ಪೌರಕಾರ್ಮಿಕರ ಸರಾಸರಿ ಆಯಸ್ಸು 40 ವರ್ಷ

Update: 2020-09-23 06:41 GMT

ರಾಜ್ಯದಲ್ಲಿ ಮ್ಯಾನ್‌ಹೋಲ್‌ಗೆ 10 ವರ್ಷಗಳಲ್ಲಿ 79 ಮಂದಿ ಬಲಿ

ದೇಶದಲ್ಲಿ ಪ್ರತಿ ವರ್ಷ ಒಂದು ಸಾವಿರ ಮಂದಿ ಮ್ಯಾನ್‌ಹೋಲ್‌ಗಳಿಗೆ ಬಲಿಯಾಗುತ್ತಾರೆ ಎಂದು ಸರಕಾರಿ ಅಂಕಿಅಂಶಗಳು ಹೇಳುತ್ತವೆ. ಕಳೆದ ಹತ್ತು ವರ್ಷದಲ್ಲಿ ಇಡೀ ರಾಜ್ಯದಲ್ಲಿ 79 ಮಂದಿ ಸಾವನ್ನಪ್ಪಿದ್ದಾರೆ. ಮ್ಯಾನ್ ಹೋಲ್ ಸ್ಕಾವೆಂಜ್ 2013 ಎಂಬ ಕಾಯ್ದೆ ಇದೆ. ಅದರ ಪ್ರಕಾರ ಮೃತರ ಕುಟುಂಬಕ್ಕೆ ಸರಕಾರಿ ನೌಕರಿ, ಉಚಿತ ಶಿಕ್ಷಣ, ನಿವೇಶನ ನೀಡಬೇಕು ಎಂಬ ನಿಯಮ ಇದೆ. ಇದನ್ನು ಯಾರು ಪಾಲಿಸುತ್ತಿಲ್ಲ. ಈ ಕಾಯ್ದೆ ಉಲ್ಲಂಘನೆಯಾಗುತ್ತಿದೆ. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಕೇವಲ 10 ಲಕ್ಷ ರೂ. ಮಾತ್ರ ನೀಡಲಾಗುತ್ತಿದೆ. ಅದು ಸಹ ಸಮರ್ಪಕವಾಗಿ ತಲುಪುತ್ತಿಲ್ಲ. ಪೌರಕಾರ್ಮಿಕರಿಗೆ ಯಾವುದೇ ಸೌಲಭ್ಯಗಳಿಲ್ಲ. ಸಿದ್ದರಾಮಯ್ಯ ಇದ್ದಾಗ ಗುತ್ತಿಗೆ ಪದ್ಧತಿ ರದ್ದುಗೊಳಿಸಿದರು. ಆದರೆ ಇನ್ನೂ ಕೆಲವು ಕಡೆಗಳಲ್ಲಿ ಗುತ್ತಿಗೆ ಪದ್ಧತಿಯನ್ನು ಅನುಸರಿಸಲಾಗುತ್ತಿದೆ. ಗುತ್ತಿಗೆ ದಾರರ ಲಾಭಿಗೆ ಸರಕಾರಗಳು ಮಣಿಯುತ್ತಿವೆ ಎನ್ನುವುದು ಕಾರ್ಮಿಕರ ಅಳಲು. ದಿನೇ ದಿನೇ ಕೊರೋನ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ ಎನ್ನಲಾಗಿದೆ.

-------------------------------------------------------------------------

✍️ ಯುವರಾಜ್

ಪೌರಕಾರ್ಮಿಕರ ಸರಾಸರಿ ಆಯಸ್ಸು 40 ವರ್ಷ

ಬೆಂಗಳೂರು: ನಮ್ಮ ಮನೆ ಹಾಗೂ ನಗರ ಸ್ವಚ್ಛವಾಗಿರಬೇಕಾದರೆ ಪೌರಕಾರ್ಮಿಕರ ಪಾತ್ರ ಬಹಳ ದೊಡ್ಡದಿರುತ್ತದೆ. ಆದರೆ, ಇವರಿಗೆ ಸರಕಾರದಿಂದ ಸಿಗುವ ಸೌಲಭ್ಯ ಏನೇನೂ ಇಲ್ಲ. ಗುತ್ತಿಗೆದಾರರೂ ಸರಿಯಾದ ಆರೋಗ್ಯ ಸೌಲಭ್ಯ ಒದಗಿಸದ ಕಾರಣ ಇಂದು ಪೌರಕಾರ್ಮಿಕರ ಸರಾಸರಿ ಆಯಸ್ಸು 40 ವರ್ಷ ಎಂದು ಗುರುತಿಸಲಾಗಿದೆ. ಗುತ್ತಿಗೆ ಪೌರಕಾರ್ಮಿಕರು ರಜೆಯನ್ನು ಲೆಕ್ಕಿಸದೆ ತಿಂಗಳು ಪೂರ್ತಿ ಕೆಲಸ ಮಾಡುತ್ತಿರುತ್ತಾರೆ. ಆದರೆ ವೇತನ ಕೊಡುವಾಗ ಶೇಕಡ 70-80ರಷ್ಟು ಕಾರ್ಮಿಕರಿಗೆ ವೇತನ ಚೀಟಿಯನ್ನು ನೀಡುವುದಿಲ್ಲ. ಹಾಗೂ ಸಾಕಷ್ಟು ಗುತ್ತಿಗೆದಾರರು ಪೌರಕಾರ್ಮಿಕರಿಗೆ ಕೇವಲ 15-20 ದಿನಗಳ ಭವಿಷ್ಯ ನಿಧಿ (CPD) ಹಣವನ್ನು ಮಾತ್ರ ಪಾವತಿಸುತ್ತಿದ್ದಾರೆ ಹಲವು ಕಾರ್ಮಿಕರು ಆರೋಪಿಸುತ್ತಾರೆ.

