ಲಾಕ್‌ಡೌನ್ ಅವಧಿಯಲ್ಲಿ 81 ಸಾವಿರಕ್ಕೂ ಅಧಿಕ ರಸ್ತೆ ಅವಘಡ: ಕೇಂದ್ರ

Update: 2020-09-23 17:20 GMT

ಹೊಸದಿಲ್ಲಿ,ಸೆ.23: ಕೊರೋನ ವೈರಸ್ ಹಾವಳಿ ತಡೆಗೆ ರಾಷ್ಟ್ರವ್ಯಾಪಿಯಾಗಿ ಲಾಕ್‌ಡೌನ್ ಹೇರಲಾಗಿದ್ದ ಮಾರ್ಚ್ ಹಾಗೂ ಜೂನ್ ತಿಂಗಳ ಅವಧಿಯಲ್ಲಿ ರಾಷ್ಟ್ರೀಯ ಹೆದ್ದಾರಿಗಳು ಸೇರಿದಂತೆ ಭಾರತದ ರಸ್ತೆಗಳಲ್ಲಿ 81 ಸಾವಿರಕ್ಕೂ ಅಧಿಕ ಅವಘಡಗಳು ಸಂಭವಿಸಿವೆ ಎಂದು ಕೇಂದ್ರ ಸರಕಾರ ತಿಳಿಸಿದೆ.

ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಖಾತೆಯ ಸಹಾಯಕ ಸಚಿವ ವಿ.ಕೆ.ಸಿಂಗ್, ಮಂಗಳವಾರ  ಲೋಕಸಭೆಗೆ ಲಿಖಿತ ಉತ್ತರವೊಂದರಲ್ಲಿ ಈ ಮಾಹಿತಿ ನೀಡಿದ್ದಾರೆ.

ಮಾರ್ಚ್ 23ರಂದು ಕೇಂದ್ರ ಸರಕಾರವು ಲಾಕ್‌ಡೌನ್‌ ಘೋಷಿಸಿದ ಬಳಿಕ ದೂರದ ಊರುಗಳಲ್ಲಿರುವ ತಮ್ಮ ಮನೆಗಳಿಗೆ ಕಾಲ್ನಡಿಗೆಯಲ್ಲಿ ಹಿಂತಿರುಗುತ್ತಿದ್ದಾಗ, ವಿವಿಧ ರಸ್ತೆ ಅವಘಡಗಳಲ್ಲಿ ಮೃತಪಟ್ಟ ವ್ಯಕ್ತಿಗಳ ಕುರಿತಾಗಿ ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಮಾಹಿತಿಯನ್ನು ಕೋರಿದ್ದರು.

ಮಾರ್ಚ್ 23ರಿಂದ ಹಾಗೂ ಜೂನ್ 1ರ ನಡುವಿನ ಲಾಕ್‌ಡೌನ್ ಅವಧಿಯಲ್ಲಿ 81,385 ಅವಘಡಗಳು ಸಂಭವಿಸಿದ್ದು, 29,415 ಸಾವುನೋವುಗಳು ಉಂಟಾಗಿವೆ. ಆದರೆ ಲಾಕ್‌ಡೌನ್ ವೇಳೆ ಕಾಲ್ನಡಿಗೆಯಲ್ಲಿ ತಮ್ಮ ಊರುಗಳಿಗೆ ಮರಳುತ್ತಿದ್ದ ವಲಸಿಗರು ರಸ್ತೆ ಅಪಘಾತಗಳಲ್ಲಿ ಮೃತಪಟ್ಟಿರುವ ಅಥವಾ ಗಾಯಗೊಂಡಿರುವ ಕುರಿತಾಗಿ ಯಾವುದೇ ಪ್ರತ್ಯೇಕ ದತ್ತಾಂಶಗಳನ್ನು ತಾನು ಇಟ್ಟುಕೊಂಡಿಲ್ಲವೆಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯದ ದತ್ತಾಂಶಗಳ ಸಚಿವಾಲಯ ಸದನಕ್ಕೆ ಸ್ಪಷ್ಟಪಡಿಸಿತು.

ಆದಾಗ್ಯೂ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ವಲಸೆ ಕಾರ್ಮಿಕರಿಗೆ ಆಹಾರ, ಕುಡಿಯುವ ನೀರು, ಮೂಲಭೂತ ಔಷಧಿ ಹಾಗೂ ಪಾದರಕ್ಷೆ ಇತ್ಯಾದಿಗಳನ್ನು ಒದಗಿಸಲಾಗಿತ್ತೆಂದು ಸಚಿವ ವಿ.ಕೆ.ಸಿಂಗ್ ತಿಳಿಸಿದರು. ಎಪ್ರಿಲ್ 29ರ ಬಳಿಕ ವಲಸೆ ಕಾರ್ಮಿಕರಿಗಾಗಿ ‘ಶ್ರಮಿಕ್’ ವಿಶೇಷ ರೈಲುಗಳು ಹಾಗೂ ಬಸ್‌ಗಳ ಸಂಚಾರವನ್ನು ಆರಂಭಿಸಲಾಗಿತ್ತೆಂದು ಸಚಿವಾಲಯ ತಿಳಿಸಿದೆ.

ತಮ್ಮ ರಾಜ್ಯಗಳಿಗೆ ಮರಳುತ್ತಿದ್ದಾಗ ಮೃತರಾದ ಅಥವಾ ಗಾಯಗೊಂಡ ವಲಸೆ ಕಾರ್ಮಿಕರ ಕುಟುಂಬಿಕರಿಗೆ ಸರಕಾರವು ಯಾವುದೇ ಪರಿಹಾರವನ್ನು ನೀಡಿದೆಯೇ ಎಂಬುದಾಗಿಯೂ ಮನೀಶ್ ತಿವಾರಿ ಪ್ರಶ್ನಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News