ಚರ್ಚೆಯಿಲ್ಲದೆ ಪಾಸಾದ ಮಸೂದೆಗಳು

Update: 2020-09-26 06:00 GMT

ಬುಧವಾರ ಕೊನೆಗೊಂಡ ಸಂಸತ್ತಿನ ಹತ್ತು ದಿನಗಳ ಮುಂಗಾರು ಅಧಿವೇಶನದಲ್ಲಿ ಯಾವುದೇ ಚರ್ಚೆ, ಮತದಾನ ಇಲ್ಲದೆ ದುಡಿಯುವ ಜನರ ಬದುಕಿಗೆ ಸಂಬಂಧಿಸಿದ ಮೂರು ಮಹತ್ವದ ವಿಧೇಯಕಗಳಿಗೆ ಏಕಪಕ್ಷೀಯ ಸಮ್ಮತಿ ನೀಡಿರುವುದು ಆತಂಕಕ್ಕೆ ಕಾರಣವಾಗಿದೆ. ಕಳೆದ ರವಿವಾರ ಕೃಷಿಕ್ಷೇತ್ರಕ್ಕೆ ಸಂಬಂಧಿಸಿದ ಮೂರು ವಿಧೇಯಕಗಳನ್ನು ಪಾಸು ಮಾಡಿಕೊಂಡ ರೀತಿಗಿಂತಲೂ ಕೆಟ್ಟದಾಗಿ ಯಾವುದೇ ಚರ್ಚೆಯಿಲ್ಲದೆ ಇವುಗಳಿಗೆ ಸದನದ ಅಂಗೀಕಾರ ಪಡೆಯಲಾಗಿದೆ. ಕೈಗಾರಿಕಾ ವ್ಯವಹಾರಗಳ ಮಾರ್ಗದರ್ಶಿ ಮಸೂದೆ, ಸಾಮಾಜಿಕ ಸುರಕ್ಷತಾ ಮಾರ್ಗದರ್ಶಿ ಮಸೂದೆ ಹಾಗೂ ವ್ಯಕ್ತಿ ಸುರಕ್ಷತೆ ಆರೋಗ್ಯ ಮತ್ತು ಕೆಲಸದ ವಾತಾವರಣದ ಮಸೂದೆಗಳನ್ನು ರಾಜ್ಯಸಭೆಯಲ್ಲಿ ಅಂಗೀಕರಿಸಲಾಗಿದೆ. ಕೋಟ್ಯಂತರ ಶ್ರಮಜೀವಿಗಳ ಬದುಕಿಗೆ ಸಂಬಂಧಿಸಿದ ಇಂತಹ ವಿಧೇಯಕಗಳನ್ನು ಅಂಗೀಕರಿಸುವ ಮುನ್ನ ಇವುಗಳ ಬಗ್ಗೆ ವಿಸ್ತೃತವಾದ ಚರ್ಚೆ ನಡೆಯಬೇಕಾಗಿತ್ತು. ಇಂತಹ ಮಹತ್ವದ ವಿಧೇಯಕಗಳ ಬಗ್ಗೆ ಸಂಸತ್ತಿನ ಉಭಯ ಸದನಗಳಲ್ಲಿ ವ್ಯಾಪಕವಾದ ಚರ್ಚೆ ನಡೆದಿದ್ದರೆ ಶ್ರಮಿಕ ವರ್ಗದ ಹಿತಕ್ಕೆ ಪೂರಕವಾದ ಅನೇಕ ಅಂಶಗಳನ್ನು ಸೇರ್ಪಡೆ ಮಾಡಲು ಸಾಧ್ಯವಿತ್ತು.