ಕೊರೋನ ಸೋಂಕು ಸಂದರ್ಭದಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಪೌರಕಾರ್ಮಿಕರಿಗೆ ಉತ್ತಮ ಗುಣಮಟ್ಟದ ಸುರಕ್ಷತಾ ಕಿಟ್‌ಅನ್ನು ಬಿಬಿಎಂಪಿ ಒದಗಿಸಿಲ್ಲ. ಸರಕಾರದ ಸೂಚನೆ ಪ್ರಕಾರ ಪ್ರತಿಯೊಬ್ಬ ಪೌರಕಾರ್ಮಿಕನಿಗೆ ಎರಡು ಜತೆ ಮಾಸ್ಕ್, ಒಂದು ಜತೆ ಕೈ ಗ್ಲೌಸ್, ಶೂ ಮತ್ತು ಸ್ಯಾನಿಟೈಸರ್ ಒಳಗೊಂಡ ಕಿಟ್ ನೀಡಬೇಕು. ಆದರೆ, ಬಿಬಿಎಂಪಿ ಬೆರಳೆಣಿಕೆ ಪೌರಕಾರ್ಮಿಕರಿಗೆ ಸುರಕ್ಷತಾ ಕಿಟ್ ನೀಡಿದೆ. ಅಲ್ಲದೇ ಪಾಲಿಕೆ ವ್ಯಾಪ್ತಿಯಲ್ಲಿ 99 ಪೌರಕಾರ್ಮಿಕರ ಕಾಲನಿಗಳಿದ್ದು, ಈ ಕಾಲನಿಗಳಿಗೆ ಆರೋಗ್ಯ ಇಲಾಖೆ ಅಧಿಕಾರಿಗಳ ತಂಡ ತೆರಳಿ ತಪಾಸಣೆ ನಡೆಸಬೇಕು. ಆದರೆ, ಇದುವರೆಗೂ ಪೌರಕಾರ್ಮಿಕರ ಮನೆಗೆ ತೆರಳಿ ತಪಾಸಣೆ ನಡೆಸಿದ ಉದಾಹರಣೆ ಇಲ್ಲ ಎಂದು ಕಾರ್ಮಿಕರು ಆರೋಪಿಸುತ್ತಾರೆ.

ಪೌರಕಾರ್ಮಿಕರ ಬಗ್ಗೆ ಸರಕಾರ ಸಹ ಇದುವರೆಗೂ ಯಾವುದೇ ರೀತಿಯ ಸರಿಯಾದ ಕ್ರಮವನ್ನು ತೆಗದುಕೊಂಡಿಲ್ಲ. ಸಾಕಷ್ಟು ಜನ ಇ.ಎಸ್. ಐ ಸೌಲಭ್ಯ ಸಿಗದೆ, ತಮ್ಮ ಸಂಬಳದ ಬಹುತೇಕ ಹಣ ಆಸ್ಪತ್ರೆಗೆಂದೇ ಮೀಸಲಿಟ್ಟಿರುತ್ತಾರೆ. ಹೀಗಿರುವಾಗ 20 ವರ್ಷಗಳಿಂದ ದುಡಿಯುತ್ತಿರುವ ಕಾರ್ಮಿಕರಲ್ಲಿ ದೈಹಿಕ ದೃಢತೆ ಇರಲು ಸಾಧ್ಯವಾಗುತ್ತಿಲ್ಲ. ಪೌರಕಾರ್ಮಿಕರಾಗಿ ಮುಂದುವರಿಯಬೇಕಾದರೆ ಬಿಬಿಎಂಪಿ ಮತ್ತು ಸರಕಾರಿ ವೈದ್ಯರಿಂದ ದೈಹಿಕ ದೃಢತೆಯ ಬಗ್ಗೆ ವೈದ್ಯಕೀಯ ಪ್ರಮಾಣ ಪತ್ರ ಪಡೆದಿರಬೇಕು ಮತ್ತು ಇ.ಎಸ್.ಐ ಮತ್ತು ಇ.ಪಿ.ಎಫ್ ಸೌಲಭ್ಯ ಹೊಂದಿರಲೇಬೇಕು ಎಂಬ ನಿಯಮದಿಂದ ಹಲವಾರು ಮಂದಿ ಪೌರಕಾರ್ಮಿಕರು ಕೆಲಸವನ್ನು ಕಳೆದುಕೊಳ್ಳುತ್ತಿದ್ದಾರೆ.

ಆಯ್ಕೆಯ ವಿಧಾನದಲ್ಲಿ ತಾರತಮ್ಯ: ಹೆಚ್ಚು ವರ್ಷ ಕಾರ್ಯನಿರ್ವಹಿಸುತ್ತಿರುವ ವ್ಯಕ್ತಿಗಿಂತ ಕಡಿಮೆ ಸಂಖ್ಯೆಯ ವರ್ಷಗಳು ಕಾರ್ಯನಿರ್ವಹಿಸುತ್ತಿರುವ ವ್ಯಕ್ತಿಗೆ ಆದ್ಯತೆ ನೀಡುವುದು ಹಾಗೂ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಪೈಕಿ ಹೆಚ್ಚು ವಯಸ್ಸಾದ ವ್ಯಕ್ತಿಯನ್ನು ಕಡಿಮೆ ವಯಸ್ಸಾದ ವ್ಯಕ್ತಿಗಿಂತ ಹಿರಿಯನೆಂದು ಪರಿಗಣಿಸಿ, ಅದರಂತೆ ವಯಸ್ಸಿನ ಆಧಾರದ ಮೇರೆಗೆ ಆಯ್ಕೆ ಮಾಡಿಕೊಂಡರೆ, ನೇಮಕಾತಿ ಪ್ರಕ್ರಿಯೆಯಲ್ಲಿ ಬಿಬಿಎಂಪಿಯೇ ತಾರತಮ್ಯ ಸೃಷ್ಟಿಸಿದೆ ಎನ್ನಲಾಗಿದೆ.

