ನೇತ್ರದಾನ ಕುರಿತು ಈ ಏಳು ಮಿಥ್ಯೆಗಳು ಮತ್ತು ಅವುಗಳ ಹಿಂದಿನ ಸತ್ಯಗಳು ನಿಮಗೆ ಗೊತ್ತಿರಲಿ

Update: 2020-09-23 18:12 GMT

ಭಾರತದಲ್ಲಿ ಅಂದಾಜು 1.5 ಕೋಟಿ ಅಂಧರು ಮತ್ತು 3 ಕೋಟಿ ದೃಷ್ಟಿಮಾಂದ್ಯತೆಯಿಂದ ನರಳುತ್ತಿರುವ ಜನರಿದ್ದಾರೆ. ಪ್ರತಿ ವರ್ಷ ಕಾರ್ನಿಯಾ ಅಥವಾ ಕಣ್ಣಾಲಿಗಳ ಮುಂದಿರುವ ಪಾರದರ್ಶಕ ಪಟಲದ ಕಸಿಗೆ ಬೇಡಿಕೆಗಳು ಹೆಚ್ಚುತ್ತಲೇ ಇವೆ,ಹೀಗಾಗಿ ಈ ಅಗತ್ಯವನ್ನು ಪೂರೈಸಲು ನೇತ್ರದಾನದ ತೀವ್ರ ಅಗತ್ಯವಿದೆ. ನೇತ್ರದಾನದ ಕುರಿತು ಹಲವು ಮಿಥ್ಯೆಗಳಿದ್ದು ಇವುಗಳನ್ನು ನಿವಾರಿಸಲು ವೈದ್ಯಕೀಯ ಸಮುದಾಯವು ಪ್ರಯತ್ನಿಸುತ್ತಲೇ ಇದೆ. ಆದರೂ ನೇತ್ರದಾನ,ಅದೂ ನಿಧನದ ಬಳಿಕ ಮಾಡಲು ಹೆಚ್ಚಿನವರು ಹಿಂಜರಿಯುತ್ತಾರೆ.

ಏನಿದು ನೇತ್ರ ಕಸಿ?

ಕಣ್ಣಾಲಿಗಳ ಮುಂಭಾಗವನ್ನು ಕಾರ್ನಿಯಾ ಎಂದು ಕರೆಯಲಾಗುವ ಪಾರದರ್ಶಕ ಅಂಗಾಂಶವು ಆವರಿಸಿಕೊಂಡಿರುತ್ತದೆ. ಕಣ್ಣಿಗೆ ಪೆಟ್ಟು,ಕಾಯಿಲೆ ಅಥವಾ ಅಪೌಷ್ಟಿಕತೆಯಿಂದ ಕಾರ್ನಿಯಾದ ಮೇಲೆ ಮೋಡ ಕವಿದಂತಾದರೆ ವ್ಯಕ್ತಿಯ ದೃಷ್ಟಿಯು ಮಸುಕಾಗುತ್ತದೆ ಮತ್ತು ಕೆಲವೊಮ್ಮೆ ಸಂಪೂರ್ಣ ದೃಷ್ಟಿಯನ್ನು ಕಳೆದುಕೊಳ್ಳುತ್ತಾನೆ. ಕಾರ್ನಿಯಾ ಅಂಧತ್ವದ ಈ ಸ್ಥಿತಿಯನ್ನು ಹಾನಿಗೀಡಾದ ಕಾರ್ನಿಯಾದ ಬದಲು ನೇತ್ರದಾನದ ಮೂಲಕ ಪಡೆದುಕೊಂಡ ಆರೋಗ್ಯಕರ ಮಾನವ ಕಾರ್ನಿಯಾವನ್ನು ಕಸಿ ಮಾಡುವ ಮೂಲಕ ನಿವಾರಿಸಬಹುದು.

 ಯಾರಿಗಾದರೂ ದೃಷ್ಟಿಯನ್ನು ಉಡುಗೊರೆಯಾಗಿ ನೀಡುವುದು ಉದಾತ್ತ ಕಾರ್ಯವಾಗಿದೆ,ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಮಿಥ್ಯೆಗಳು ಮತ್ತು ತಪ್ಪುಗ್ರಹಿಕೆಗಳು ವ್ಯಕ್ತಿ ನೇತ್ರದಾನ ಮಾಡಲು ಹಿಂಜರಿಯುವಂತೆ ಮಾಡುತ್ತವೆ. ಇಂತಹ ಏಳು ಮಿಥ್ಯೆಗಳು ಮತ್ತು ಅವುಗಳ ಹಿಂದಿನ ಸತ್ಯಗಳನ್ನು ಜನರು ಅರಿತುಕೊಂಡರೆ ನೇತ್ರದಾನ ಮಾಡುವವರ ಸಂಖ್ಯೆ ಹೆಚ್ಚಬಹುದು.

