ಅಮೆರಿಕ ಅಧ್ಯಕ್ಷ ಟ್ರಂಪ್ ಪಾವತಿಸಿದ ತೆರಿಗೆ ಎಷ್ಟು ಗೊತ್ತೇ?

Update: 2020-09-28 05:38 GMT

ವಾಷಿಂಗ್ಟನ್, ಸೆ.28: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಾಷ್ಟ್ರದ ಅಧ್ಯಕ್ಷರಾಗಿ ಆಯ್ಕೆಯಾದ ವರ್ಷ ಅಂದರೆ 2016ರಲ್ಲಿ ಪಾವತಿಸಿರುವ ತೆರಿಗೆ ಕೇವಲ 750 ಡಾಲರ್ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. 20 ವರ್ಷಗಳ ತೆರಿಗೆ ರಿಟರ್ನ್ಸ್ ಅಂಕಿಅಂಶಗಳನ್ನು ಆಧರಿಸಿ ಈ ವರದಿ ಮಾಡಲಾಗಿದೆ.

ಮರು ವರ್ಷ ಕೂಡಾ ಅಷ್ಟೇ ಮೊತ್ತದ ತೆರಿಗೆಯನ್ನು ಟ್ರಂಪ್ ಪಾವತಿಸಿದ್ದಾರೆ. ಕಳೆದ 15 ವರ್ಷಗಳ ಪೈಕಿ 10 ವರ್ಷಗಳಲ್ಲಿ ಒಂದು ಡಾಲರ್ ಕೂಡಾ ತೆರಿಗೆ ಪಾವತಿಸಿಲ್ಲ ಎಂದು ವಿವರಿಸಿದೆ. ತಾವು ಗಳಿಸಿದ ಹಣಕ್ಕಿಂತ ಅನುಭವಿಸಿದ ನಷ್ಟವೇ ಅಧಿಕ ಎಂಬ ಕಾರಣ ನೀಡಿ ಟ್ರಂಪ್ ತೆರಿಗೆ ಪಾವತಿಸಿಲ್ಲ ಎಂದು ತಿಳಿದುಬಂದಿದೆ.

ಕಾನೂನು ಪ್ರಕಾರ, ಅಮೆರಿಕದಲ್ಲಿ ಅಧ್ಯಕ್ಷರು ತಮ್ಮ ವೈಯಕ್ತಿಕ ಹಣಕಾಸು ವಿವರಗಳನ್ನು ಬಹಿರಂಗಪಡಿಸುವ ಅಗತ್ಯ ಇಲ್ಲ. ಆದರೆ ರಿಚರ್ಡ್ ನಿಕ್ಸನ್ ಬಳಿಕ ಪ್ರತಿಯೊಬ್ಬರೂ ವೈಯಕ್ತಿಕ ಹಣಕಾಸು ವಿವರಗಳನ್ನು ಪ್ರಕಟಿಸುತ್ತಾ ಬಂದಿದ್ದಾರೆ. ಆದರೆ ಟ್ರಂಪ್ ಮಾತ್ರ ಈ ವಿವರ ಬಹಿರಂಗಪಡಿಸಲು ನಿರಾಕರಿಸಿದ್ದು, ಇದರ ವಿರುದ್ಧ ನ್ಯಾಯಾಲಯದಲ್ಲಿ ಸುದೀರ್ಘ ಹೋರಾಟ ನಡೆಯುತ್ತಿದೆ. ಇದು ಅಧ್ಯಕ್ಷರ ಆಸ್ತಿಯ ಬಗ್ಗೆ ಹಲವು ಊಹಾಪೋಹಗಳನ್ನು ಹುಟ್ಟುಹಾಕಿದೆ. ಮುಂದಿನ ನವೆಂಬರ್‌ನಲ್ಲಿ ನಡೆಯುವ ಅಧ್ಯಕ್ಷೀಯ ಚುನಾವಣೆಯಲ್ಲಿ ಇದೂ ಚುನಾವಣಾ ವಿಷಯವಾಗುವ ಎಲ್ಲ ಸಾಧ್ಯತೆಗಳಿವೆ.

ಆದರೆ ನ್ಯೂಯಾರ್ಕ್ ಟೈಮ್ಸ್ ವರದಿ ಬಗ್ಗೆ ಪ್ರತಿಕ್ರಿಯಿಸಿರುವ ಟ್ರಂಪ್ ಸಂಸ್ಥೆಯ ವಕೀಲ ಅಲನ್ ಗಾರ್ಟೆನ್, "ಕಳೆದ ಒಂದು ದಶಕದಲ್ಲಿ ಟ್ರಂಪ್ ಕೋಟ್ಯಂತರ ಡಾಲರ್ ವೈಯಕ್ತಿಕ ತೆರಿಗೆಯನ್ನು ಸರಕಾರಕ್ಕೆ ಪಾವತಿಸಿದ್ದಾರೆ. 2015ರಲ್ಲಿ ಅಧ್ಯಕ್ಷೀಯ ಕಣಕ್ಕೆ ಧುಮುಕುವ ಘೋಷಣೆ ಮಾಡಿದ ಬಳಿಕವೂ ಲಕ್ಷಾಂತರ ಡಾಲರ್ ತೆರಿಗೆ ಪಾವತಿಸಿದ್ದಾರೆ" ಎಂದು ಸಮರ್ಥಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News