► ಕೊರೋನಕ್ಕೆ 4 ಮಂದಿ ಬಲಿ

ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಾಲ್ಕು ಮಂದಿ ಪೌರಕಾರ್ಮಿಕರು ಕೊರೋನ ಸೋಂಕಿಗೆ ಬಲಿಯಾಗಿದ್ದಾರೆ. ಇವರಲ್ಲಿ ಮೂರು ಮಂದಿ ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ಸಿಗದೇ ಮೃತರಾಗಿದ್ದಾರೆ.

► ಕಾರ್ಮಿಕರ ನಡುವೆ ಅಸಮಾನತೆ

ರಾಜ್ಯದಲ್ಲಿ ಸುಮಾರು 45, 000ಕ್ಕೂ ಹೆಚ್ಚು ಗುತ್ತಿಗೆ ಪೌರ ಕಾರ್ಮಿಕರಿದ್ದಾರೆ. ಎಲ್ಲರನ್ನೂ ಖಾಯಂ ಮಾಡಬೇಕು. ಹೊಸ ನಿಯಮದ ಪ್ರಕಾರ 20 ವರ್ಷಗಳಿಂದ ಗುತ್ತಿಗೆದಾರರ ಬಳಿ ಕೆಲಸ ಮಾಡಿದ ಪೌರಕಾರ್ಮಿಕರು ಹೊರಗೆ ಉಳಿಯುತ್ತಾರೆ. ವಯಸ್ಸನ್ನು ಆಧಾರವಾಗಿಟ್ಟುಕೊಂಡು ನೇಮಕಾತಿ ಮಾಡಿಕೊಳ್ಳುವುದು ಒಪ್ಪುವ ಮಾತಲ್ಲ. ಬಿಬಿಎಂಪಿ ಪೌರಕಾರ್ಮಿಕರ ನಡುವೆ ತಾರತಮ್ಯ ಸೃಷ್ಟಿಸುತ್ತಿದೆ. ಎಲ್ಲ ಪೌರಕಾರ್ಮಿಕರನ್ನು ಸಮಾನತೆಯಿಂದ ಕಾಣಬೇಕು. ಮೀಸಲಾತಿ ಪ್ರಕ್ರಿಯೆಯಿಂದ ಎಲ್ಲಾ ವರ್ಗದ ಜನರಿಗೂ ಅವಕಾಶ ಕೊಟ್ಟಿದೆ. ಆದರೆ, ಎಲ್ಲ ವರ್ಗದವರೂ ಈ ಕೆಲಸವನ್ನು ಮಾಡಲು ಸಾಧ್ಯವೇ? ಕಸದ ಕೆಲಸ ಮಾಡುವವರು ಎಂಬ ತಾರತಮ್ಯ ನೇಮ ಕಾತಿಯಲ್ಲಿಯೂ ಬಳಸಿರುವುದು ದುರಂತ.

- ಸೈಯದ್ ಮುಜೀಬ್, ರಾಜ್ಯ ಮುನ್ಸಿಪಾಲ್ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ

► ಪೌರಕಾರ್ಮಿಕರಿಗೆ ಆನ್‌ಲೈನ್ ಪ್ರಕ್ರಿಯೆ ಬೇಡ

ನಗರದ ಎಲ್ಲಾ ಪೌರಕಾರ್ಮಿಕರನ್ನು ಒಟ್ಟಿಗೆ ಖಾಯಂ ಕಾರ್ಮಿಕರನ್ನಾಗಿ ಮಾಡಬೇಕೆಂದು ನಾವು ಸುಮಾರು ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ಬಿಬಿಎಂಪಿ ಹೊರಡಿಸಿರುವ ಈ ಅಧಿಸೂಚನೆ ಯಾರು ಒಪ್ಪುವಂತದಲ್ಲ. 20 ವರ್ಷಗಳಿಂದ ಸಾಕಷ್ಟು ಕಾರ್ಮಿಕರು ಬರೀ ಕೈಯಿಂದ ಕಸವನ್ನೆಲ್ಲಾ ಎತ್ತುತ್ತಿದ್ದಾರೆ. ಅವರಿಗೆ ನ್ಯಾಯ ಸಿಗಬೇಕು. ಯಾರಿಗೂ ಅನ್ಯಾಯವಾಗಬಾರದು. ಬಹುತೇಕ ಪೌರಕಾರ್ಮಿಕರಿಗೆ ಶಿಕ್ಷಣವಿಲ್ಲ, ಹಾಗೂ ಸಾಕಷ್ಟು ಕಾರ್ಮಿಕರಿಗೆ ತಮ್ಮ ಹೆಸರನ್ನು ಬರೆಯುವುದಕ್ಕೆ ಬರುವುದಿಲ್ಲ. ಇಂತಹ ಸಂದರ್ಭದಲ್ಲಿ ಆನ್‌ಲೈನ್ ಮುಖಾಂತರ ನೇಮಕ ಮಾಡಿಕೊಳ್ಳುವ ಪ್ರಕ್ರಿಯೆಯನ್ನು ಖಂಡಿಸುತ್ತೇನೆ.

 - ನಿರ್ಮಲಾ, ಕರ್ನಾಟಕ ಪ್ರಗತಿಪರ ಪೌರಕಾರ್ಮಿಕರ ಸಂಘ ಅಧ್ಯಕ್ಷೆ

-------------------------------------------------------------------------

✍️ ರಂಗರಾಜು ಎನ್.ಡಿ.