ಭಾರತದ ಸಂಸತ್ತಿಗೆ ಸುಮಾರು ಏಳು ದಶಕಗಳ ಕಾಲದ ಸುದೀರ್ಘವಾದ ಇತಿಹಾಸವಿದೆ. ಇಲ್ಲಿ ಅಂಗೀಕಾರ ಪಡೆದು ಕಾನೂನಿನ ಸ್ವರೂಪ ಪಡೆಯುವ ವಿಧೇಯಕಗಳು ಕೋಟ್ಯಂತರ ಭಾರತೀಯರ ಬದುಕಿನ ದಿಕ್ಕುದೆಸೆಗಳನ್ನು ನಿರ್ಧರಿಸುತ್ತವೆ.ಅಂತಲೇ ಇಲ್ಲಿ ಮಂಡನೆಯಾಗುವ ಯಾವುದೇ ಮಸೂದೆ ಸುದೀರ್ಘವಾದ ಚರ್ಚೆಯಿಲ್ಲದೆ ಪಾಸಾದ ಉದಾಹರಣೆಗಳು ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ. ಸಂವಾದ ಮತ್ತು ಚರ್ಚೆಗಳು ಜನತಂತ್ರದ ಅವಿಭಾಜ್ಯ ಅಂಶಗಳು. ಎಂತಹ ಸನ್ನಿವೇಶದಲ್ಲೂ ಚರ್ಚೆಯಿಲ್ಲದೆ ಯಾವುದೇ ಮಸೂದೆ ಅಂಗೀಕರಿಸುವುದು ಸಂಸದೀಯ ಘನತೆಗೆ ಧಕ್ಕೆ ಉಂಟು ಮಾಡಿದಂತೆ. ಅದರಲ್ಲೂ ಕಾರ್ಮಿಕರು ಶತಮಾನ ಕಾಲ ಹೋರಾಡಿ ಪಡೆದ ಹಕ್ಕು ಮತ್ತು ಸವಲತ್ತುಗಳನ್ನು ಇದ್ದಕ್ಕಿದ್ದಂತೆ ಇಲ್ಲದಂತೆ ಮಾಡುವ ವಿಧೇಯಕಗಳನ್ನು ಪಾಸು ಮಾಡಿಕೊಂಡ ರೀತಿ ಈ ಸರಕಾರಕ್ಕೆ ಶೋಭೆ ತರುವುದಿಲ್ಲ.ಇದು ಕಾರ್ಮಿಕ ವರ್ಗದ ಬದುಕು ಬವಣೆಗಳನ್ನು ಕಡೆಗಣಿಸಿ ಮಾಲಕ ವರ್ಗದ ಹಿತಾಸಕ್ತಿ ರಕ್ಷಿಸುವ ಉದ್ದೇಶದ ಮಸೂದೆ ಎಂಬ ಪ್ರತಿಪಕ್ಷಗಳ ಆರೋಪದ ಹಿನ್ನೆಲೆಯಲ್ಲಿ ಸರಕಾರ ಬಲವಂತವಾಗಿ ಮಸೂದೆಗಳನ್ನು ಪಾಸು ಮಾಡಿಕೊಂಡ ರೀತಿ ಖಂಡಿತ ಸರಿಯಲ್ಲ.

ದುಡಿಯುವ ಜನ ಈ ದೇಶದ ಸಂಪತ್ತಿನ ಸೃಷ್ಟಿಕರ್ತರು. ಅವರ ಬೇಕು ಬೇಡಗಳ ಬಗ್ಗೆ ಸರಕಾರ ಸಹಾನುಭೂತಿ ಹೊಂದಿರಬೇಕು. ಅವರ ಬದುಕಿಗೆ ಸಂಬಂಧಿಸಿದ ಇಂತಹ ಮಸೂದೆಗಳನ್ನು ಅಂಗೀಕರಿಸುವ ಮುನ್ನ ಇವುಗಳ ಬಗ್ಗೆ ಸಂಸತ್ತಿನ ಉಭಯ ಸದನಗಳಲ್ಲಿ ಮಾತ್ರವಲ್ಲ ಸಾರ್ವಜನಿಕವಾಗಿ ಚರ್ಚೆ ನಡೆಯಬೇಕಾಗಿತ್ತು. ಕಾರ್ಮಿಕ ಸಂಘಟನೆಗಳ ಮುಖಂಡರ ಸಭೆಯನ್ನು ಕರೆದು ಚರ್ಚೆ ನಡೆಸಬೇಕಾಗಿತ್ತು. ಅದಾವುದನ್ನೂ ಮಾಡದೇ ಅತ್ಯಂತ ತರಾತುರಿಯಲ್ಲಿ ಕದ್ದು ಮುಚ್ಚಿ ಈ ವಿಧೇಯಕಗಳಿಗೆ ಒಪ್ಪಿಗೆ ಪಡೆದ ರೀತಿ ನಾನಾ ಸಂದೇಹಗಳಿಗೆ ಕಾರಣವಾಗಿದೆ.

