ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಆರೋಗ್ಯ ಸ್ಥಿತಿ ಗಂಭೀರ

Update: 2020-09-24 16:23 GMT

ಚೆನ್ನೈ, ಫೆ.22: ಕೊರೋನ ಸೋಂಕಿನಿಂದಾಗಿ ಇಲ್ಲಿನ ಎಂಜಿಎಂ ಹೆಲ್ತ್‌ ಕೇರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ದೇಹಸ್ಥಿತಿ ಅತ್ಯಂತ ಚಿಂತಾಜನಕವಾಗಿದೆ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಗುರುವಾರ ತಿಳಿಸಿದ್ದಾರೆ.

ಬಾಲಸುಬ್ರಹ್ಮಣ್ಯಂ ಅವರ ದೇಹಸ್ಥಿತಿ ಮತ್ತೆ ಹದಗೆಟ್ಟಿರುವುದರಿಂದ ಅವರನ್ನು ಗರಿಷ್ಠ ಜೀವರಕ್ಷಕ ವ್ಯವಸ್ಥ್ತೆಯಲ್ಲಿ ಇರಿಸಲಾಗಿದೆ ಎಂದು ಆಸ್ಪತ್ರೆಯ ಸಹಾಯಕ ನಿರ್ದೇಶಕಿ ಡಾ.ಅನುರಾಧಾ ಭಾಸ್ಕರನ್ ಅವರು ತಿಳಿಸಿದ್ದಾರೆ. ಆಸ್ಪತ್ರೆಯ ತಜ್ಞ ವೈದ್ಯರ ತಂಡ ಅವರ ದೇಹಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಅವರು ಹೇಳಿದ್ದಾರೆ.

ಕೊರೋನ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದರಿಂದ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರನ್ನು ಆಗಸ್ಟ್ 5ರಂದು ಚೆನ್ನೈನ ಎಂಜಿಎಂ ಹೆಲ್ತ್‌ಕೇರ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಗಸ್ಟ್ 13ರಂದು ಅವರಲ್ಲಿ ಉಸಿರಾಟದ ಸಮಸ್ಯೆ ಉಲ್ಬಣಿಸಿದಾಗ ಅವರನ್ನು ತೀವ್ರ ನಿಗಾ ಘಟಕದಲ್ಲಿರಿಸಿ, ಕೃತಕ ಉಸಿರಾಟ ವ್ಯವಸ್ಥೆಯಲ್ಲಿರಿಸಲಾಗಿತ್ತು

ಸೆಪ್ಟೆಂಬರ್ 19ರಂದು ಅವರ ಪುತ್ರ ಚರಣ್ ಅವರು ಟ್ವೀಟ್ ಮಾಡಿ, ತನ್ನ ತಂದೆ ಜೀವರಕ್ಷಕ ವ್ಯವಸ್ಥೆಯಲ್ಲಿಯೇ ಇರುವರಾದರೂ, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಮತ್ತು ಅವರಿಗೆ ಬಾಯಿ ಮೂಲಕ ಆಹಾರ ನೀಡುವುದನ್ನು ಆರಂಭಿಸಲಾಗಿದೆ ಎಂದು ತಿಳಿಸಿದ್ದರು.

ಇದೀಗ ಅವರ ಆರೋಗ್ಯ ಮತ್ತೆ ವಿಷಮಿಸಿದೆಯೆಂದು ವೈದ್ಯರು ತಿಳಿಸಿರುವುದು ಭಾರೀ ಆತಂಕಕ್ಕೆ ಕಾರಣವಾಗಿದೆ.ದಕ್ಷಿಣ ಭಾರತ ಮಾತ್ರವಲ್ಲದೆ ಬಾಲಿವುಡ್ ಸೇರಿದಂತೆ 40 ಸಾವಿರಕ್ಕೂ ಅಧಿಕ ಸಿನೆಮಾ ಹಾಡುಗಳನ್ನು ಹಾಡಿರುವ ಬಾಲಸುಬ್ರಹ್ಮಣ್ಯಂ ಭಾರತದ ಮೇರು ಗಾಯಕರಲ್ಲೊಬ್ಬರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News