ಪೌರಕಾರ್ಮಿಕರಿಗೆ ಸವಲತ್ತು ಪುಸ್ತಕದಲ್ಲಿ ಮಾತ್ರ

► ಮೃತ ಪೌರಕಾರ್ಮಿಕರಿಗೆ ಇನ್ನೂ ಸಿಕ್ಕಿಲ್ಲ ಉಪಧನ

ತುಮಕೂರು:  ನಗರವೂ ಸೇರಿದಂತೆ 10 ತಾಲೂಕು ಕೇಂದ್ರಗಳನ್ನು ಒಳಗೊಂಡಿರುವ ತುಮಕೂರು ಜಿಲ್ಲೆ, 27 ಲಕ್ಷಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿದೆ. 1 ಮಹಾನಗರಪಾಲಿಕೆ, 2 ನಗರಸಭೆ, 4 ಪುರಸಭೆ, 3 ಪಪಂಗಳನ್ನು ಹೊಂದಿರುವ ಜಿಲ್ಲೆಯಲ್ಲಿ 331 ಗ್ರಾಪಂಗಳು ಸೇರಿದಂತೆ ಸ್ಥಳೀಯ ಸಂಸ್ಥೆಗಳಲ್ಲಿ ಸ್ವಚ್ಛತೆಯಲ್ಲಿ ತೊಡಗಿರುವ ಪೌರಕಾರ್ಮಿಕರ ಸಂಖ್ಯೆ 1,500ಕ್ಕೂ ಅಧಿಕವಿದೆ.

35 ವಾರ್ಡ್‌ಗಳನ್ನು ಹೊಂದಿರುವ ತುಮಕೂರು ನಗರದಲ್ಲಿ 3 ಲಕ್ಷಕ್ಕೂ ಅಧಿಕ ಜನಸಂಖ್ಯೆಯಿದ್ದು, 700 ಜನರಿಗೆ ಓರ್ವ ಪೌರಕಾರ್ಮಿಕನಂತೆ 507 ಜನ ಕೆಲಸ ಮಾಡುತ್ತಿದ್ದಾರೆ. ಇವರಲ್ಲಿ 149 ಜನ ಖಾಯಂ ನೌಕರರಿದ್ದರೆ, 362 ಜನರು ನೇರ ಪಾವತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಖಾಯಂ ನೌಕರರನ್ನು ಹೊರತು ಪಡಿಸಿದರೆ, ಉಳಿದವರಿಗೆ ಪಾಲಿಕೆಯಿಂದ ಇದುವರೆಗೂ ಸಮವಸ್ತ್ರ ವಿತರಿಸಿರುವ ಯಾವುದೇ ಉದಾಹರಣೆಯಿಲ್ಲ. ಇತ್ತೀಚೆಗೆ ಸ್ಥಳೀಯ ಬ್ಯಾಂಕ್‌ವೊಂದರ ಅಧ್ಯಕ್ಷರು ನೀಡಿದ ಸಮವಸ್ತ್ರವೇ ಆಧಾರ. ಇದು ಇಲ್ಲಿನ ಪೌರಕಾರ್ಮಿಕರ ಸ್ಥಿತಿ.

2002ರಿಂದ ಇದುವರೆಗೂ ಅಂದಾಜು 45ಕ್ಕೂ ಹೆಚ್ಚು ಪೌರಕಾರ್ಮಿಕರು ವಿವಿಧ ಕಾರಣಗಳಿಗಾಗಿ ಸಾವನ್ನಪ್ಪಿದ್ದಾರೆ. ಆದರೆ, ಅವರಿಗೆ ಉಪಧನ ನೀಡುವಂತೆ ಹಲವಾರು ಹೋರಾಟಗಳನ್ನು ನಡೆಸಿ, ನ್ಯಾಯಾಲಯದ ಮೆಟ್ಟಿಲು ಏರಿದ್ದರೂ ಇದುವರೆಗೂ ಉಪಧನ (ಇಡಿಗಂಟು) ಲಭ್ಯವಾಗಿಲ್ಲ. 13-06-2019ರಲ್ಲಿ ಈ ಸಂಬಂಧ ಲೇಬರ್ ಟ್ರಿಬ್ಯುನಲ್‌ನಿಂದ ಪೌರಕಾರ್ಮಿಕರ ಪರವಾಗಿ ತೀರ್ಪು ಬಂದಿದೆ. ಆದರೆ, ಇದರ ವಿರುದ್ಧ ಮೇಲ್ಮನವಿ ಸಲ್ಲಿಕೆಯಾಗಿರುವ ಕಾರಣ ಇಂದಿಗೂ ಉಪಧನಲಭ್ಯವಾಗಿಲ್ಲ. ಮನೆಗೆ ಆಧಾರವಾಗಿದ್ದ ವ್ಯಕ್ತಿಗಳನ್ನು ಕಳೆದುಕೊಂಡ ಪೌರಕಾರ್ಮಿಕರ ಕುಟುಂಬಗಳು ದಿನನಿತ್ಯ ಪರಿತಪಿಸುತ್ತಿವೆ. ಕೇವಲ ಬೆರಳೆಣಿಕಯಷ್ಟು ಕುಟುಂಬ ಸದಸ್ಯರಿಗೆ ಮಾತ್ರ ನಗರಪಾಲಿಕೆಯಲ್ಲಿ ಸಣ್ಣಪುಟ್ಟ ಉದ್ಯೋಗ ದೊರೆತಿದೆ. ಉಳಿದ ಕುಟುಂಬಗಳ ಸ್ಥಿತಿ ತೀರಾ ಚಿಂತಾಜನಕವಾಗಿದೆ. ತುಮಕೂರು ನಗರದಲ್ಲಿ ಇದುವರೆಗೂ ಮ್ಯಾನ್ ಹೋಲ್ (ಮ್ಯಾನುವೆಲ್ ಸ್ಕಾವೆಂಜರ್)ನಲ್ಲಿ ಕೆಲಸ ಮಾಡುವ ವೇಳೆ ಎರಡು ಜನರು ಮೃತಪಟ್ಟಿದ್ದು, ಸಿಐಟಿಯು, ಇತರ ಸಂಘಟನೆಗಳ ಒತ್ತಾಯದ ಮೇರೆಗೆ ತಲಾ 10 ಲಕ್ಷ ರೂ. ಪರಿಹಾರ ಒದಗಿಸಿದ್ದು, ಒಂದು ಕುಟುಂಬ ಸದಸ್ಯರಿಗೆ ಉದ್ಯೋಗ ದೊರೆತಿದೆ. ನಗರದ ಐದು ಕಡೆಗಳಲ್ಲಿ ಪೌರಕಾರ್ಮಿಕರು ಕೆಲಸ ಮುಗಿಸಿ ಮನೆಗೆ ತೆರಳುವ ಮುನ್ನ ಸ್ನಾನ ಮಾಡಬೇಕು ಎಂದರೆ ಶೇ.18ರ ನಿಧಿಯಲ್ಲಿ ಶೌಚಾಲಯ, ವಿಶ್ರಾಂತಿಗೃಹ ಮತ್ತು ಸ್ನಾನಗೃಹಗಳನ್ನು ನಿರ್ಮಿಸಲಾಗಿದೆ. ಅವುಗಳಲ್ಲಿ ಬನಶಂಕರಿ ಮತ್ತು ಶೆಟ್ಟಿಹಳ್ಳಿ ಎಚ್.ಎಂ.ಎಸ್.ಕಾಲೇಜಿನ ಬಳಿಯ ಅಂಗನವಾಡಿ ಬಳಿ ಇರುವ ಶೌಚಾಲಯಗಳು ಬಾಗಿಲು ತೆರೆದಿರುವ ಉದಾಹರಣೆಗಳೇ ಇಲ್ಲ. ಬನಶಂಕರಿಯಲ್ಲಿರುವ ಶೌಚಾಲಯಕ್ಕೆ ನೀರಿ ವ್ಯವಸ್ಥೆ, ವಿದ್ಯುತ್ ಸಂಪರ್ಕವೂ ಇಲ್ಲ. 2012ರಲ್ಲಿಯೇ 4 ಲಕ್ಷ ರೂ.ಗಳಲ್ಲಿ ನಿರ್ಮಿಸಿದ್ದರೂ ಇದುವರೆಗೂ ಬಳಕೆಗೆ ಬಂದಿಲ್ಲ. ಉಳಿದವುಗಳ ಬಳಕೆ ಅಲ್ಪಪ್ರಮಾಣದಲ್ಲಿದೆ. ಇದು ಪಾಲಿಕೆಯ ಕಾರ್ಯ ವೈಖರಿಗೆ ಹಿಡಿದ ಕನ್ನಡಿ ಎನ್ನಬಹುದು.

