ಕೃಷಿ ಮಸೂದೆಗೆ ಬೆಂಬಲ: ಎಐಎಡಿಎಂಕೆ ಗೆ ಕಮಲ್ ಹಾಸನ್ ತರಾಟೆ

Update: 2020-09-27 17:22 GMT

ಚೆನ್ನೈ, ಸೆ. 27: ಸಂಸತ್ತಿನಲ್ಲಿ ಇತ್ತೀಚೆಗೆ ಅಂಗೀಕರಿಸಲಾದ ಮೂರು ಕೃಷಿ ವಿಧೇಯಕವನ್ನು ಬೆಂಬಲಿಸುತ್ತಿರುವ ತಮಿಳುನಾಡಿನ ಆಡಳಿತಾರೂಢ ಎಐಎಡಿಎಂಕೆಯನ್ನು ನಟ-ರಾಜಕಾರಣಿ  ಕಮಲ್ ಹಾಸನ್ ರವಿವಾರ ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ವಿಧೇಯಕ ರಾಜ್ಯದ ಸ್ವಾಯತ್ತತೆ ಮೇಲಿನ ದಾಳಿ. ಕೊರತೆ ಅಥವಾ ಏರುತ್ತಿರುವ ಬೆಲೆಯ ನಡುವೆ ರಾಜ್ಯ ಏನನ್ನೂ ಮಾಡದ ಅಪಾಯಕಾರಿ ಸ್ಥಿತಿಯನ್ನು ಇದು ಸೃಷ್ಟಿಸುತ್ತದೆ ಎಂದು ಅವರು ಒತ್ತಿ ಹೇಳಿದ್ದಾರೆ.

ಸಂಸತ್ತಿನಲ್ಲಿ ಕಳೆದ ವಾರ ಅಂಗೀಕರಿಸಲಾದ ವಿಧೇಯಕವನ್ನು ಹಿಂದಿರುಗಿಸುವಂತೆ ಕಮಲ್ ಹಾಸನ್ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಲ್ಲಿ ಮನವಿ ಮಾಡಿದ್ದಾರೆ.

ತನ್ನನ್ನು ರೈತನೆಂದು ಕರೆದುಕೊಳ್ಳುವ ಮುಖ್ಯಮಂತ್ರಿ ಎಡಪಳ್ಳಿ ಕೆ. ಪಳನಿಸ್ವಾಮಿ ಈ ಮಸೂದೆಯನ್ನು ಬೆಂಬಲಿಸುವುದು ರೈತರಿಗೆ ಮಾಡುವ ದ್ರೋಹವಲ್ಲವೇ ? ಎಂದು ಕಮಲ್ ಹಾಸನ್ ಪ್ರಶ್ನಿಸಿದ್ದಾರೆ.

ಬಿತ್ತನೆ ಮಾಡುವ ರೈತರಿಗೆ ತಮಿಳುನಾಡಿನಲ್ಲಿ ಮುಂದಿನ ವರ್ಷ ನಡೆಯಲಿರುವ ಚುನಾವಣೆಯಲ್ಲಿ ಸರಕಾರವನ್ನು ಮಣ್ಣು ಮಾಡುವ ಅಧಿಕಾರ ಕೂಡ ಇದೆ ಎಂದು ಅವರು ಎಚ್ಚರಿಸಿದ್ದಾರೆ.

 ಕೃಷಿ ಯಾವತ್ತೂ ರಾಜ್ಯಕ್ಕೆ ಸಂಬಂಧಿಸಿದ ವಿಚಾರ. ಅಲ್ಲದೆ ಈ ಪ್ರಸ್ತಾಪಿತ ಪ್ರತಿ ವಿಧೇಯಕ ರೈತರಿಗೆ ಬೆದರಿಕೆ ಒಡ್ಡುತ್ತದೆ ಎಂದು ಒತ್ತಿ ಹೇಳಿರುವ ಕಮಲ್ ಹಾಸನ್ ವಿಧೇಯಕಗಳ ಪ್ರತಿಯನ್ನು ಹರಿದು ಹಾಕಿದರು.

‘‘ಈ ವಿಧೇಯಕ ಸರಕನ್ನು ದೇಶದ ಯಾವುದೇ ಭಾಗಕ್ಕೆ ಸಾಗಿಸಲು ಅವಕಾಶ ನೀಡುತ್ತದೆ. ಇದು ಆಹಾರ ಭದ್ರತೆಗೆ ಬೆದರಿಕೆ ಒಡ್ಡುತ್ತದೆ’’ ಎಂದು ಅವರು ಹೇಳಿದ್ದಾರೆ.

‘‘ಈ ವಿಧೇಯಕ ಕಾರ್ಪೊರೇಟ್‌ಗಳನ್ನು ಹೊಸ ಭೂಮಾಲಿಕರನ್ನಾಗಿ ಹಾಗೂ ರೈತರನ್ನು ಆಧುನಿಕ ಕೃಷಿ ಜೀತದಾಳುಗಳನ್ನಾಗಿ ಮಾಡುವ ಷಡ್ಯಂತ್ರ. ಕಾರ್ಪೋರೇಟ್‌ಗಳು ಲಾಭ ಸಂಗ್ರಹಿಸಲು ಹಾಗೂ ಲಾಭಕ್ಕಾಗಿ ಕೊರತೆ ಸೃಷ್ಟಿಸಲು ಈ ವಿಧೇಯಕ ದಾರಿ ಮಾಡಿ ಕೊಡುತ್ತದೆ. ಕೃಷಿ ಉತ್ಪಾದನೆಯ ಬೆಲೆ ನಿಗದಿಯನ್ನು ಕಾರ್ಪೊರೇಟ್‌ಗಳು ಮಾಡುವುದರಿಂದ ಆಗುವ ಅಪಾಯಗಳನ್ನು ಕೇಂದ್ರ ಸರಕಾರ ಮುಚ್ಚಿಡುತ್ತಿರುವುದು ಯಾಕೆ ?’’ ಎಂದು ಕಮಲ್ ಹಾಸನ್ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News