿಧೇಯಕಗಳನ್ನು ಪಾಸು ಮಾಡಿಕೊಳ್ಳಲಾಯಿತು.ಇದರಿಂದ ಕೆರಳಿದ ಪ್ರತಿಪಕ್ಷ ಸದಸ್ಯರು ಸಹಜವಾಗಿ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೇ ನೆಪವಾಗಿಟ್ಟುಕೊಂಡು ಎಂಟು ಮಂದಿ ರಾಜ್ಯಸಭಾ ಸದಸ್ಯರನ್ನು ಸೋಮವಾರ ಅಮಾನತು ಮಾಡಲಾಗಿದೆ. ಅಮಾನತುಗೊಂಡ ಈ ಸಂಸದರು ಸಂಸತ್ತಿನ ಹೊರಗೆ ಧರಣಿ, ಪ್ರತಿಭಟನೆ ನಡೆಸಿದ್ದಾರೆ.

ಕೃಷಿ ಕ್ಷೇತ್ರದ ಸುಧಾರಣೆಯ ಉದ್ದೇಶದಿಂದ ಈ ವಿಧೇಯಕಗಳನ್ನು ತರಲಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಹೇಳುತ್ತಿದ್ದಾರೆ.ಆದರೆ _ ಈ ವಿಧೇಯಕಗಳು ರೈತರನ್ನು ಕಾರ್ಪೊರೇಟ್ ಕಂಪೆನಿಗಳ ಶೋಷಣೆಗೊಳಪಡಿಸಲಿವೆ, ಕಾರ್ಪೊರೇಟ್ ಬೇಸಾಯಕ್ಕೆ ರತ್ನಗಂಬಳಿ ಹಾಸಲಿವೆ ಎಂದು ಕೇಂದ್ರ ಆಹಾರ ಸಂಸ್ಕರಣ ಉದ್ಯಮದ ಸಚಿವೆಯಾಗಿದ್ದ ಹರ್ ಸಿಮ್ರತ್ ಕೌರ್ ಬಾದಲ್ ಅವರು ರಾಜೀನಾಮೆ ನೀಡಿದ್ದಾರೆ. ಇದರ ಬೆನ್ನಲ್ಲೇ ಪಂಜಾಬ್ ಹರಿಯಾಣ ಮತ್ತು ರಾಜಸ್ಥಾನದ ರೈತರು ರಸ್ತೆ ತಡೆಯಂತಹ ಚಳವಳಿ ನಡೆಸಿದ್ದಾರೆ. ಇಂತಹ ಸೂಕ್ಷ್ಮ ಪ್ರಶ್ನೆಗಳಲ್ಲಿ ಸಹಾನುಭೂತಿಯಿಂದ ನಡೆದುಕೊಳ್ಳಬೇಕಾಗಿದ್ದ ಸರಕಾರ ಅದರಲ್ಲೂ ಪ್ರಧಾನಿ ಹಠಕ್ಕೆ ಬಿದ್ದವರಂತೆ ಈ ವಿಧೇಯಕಗಳ ಸಮರ್ಥನೆಗಿಳಿದಿರುವುದು ಸರಿಯಲ್ಲ.