► ಬಗೆಹರಿಯದ ಯುಜಿಡಿ ಕಾರ್ಮಿಕರ ಗೋಳು

ನಗರದಲ್ಲಿ ಕಟ್ಟಿಕೊಳ್ಳುವ ಯುಜಿಡಿಗಳನ್ನು ರಿಪೇರಿ ಮಾಡಲು ಎಂಟು ಕಾರ್ಮಿಕರು ಮತ್ತು ವಾಹನಗಳ ಡ್ರೈವರ್‌ಗಳು ಸೇರಿದಂತೆ 13 ಜನರು ಕೆಲಸ ಮಾಡುತ್ತಿದ್ದು, ಕರ್ನಾಟಕ ಗುತ್ತಿಗೆ ಕಾರ್ಮಿಕರ ನಿಷೇಧ ಮತ್ತು ನಿಯಂತ್ರಣ ಕಾಯ್ದೆ, ಕನಿಷ್ಠ ವೇತನ ಕಾಯ್ದೆ ಇವುಗಳ ಅಡಿಯಲ್ಲಿ ಬಾರದ ಕಾರಣ ಇವರ ಗೋಳು ಕೇಳುವವರಿಲ್ಲದಂತಾಗಿದೆ. ಯಾವುದೇ ಸ್ವಯಂ ರಕ್ಷಣಾ ಸಲಕರಣೆಗಳಿಲ್ಲದೆ ಕೆಲಸ ಮಾಡುವ ಇವರು, ಸವಲತ್ತು ಕೇಳಿದರೆ ಕೆಲಸದಿಂದ ತೆಗೆಯುವ ಪರಿಪಾಠ ಹೆಚ್ಚಾಗಿದೆ. ಪ್ರತಿ ಬಾರಿಯೂ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳ ಕಾಲು ಹಿಡಿದು ಪುನಃ ಕೆಲಸಕ್ಕೆ ಸೇರುವಂತಹ ಪರಿಸ್ಥಿತಿ ಇದೆ.

