ನೋಡಿ ‘ಸ್ವಾಮಿ’, ನಾವಿರೋದೇ ಹೀಗೆ…

Update: 2020-09-26 17:03 GMT

ಹೊಸದಿಲ್ಲಿ, ಸೆ. 26: ಬಿಜೆಪಿ ತನ್ನ ಐಟಿ ಸೆಲ್‌ನ ವರಿಷ್ಠರನ್ನಾಗಿ ಅಮಿತ್ ಮಾಳವೀಯ ಅವರನ್ನು ಮರು ನೇಮಕ ಮಾಡುವ ಮೂಲಕ ಶನಿವಾರ ರಾಜ್ಯಸಭೆ ಸಂಸದ ಸುಬ್ರಮಣಿಯನ್ ಸ್ವಾಮಿ ಅವರ ಬೆದರಿಕೆಯನ್ನು ನಿರ್ಲಕ್ಷಿಸಿದೆ. ಅಲ್ಲದೆ, ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರನ್ನು ಪಕ್ಷದ ಯುವ ಮೋರ್ಚಾದ ಮುಖ್ಯಸ್ಥರನ್ನಾಗಿ ನಿಯೋಜಿಸಿದೆ.

ಮಾಳವೀಯ ಅವರು ಕೊಳಕಿನಲ್ಲಿ ಹೊರಳಾಡುತ್ತಿದ್ದಾರೆ ಎಂದು ಹೇಳುವ ಮೂಲಕ ಬಿಜೆಪಿ ಐಟಿ ಘಟಕದ ವರಿಷ್ಠ ಮಾಳವೀಯ ಅವರ ವಿರುದ್ಧ ಸುಬ್ರಮಣಿಯನ್ ಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ ದಿನಗಳ ಬಳಿಕ ಈ ಬೆಳವಣಿಗೆ ನಡೆದಿದೆ. ಬಿಜೆಪಿ ಐಟಿ ಘಟಕ ದುಷ್ಟವಾಗುತ್ತಿದೆ. ಇದರ ಕೆಲವು ಸದಸ್ಯರು ತನ್ನ ವಿರುದ್ಧ ವೈಯುಕ್ತಿಕ ದಾಳಿ ನಡೆಸಲು ನಕಲಿ ಐ.ಡಿ.ಯ ಟ್ವೀಟ್‌ಗಳನ್ನು ಹಾಕುತ್ತಿದ್ದಾರೆ. ಒಂದು ವೇಳೆ ನನ್ನ ಆಕ್ರೋಶಿತ ಬೆಂಬಲಿಗರು ವೈಯುಕ್ತಿಕವಾಗಿ ಪ್ರತಿ ದಾಳಿ ನಡೆಸಿದರೆ, ಬಿಜೆಪಿಯ ಐಟಿ ಘಟಕದ ದುಷ್ಟತನದ ಜವಾಬ್ದಾರಿಯನ್ನು ಬಿಜೆಪಿ ಹೇಗೆ ಹೊರುವುದಿಲ್ಲವೋ ಹಾಗೆಯೇ ನಾನು ಕೂಡ ಜವಾಬ್ದಾರಿ ಹೊರುವುದಿಲ್ಲ ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ. ತರುವಾಯದ ಟ್ವೀಟ್‌ನಲ್ಲಿ ಸುಬ್ರಮಣಿಯನ್ ಸ್ವಾಮಿ ಅವರು, ಮಾಳವೀಯ ಅವರನ್ನು ವಜಾಗೊಳಿಸುವಂತೆ ಆಗ್ರಹಿಸಿದ್ದರು. ‘‘ನಾನು ನಿರ್ಲಕ್ಷಿಸುತ್ತೇನೆ. ಆದರೆ, ಬಿಜೆಪಿ ಅವರನ್ನು ವಜಾಗೊಳಿಸಬೇಕು. ಮಾಳವೀಯ ಅವರು ಕೆಸರಿನೊಂದಿಗೆ ಹೊರಳಾಡುತ್ತಿದ್ದಾರೆ. ನಮ್ಮದು ಮರ್ಯಾದ ಪುರುಷೋತ್ತಮನ ಪಕ್ಷ. ನಾವು ರಾವಣ ಅಥವಾ ದುಷ್ಯಾಶನ ಅಲ್ಲ’’ ಎಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News