ಆರ್ ಬಿ ಐ, ಎಲ್‍ಐಸಿ, ಸರಕಾರಿ ಬ್ಯಾಂಕ್‍ಗಳ ಸಿಬ್ಬಂದಿ ವೇತನದಿಂದ ಪಿಎಂ ಕೇರ್ಸ್‍ಗೆ 205 ಕೋಟಿ ರೂ. !

Update: 2020-09-28 15:36 GMT

ಹೊಸದಿಲ್ಲಿ,ಸೆ.28: ಕೇವಲ ಕೇಂದ್ರಿಯ ಶಿಕ್ಷಣ ಸಂಸ್ಥೆಗಳಲ್ಲದೆ, ಕನಿಷ್ಠ ಏಳು ಸರಕಾರಿ ಸ್ವಾಮ್ಯದ ಬ್ಯಾಂಕುಗಳು, ಏಳು ಇತರ ಪ್ರಮುಖ ಹಣಕಾಸು ಸಂಸ್ಥೆಗಳು ಮತ್ತು ಆರ್‌ಬಿಐ ಒಟ್ಟು 204.75 ಕೋ.ರೂ.ಗಳನ್ನು ತಮ್ಮ ಸಿಬ್ಬಂದಿಗಳ ವೇತನಗಳಿಂದ ಕಡಿತಗೊಳಿಸಿ ಪಿಎಂ ಕೇರ್ಸ್ ನಿಧಿಗೆ ಪಾವತಿಸಿವೆ ಎನ್ನುವುದನ್ನು ಆರ್‌ಟಿಐ ದಾಖಲೆಗಳು ಬಹಿರಂಗಗೊಳಿಸಿವೆ.

ಈ ಪೈಕಿ ಎಲ್‌ಐಸಿ, ಜಿಐಸಿ ಮತ್ತು ನ್ಯಾಷನಲ್ ಹೌಸಿಂಗ್ ಬ್ಯಾಂಕ್ ತಮ್ಮ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆಯ ಭಾಗವಾಗಿ ಒಟ್ಟು 144.5 ಕೋ.ರೂ.ಗೂ ಅಧಿಕ ಮೊತ್ತವನ್ನು ಪ್ರತ್ಯೇಕವಾಗಿ ಈ ನಿಧಿಗೆ ಸಲ್ಲಿಸಿವೆ ಎನ್ನುವುದನ್ನು ಈ ದಾಖಲೆಗಳು ತೋರಿಸಿವೆ. ಇದರೊಂದಿಗೆ 15 ಸರಕಾರಿ ಬ್ಯಾಂಕುಗಳು ಮತ್ತು ಸಂಸ್ಥೆಗಳಿಂದ ಪಿಎಂ ಕೇರ್ಸ್ ನಿಧಿಗೆ ದೇಣಿಗೆಗಳ ಮೊತ್ತ 349.25 ಕೋ.ರೂ.ಗಳಷ್ಟಾಗಿದೆ.

ನಿಧಿಯನ್ನು ನಿರ್ವಹಿಸುತ್ತಿರುವ ಪ್ರಧಾನಿ ಕಚೇರಿಯು, ಆರ್‌ಟಿಐ ಕಾಯ್ದೆಯಡಿ ಪಿಎಂ ಕೇರ್ಸ್ ಸಾರ್ವಜನಿಕ ಪ್ರಾಧಿಕಾರವಲ್ಲ ಎಂಬ ಕಾರಣವನ್ನೊಡ್ಡಿ ಸ್ವೀಕರಿಸಿರುವ ದೇಣಿಗೆಗಳ ವಿವರಗಳನ್ನು ನೀಡಲು ನಿರಾಕರಿಸಿದೆ.