 ಕಾರ್ಮಿಕ ವರ್ಗದ ಪಾಲಿಗೆ ಮರಣ ಶಾಸನವಾಗಲಿರುವ ಈ ಮಸೂದೆಗಳು ದುಡಿಯುವ ವರ್ಗದ ಹಕ್ಕುಗಳನ್ನು ಅಪಹರಣ ಮಾಡುತ್ತವೆ ಎಂಬ ಆರೋಪದಲ್ಲಿ ಹುರುಳಿಲ್ಲದಿಲ್ಲ. ಈ ಮಸೂದೆಗಳಡಿ 300ಕ್ಕಿಂತ ಕಡಿಮೆ ಕಾರ್ಮಿಕರನ್ನು ಹೊಂದಿರುವ ಉದ್ಯಮಗಳು ಸರಕಾರದ ಅನುಮತಿ ಇಲ್ಲದೆ ಕಾರ್ಮಿಕರನ್ನು ವಜಾ ಮಾಡಬಹುದಾಗಿದೆ. ಕಾರ್ಮಿಕರು ತಮ್ಮ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಹಿಂದಿನಂತೆ ಮುಷ್ಕರ ಮಾಡುವಂತಿಲ್ಲ. ಉದ್ಯಮಪತಿಗಳು ಗುತ್ತಿಗೆ ಪದ್ಧತಿಯಲ್ಲಿ ಕಾರ್ಮಿಕರ ನೇಮಕ ಮಾಡಿಕೊಳ್ಳಲು ಅವಕಾಶವಿದೆ. ಮುಷ್ಕರ ನಿರತ ಕಾರ್ಮಿಕರನ್ನು ಮತ್ತು ಕಾರ್ಮಿಕ ನಾಯಕರನ್ನು ಸುಲಭವಾಗಿ ಜೈಲಿಗೆ ಕಳಿಸಲು ನೂತನ ಕಾನೂನು ಅವಕಾಶ ಮಾಡಿಕೊಡುತ್ತದೆ. ಅಸಂಘಟಿತ ವಲಯದ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು ಅದೇ ಉದ್ಯೋಗದಲ್ಲಿ ಇರಬೇಕೆಂಬ ನಿಯಮ ಸರಿಯಲ್ಲ. ಅಸಂಘಟಿತ ವಲಯದಲ್ಲಿ ಅನಕ್ಷರಸ್ಥರೇ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಕಾರ್ಮಿಕ ಸಂಘಗಳು ಕಾನೂನು ತಿಳುವಳಿಕೆ ಇರುವ ಹೊರಗಿನ ವ್ಯಕ್ತಿಗಳ ನೆರವು ಪಡೆಯಬೇಕಾಗುತ್ತದೆ. ಆದರೆ ಈ ಕಾನೂನಿನಲ್ಲಿ ಅದಕ್ಕೆ ಅವಕಾಶವಿಲ್ಲ. ಹೀಗೆ ನಾನಾ ರೀತಿಯಲ್ಲಿ ಕಾರ್ಮಿಕರ ಹಕ್ಕುಗಳನ್ನು ಕಿತ್ತುಕೊಳ್ಳಲಿರುವ ಈ ವಿಧೇಯಕಗಳು ಕಾರ್ಮಿಕರನ್ನು ಉಳ್ಳವರ ಗುಲಾಮಗಿರಿಗೆ ತಳ್ಳಲಿವೆ.

