ಲಡಾಖ್ ಸ್ವಾಯತ್ತ ಜಿಲ್ಲಾ ಸಮಿತಿ ಚುನಾವಣೆ: ಬಹಿಷ್ಕಾರಕ್ಕೆ ಕರೆ ಹಿಂಪಡೆದ ಲಡಾಖ್ ನಿಯೋಗ

Update: 2020-09-27 17:51 GMT

ಹೊಸದಿಲ್ಲಿ, ಸೆ.27: ರವಿವಾರ ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಭೇಟಿ ಮಾಡಿ ಚರ್ಚಿಸಿದ ಲಡಾಖ್‌ನ ರಾಜಕೀಯ ಪ್ರತಿನಿಧಿಗಳ ನಿಯೋಗ , ಲಡಾಖ್ ಹಿಲ್ ಕೌನ್ಸಿಲ್(ಜಿಲ್ಲಾ ಸಮಿತಿ) ಚುನಾವಣೆಯನ್ನು ಬಹಿಷ್ಕರಿಸುವ ಕರೆಯನ್ನು ವಾಪಸ್ ಪಡೆಯುವುದಾಗಿ ಘೋಷಿಸಿದೆ.

  ಲೇಹ್ ಲಡಾಖ್ ಸ್ವಾಯತ್ತ ಜಿಲ್ಲಾ ಅಭಿವೃದ್ಧಿ ಸಮಿತಿಯ ಚುನಾವಣೆ ಅಕ್ಟೋಬರ್ 16ಕ್ಕೆ ನಿಗದಿಯಾಗಿದೆ. ಲಡಾಖ್ ಅನ್ನು ಸಂವಿಧಾನದ 6ನೇ ಪರಿಚ್ಛೇದದಡಿ ಲಭಿಸುವ ಸೌಲಭ್ಯದ ವ್ಯಾಪ್ತಿಯೊಳಗೆ ಸೇರಿಸಬೇಕು ಎಂಬ ಬೇಡಿಕೆ ಮುಂದಿರಿಸಿದ್ದ ‘ದಿ ಪೀಪಲ್ಸ್ ಮೂವ್ಮೆಂಟ್’ ಎಂಬ ಹಲವು ರಾಜಕೀಯ ಪಕ್ಷಗಳು ಹಾಗೂ ಸಂಘಟನೆಗಳ ವೇದಿಕೆ, ಚುನಾವಣೆ ಬಹಿಷ್ಕಾರಕ್ಕೆ ಕರೆ ನೀಡಿತ್ತು. ವೇದಿಕೆಯ ಸದಸ್ಯರಾದ ಮಾಜಿ ಸಂಸದರಾದ ಥಿಕ್ಸೆ ರಿಂಪೋಚೆ, ಥುಪ್ಸನ್ ಛೆವಾಂಗ್, ಮಾಜಿ ಸಚಿವ ಛೆರಿಂಗ್ ದೋರ್ಜೆ ರವಿವಾರ ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಿ ಚರ್ಚಿಸಿತ್ತು.

ಲಡಾಖ್‌ಗೆ ಸಂಬಂಧಿಸಿದ ಎಲ್ಲಾ ಬೇಡಿಕೆಗಳ ಬಗ್ಗೆ ಮುಕ್ತ ಮನಸ್ಸಿನಿಂದ ಚರ್ಚಿಸಲು ಕೇಂದ್ರ ಸರಕಾರ ಒಪ್ಪಿದೆ. ಅಲ್ಲದೆ ಭೂಮಿ, ಉದ್ಯೋಗ, ಭೌಗೋಳಿಕ ವ್ಯವಸ್ಥೆ, ಸಂಸ್ಕೃತಿ ಸಹಿತ ಎಲ್ಲಾ ವಿಷಯಗಳ ರಕ್ಷಣೆಯ ಬಗ್ಗೆ ಗಮನ ಹರಿಸುವುದಾಗಿ ಭರವಸೆ ನೀಡಿದೆ. ಲೇಹ್ ಲಡಾಖ್ ಸ್ವಾಯತ್ತ ಜಿಲ್ಲಾ ಸಮಿತಿಗಳ ಸಬಲೀಕರಣಕ್ಕೆ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶದ ಹಿತಾಸಕ್ತಿ ರಕ್ಷಣೆಗೆ ಕೇಂದ್ರ ಸರಕಾರ ಬದ್ಧವಾಗಿದೆ . ಜಿಲ್ಲಾ ಸಮಿತಿ ಚುನಾವಣೆ ಮುಗಿದ 15 ದಿನಗಳ ಬಳಿಕ ಕೇಂದ್ರ ಗೃಹ ಇಲಾಖೆ ಮತ್ತು ನಿಯೋಗದ ಮಧ್ಯೆ ಸಭೆ ಏರ್ಪಡಿಸಲಾಗುವುದು ಎಂದು ತಿಳಿಸಿದ ಹಿನ್ನೆಲೆಯಲ್ಲಿ ಚುನಾವಣೆ ಬಹಿಷ್ಕಾರಕ್ಕೆ ನೀಡಿದ್ದ ಕರೆಯನ್ನು ಹಿಂಪಡೆಯಲಾಗಿದೆ ಎಂದು ನಿಯೋಗ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News