‘ನಾವು ಭಾರತೀಯರು, ನಮ್ಮಲ್ಲಿ ಹಾಸ್ಯಪ್ರಜ್ಞೆಯ ಕೊರತೆಯಿದೆ’

Update: 2020-09-28 06:58 GMT

ಹೊಸದಿಲ್ಲಿ, ಸೆ.28: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಪತ್ನಿ ಅನುಷ್ಕಾ ಶರ್ಮಾ ರನ್ನು ಟೀಕಿಸಿದ ಆರೋಪದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಹಿನ್ನಡೆ ಎದು ರಿಸುತ್ತಿರುವ ಮಾಜಿ ನಾಯಕ ಸುನೀಲ್ ಗವಾಸ್ಕರ್ ಅವರಿಗೆ ಇದೀಗ ಭಾರತದ ಮಾಜಿ ವಿಕೆಟ್ ಕೀಪರ್ ಫಾರೂಕ್ ಇಂಜಿನಿಯರ್ ಬೆಂಬಲಕ್ಕೆ ನಿಂತಿದ್ದಾರೆ. ಕೋವಿಡ್-19 ಪ್ರೇರಿತ ಲಾಕ್‌ಡೌನ್ ಸಮಯದಲ್ಲಿ ಅನುಷ್ಕಾ ಪತಿ ವಿರಾಟ್ ಕೊಹ್ಲಿ ಅವರ ಅಭ್ಯಾಸಕ್ಕೆ ಸಹಾಯ ಮಾಡಿದ್ದಾರೆ ಎಂದು ಹೇಳಿದ್ದಕ್ಕಾಗಿ ಗವಾಸ್ಕರ್ ಟ್ವಿಟರ್‌ನಲ್ಲಿ ಸಾಕಷ್ಟು ಟೀಕೆಯನ್ನು ಎದುರಿಸಿದ್ದರು. ಅಷ್ಟೇ ಅಲ್ಲದೆ ಅನುಷ್ಕಾ ಅವರು ಸ್ವತಃ ಸುನೀಲ್ ಗವಾಸ್ಕರ್‌ರಿಂದ ವಿವರಣೆಯನ್ನು ಕೋರಿದ್ದಾರೆ.

‘‘ನಾವು ಭಾರತೀಯರು ನಮ್ಮಲ್ಲಿ ಹಾಸ್ಯಪ್ರಜ್ಞೆ ಕೊರತೆ ಇದೆ. ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಬಗ್ಗೆ ಸುನೀಲ್ ನಿಜಕ್ಕೂ ಆ ರೀತಿ ಹೇಳಿದ್ದರೆ, ಅದು ಹಾಸ್ಯಮಯವಾಗಿ ಹೇಳಿರಬೇಕು. ಕೆಟ್ಟ ಅಥವಾ ಅವಹೇಳನಕಾರಿ ಅಭಿರುಚಿಯಲ್ಲಿ ಅಲ್ಲ’’ ಎಂದು ಫಾರೂಕ್ ಇಂಜಿನಿಯರ್ ಅಭಿಪ್ರಾಯಪಟ್ಟಿದ್ದಾರೆಂದು ಪಾಕಿಸ್ತಾನ ಅಬ್ಸರ್ವರ್ ಪತ್ರಿಕೆ ವರದಿ ಮಾಡಿದೆ.

‘‘ಸುನೀಲ್ ಗವಾಸ್ಕರ್ ಅವರನ್ನು ನಾನು ಚೆನ್ನಾಗಿ ಬಲ್ಲೆ. ಅವರು ಅದನ್ನು ತಮಾಷೆಯಾಗಿ ಹೇಳಿದ್ದಾರೆಂದು ನನಗೆ ಖಾತ್ರಿಯಿದೆ. ನಾನು ಹಿಂದೆ ಅನುಷ್ಕಾ ಬಗ್ಗೆ ಮಾತನಾಡಿದಾಗಲೂ ಜನರು ಬಹಳ ಗಂಭೀರವಾಗಿ ಪರಿಗಣಿಸಿದ್ದಾರೆ’’ ಎಂದು ಫಾರೂಕ್ ಇಂಜಿನಿಯರ್ ಹೇಳಿದ್ದಾರೆ.

2019ರ ಐಸಿಸಿ ವಿಶ್ವಕಪ್ ಸಮಯದಲ್ಲಿ ಫಾರೂಕ್ ಇಂಜಿನಿಯರ್ ಹೇಳಿಕೆ ನೀಡಿರುವುದು ವಿವಾದಕ್ಕೆ ಕಾರಣವಾಗಿತ್ತು. ವಿಶ್ವಕಪ್‌ನಲ್ಲಿ ಭಾರತ ವೈಫಲ್ಯ ಅನುಭವಿಸಿದ ಹಿನ್ನೆಲೆಯಲ್ಲಿ ಫಾರೂಕ್ ಇಂಜಿನಿಯರ್ ಅವರು ನಾಯಕ ವಿರಾಟ್ ಕೊಹ್ಲಿ ಮತ್ತು ಆಯ್ಕೆ ಸಮಿತಿ ವಿರುದ್ಧ ಕಿಡಿಕಾರಿದ್ದರು. ವಿಶ್ವಕಪ್ ಪಂದ್ಯವೊಂದರ ವೇಳೆ ಅನುಷ್ಕಾ ಶರ್ಮಾರಿಗೆ ಆಯ್ಕೆ ಸಮಿತಿಯ ಸದಸ್ಯರೊಬ್ಬರು ಚಹಾ ಸರಬರಾಜು ಮಾಡಿರುವುದನ್ನು ಗಮನಿಸಿದ ಇಂಜಿಯರ್ ಅವರು ಆಯ್ಕೆ ಸಮಿತಿಯ ಬಗ್ಗೆ ಸಿಟ್ಟಿನಿಂದ ಮಾತನಾಡಿದ್ದರು.

ಗವಾಸ್ಕರ್ ತನ್ನ ಹೇಳಿಕೆಯ ಬಗ್ಗೆ ಅವರೇ ಸ್ಪಷ್ಟೀಕರಣವನ್ನು ನೀಡಿದ್ದು, ತನ್ನ ಹೇಳಿಕೆಯನ್ನು ತಪಾ್ಪಗಿ ಅರ್ಥೈಸಲಾಗಿದೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News