► ನಂಜಪ್ಪನ ಕಣ್ಣೀರು

ನಂಜಪ್ಪಎಂಬ ಪೌರಕಾರ್ಮಿಕರು ಕಳೆದ 12 ವರ್ಷಗಳಿಂದ ತುಮಕೂರು ನಗರಪಾಲಿಕೆಯಲ್ಲಿ ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದು, 2018ರಲ್ಲಿ ಕೆಲಸ ಮಾಡುವ ವೇಳೆ ವಿಷಪೂರಿತ ಗಿಡವೊಂದು ತಗುಲಿದ ಪರಿಣಾಮ ಮೈಯಲ್ಲಾ ಕಪ್ಪುಮಚ್ಚೆಗಳಾಗಿ ಪರಿತಪಿಸುತಿದ್ದಾರೆ. ವಾರ್ಡ್‌ನ ಕೌನ್ಸಿಲರ್ ಅವರ ಸೂಚನೆಯಂತೆ ಮೂರು ತಿಂಗಳ ಕಾಲ ಚಿಕಿತ್ಸೆಗೆಂದು ರಜೆ ಹಾಕಿದ್ದರು. ಆ ನಂತರ ಕೆಲಸ ಹೋದರೆ ಸೇರಿಸಿಕೊಳ್ಳುತ್ತಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿ, ಪಾಲಿಕೆಯ ಆಯುಕ್ತರು, ಮೇಯರ್ ಅವರಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ನನಗೀಗ 45 ವರ್ಷ ಬೇರೆ ವೃತ್ತಿ ಗೊತ್ತಿಲ್ಲ. ಕೆಲಸ ನೀಡಿ ಎಂದರೆ, ಇಂದು, ನಾಳೆ ಎಂದು ಅಧಿಕಾರಿಗಳು ಸತಾಯಿಸುತ್ತಲೇ ಇದ್ದಾರೆ ಎಂಬುದು ನಂಜಪ್ಪಅವರ ಅಳಲಾಗಿದೆ.

-------------------------------------------------------------------------

✍️ ನೇರಳೆ ಸತೀಶ್ ಕುಮಾರ್

ಮಲ ಹೊರುವವರ ಸಂಖ್ಯೆ ಹೆಚ್ಚುತ್ತಿದೆ !: ನಾರಾಯಣ್ ಆಕ್ರೋಶ

ಮೈಸೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ್ ಪರಿಕಲ್ಪನೆಯಿಂದ ದೇಶದಲ್ಲಿ ಮಲ ಹೊರುವ ಕಾರ್ಮಿಕರ ಸಂಖ್ಯೆ ಜಾಸ್ತಿಯಾಗಿದೆ, ಹೊರತು ಕಡಿಮೆಯಾಗಿಲ್ಲ ಎಂದು ಮೈಸೂರಿನ ಮಾಜಿ ಮೇಯರ್ ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಪೌರಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ನಾರಾಯಣ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೌರಕಾರ್ಮಿಕರ ದಿನಾಚರಣೆ ಆಂಗವಾಗಿ ‘ವಾರ್ತಭಾರತಿ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರ ಸ್ವಚ್ಛ ಭಾರತ ಪರಿಕಲ್ಪನೆ ಒಳ್ಳೆಯದೆ. ಆದರೆ, ಅದಕ್ಕೆ ತಂಕ್ಕಂತ ವ್ಯವಸ್ಥೆಗಳನ್ನು ಸ್ಥಳೀಯ ಸಂಸ್ಥೆಗಳಿಗೆ ನೀಡಬೇಕು. ಅದು ಬಿಟ್ಟು ಬರೀ ಶೌಚಾಲಯಗಳನ್ನು ಕಟ್ಟಿಸಿದರೆ ಏನು ಪ್ರಯೋಜನ, ಶೌಚಾಲಯಗಳ ಪಿಟ್ ಗುಂಡಿಗಳು ತುಂಬಿದರೆ ಅದನ್ನು ಹೊರ ಹಾಕುವವರು ಯಾರು ಎಂದು ಪ್ರಶ್ನಿಸಿದರು.

ಸ್ವಚ್ಛಭಾರತ್ ಅಭಿಯಾನದಡಿ ಸಿನೆಮಾ, ನಾಟಕದವರು, ಮತ್ತು ಕ್ರಿಕೆಟ್ ತಾರೆಗಳನ್ನು ರಾಯಭಾರಿಗಳಾಗಿ ಮಾಡಿಕೊಂಡು ಕಸಗುಡಿಸುವ ತರಹ ಮಾಡಿ ಫೋಟೊ ಸೆಷನ್‌ಗಳಿಗಷ್ಟೇ ಸೀಮಿತಗೊಳಿಸಲಾಗುತ್ತದೆ. ಮಾಧ್ಯಮದವರು ಇರುವವರೆಗೆ ಅವರೆಲ್ಲಾ ಪೊರಕೆ ಕೈಯಲ್ಲಿ ಹಿಡಿದುಕೊಂಡಿರುತ್ತಾರೆ. ನಂತರ ಅದನ್ನೆಲ್ಲಾ ಬಿಸಾಕಿ ಹೋಗುತ್ತಾರೆ. ಇದು ಮೋದಿಯವರ ಕಾನ್ಸೆಪ್ಟ್ ಎಂದು ಲೇವಡಿ ಮಾಡಿದರು.

ಸ್ವಚ್ಛಭಾರತ ಮಾಡುತ್ತಿರುವವರು ಪೌರಕಾರ್ಮಿಕರು. ದೇಶದಲ್ಲಿ 12 ಲಕ್ಷ ಪೌರಕಾರ್ಮಿಕರಿದ್ದಾರೆ. ಇವರು ದಿನ ನಿತ್ಯ ಕೆಲಸ ಮಾಡುತ್ತಿರುವುದರಿಂದಲೇ ಭಾರತ ಸ್ವಚ್ಛವಾಗಿರುವುದು ಎಂದು ಹೇಳಿದ ನಾರಾಯಣ್, ಯಾರೊ ಸೆಲೆಬ್ರಿಟಿಗಳೀಂದ ದೇಶ ಸ್ವಚ್ಛವಾಗುತ್ತಿಲ್ಲ. ಪೌರಕಾರ್ಮಿಕರಿಂದಲಷ್ಟೇ ಸ್ವಚ್ಛವಾಗುತ್ತಿರುವುದು ಈ ಜನರಿಗೆ ಕೇಂದ್ರ ಸರಕಾರ ಯಾವ ಸೌಲಭ್ಯಗಳನ್ನು ನೀಡುತ್ತಿಲ್ಲ. ಇಡೀ ದೇಶದಲ್ಲಿ 10 ಸಾವಿರ ರೂ.ಗಿಂತ ಹೆಚ್ಚು ವೇತನ ನೀಡುತ್ತಿಲ್ಲ. ಪ್ರಧಾನಿ ಅವರ ರಾಜ್ಯ ಗುಜರಾತ್‌ನಲ್ಲಿ ಕೇವಲ 8 ಸಾವಿರ ರೂ. ನೀಡಲಾಗುತ್ತಿದೆ. ನಮ್ಮ ರಾಜ್ಯದಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ 14 ಸಾವಿರ ರೂ.ಗೆ ಹೆಚ್ಚಳ ಮಾಡಿದ್ದು, ಬಿಟ್ಟರೆ ಬೇರೆ ಅವಧಿಯಲ್ಲಿ ಹೆಚ್ಚಳವಾಗಿಲ್ಲ ಎಂದು ಹೇಳಿದರು.

