ಸಾಂಕ್ರಾಮಿಕವಲ್ಲದ ರೋಗಗಳ ನಿಯಂತ್ರಣ: ಈ ರಾಜ್ಯಕ್ಕೆ ವಿಶ್ವಸಂಸ್ಥೆ ಪ್ರಶಸ್ತಿ

Update: 2020-09-25 03:42 GMT

ತಿರುವನಂತಪುರಂ, ಸೆ.25: ಸಾಂಕ್ರಾಮಿಕವಲ್ಲದ ರೋಗಗಳಿಗೆ ಸಂಬಂಧಿಸಿದ ಸುಸ್ಥಿರ ಅಭಿವೃದ್ಧಿ ಗುರಿ ಸಾಧಿಸುವಲ್ಲಿ ಗಣನೀಯ ಸಾಧನೆ ತೋರಿದ್ದಕ್ಕಾಗಿ ಕೇರಳ ರಾಜ್ಯಕ್ಕೆ ವಿಶ್ವಸಂಸ್ಥೆಯ ಪ್ರತಿಷ್ಠಿತ ಪ್ರಶಸ್ತಿ ಸಂದಿದೆ.

ಸಾಂಕ್ರಾಮಿಕವಲ್ಲದ ರೋಗಗಳ ತಡೆ ಮತ್ತು ನಿಯಂತ್ರಣಕ್ಕಾಗಿ ವಿಶ್ವಸಂಸ್ಥೆಯ ಅಂತರ್ ಏಜೆನ್ಸಿ ಕಾರ್ಯಪಡೆ (ಯುಎನ್‌ಐಎಟಿಎಫ್) ಪ್ರಶಸ್ತಿಯನ್ನು ಗುರುವಾರ ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರೋಸ್ ಅಧನೊಮ್ ಘೇಬ್ರಿಯಾಸಿಸ್ ಪ್ರಕಟಿಸಿದರು.

ಸಾಂಕ್ರಾಮಿಕವಲ್ಲದ ರೋಗ ತಡೆ ಹಾಗೂ ನಿಯಂತ್ರಣ, ಮಾನಸಿಕ ಆರೋಗ್ಯ ಮತ್ತು ಎನ್‌ಸಿಡಿ ಸಂಬಂಧದ ವಿಸ್ತೃತ ಸುಸ್ಥಿರ ಅಭಿವೃದ್ಧಿ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ತೋರಿದ ಪ್ರಗತಿಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ.

ಆರೋಗ್ಯ ಕ್ಷೇತ್ರದಲ್ಲಿ ಕೇರಳ ಸಲ್ಲಿಸಿದ ಅವಿರತ ಸೇವೆಗೆ ಸಂದ ಪುರಸ್ಕಾರ ಇದಾಗಿದೆ ಎಂದು ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಹೇಳಿದ್ದಾರೆ.

ಮೂಲಭೂತ ಸಾರ್ವಜನಿಕ ಆರೋಗ್ಯ ಕೇಂದ್ರಗಳಿಂದ ಹಿಡಿದು ಆಸ್ಪತ್ರೆಗಳವರೆಗೆ ಎಲ್ಲ ಹಂತಗಳಲ್ಲಿ ಜೀವನಶೈಲಿ ರೋಗಗಳಿಗೆ ಚಿಕಿತ್ಸೆ ನೀಡಲು ಅಗತ್ಯ ಸೌಲಭ್ಯಗಳನ್ನು ಸರಕಾರ ಕಲ್ಪಿಸಿತ್ತು ಎಂದು ಅವರು ಹೇಳಿಕೆ ನೀಡಿದ್ದಾರೆ. ಎನ್‌ಸಿಡಿಗಳ ಮೇಲೆ ಹೆಚ್ಚಿನ ಗಮನಹರಿಸಿದ್ದರಿಂದ ಕೋವಿಡ್-19 ಸೋಂಕು ಸಾವಿನ ಪ್ರಮಾಣವನ್ನು ಕಡಿಮೆ ಮಾಡಲು ಕೂಡಾ ಸಾಧ್ಯವಾಗಿದೆ ಎಂದು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News