ಈ ವಿವಾದಾತ್ಮಕ ವಿಧೇಯಕಗಳು ಕಾಯ್ದೆಯಾಗಿ ಜಾರಿಗೆ ಬಂದರೆ ಬೆಂಬಲ ಬೆಲೆ ವ್ಯವಸ್ಥೆ ( ಎಂ.ಎಸ್.ಪಿ) ರದ್ದಾಗುತ್ತದೆ ಎಂಬ ವಿರೋಧ ಪಕ್ಷಗಳು ಹಾಗೂ ರೈತ ಸಂಘಟನೆಗಳ ಆರೋಪದಲ್ಲಿ ಹುರುಳಿಲ್ಲದಿಲ್ಲ. ಈ ವಿಧೇಯಕಗಳಿಂದ ರೈತರ ಉತ್ಪನ್ನಗಳಿಗೆ ಕೊಡುತ್ತಿರುವ ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆ ಹಾಗೂ ರೈತರ ಉತ್ಪನ್ನಗಳನ್ನು ಸರಕಾರ ಖರೀದಿಸುವ ಪ್ರಕ್ರಿಯೆಗಳಿಗೆ ತೊಂದರೆಯಾಗುವುದಿಲ್ಲ ಎಂದು ಪ್ರಧಾನ ಮಂತ್ರಿಗಳು ವೀಡಿಯೊ ಟ್ವೀಟ್ ಮಾಡಿದ್ದರೂ ಇದು ಬರೀ ಹೇಳಿಕೆ ಮಾತ್ರ. ಮೂರೂ ವಿಧೇಯಕಗಳಲ್ಲಿ ಕನಿಷ್ಠ ಬೆಂಬಲ ಬೆಲೆಯ( ಎಂಎಸ್‌ಪಿ) ಉಲ್ಲೇಖವಿಲ್ಲ ಎಂಬುದು ಪ್ರತಿಪಕ್ಷಗಳ ಆಕ್ಷೇಪವಾಗಿದೆ. ಈ ಬಗ್ಗೆ ಸಂಘಪರಿವಾರದ ಸಂಘಟನೆಗಳಾದ ಸ್ವದೇಶಿ ಜಾಗರಣ ಮಂಚ್‌ಮತ್ತು ಭಾರತೀಯ ಮಜ್ದೂರ ಸಂಘಗಳು ಕಾಟಾಚಾರದ ಆಕ್ಷೇಪ ವ್ಯಕ್ತಪಡಿಸಿವೆ. ಇದು ಪ್ರತಿರೋಧದ ಜಾಗದಲ್ಲೂ ತಾವೇ ಇರಬೇಕೆಂಬ ತೋರಿಕೆಯ ವಿರೋಧವಲ್ಲದೆ ಬೇರೇನೂ ಅಲ್ಲ. ಅದೇನೇ ಇರಲಿ ಸರಕಾರ ತನ್ನ ವಿಧೇಯಕಗಳನ್ನು ಪಾಸು ಮಾಡಿಕೊಳ್ಳಲು ಸಂಸತ್ತನ್ನು ರಬ್ಬರ್ ಸ್ಟಾಂಪ್ ನಂತೆ ಬಳಸಿಕೊಳ್ಳುವುದನ್ನು ಯಾರೂ ಒಪ್ಪಲು ಸಾಧ್ಯವಿಲ್ಲ.

ಇನ್ನು ರಾಜ್ಯಸಭೆಯಲ್ಲಿ ಕೋಲಾಹಲಕ್ಕೆ ಕಾರಣರಾದ ಎಂಟು ಸದಸ್ಯರ ಅಮಾನತು ಅತಿರೇಕದ ಕ್ರಮವಾಗಿದೆ.ಬಿಜೆಪಿ ಅಧಿಕಾರದಲ್ಲಿರಲಿ, ಪ್ರತಿಪಕ್ಷ ಸ್ಥಾನದಲ್ಲಿ ಇರಲಿ ಎಂದೂ ಸಂಸತ್ತಿನ ಸತ್ಪರಂಪರೆಯನ್ನು ಗೌರವಿಸಿಲ್ಲ. ಹಿಂದೆ ಯುಪಿಎ ಸರಕಾರವಿದ್ದಾಗ ಮುಖ್ಯ ಪ್ರತಿಪಕ್ಷವಾಗಿದ್ದ ಬಿಜೆಪಿ ಸಂಸತ್ತಿನ ಉಭಯ ಸದನಗಳು ಸುಲಲಿತವಾಗಿ ನಡೆಯಲು ಎಂದೂ ಅವಕಾಶ ನೀಡಲಿಲ್ಲ. ಈಗ ಅಧಿಕಾರದಲ್ಲಿದ್ದಾಗಲೂ ಅನಗತ್ಯವಾಗಿ ಎಂಟು ಮಂದಿ ಪ್ರತಿಪಕ್ಷ ಸದಸ್ಯರನ್ನು ಅಮಾನತು ಮಾಡಿ ಸಂಸದೀಯ ಘನತೆಗೆ ಚ್ಯುತಿ ತಂದಿದೆ.

ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳ ಕಾವಲು ರಕ್ಷಕರಾಗಿ ಪ್ರತಿಪಕ್ಷಗಳ ಸದಸ್ಯರು ಸರಕಾರದ ನಡೆಯನ್ನು, ತಪ್ಪು ನಿರ್ಧಾರಗಳನ್ನು ವಿರೋಧಿಸಲೇಬೇಕಾಗುತ್ತದೆ.ಅದಕ್ಕೆ ಸರಕಾರ ಸೂಕ್ತ ಸಮಜಾಯಿಷಿ ನೀಡಿ ಸಮಸ್ಯೆ ಉಲ್ಬಣಿಸದಂತೆ ನೋಡಿಕೊಳ್ಳಬೇಕಾಗುತ್ತದೆ. ಆದರೆ ಈಗಿನ ಕೇಂದ್ರದ ಮೋದಿ ನೇತೃತ್ವದ ಬಿಜೆಪಿ ಸರಕಾರ ಜನತೆಯ ಪರವಾಗಿ ಧ್ವನಿಯೆತ್ತುವವರನ್ನು ಶತ್ರುಗಳಂತೆ ಕಾಣುತ್ತಿದೆ.ಸಂಸತ್ತಿನ ಹೊರಗೆ ಜನಪರ ಧ್ವನಿಗಳನ್ನು ಮೌನವಾಗಿಸಲು ಬಂಧನ ಸತ್ರದಂತಹ ತಂತ್ರ ಅನುಸರಿಸುತ್ತದೆ.ಸಂಸತ್ತಿನ ಒಳಗೆ ಚುನಾಯಿತ ಸಂಸದರ ವಿರುದ್ಧ ಅಮಾನತು ಅಸ್ತ್ರವನ್ನು ಬಳಸುತ್ತದೆ. ಇದು ನಿರಂಕುಶ ಸರ್ವಾಧಿಕಾರಿ ನೀತಿಯಲ್ಲದೆ ಬೇರೇನೂ ಅಲ್ಲ.

 ರಾಜ್ಯಸಭೆಯ ಉಪಸಭಾಪತಿ ಹರಿವಂಶಸಿಂಗ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ ಪ್ರತಿಪಕ್ಷಗಳ ಎಂಟು ಮಂದಿ ಸದಸ್ಯರನ್ನು ಸಭಾಪತಿ ವೆಂಕಯ್ಯ ನಾಯ್ಡು ಅವರು ಅಮಾನತು ಮಾಡಿರುವುದು ಸರಿಯೆನಿಸುವುದಿಲ್ಲ. ಅದಲ್ಲದೆ ಮತದಾನಕ್ಕೆ ಅವಕಾಶ ನೀಡದೇ ಧ್ವನಿಮತದಿಂದ ಅಂಗೀಕರಿಸಲ್ಪಟ್ಟ ವಿಧೇಯಕಗಳಿಗೆ ಅಂಕಿತ ಹಾಕದಂತೆ ಪ್ರತಿಪಕ್ಷಗಳು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ಮನವಿ ಮಾಡಿಕೊಂಡಿವೆ. ಇದೆಲ್ಲ ಒಳ್ಳೆಯ ಬೆಳವಣಿಗೆ ಅಲ್ಲ. ಸರಕಾರ ತನ್ನ ಹಠಮಾರಿ ನೀತಿಯನ್ನು ಕೈ ಬಿಟ್ಟು ಪ್ರತಿಪಕ್ಷಗಳ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಸದೀಯ ಕಲಾಪ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News