► ‘ಪೌರಕಾರ್ಮಿಕರ ದಿನಾಚರಣೆಯೇ ಬೋಗಸ್’

ಸರಕಾರ ಸೆ.23ರಂದು ಪೌರಕಾರ್ಮಿಕರ ದಿನಾಚರಣೆ ಮಾಡುವಂತೆ ಆದೇಶ ಮಾಡಿದೆ. ಇದರಿಂದ ಪೌರಕಾಮಿಕರಿಗೆ ಏನು ಪ್ರಯೋಜನ ಇಲ್ಲ. ಪುರಸಭೆ ಸೇರಿದಂತೆ ಕೆಲವು ಕಡೆ ನಾಮಕಾವಸ್ಥೆಗೆ ಆಚರಣೆ ಮಾಡಲಾಗುತ್ತಿದೆ. ಪೌರಕಾರ್ಮಿಕರನ್ನು ಕರೆಸಿ ಅವರಿಗೆ ಸುಮ್ಮನೆ ಒಂದು ಹಾರ, ಶಾಲು ಹಾಕಿ ಸನ್ಮಾನಿಸಿ ಕಾಟಾಚಾರಕ್ಕೆ ಪೌರಕಾರ್ಮಿಕರ ದಿನಾಚರಣೆ ಆಚರಿಸಲಾಗುತ್ತಿದೆ ಎಂದು ಕಿಡಿಕಾರಿದರು. ಪೌರಕಾರ್ಮಿಕರ ದಿನಾಚರಣೆಯನ್ನು ಶಿಕ್ಷಕರ, ಕಾರ್ಮಿಕರ, ಡಾಕ್ಟರ್ಸ್ ಮತ್ತು ಮಹಿಳಾ ದಿನಾಚರಣೆಗಳನ್ನು ಜಿಲ್ಲಾಮಟ್ಟದಲ್ಲಿ ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಹೇಗೆ ಆಚರಣೆ ಮಾಡಲಾಗುತ್ತದೆಯೋ ಆ ಮಾದರಿಯಲ್ಲಿ ಆಚರಿಸಬೇಕು ಎಂಬುದು ನಮ್ಮ ಬೇಡಿಕೆ, ಆದರೆ ಸರಕಾರ ಅದ್ಯಾವುದನ್ನು ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

------------------------------------------------------------------------- 

✍️ ಸತ್ಯಾ ಕೆ.

ಮಂಗಳೂರು: ಅತಂತ್ರ ಸ್ಥಿತಿಯಲ್ಲಿ ಪೌರಕಾರ್ಮಿಕರು

► 64 ಮಂದಿಯ ಖಾಯಮಾತಿಯ ಅನುಮೋದನೆ ಇನ್ನೂ ಆಗಿಲ್ಲ್ಲ!

ಮಂಗಳೂರು: ದೇಶದ ಸ್ವಚ್ಛ ನಗರಗಳಲ್ಲಿ ಮಂಗಳೂರು ನಗರ ಕೂಡಾ ಒಂದು. ನಗರದ ಸ್ವಚ್ಛತೆಯಲ್ಲಿ ಪಾಲಿಕೆ ವ್ಯಾಪ್ತಿಯ ಪೌರ ಕಾರ್ಮಿಕರ ಪಾತ್ರ ಮಹತ್ತರವಾದುದು. ಸದ್ಯದ ಮಾಹಿತಿಯ ಪ್ರಕಾರ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 210 ಮಂದಿ (ಗುತ್ತಿಗೆ ಕಾರ್ಮಿಕರನ್ನು ಹೊರತುಪಡಿಸಿ) ಖಾಯಂ ಪೌರಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರಲ್ಲಿ 42 ಪೌರ ಕಾರ್ಮಿಕರಿಗೆ ಸರಕಾರಿ ವೇತನ, ಭತ್ತೆ ಸೇರಿದಂತೆ ಇತರ ಸೌಲಭ್ಯಗಳು ದೊರಕುತ್ತಿವೆ. ಆದರೆ ಖಾಯಮಾತಿ ಬಗ್ಗೆ ಸರಕಾರದಿಂದ ಇನ್ನೂ ಅನುಮೋದನೆಯಾಗಿಲ್ಲ!