 ಆರ್‌ಟಿಐ ಅರ್ಜಿಗಳಿಗೆ ಉತ್ತರಿಸಿರುವ ಸರಕಾರಿ ಬ್ಯಾಂಕುಗಳು ಮತ್ತು ಸಂಸ್ಥೆಗಳ ಪಟ್ಟಿಯಲ್ಲಿ ಎಲ್‌ಐಸಿಯೊಂದೇ ವಿವಿಧ ಹೆಸರುಗಳಲ್ಲಿ 113.63 ಕೋ.ರೂ.ಗಳನ್ನು ಪಾವತಿಸುವ ಮೂಲಕ ಅಗ್ರಸ್ಥಾನದಲ್ಲಿದೆ. ಇದರಲ್ಲಿ ಸಿಬ್ಬಂದಿಗಳ ವೇತನಗಳಿಂದ ಕಡಿತಗೊಳಿಸಲಾದ 8.64 ಕೋ.ರೂ.ಗಳು ಸೇರಿವೆ. ಅದು 105 ಕೋ.ರೂ.ಗಳನ್ನು ಮಾರ್ಚ್‌ನಲ್ಲಿಯೇ ಪಾವತಿಸಿತ್ತು.

ಆರ್‌ಟಿಐ ಅರ್ಜಿಗಳಿಗೆ ಉತ್ತರಿಸಿರುವ ಏಳು ಸರಕಾರಿ ಬ್ಯಾಂಕುಗಳ ಪೈಕಿ 107.95 ಕೋ.ರೂ.ಗೂ ಹೆಚ್ಚಿನ ದೇಣಿಗೆಗಳೊಂದಿಗೆ ಎಸ್‌ಬಿಐ ಅಗ್ರಸ್ಥಾನದಲ್ಲಿದೆ. ಇದರಲ್ಲಿ ಸಿಬ್ಬಂದಿಗಳ ದೇಣಿಗೆ 7.34 ಕೋ.ರೂ.ಗಳು ಸೇರಿವೆ. 100 ಕೋ.ರೂ.ಗಳ ಮೊದಲ ಕಂತನ್ನು ಅದು ಮಾರ್ಚ್ ತಿಂಗಳಲ್ಲಿ ಪಾವತಿಸಿತ್ತು. ಆರ್‌ಬಿಐ ತನ್ನ ಉದ್ಯೋಗಿಗಳ ವೇತನಗಳಿಂದ 7.34 ಕೋ.ರೂ.ಗಳನ್ನು ಕಡಿತಗೊಳಿಸಿ ಪಿಎಂ ಕೇರ್ಸ್ ನಿಧಿಗೆ ಪಾವತಿಸಿದೆ.

ಕೋವಿಡ್-19ರ ವಿರುದ್ಧ ಹೋರಾಡಲು ಪಿಎಂ ಕೇರ್ಸ್ ನಿಧಿಯನ್ನು ಈ ವರ್ಷದ ಮಾ.28ರಂದು ಸ್ಥಾಪಿಸಲಾಗಿದ್ದು, ಮಾ.31ರ ವೇಳೆಗಾಗಲೇ ಅದು 3,076.62 ಕೋ.ರೂ.ಗಳನ್ನು ಸಂಗ್ರಹಿಸಿತ್ತು. ಅಧಿಕೃತ ಜಾಲತಾಣದಲ್ಲಿಯ ವಿವರಗಳಂತೆ ಈ ಪೈಕಿ 3075.85 ಕೋ.ರೂ.ಗಳನ್ನು ಅದು ‘ಸ್ವಯಂಪ್ರೇರಿತ ದೇಣಿಗೆಗಳ ’ರೂಪದಲ್ಲಿ ಸ್ವೀಕರಿಸಿತ್ತು.

