ಮಾಧ್ಯಮ ಸಂಸ್ಥೆಯ ವಿರುದ್ಧ ದೂರಿನ ಕುರಿತು 2 ವಾರಗಳಲ್ಲಿ ನಿರ್ಧರಿಸಿ: ಕೇಂದ್ರಕ್ಕೆ ದಿಲ್ಲಿ ಹೈಕೋರ್ಟ್ ನಿರ್ದೇಶ

Update: 2020-09-23 16:37 GMT

ಹೊಸದಿಲ್ಲಿ,ಸೆ.23: ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಈ ವರ್ಷದ ಎ.16ರಂದು ಸಂಭವಿಸಿದ್ದ ಗುಂಪು ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕಾರ್ಯಕ್ರಮಗಳನ್ನು ಪ್ರಸಾರಿಸಿದ್ದಕ್ಕಾಗಿ ಮಾಧ್ಯಮ ಸಂಸ್ಥೆಯೊಂದರ ವಿರುದ್ಧ ಮೇ 5ರಂದು ಸಲ್ಲಿಸಲಾಗಿರುವ ದೂರಿನ ಕುರಿತು ಎರಡು ವಾರಗಳಲ್ಲಿ ನಿರ್ಧಾರವೊಂದನ್ನು ಕೈಗೊಳ್ಳುವಂತೆ ದಿಲ್ಲಿ ಉಚ್ಚ ನ್ಯಾಯಾಲಯವು ಬುಧವಾರ ವಾರ್ತಾ ಮತ್ತು ಪ್ರಸಾರ ಸಚಿವಾಲಯಕ್ಕೆ ನಿರ್ದೇಶ ನೀಡಿದೆ.

 ಈ ನಿರ್ದೇಶದೊಂದಿಗೆ ನ್ಯಾಯಾಲಯವು ನ್ಯಾಯವಾದಿ ಅಮರೀಶ್ ರಂಜನ್ ಪಾಂಡೆ ಅವರು ಸಲ್ಲಿಸಿದ್ದ ಅರ್ಜಿಯನ್ನು ವಿಲೇವಾರಿಗೊಳಿಸಿತು. ಘಟನೆಯ ಕುರಿತು ಮಾಧ್ಯಮ ಸಂಸ್ಥೆಯು ಪ್ರಸಾರಿಸಿದ್ದ ಕಾರ್ಯಕ್ರಮಗಳು ದೇಶದಲ್ಲಿ ಕೋಮುಭಾವನೆಯನ್ನು ಪ್ರಚೋದಿಸಲು ಪ್ರಯತ್ನಿಸಿದ್ದವು. ಕಾರ್ಯಕ್ರಮಗಳು ಉತ್ತಮ ಅಭಿರುಚಿ ಮತ್ತು ಸಭ್ಯತೆಯಿಂದ ಕೂಡಿರಲಿಲ್ಲ ಮತ್ತು ಹಿಂಸೆಯನ್ನು ಉತ್ತೇಜಿಸುವ ಅಥವಾ ಪ್ರಚೋದಿಸುವ ಉದ್ದೇಶವನ್ನು ಹೊಂದಿದ್ದವು ಎಂದು ಪಾಂಡೆ ತನ್ನ ಅರ್ಜಿಯಲ್ಲಿ ಆರೋಪಿಸಿದ್ದರು.

ಇದೇ ಮಾಧ್ಯಮ ಸಂಸ್ಥೆಯ ಇನ್ನೊಂದು ಕಾರ್ಯಕ್ರಮದಲ್ಲಿ ಲಾಕ್‌ಡೌನ್ ಸಂದರ್ಭದಲ್ಲಿ ಮುಂಬೈನ ಬಾಂದ್ರಾದಲ್ಲಿ ವಲಸೆ ಕಾರ್ಮಿಕರು ಸೇರಿದ್ದಕ್ಕೆ ಒಳಸಂಚಿನ ಬಣ್ಣವನ್ನು ನೀಡಲಾಗಿತ್ತು ಎಂದೂ ಪಾಂಡೆ ಆರೋಪಿಸಿದ್ದರು.

ಮಾಧ್ಯಮ ಸಂಸ್ಥೆಯ ಪರವಾನಿಗೆಯನ್ನು ರದ್ದುಗೊಳಿಸುವಂತೆ ಕೋರಿ ತಾನು ಮೇ 5ರಂದು ಸಲ್ಲಿಸಿರುವ ದೂರಿನ ಬಗ್ಗೆ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಈವರೆಗೆ ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎನ್ನುವುದನ್ನು ಪಾಂಡೆ ನ್ಯಾಯಾಲಯದ ಗಮನಕ್ಕೆ ತಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News