2000ರ ಮೇ ತಿಂಗಳಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ದಿನಕೂಲಿ ನೌಕರರಾಗಿ ಸುಮಾರು 10 ವರ್ಷಗಳಿಗೂ ಅಧಿಕ ಕಾಲ ದಿನಕೂಲಿ ಪೌರ ಕಾರ್ಮಿಕರಾಗಿ ಸೇವೆ ಸಲ್ಲಿಸಿದ 64 ನೌಕರರನ್ನು ಖಾಯಂಗೊಳಿಸಲು ಒತ್ತಾಯಿಸಲಾಗಿತ್ತು. ತಾಂತ್ರಿಕ ಕಾರಣಗಳ ಹಿನ್ನೆಲೆಯಲ್ಲಿ ಇವರ ಸಕ್ರಮಾತಿ ಅದೇಶಕ್ಕೆ ಅನುಮೋದನೆ ನೀಡುವಂತೆ 2006ರ ಸೆ.29ರಂ ಪತ್ರದಲ್ಲಿ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. ಹಲವು ಒತ್ತಾಯ, ಬೇಡಿಕೆಯ ಹೊರತಾಗಿಯೂ ಪೌರಾಡಳಿತ ನಿರ್ದೇಶನಾಲಯದಿಂದ ಈವರೆಗೂ ಈ ಪೌರಕಾರ್ಮಿಕರ ಖಾಯಮಾತಿ ಅನುಮೋದನೆ ದೊರಕಿಲ್ಲ. ವಿಶೇಷವೆಂದರೆ ಅಂದು 64 ಮಂದಿಯಿದ್ದ ಪೌರ ಕಾರ್ಮಿಕರಲ್ಲಿ ಈಗಾಗಲೇ 22 ಮಂದಿ ಮೃತಪಟ್ಟಿದ್ದಾರೆ. ಈಗಿರುವುದು 42 ಮಂದಿ ಮಾತ್ರ!

ಸರಕಾರದಿಂದ ಖಾಯಮಾತಿ ಅನುಮೋದನೆ ಆಗಿದ್ದಲ್ಲಿ ಮೃತಪಟ್ಟವರ ಕುಟುಂಬದ ಸದಸ್ಯರೊಬ್ಬರಿಗೆ ಅನುಕಂಪದ ನೆಲೆಯಲ್ಲಿ ಉದ್ಯೋಗ ದೊರಕುತ್ತಿತ್ತು. ನಿವೃತ್ತಿಯಾದ ಬಳಿಕ ಪಿಂಚಣಿ, ನಿವೃತ್ತಿ ವೇತನ ದೊರೆಯುತ್ತಿತ್ತು. ಆದರೆ ಸದ್ಯ ದುಡಿಯುತ್ತಿರುವರಿಗೆ ಸರಕಾರಿ ವೇತನ ಹಾಗೂ ಸೌಲಭ್ಯ ಹೊರತುಪಡಿಸಿ ನಿವೃತ್ತಿ ಅಥವಾ ಮೃತರಾದ ಬಳಿಕ ದೊರಕುವ ಯಾವುದೇ ಸೌಲಭ್ಯ ದೊರಕುತ್ತಿಲ್ಲ. ಇದು ಮಂಗಳೂರು ಮಹಾನಗರ ಪಾಲಿಕೆಯ ಪೌರ ಕಾರ್ಮಿಕರ ಪರಿಸ್ಥಿತಿ ಎನ್ನುತ್ತಾರೆ ದ.ಕ. ಜಿಲ್ಲಾ ಪೌರ ಕಾರ್ಮಿಕರ ಹಾಗೂ ನಾಲ್ಕನೇ ದರ್ಜೆ ನೌಕರರ ಸಂಘದ ಅಧ್ಯಕ್ಷ ಅನಿಲ್ ಕುಮಾರ್ ಹಾಗೂ ಪ್ರಧಾನ ಕಾರ್ಯದರ್ಶಿ ಆನಂದ ಎಸ್.ಪಿ.

► 35 ರೂ. ದಿನಗೂಲಿಯಲ್ಲಿ ವೃತ್ತಿ ಆರಂಭ

‘‘ನಾನು 37 ವರ್ಷಗಳಿಂದ ಪೌರ ಕಾರ್ಮಿಕನಾಗಿ ಮಂಗಳೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿ ದುಡಿಯುತ್ತಿದ್ದೇನೆ. ಆರಂಭದ 17 ವರ್ಷ ತಾತ್ಕಾಲಿಕ ನೆಲೆಯಲ್ಲಿ ಕೆಲಸ ಮಾಡಿದ್ದೇನೆ. ಆರಂಭದಲ್ಲಿ ದಿನವೊಂದಕ್ಕೆ 35 ರೂ.ಯಂತೆ ತಿಂಗಳಿಗೆ ಸುಮಾರು 900 ರೂ. ಸಂಬಳ ಸಿಗುತ್ತಿತ್ತು’’ ಎನ್ನುತ್ತಾರೆ ಮಂಗಳೂರಿನ ಹಿರಿಯ ಪೌರ ಕಾರ್ಮಿಕರಲ್ಲಿ ಒಬ್ಬರಾದ ಎನ್.ರಾಮಚಂದ್ರ ಜೆಪ್ಪು.

► ಮಂಗಳೂರು ಸ್ವಚ್ಛತೆಯಲ್ಲಿ ನನ್ನ ಪಾಲಿದೆ ಎಂಬ ಹೆಮ್ಮೆಯಿದೆ

‘‘ಪೌರ ಕಾರ್ಮಿಕನಾಗಿ ಮಂಗಳೂರಿನ ಸ್ವಚ್ಛತೆಯಲ್ಲಿ ನನ್ನದೂ ಒಂದು ಪಾತ್ರವಿದೆ ಎಂಬ ಬಗ್ಗೆ ನನಗೆ ಹೆಮ್ಮೆಯಿದೆ. ನನ್ನ ಕೆಲಸದ ಬಗ್ಗೆ ನನಗೆ ಗೌರವವಿದೆ. ಕಳೆದ 32 ವರ್ಷಗಳಿಂದ ಪೌರ ಕಾರ್ಮಿಕನಾಗಿ ನಾನು ದುಡಿಯುತ್ತಿದ್ದೇನೆ’’ ಎನ್ನುತ್ತಾರೆ ಮಂಗಳೂರಿನ ಬಳ್ಳಾಲ್ ಬಾಗ್ ನಿವಾಸಿ ಸುಂದರ.

ಪೌರ ಕಾರ್ಮಿಕರ ಈ ಅತಂತ್ರ ಪರಿಸ�

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News