* ನೇತ್ರದಾನ ಮಾಡಿದರೆ ಮುಖ ವಿರೂಪಗೊಳ್ಳುತ್ತದೆ

-ಸತ್ಯವೆಂದರೆ ನೇತ್ರದಾನ ಮಾಡಿದರೆ ಮುಖವು ವಿರೂಪಗೊಳ್ಳುವುದಿಲ್ಲ. ಮೃತ ವ್ಯಕ್ತಿಯ ಕಾರ್ನಿಯಾವನ್ನು ತೆಗೆದ ಬಳಿಕ ಆ ಜಾಗದಲ್ಲಿ ಕವಚವೊಂದನ್ನು ಇರಿಸಲಾಗುತ್ತದೆ ಮತ್ತು ಕಣ್ಣುಗಳನ್ನು ಮುಚ್ಚಿದಾಗ ಅದು ಸಹಜ ರೂಪದಲ್ಲಿಯೇ ಇರುತ್ತದೆ.

* ನೇತ್ರದಾನ ಮಾಡಿದರೆ ವ್ಯಕ್ತಿಯು ಮುಂದಿನ ಜನ್ಮದಲ್ಲಿ ಅಂಧನಾಗುತ್ತಾನೆ

 -ಪುನರ್ಜನ್ಮದ ಬಗ್ಗೆ ಯಾರಿಗೂ ಖಚಿತವಿಲ್ಲ ಮತ್ತು ಅದು ಇದೆ ಎಂದೇ ತಿಳಿದುಕೊಂಡರೂ ಜನನವು ಹೊಸ ಶರೀರದೊಂದಿಗೆ ಆಗುತ್ತದೆ ಮತ್ತು ಹಿಂದಿನ ಜನ್ಮದ ಕಣ್ಣುಗಳು ಅಗತ್ಯವಿರುವುದಿಲ್ಲ. ಇದು ಸಂಪೂರ್ಣ ತಪ್ಪುಗ್ರಹಿಕೆಯಾಗಿದ್ದು,ನೇತ್ರದಾನದ ಸಂಖ್ಯೆ ಕಡಿಮೆಯಾಗಲು ಪ್ರಮುಖ ಕಾರಣಗಳಲ್ಲೊಂದಾಗಿದೆ.

* ಜೀವಂತವಿದ್ದಾಗಲೂ ನೇತ್ರದಾನವನ್ನು ಮಾಡಬಹುದು

-ಮೂತ್ರಪಿಂಡ ಅಥವಾ ಯಕೃತ್ತಿನ ಭಾಗವನ್ನು ಜೀವಂತ ವ್ಯಕ್ತಿಯು ದಾನ ಮಾಡಬಹುದು,ಆದರೆ ನೇತ್ರದಾನವನ್ನು ಮರಣದ ನಂತರವಷ್ಟೇ ಮಾಡಲಾಗುತ್ತದೆ. ಆಸಕ್ತ ವ್ಯಕ್ತಿಯು ನಿಧನಾನಂತರ ತನ್ನ ಕಣ್ಣುಗಳನ್ನು ದಾನ ಮಾಡುವುದಾಗಿ ಘೋಷಿಸಬಹುದು.

 * ನೇತ್ರದಾನದ ಮೂಲಕ ಪ್ರತಿ ಅಂಧನಿಗೂ ನೆರವಾಗಬಹುದು

 -ಕಾರ್ನಿಯಾ ಅಪಾರದರ್ಶಕಗೊಂಡಿರುವ ವ್ಯಕ್ತಿಗಳಿಗೆ ಮಾತ್ರ ಇನ್ನೋರ್ವರಿಂದ ದಾನ ಪಡೆದುಕೊಂಡ ಕಣ್ಣುಗಳಿಂದ ಲಾಭವಾಗುತ್ತದೆ. ರೆಟಿನಾ ಅಥವಾ ಅಕ್ಷಿಪಟಲ ಮತ್ತು ಆಪ್ಟಿಕ್ ನರಗಳಿಗೆ ಸಂಬಂಧಿತ ಅಂಧತ್ವದ ಪ್ರಕರಣಗಳಲ್ಲಿ ನೇತ್ರದಾನದಿಂದ ಯಾವುದೇ ಲಾಭವಿಲ್ಲ.

* ವ್ಯಕ್ತಿಯು ರೆಟಿನಾ ಸಮಸ್ಯೆಯಿಂದ ಬಳಲುತ್ತಿದ್ದರೆ ಅಥವಾ ಕಣ್ಣಿನ ಶಸ್ತ್ರಚಿಕಿತ್ಸೆಗೊಳಗಾಗಿದ್ದರೆ ಆತ ನೇತ್ರದಾನ ಮಾಡಲು ಸಾಧ್ಯವಿಲ್ಲ

-ವಾಸ್ತವದಲ್ಲಿ ಪ್ರತಿಯೋರ್ವ ವ್ಯಕ್ತಿ ಆತ ಯುವಕನಾಗಿರಲಿ ಅಥವಾ ವೃದ್ಧನಾಗಿರಲಿ,ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರೆ ಅಥವಾ ರೆಟಿನಾ ಅಥವಾ ಆಪ್ಟಿಕ್ ನರದ ಸಮಸ್ಯೆಯನ್ನು ಹೊಂದಿದ್ದರೆ ಅದು ನೇತ್ರದಾನಕ್ಕೆ ಅಡ್ಡಿಯಾಗುವುದಿಲ್ಲ.