ಇಂತಹ ಮಾರಕವಾದ ಮಸೂದೆಗಳಿಗೆ ಸರಕಾರವೇನೋ ಅಂಗೀಕಾರ ಪಡೆದಿದೆ.ಆದರೆ ಇವುಗಳ ವಿರುದ್ಧ ಒಂದಾಗಿ ಧ್ವನಿಯೆತ್ತಬೇಕಾದ ಕಾರ್ಮಿಕ ವರ್ಗ ಎಲ್ಲಿದೆ? ಹಿಂದೆ ಎಲ್ಲ ಜಾತಿ, ಮತ, ಭಾಷೆ, ಪ್ರದೇಶಗಳನ್ನು ಮೀರಿ ಕಾರ್ಮಿಕ ವರ್ಗವು ಒಂದಾಗಿ ಹೋರಾಟ ಮಾಡಿದ ಪರಿಣಾಮವಾಗಿ ಈ ಸವಲತ್ತುಗಳನ್ನು ಪಡೆದಿದೆ. ಆದರೆ ಈಗ ಪಡೆದ ಸವಲತ್ತುಗಳನ್ನು ಉಳಿಸಿಕೊಳ್ಳುವ ಸವಾಲು ಎದುರಾದಾಗ ಕಾರ್ಮಿಕ ವರ್ಗ ಒಂದಾಗಿ ಉಳಿದಿಲ್ಲ. ಜಾತಿ, ಮತದ ಒಡಕುಗಳು ಕಾರ್ಮಿಕ ವರ್ಗವನ್ನು ವಿಭಜಿಸಿವೆ. ಮೋದಿ ಮೋಡಿ ಸಂಘಟಿತ ಕಾರ್ಮಿಕ ವರ್ಗವನ್ನು ದಾರಿ ತಪ್ಪಿಸಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಹುತೇಕ ಕಾರ್ಮಿಕರು ಯಾರಿಗೆ ಮತ ಹಾಕಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಅದೇನೇ ಇರಲಿ ಇಂತಹ ಮಹತ್ವದ ವಿಧೇಯಕಗಳ ಬಗ್ಗೆ ಸಂಸತ್ತಿನ ಉಭಯ ಸದನಗಳಲ್ಲಿ ಚರ್ಚೆ ನಡೆದು ಈ ವಿಧೇಯಕಗಳು ಪಾಸಾಗಿದ್ದರೆ ಕಾರ್ಮಿಕ ವರ್ಗಕ್ಕೆ ಹಿತಕರವಾಗುತ್ತಿತ್ತು.

ಈಗಲೂ ಕಾಲ ಮಿಂಚಿಲ್ಲ. ಸರಕಾರ ಈ ಕಾರ್ಮಿಕ ವಿರೋಧಿ ವಿಧೇಯಕಗಳನ್ನು ವಾಪಸು ಪಡೆಯಬೇಕು. ಒಂದು ಉದ್ಯಮ ನಡೆಯಬೇಕಾದರೆ ಕಾರ್ಮಿಕರು ಮತ್ತು ಉದ್ಯೋಗದಾತರು ಇಬ್ಬರೂ ಬೇಕು. ಕಾರ್ಮಿಕರ ಹಿತಾಸಕ್ತಿಗಳನ್ನು ಸಂಪೂರ್ಣ ವಾಗಿ ಕಡೆಗಣಿಸಿ ಗುಲಾಮಗಿರಿಗೆ ತಳ್ಳುವ ಈ ವಿಧೇಯಕಗಳ ಬಗ್ಗೆ ವ್ಯಾಪಕವಾದ ಚರ್ಚೆ ನಡೆದು ಎಲ್ಲರ ಅಭಿಪ್ರಾಯಗಳನ್ನು ಪಡೆದು ಸರ್ವಸಮ್ಮತವಾದ ಇನ್ನೊಂದು ವಿಧೇಯಕವನ್ನು ತರುವುದು ಸೂಕ್ತ.
ಶ್ರಮಜೀವಿಗಳ ಹಿತಾಸಕ್ತಿಗೆ ಸಂಬಂಧಿಸಿದ ಇಂತಹ ಪ್ರಶ್ನೆಗಳನ್ನು ಸರಕಾರ ಪ್ರತಿಷ್ಠೆ ಯನ್ನಾಗಿ ತೆಗೆದುಕೊಳ್ಳದೆ ಮುಕ್ತವಾಗಿ ಹೆಜ್ಜೆ ಇಡುವುದು ಸೂಕ್ತ. ಕಾರ್ಮಿಕ ಸಂಘಟನೆಗಳ ನಾಯಕರ ಸಭೆಯನ್ನು ಕರೆದು, ಉದ್ಯಮಪತಿಗಳ ಜೊತೆಗೂ ಚರ್ಚಿಸಿ ಸರ್ವ ಸಮ್ಮತವಾದ ಪರಿಹಾರ ಮಾರ್ಗವನ್ನು ಸರಕಾರ ಕಂಡುಕೊಳ್ಳಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News