38 ಪಿಎಸ್‌ಯುಗಳು ತಮ್ಮ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆಯ ಅಂಗವಾಗಿ ಒಟ್ಟು 2,105 ಕೋ.ರೂ.ಗಳನ್ನು ಪಿಎಂ ಕೇರ್ಸ್‌ಗೆ ಪಾವತಿಸಿವೆ ಎಂದು ಮಾಧ್ಯಮಗಳು ಈ ಹಿಂದೆ ವರದಿ ಮಾಡಿದ್ದವು. ಹಲವಾರು ಕೇಂದ್ರಿಯ ಶಿಕ್ಷಣ ಸಂಸ್ಥೆಗಳು ತಮ್ಮ ಸಿಬ್ಬಂದಿಗಳ ವೇತನಗಳಿಂದ ಹಾಗೂ ವಿದ್ಯಾರ್ಥಿಗಳು ಮತ್ತು ಪಿಂಚಣಿದಾರರಿಂದ 21.81 ಕೋ.ರೂ.ಗಳನ್ನು ‘ಸ್ವಯಂಪ್ರೇರಿತ ದೇಣಿಗೆ ’ಯಾಗಿ ಈ ನಿಧಿಗೆ ಪಾವತಿಸಿವೆ ಎನ್ನುವುದನ್ನೂ ಐದು ದಿನಗಳ ಹಿಂದೆ ಮಾಧ್ಯಮಗಳು ಪ್ರಕಟಿಸಿದ್ದವು.

ಯೂನಿಯನ್ ಬ್ಯಾಂಕ್ 14.81 ಕೋ.ರೂ.,ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 11.89 ಕೋ.ರೂ.,ಬ್ಯಾಂಕ್ ಆಫ್ ಮಹಾರಾಷ್ಟ್ರ 5 ಕೋ.ರೂ.,ಸಿಡ್ಬಿ 80 ಲ.ರೂ.,ಜಿಐಸಿ 14.51 ಲ.ರೂ.,ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ 16.08 ಲ.ರೂ.,ನಬಾರ್ಡ್ 9.04 ಕೋ.ರೂ ಮತ್ತು ಎನ್‌ಎಚ್‌ಬಿ 3.82 ಲ.ರೂ.ಗಳನ್ನು ತಮ್ಮ ಸಿಬ್ಬಂದಿಗಳ ಕೊಡುಗೆಯನ್ನಾಗಿ ಪಿಎಂ ಕೇರ್ಸ್ ನಿಧಿಗೆ ಪಾವತಿಸಿವೆ. ಕೆನರಾ ಬ್ಯಾಂಕ್ 15.53 ಕೋ.ರೂ.ಗಳನ್ನು ಪಾವತಿಸಿದೆಯಾದರೂ ಅದು ವಿವರಗಳನ್ನು ನೀಡಿಲ್ಲ.

ಎಲ್‌ಐಸಿಯಲ್ಲದೆ ಜಿಐಸಿ 22.8 ಕೋ.ರೂ.,ಸಿಡ್ಬಿ 14.2 ಕೋ.ರೂ. ಮತ್ತು ಎನ್‌ಎಚ್‌ಬಿ 2.5 ಕೋ.ರೂ.ಗಳನ್ನು ತಮ್ಮ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆಯ ಅಂಗವಾಗಿ ದೇಣಿಗೆಯನ್ನಾಗಿ ನೀಡಿವೆ.

ಸರಕಾರದ ಸಂಪೂರ್ಣ ಸ್ವಾಮ್ಯಕ್ಕೊಳಪಟ್ಟಿರುವ ಎಕ್ಸಿಂ ಬ್ಯಾಂಕ್ ಆರ್‌ಟಿಐ ಅರ್ಜಿಗೆ ಉತ್ತರಿಸಿಲ್ಲ. ಆದರೆ ಅದರ 2019-20ನೇ ಸಾಲಿನ ವಾರ್ಷಿಕ ವರದಿಯಲ್ಲಿ ಪಿಎಂ ಕೇರ್ಸ್‌ಗೆ ಒಂದು ಕೋ.ರೂ.ಗಳನ್ನು ಪಾವತಿಸಲಾಗಿದೆ ಎಂದು ತೋರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News