* ಮರಣಾನಂತರ ಯಾವುದೇ ಸಮಯದಲ್ಲಿ ಮತ್ತು ಸಾವಿನ ಕಾರಣ ಏನೇ ಆಗಿದ್ದರೂ ನೇತ್ರದಾನ ಮಾಡಬಹುದು

-ನೇತ್ರದಾನಿಯು ಮೃತಪಟ್ಟ ಆರು ಗಂಟೆಗಳ ಅವಧಿಯೊಳಗೆ ಆತನ ಕಣ್ಣನ್ನು ಸಂಗ್ರಹಿಸಿದರೆ ಮಾತ್ರ ಕಾರ್ನಿಯಾವನ್ನು ಅಂಧತ್ವದಿಂದ ಬಳಲುತ್ತಿರುವ ವ್ಯಕ್ತಿಗೆ ಕಸಿ ಮಾಡಬಹುದಾಗಿದೆ. ನೇತ್ರದಾನಿಯು ಮೃತಪಟ್ಟ ಬಳಿಕ ಶವವನ್ನು ತಂಪು ವಾತಾವರಣದಲ್ಲಿರಿಸಬೇಕು ಮತ್ತು ಫ್ಯಾನ್‌ಗಳನ್ನು ಬಂದ್ ಮಾಡಬೇಕು. ಕಣ್ಣುಗಳ ರೆಪ್ಪೆಗಳನ್ನು ಮುಚ್ಚಿ ಅವುಗಳ ಮೇಲೆ ತೇವಗೊಂಡ ಹತ್ತಿಯನ್ನು ಇರಿಸಬೇಕು. ತಲೆಯ ಕೆಳಗೆ ಎರಡು ದಿಂಬುಗಳನ್ನಿಡಬೇಕು. ಸ್ಥಳೀಯ ಆಸ್ಪತ್ರೆಗಳ ನೇತ್ರ ಸಂಗ್ರಹ ಕೇಂದ್ರಗಳು ಅಥವಾ ನೇತ್ರಬ್ಯಾಂಕುಗಳಿಗೆ ದಾನಿಯ ಕಣ್ಣುಗಳನ್ನು ಸ್ವೀಕರಿಸಲು ಸಮಯಾವಕಾಶದ ಅಗತ್ಯವಿರುತ್ತದೆ. ದಾನಿಯ ಸಾವು ಸೆಪ್ಟಿಸೆಮಿಯಾ ಅಥವಾ ನೆತ್ತರುನಂಜು, ಎಚ್‌ಐವಿ,ರೇಬಿಸ್ ಇತ್ಯಾದಿಗಳಿಂದ ಸಂಭವಿಸಿದ್ದರೆ ಕಣ್ಣುಗಳನ್ನು ಅಂಧ ವ್ಯಕ್ತಿಗಾಗಿ ಬಳಸುವ ಬದಲು ಸಂಶೋಧನೆಗೆ ಉಪಯೋಗಿಸಲಾಗುತ್ತದೆ.

* ನೇತ್ರದಾನಿಯಿಂದ ಸಂಗ್ರಹಿಸಲಾದ ಕಣ್ಣುಗಳನ್ನು ಕಾರ್ನಿಯಾ ಕಸಿಗಾಗಿ ಕಾಯುತ್ತಿರುವ ಅಂಧರಿಗೆ ಮಾರಾಟ ಮಾಡಲಾಗುತ್ತದೆ

-ಅಂಗಾಂಗಗಳ ಮಾರಾಟ ಮತ್ತು ಖರೀದಿ ಕಾನೂನಿನಡಿ ಅಪರಾಧವಾಗಿದೆ.ನೇತ್ರದಾನವು ಉದಾತ್ತ ಕಾರ್ಯವಾಗಿದ್ದು,ಅಧಿಕಾರಯುತ ಸಂಸ್ಥೆಗಳು ಅದರ ಬಗ್ಗೆ ನಿಗಾ ವಹಿಸುತ್ತವೆ.

ನೇತ್ರದಾನವು ಉದಾತ್ತ ಕಾರ್ಯವಾಗಿದ್ದು ಯಾರು ಬೇಕಾದರೂ ಅದನ್ನು ಮಾಡಬಹುದು. ಕಣ್ಣುಗಳಿಲ್ಲದ ವ್ಯಕ್ತಿಯ ಬದುಕು ಅಪೂರ್ಣವಾಗಿರುತ್ತದೆ ಮತ್ತು ನಿಧನಾನಂತರ ನೇತ್ರದಾನವು ಅಂತಹವರ ಬದುಕಿನಲ್ಲಿ ಬೆಳಕು ತರುವ ಮಹತ್ವದ ಕಾಣಿಕೆಯಾಗುತ್ತದೆ. ಹೀಗಾಗಿ ನೇತ್ರದಾನದ ಬಗ್ಗೆ ಅರಿವನ್ನು ಹರಡುವುದು ಮತ್ತು ನೇತ್ರದಾನವನ್ನು ಉತ್ತೇಜಿಸುವುದು ಅಗತ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News